ಬಕ್ರೀದ್ ಹಬ್ಬ | ಹಜ್ಜ್‌ಗೆ ತೆರಳುವ ಮುಸಲ್ಮಾನ ‘ಹಾಜಿ’ಯಾಗುತ್ತಾನೆ; ಹಾಜಿ ಹೇಗಿರಬೇಕು?

Date:

ಜೂನ್ 17ರ ಸೋಮವಾರ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಅಝ್‌ಹಾ ಆಚರಣೆ ನಡೆಯಲಿದೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಬಕ್ರೀದ್. ಬಕ್ರೀದ್ ಸಂದರ್ಭದಲ್ಲಿ ಮುಸ್ಲಿಮರ ಕಡ್ಡಾಯ ಕರ್ಮಗಳಲ್ಲಿ ಒಂದಾಗಿರುವ ಹಜ್ಜ್‌ ಯಾತ್ರೆ(ಮೆಕ್ಕಾ ತೀರ್ಥಯಾತ್ರೆ) ಕೂಡ ನಡೆಯುವುದಿದೆ. ಇದಕ್ಕೆ ತೆರಳುವವರನ್ನು ‘ಹಾಜಿ’ಗಳು ಎನ್ನುತ್ತಾರೆ. ಈ ಹಾಜಿಗಳ ಬಗ್ಗೆ ಪತ್ರಕರ್ತರಾದ ಏ ಕೆ ಕುಕ್ಕಿಲ ಬರೆದಿದ್ದಾರೆ.

ಹಾಜಿ ಯಾರು? ಈ ಪ್ರಶ್ನೆಗೆ ಉತ್ತರ ಸುಲಭ ಇದೆ. ಯಾರು ಹಜ್ಜ್ ನಿರ್ವಹಣೆಗಾಗಿ ಮಕ್ಕಾದಲ್ಲಿ ಸೇರುತ್ತಾರೋ ಅವರೇ ಹಾಜಿಗಳು. ಆದರೆ, ಹಾಜಿ ಎಂದರೆ ಇಷ್ಟು ಮಾತ್ರವೇ? ಹೀಗೆ ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದಾದ ಒಂದು ಪರಿಕಲ್ಪನೆಯೇ ಹಾಜಿ? ಓರ್ವ ವ್ಯಕ್ತಿ ಇರುವುದೆಲ್ಲವನ್ನೂ ಬಿಟ್ಟು ಯಾಕೆ ಹಜ್ಜ್‌ಗೆ ಯಾಕೆ ಹೋಗಬೇಕು?

ಭಾರತದಿಂದ ಮಕ್ಕಾಕ್ಕೆ ಬಹಳ ದೂರವೇನೂ ಇಲ್ಲ. ವಿಮಾನದಲ್ಲಿ ಕುಳಿತು ಒಂದು ಪುಟ್ಟ ನಿದ್ರೆ ಮಾಡಿ ಎಚ್ಚರಗೊಳ್ಳುವಷ್ಟೇ ದೂರ. ಆದರೆ ಈ ಸಣ್ಣ ಪ್ರಯಾಣಕ್ಕೆ ಓರ್ವ ಹಾಜಿ ಮಾಡಿಕೊಳ್ಳುವ ತಯಾರಿಗಳು ಏನೇನು? ವರ್ಷಗಳ ಮೊದಲೇ ಇಂಥದ್ದೊಂದು ಪ್ರಯಾಣದ ಕನಸು ಕಾಣುತ್ತಾರೆ. ಅರ್ಜಿ ಹಾಕುವ ಪ್ರಕ್ರಿಯೆಯೂ ಆರಂಭಗೊಳ್ಳುತ್ತದೆ. ಒಮ್ಮೆ ಅರ್ಜಿ ಸ್ವೀಕೃತವಾಗಿ ಹಜ್ಜ್ ನಿರ್ವಹಿಸುವವರ ಪಟ್ಟಿಯಲ್ಲಿ ತನ್ನ ಹೆಸರೂ ಬರಲಿ ಎಂದು ಆಶೆಯಿಂದ ಕಾಯುತ್ತಾರೆ. ಒಮ್ಮೆ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿತೆಂದರೆ ಅತೀವ ಖುಷಿ ಪಡುತ್ತಾರೆ. ಆಗಿನಿಂದಲೇ ಅವರ ಮಕ್ಕಾ ಯಾತ್ರೆ ಮಾನಸಿಕವಾಗಿ ಆರಂಭಗೊಳ್ಳುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಾನು ಯಾರೊಂದಿಗೆಲ್ಲ ಒರಟಾಗಿ ನಡಕೊಂಡಿದ್ದೇನೆ, ಯಾರಲ್ಲಿ ಸಾಲ ಮಾಡಿದ್ದೇನೆ, ಯಾರ ಮನಸ್ಸನ್ನು ನೋಯಿಸಿದ್ದೇನೆ…ಎಂದೆಲ್ಲಾ ಅವಲೋಕನ ನಡೆಯತೊಡಗುತ್ತದೆ. ಅಂಥವರನ್ನು ಖುದ್ದಾಗಿ ಕಂಡೋ ಇತರ ಸೌಲಭ್ಯಗಳ ಮೂಲಕವೋ ಸಂಪರ್ಕಿಸಿ, ಕ್ಷಮಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ.

