ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ (84) ಅವರು ಶನಿವಾರ (ಜೂ.15) ಬೆಳಿಗ್ಗೆ 10.30ಕ್ಕೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹರಪ್ಪನಹಳ್ಳಿಯಲ್ಲಿ 1940ರಲ್ಲಿ ಮತ್ತಿಹಳ್ಳಿ ಮದನ ಮೋಹನ ಜನಿಸಿದ್ದು, ಇವರ ತಂದೆ ಮತ್ತಿಹಳ್ಳಿ ರಾಘವೇಂದ್ರ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರದು ಪತ್ರಕರ್ತ ಕುಟುಂಬವಾಗಿದ್ದು, ಮಗ ಕೂಡ ಪತ್ರಕರ್ತರಾಗಿದ್ದಾರೆ.
ವೈದ್ಯರಾಗುವ ಕನಸು ಕಂಡಿದ್ದ ಮತ್ತಿಹಳ್ಳಿ ಮದನ ಮೋಹನ ಅವರು ಆಕಸ್ಮಿಕವಾಗಿ ಪತ್ರಿಕೋದ್ಯಮ ಪ್ರವೇಶಿಸಿದರು. 1958 ವೃತ್ತಿ ಆರಂಭಿಸಿದ ಇವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಅರೆಕಾಲಿಕ ವರದಾರರಾಗಿ ಬೆಳಗಾವಿಯಲ್ಲಿ ಕೆಲಸ ಆರಂಭಿಸಿದರು.
ಗೋವಾದ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದು ಬೆಳಗಾವಿ ಆಗಿದ್ದರಿಂದ ಸಾಕಷ್ಟು ವರದಿಗಳನ್ನು ಬರೆದು ‘ಮದನ ಮೋಹನ ಗೋವಾ’ ಎಂದೇ ಪ್ರಸಿದ್ಧರಾದರು. ನಂತರ ಗೋವಾಕ್ಕೆ ತೆರಳಿ ರಾಜ್ಯ ಪತ್ರಕರ್ತರಾದರು. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಲೇ ಎಲ್‌ಎಲ್‌ಬಿ ಮುಗಿಸಿಕೊಂಡರು.
ಆಂಗ್ಲಭಾಷೆ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಮತ್ತಿಹಳ್ಳಿ ಮದನ ಮೋಹನ ಅವರನ್ನು ನಂತರ ‘ದಿ ಹಿಂದೂ’ ಪತ್ರಿಕೆ ಕಾಯಂ ನೌಕರನ್ನಾಗಿ ನೇಮಿಸಿಕೊಂಡು, ಉತ್ತರ ಕರ್ನಾಟಕದ ಸುದ್ದಿ ಸಂಪಾದಕನ್ನಾಗಿ ನೇಮಿಸಿತು.
ನಿವೃತ್ತಿ ನಂತರವೂ ಇವರು ಪತ್ರಿಕೋದ್ಯಮದಲ್ಲೇ ಮುಂದುವರಿದರು. ಸಂಯುಕ್ತ ಕರ್ನಾಟಕದಲ್ಲಿ ಕೆಲ ಕಾಲ ಕೆಲಸ ಮಾಡಿದ್ದಾರೆ. ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ತಮ್ಮ ಜೀವಮಾನದ 50 ವರ್ಷವನ್ನು ಪತ್ರಿಕೋದ್ಯದಲ್ಲೇ ಕಳೆದು ಈಗ ಕಾಲವಾಗಿದ್ದಾರೆ.
ವ್ಯಕ್ತಿನಿಷ್ಠೆಗಿಂತ ವಸ್ತುನಿಷ್ಠಗೆ ಒತ್ತು ನೀಡುವ ಪತ್ರಕರ್ತರಾಗಿದ್ದ ಇವರಿಗೆ ರಾಜ್ಯೋತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ, ನಾಡೋಜ ಪ್ರಶಸ್ತಿಗಳು ಸಂದಿವೆ. ಮಾಜಿ ಸಿಎಂ ಎಸ್ ಎಂ ಕೃಷ್ಣ ಇವರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ನಾನಾ ಸಂಘ-ಸಂಸ್ಥಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಸಿಎಂ ಸೇರಿ ಗಣ್ಯರ ಸಂತಾಪ
“ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಮದನಮೋಹನ್ ಮತ್ತಿಹಳ್ಳಿ ಅವರ ಸಾವಿನಿಂದ ದು:ಖಿತನಾಗಿದ್ದೇನೆ. ‘ದಿ ಹಿಂದು’ ಪತ್ರಿಕೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮದನ್ ಮೋಹನ್ ಅವರು ಉತ್ತರ ಕರ್ನಾಟಕ ಭಾಗದ ಸಮಸ್ಯೆ-ಸಂಕಷ್ಟಗಳ ಬಗ್ಗೆ ಬರೆಯುತ್ತಿದ್ದ ಕಟು ವಿಮರ್ಶೆಯ ವರದಿ-ಲೇಖನಗಳು ಸರ್ಕಾರಗಳ ಕಣ್ತೆರುಸುವಂತಿದ್ದವು. ಅಂತರರಾಜ್ಯ ಜಲವಿವಾದ ಮತ್ತು ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆ ಅವರ ಆಸಕ್ತಿಯ ಕ್ಷೇತ್ರಗಳಾಗಿದ್ದವು. ಅವರ ವೃತ್ತಿಬದುಕು ಕಿರಿಯರಿಗೆ ಪ್ರೇರಣೆಯಾಗಲಿ ಎಂದು ಹಾರೈಸುವೆ. ಮದನಮೋಹನ್ ಅವರ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳು, ಅವರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
“ಹಿರಿಯ ಪತ್ರಕರ್ತರಾಗಿದ್ದ ಮದನಮೋಹನ್ ಮತ್ತಿಹಳ್ಳಿಯವರು ನಿಧನ ಹೊಂದಿರುವ ಸುದ್ದಿ ತಿಳಿದು ಮನಸಿಗೆ ದುಖವಾಯಿತು. ಸುಮಾರು ನಾಲ್ಕು ದಶಕಗಳ ಕಾಲ ದಿ ಹಿಂದೂ ಪತ್ರಿಕೆಯ ವರದಿಗಾರರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದ ಅವರು, ಪತ್ರಿಕೋದ್ಯಮ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಅಲ್ಲದೇ ಅನೇಕ ಯುವ ಪತ್ರಕರ್ತರಿಗೆ ಸ್ಪೂರ್ತಿಯಾಗಿದ್ದರು. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
