ಚಂದ್ರಯಾನ- 3 ನೌಕೆಯು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಟ್ವೀಟ್ ಮೂಲಕ ತಿಳಿಸಿದೆ.
ಬೆಂಗಳೂರಿನ ಐಎಸ್‌ಟಿಆರ್‌ಎಸಿಯ ಮಿಷನ್ ಆಪರೇಷನ್ ಕಾಂಪ್ಲೆಕ್ಸ್‌ನಿಂದ (ಎಂಓಎಕ್ಸ್) ಚಂದ್ರನಿಗೆ ಅತಿ ಸಮೀಪದ ಕಕ್ಷೆಯ ಭಾಗವಾದ ಪೆರಿಲೂನ್‌ನಿಂದ ರೆಟ್ರೋ ಬರ್ನಿಂಗ್ (ರಾಕೆಟ್‌ಗಳನ್ನು ಉಡಾವಣೆ ಮಾಡಿದ ದಿಕ್ಕಿನ ವಿರುದ್ಧ ಭಾಗದಿಂದ ರಾಕೆಟ್ ಉರಿಸುವುದು) ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಇಸ್ರೋ ಹೇಳಿದೆ.
ಲೂನಾರ್ ಆರ್ಬಿಟ್ ಇನ್ಸರ್ಷನ್ (ಎಲ್‌ಒಐ) ಅಥವಾ ಚಂದ್ರನ ಕಕ್ಷೆ ಸೇರ್ಪಡೆ ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಂದ್ರಯಾನದ ಎಲ್ಲ ವ್ಯವಸ್ಥೆಗಳು ಉತ್ತಮವಾಗಿವೆ ಎಂಬ ಸುದ್ದಿಯನ್ನು ಇಸ್ರೋ ಹಂಚಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಭಾರತದ ಐತಿಹಾಸಿಕ ‘ಚಂದ್ರಯಾನ 3’ ಯಶಸ್ವಿ ಉಡಾವಣೆ; 20 ವರ್ಷದ ಹಿಂದೆ ಆರಂಭವಾದ ಯೋಜನೆ ಸಾಗಿದ್ದು ಹೇಗೆ?
ಮುಂದಿನ ಕಾರ್ಯಾಚರಣೆಯಾದ ಕಕ್ಷೆಯ ಸಂಕೋಚನ ಪ್ರಕ್ರಿಯೆಯನ್ನು ಆಗಸ್ಟ್ 6ರ ಭಾನುವಾರ ರಾತ್ರಿ 11 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
ಆಗಸ್ಟ್ ಮೊದಲ ವಾರದಲ್ಲಿ ನೌಕೆಯು ಚಂದ್ರನ ಸುತ್ತ 5- 6 ಕಕ್ಷೆಯ ಪಥವನ್ನು ಪೂರ್ಣಗೊಳಿಸಲು ತಯಾರಿ ನಡೆಸಿದೆ. ಕ್ರಮೇಣ ಅದು 100 ಕಿಮೀ ಕಕ್ಷೆಯ ವರ್ತುಲಕ್ಕೆ ಪರಿವರ್ತನೆಯಾಗಲಿದೆ.
ಮುಂದಿನ ಹತ್ತು ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವದ ಪ್ರದೇಶದ ಒಳಗೆ ಇಳಿಯಲು ಸೂಕ್ತವಾದ ಜಾಗವನ್ನು ನಿರ್ಧರಿಸಲಾಗುತ್ತದೆ. ಆಗಸ್ಟ್ 23ರ ಸಂಜೆ 5.47ರ ಸುಮಾರಿಗೆ ಚಂದ್ರಯಾನ ನೌಕೆಯ ಲ್ಯಾಂಡರ್ ಕಕ್ಷೆಯಿಂದ ಹೊರಬರುತ್ತದೆ ಮತ್ತು ಸುಗಮ ಲ್ಯಾಂಡಿಂಗ್‌ಗೆ ಪ್ರಯತ್ನ ಆರಂಭಿಸುತ್ತದೆ.
40 ದಿನಗಳ ಪಯಣದ ಬಳಿಕ ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ನಿರೀಕ್ಷೆ ಇದೆ. ಇದು ಯಶಸ್ವಿಯಾದಲ್ಲಿ ಚಂದ್ರನ ಮೇಲ್ಮೈ ಮೇಲೆ ಇಳಿಯುವ ನಾಲ್ಕನೇ ದೇಶವಾಗಿ ಭಾರತ ದಾಖಲೆಗೆ ಸೇರಲಿದೆ ಹಾಗೂ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಮೊಟ್ಟಮೊದಲ ದೇಶವಾಗಲಿದೆ.
ಚಂದ್ರನ ಮೇಲೆ ಸೂರ್ಯ ಕಿರಣಗಳು ಬೀಳುವಂತಹ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಚಂದ್ರನ ಲ್ಯಾಂಡಿಂಗ್ ಸಮಯದ ಮೇಲೆ ಇಸ್ರೋ ಗಮನ ಹರಿಸಿದೆ. ಅಗತ್ಯವಿದ್ದರೆ ಲ್ಯಾಂಡಿಂಗ್ ಅನ್ನು ಸೆಪ್ಟೆಂಬರ್‌ಗೆ ಮುಂದೂಡುವ ಸಾಧ್ಯತೆಯಿದೆ.