ಹಜ್ಜ್‌ಗಾಗಿ ತೆರಳುವ ದಿನಾಂಕ ಹತ್ತಿರ ಬರುತ್ತಿರುವಂತೆಯೇ ಮನಸ್ಸು ಭಾರವಾಗತೊಡಗುತ್ತದೆ. ಸಾಲದಿಂದ ಮುಕ್ತವಾಗುವುದು ಮತ್ತು ತನ್ನ ಅನುಪಸ್ಥಿತಿಯಲ್ಲಿ ಮನೆ ನಿರ್ವಹಣೆಗಾಗಿ ಬೇಕಾದ ಏರ್ಪಾಡು ಮಾಡುವುದೂ ನಡೆಯುತ್ತದೆ. ಹಜ್ಜ್ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ. ಆ ಮೂಲಕ ತನ್ನ ಈ ಇಡೀ ಪ್ರಕ್ರಿಯೆಯಲ್ಲಿ ಸಣ್ಣ ದೋಷವೂ ಉಂಟಾಗಬಾರದೆಂಬ ಎಚ್ಚರಿಕೆ ವಹಿಸತೊಡಗುತ್ತಾರೆ. ಇವೆಲ್ಲ ಹಜ್ಜ್‌ಗೆ ತೆರಳುವುದಕ್ಕಿಂತ ಮೊದಲಿನ ಸಿದ್ಧತೆಗಳಾದರೆ, ತೆರಳಿದ ಬಳಿಕವಂತೂ ವ್ಯಕ್ತಿ ಸಂಪೂರ್ಣ ಬದಲಾಗುತ್ತಾರೆ. ಎಲ್ಲಿಯವರೆಗೆಂದರೆ, ತಾನು ಆವರೆಗೆ ಇಷ್ಟಪಟ್ಟು ಧರಿಸುತ್ತಿದ್ದ ಬಟ್ಟೆಗಳಿಂದಲೇ ಮುಕ್ತವಾಗುವಷ್ಟು.

ಹೊಲಿಗೆ ಇಲ್ಲದ ಎರಡು ತುಂಡು ಬಿಳಿ ಬಟ್ಟೆಯ ಹೊರತು ಪುರುಷನ ಮೈಮೇಲೆ ಇನ್ನಾವುದೂ ಇರುವುದಿಲ್ಲ. ಒಂದು ರೀತಿಯಲ್ಲಿ, ಐಡೆಂಟಿಟಿ ಇಲ್ಲದ ವ್ಯಕ್ತಿ. ಎರಡು ತುಂಡು ಬಟ್ಟೆ ಧರಿಸಿದ ಲಕ್ಷಾಂತರ ಜನರ ನಡುವೆ ಆತ ಒಂದು ಬಿಂದು ಮಾತ್ರ. ಸೌದಿಯ ರಾಜಕುಮಾರನಾದರೂ, ಇರಾನಿನ ಖೊಮೇನಿ ಆದರೂ ಅಥವಾ ದೆಹಲಿ ಶಾಹಿ ಇಮಾಮೇ ಆದರೂ ಎಲ್ಲರೂ ಒಂದು ಬಿಂದು ಮಾತ್ರ.

