ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಖಂಡಿಸಿದೆ. ನಿರ್ಧಾರವನ್ನು ಹಿಂಪಡೆದು, ಬೆಲೆ ಇಳಿಕೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆಂದು ಒಕ್ಕೂಟದ ರಾಜ್ಯಾಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಇಂಧನ ದರ ಇಳಿಕೆ ಮಾಡದಿದ್ದರೆ, ಬೆಂಗಳೂರು ಬಂದ್ ಮಾಡುತ್ತೇವೆ. ನಂತರದಲ್ಲಿ ಕರ್ನಾಟಕ ಬಂದ್ ಮಾಡುತ್ತೇವೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
“ಶಕ್ತಿ ಯೋಜನೆ ಜಾರಿಯಿಂದಾಗಿ, ಖಾಸಗಿ ಸಾರಿಗೆ ಉದ್ಯಮ ನೆಲಕಚ್ಚಿದೆ. ಈಗ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಲಾಗಿದ್ದು, ಉದ್ಯಮಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇಂಧನ ದರ ಹೆಚ್ಚಾದರೆ, ಪ್ರಯಾಣಿಕರಿಗೆ ಸೇವೆ ನೀಡುವುದು ಕಷ್ಟವಾಗುತ್ತದೆ. ಬೆಲೆ ಏರಿಕೆಯ ಹೊರೆ ಮತ್ತೆ ಪ್ರಯಾಣಿಕರ ಮೇಲೆ ಬೀಳಲಿದೆ. ಪ್ರಯಾಣ ದರ ಹೆಚ್ಚಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 15 ದಿನದ ಮಗುವಿಗೆ ‘ಹಾರ್ಟ್ ಆಪರೇಷನ್’ ಮಾಡಿ ಯಶಸ್ವಿಯಾದ ಸರ್ಕಾರಿ ಆಸ್ಪತ್ರೆ ವೈದ್ಯರು
“ಇಂಧನ ಬೆಲೆ ಏರಿಕೆಯ ಮೂಲಕ ಸರ್ಕಾರ ದಿವಾಳಿ ಆಗಿರುವುದನ್ನು ಎತ್ತಿ ತೋರಿಸುತ್ತಿದೆ. ಶಕ್ತಿ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಈಗಾಗಲೇ ಖಾಸಗಿ ಸಾರಿಗೆ ಉದ್ಯಮ ನಶಿಸಿಸುತ್ತಿದ್ದು, ಸರ್ಕಾರ ಕೊನೆಯ ಮೊಳೆ ಹೊಡೆಯಲು ಮುಂದಾಗಿದೆ” ಎಂದಿದ್ದಾರೆ.