ನಿಜವಾಗಿ, ಹಜ್ಜ್ ನಿರ್ವಹಣೆಗಾಗಿ ಭಾರತದಿಂದ ಮಕ್ಕಾಕ್ಕೆ ತೆರಳುವ ವ್ಯಕ್ತಿ ಈ ಪ್ರಯಾಣಕ್ಕಿಂತ ಮೊದಲು ಇದಕ್ಕಿಂತ ಸಾವಿರ ಕಿಲೋಮೀಟರ್ ದೂರದ ರಾಷ್ಟ್ರಕ್ಕೆ ಪ್ರಯಾಣಿಸಿರಬಹುದು. ಆದರೆ, ಮಕ್ಕಾ ಪ್ರಯಾಣಕ್ಕಾಗಿ ಮಾಡಿದ ಸಿದ್ಧತೆಯ ಒಂದು ಶೇಕಡಾ ಸಿದ್ಧತೆಯನ್ನೂ ಅದಕ್ಕೆ ಮಾಡಿರುವುದು ಕಡಿಮೆ. ಆದ್ದರಿಂದಲೇ, ಹಾಜಿ ಯಾರು ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.

ಹಾಜಿ ಎಂಬುದು ಒಂದು ವಾಕ್ಯದಲ್ಲಿ ಮುಗಿಸುವ ವಿಷಯವಲ್ಲ. ಅದೊಂದು ಮಾದರಿ ಅಥವಾ ಮಾಡೆಲ್. ಹಜ್ಜ್ ನಿರ್ವಹಿಸುವ ವ್ಯಕ್ತಿಯ ಎಲ್ಲ ಪಾಪಗಳನ್ನೂ ಅಲ್ಲಾಹನು ಕ್ಷಮಿಸುತ್ತಾನೆ ಮತ್ತು ಆಗಷ್ಟೇ ಭೂಮಿಗೆ ಬಂದ ಶಿಶುವಿನಿಷ್ಟೇ ಅವರು ಶುಭ್ರವಾಗಿರುತ್ತಾರೆ ಎಂದು ಪ್ರವಾದಿ ಮುಹಮ್ಮದ್ ಅವರು ಹೇಳಿದ್ದಾರೆ. ಆದ್ದರಿಂದ ಹಜ್ಜ್ ನಿರ್ವಹಣೆಗಾಗಿ ತೆರಳುವ ಹಾಜಿ ಮತ್ತು ಹಜ್ಜ್ ನಿರ್ವಹಿಸಿ ಮರಳುವ ಹಾಜಿ- ಇಬ್ಬರೂ ಒಂದೇ ಅಲ್ಲ.

ತೆರಳುವ ಹಾಜಿ ತನ್ನ ಐಡೆಂಟಿಟಿಯಿಂದ ಕಳಚಿಕೊಂಡಿರುವುದಿಲ್ಲ. ಆದರೆ, ಮರಳುವ ಹಾಜಿಗೆ ಐಡೆಂಟಿಟಿಯನ್ನೇ ಕಳಚಿಕೊಂಡ ಮತ್ತು ಆ ಕ್ಷಣದ ರೋಮಾಂಚನ, ಭಾವುಕತೆ, ಒಂಟಿತನ ಮತ್ತು ಆಧ್ಯಾತ್ಮಿಕತೆಯ ಪರಾಕಾಷ್ಟೆಯ ಅನುಭವವಾಗಿರುತ್ತದೆ. ಅಲ್ಲದೇ, ಹೀಗೆ ತೆರಳುವುದು ಒಂದು ಬಾರಿ ಮಾತ್ರ ಕಡ್ಡಾಯ ಎಂಬುದೂ ಬಹಳ ಮುಖ್ಯ.

ಹಾಗಂತ, ಹಜ್ಜ್‌ನಿಂದ ಮರಳಿದ ಬಳಿಕವೂ ಮತ್ತೊಂದು ಹಜ್ಜ್ ನಿರ್ವಹಿಸುವುದಕ್ಕೆ ಬೇಕಾಗುವಷ್ಟು ಅವರಲ್ಲಿ ಹಣ ಇರಬಹುದು, ಆರೋಗ್ಯವೂ ಇರಬಹುದು. ಆದರೂ ಮತ್ತೊಂದು ಬಾರಿ ಹೋಗಿ ವಿನೀತವಾಗುವುದು ಅವರ ಮೇಲೆ ಕಡ್ಡಾಯವಲ್ಲ. ಅಂದರೆ, ಹಾಜಿಯ ಚಟುವಟಿಕೆಯ ಕೇಂದ್ರ ಮಕ್ಕಾ ಅಲ್ಲ ಎಂದೇ ಇದರರ್ಥ.

ಹಜ್ಜ್ ನಿರ್ವಹಿಸಿ ಸಕಲ ಆಧ್ಯಾತ್ಮಿಕ ಚೈತನ್ಯವನ್ನೂ ಪಡೆದು ಮರಳಿದ ಬಳಿಕ ಹಾಜಿ ತಾನಿರುವ ಪ್ರದೇಶವನ್ನು ಮಕ್ಕಾ ಮಾಡಬೇಕು ಅಥವಾ ಶಾಂತಿಯ ಕೇಂದ್ರ ಮಾಡಬೇಕು. ಲಕ್ಷಾಂತರ ಹೆಣ್ಣು ಮತ್ತು ಗಂಡು ಒಂದೇ ಕಡೆ ಸೇರಿಯೂ ಯಾವ ಕೆಡುಕೂ ನಡೆಯದ, ಕಳ್ಳತನ, ಮೋಸ, ಅನ್ಯಾಯ, ಹತ್ಯೆಗಳಂತಹ ಸರ್ವ ಕೆಡುಕುಗಳಿಂದಲೂ ಮುಕ್ತವಾದ ಆ ಮಕ್ಕಾದ ವಾತಾವರಣವನ್ನು ತನ್ನೂರಲ್ಲೂ ‘ಹಾಜಿ’ ಸಾಧ್ಯವಾಗಿಸಬೇಕು. ಅದಕ್ಕಾಗಿ ಮುಂದಿನ ಜೀವನದಲ್ಲಿ ಸರ್ವಸಾಧ್ಯ ಪ್ರಯತ್ನ ನಡೆಸಬೇಕು. ಇವರೇ ಹಾಜಿ.

(ಲೇಖಕರು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರು)

 

ಏ ಕೆ ಕುಕ್ಕಿಲ

ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಏ ಕೆ ಕುಕ್ಕಿಲ
ಏ ಕೆ ಕುಕ್ಕಿಲ
ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಲಿತರು-ಬುಡಕಟ್ಟು ಜನರು ಹಾಗೂ ಹಿಂದುಳಿದವರೇ ಉಷ್ಣೋಗ್ರತೆಯ ಬಲಿಪಶುಗಳು

ಉಷ್ಣೋಗ್ರತೆಯನ್ನು ಸಹಿಸುವ ಶಕ್ತಿಯು ಜಾತಿಗಳನ್ನು ಆಧರಿಸಿದ ಉದ್ಯೋಗ ವ್ಯವಸ್ಥೆಯನ್ನು ಪ್ರತಿಬಿಂಬಿಸಿದೆ. ಪರಿಶಿಷ್ಟರು...

ಫಝಲ್ ಕೋಯಮ್ಮ ತಂಙಳ್: ಸರಳ, ನಿಗರ್ವಿ ವಿದ್ವಾಂಸರೊಬ್ಬರ ನಿರ್ಗಮನ

ಜ್ಞಾನಸಂಪನ್ನ ವ್ಯಕ್ತಿಗಳು ಅವರದ್ದೇ ಆದ ಒಂದು ನೆಮ್ಮದಿಯ ಸ್ಥಿತಿಯಲ್ಲಿರುತ್ತಾರೆ. ಸಾವಿರಾರು ಜನರು...

ರೋಬೊಟ್ ಆತ್ಮಹತ್ಯೆ | ‘ಸು ಅಂದ್ರೆ ಸುಕ್ರುಂಡೆ’ ಅನ್ನುವ ನಮ್ಮ ಡೀಯರ್ ಮೀಡಿಯಾ!

ಭಾರತದ ಮಾಧ್ಯಮಗಳ ʼಆತ್ಮʼ ಯಾವ ಪರಿ ಕೊಳೆತಿದೆ ಎಂಬುದಕ್ಕೆ ಲೇಟೆಸ್ಟ್ ಉದಾಹರಣೆ....

ತೂಗು ಸೇತುವೆ ಮತ್ತು ಅಭಿವೃದ್ಧಿ

ಹೋದ ತಿಂಗಳು ಚಾರಣಕ್ಕೆಂದು ಕೊಡಚಾದ್ರಿಗೆ ಹೋಗಿದ್ದೆವು. ಅದೊಂದು ಅದ್ಭುತ ಅನುಭವ. ಅಲ್ಲಿನ...