ಭೂಮಿಗೆ ತಲುಪಿದ ಸುನಿತಾ ವಿಲಿಯಮ್ಸ್‌, ಬುಚ್‌ ವಿಲ್ಮೋರ್‌: ಹೇಗಿತ್ತು 286 ದಿನಗಳ ರೋಚಕ ಪಯಣ!

Date:

Advertisements
ಪ್ರತಿಯೊಬ್ಬ ಗಗನಯಾತ್ರಿಗೂ ದಿನಕ್ಕೆ ಅಂದಾಜು 3.79 ಲೀಟರ್ ನೀರಿನ ಅವಶ್ಯಕತೆ ಇರುತ್ತದೆ. ಈ ನೀರನ್ನು ಅವರು ಕುಡಿಯಲು, ಅಡುಗೆ ಮಾಡಲು, ಹಲ್ಲುಜ್ಜುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಬಳಸುತ್ತಾರೆ. ಒಂದು ವೇಳೆ ಗಗನಯಾತ್ರಿಗಳು ತಿಂಗಳಾನುಗಟ್ಟಲೆ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆಯುತ್ತರೆಂದರೆ, ತಮ್ಮೊಡನೆ ತಂದ ಶೇ. 98 ನೀರನ್ನು ಯಶಸ್ವಿಯಾಗಿ ಮರುಬಳಕೆ ಮಾಡುತ್ತಾರೆ. ಇದರಲ್ಲಿ ಗಗನಯಾತ್ರಿಗಳ ಮೂತ್ರ ಮತ್ತು ಬೆವರೂ ಸೇರಿದ್ದು, ಅದನ್ನು ಮರಳಿ ಶುದ್ಧ ನೀರನ್ನಾಗಿ ಪರಿವರ್ತಿಸಲಾಗುತ್ತದೆ. 

ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ಅಮೆರಿಕದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ(286 ದಿನಗಳು) ನಂತರ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3.27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸಾದರು. ಇಬ್ಬರು ಯಾವುದೇ ತೊಂದರೆಯಿಲ್ಲದೆ ಆಗಮಿಸುವುದರೊಂದಿಗೆ ಹಲವು ದಿನಗಳೊಂದಿಗೆ ಇದ್ದ ಆತಂಕ ದೂರವಾಗಿದೆ. ಇಬ್ಬರು ಗಗನಯಾತ್ರಿಗಳು ಕಳೆದ ವರ್ಷ ಜೂನ್‌ 5 ರಂದು ಹೊರಟು ಜೂನ್‌ 6 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್‌) ತಲುಪಿದ್ದರು. ಕೇವಲ ಒಂದು ವಾರದ ಮಟ್ಟಿಗೆ ಇವರಿಬ್ಬರ ಪ್ರಯಾಣವಾಗಿತ್ತು. ಆದರೆ, ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನಿತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು. ಆದರೆ, ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನಿತಾ, ವಿಲ್ಮೋರ್ ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು. ಆಗಾಗ ಕಾಣಿಸಿಕೊಂಡ ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಇಬ್ಬರ ಆಗಮಿಸುವುದು 9 ತಿಂಗಳವರೆಗೂ ವಿಸ್ತರಣೆಗೊಂಡಿತು.

ಐಎಸ್‌ಎಸ್‌ ಕ್ರೂ-9 ಸದಸ್ಯರನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.30ಕ್ಕೆ ನಿರ್ಗಮಿಸಿತ್ತು. ಸ್ಪೇಸ್‌ಎಕ್ಸ್ ಡ್ರ್ಯಾಗನ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ಮುಚ್ಚಿ ಅನ್‌ಡಾಕ್ ಮಾಡುವ ಮೂಲಕ ಭೂಮಿಯ ಕಡೆಗೆ ಪ್ರಯಾಣ ಪ್ರಾರಂಭಿಸಿತು. ಅದಾದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಸುಮಾರು 17 ಗಂಟೆಗಳ ಸುದೀರ್ಘ ಯಾನದ ಬಳಿಕ ಬುಧವಾರ ಮುಂಜಾನೆ 3.37ಕ್ಕೆ ‘ಕ್ರ್ಯೂ ಡ್ರ್ಯಾಗನ್‌’ ಗಗನನೌಕೆ ಸಮುದ್ರಸ್ಪರ್ಶ ಮಾಡಿದೆ. ಫ್ಲೋರಿಡಾದ ಬಳಿ, ಗಲ್ಫ್ ಕೊಲ್ಲಿಯಲ್ಲಿ ಸಮುದ್ರಕ್ಕೆ ಬಿದ್ದಿದೆ. ಇದಕ್ಕೂ ಮುನ್ನ ಗಗನನೌಕೆಯಲ್ಲಿ ಅಳವಡಿಸಲಾಗಿರುವ ಪ್ಯಾರಾಶ್ಯೂಟ್‌ಗಳು ತೆರೆದುಕೊಂಡು ಗಗನನೌಕೆಯ ವೇಗವನ್ನು ತಗ್ಗಿಸುವ ಮೂಲಕ ಸುರಕ್ಷಿತವಾಗಿ ಅದು ಫ್ಲೋರಿಡಾದ ಸಮುದ್ರದಲ್ಲಿ ಬೀಳುವಂತೆ ಮಾಡಲಾಗಿದೆ.

ತಡವಾಗಲು ಕಾರಣವೇನು?

Advertisements

ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ತೆರಳಿದ್ದ ಬೋಯಿಂಗ್‌ ಸ್ಟಾರ್‌ ಲೈನರ್‌ ಏರ್‌ಕ್ರಾಫ್ಟ್‌ನಲ್ಲಿ ಹೀಲಿಯಂ ಸೋರಿಕೆ ಕಾಣಿಸಿದ್ದರಿಂದ ಥ್ರಸ್ಟರ್‌ನಲ್ಲಿ ಸಮಸ್ಯೆ ಉಂಟಾಯಿತು. ತಾಂತ್ರಿಕ ಸಮಸ್ಯೆ ಕಂಡ ಬಂದ ಹಿನ್ನೆಲೆಯಲ್ಲಿ ನಿಗದಿತ ಒಂದು ವಾರದೊಳಗೆ ವಾಪಸಾಗಲು ಆಗಲಿಲ್ಲ. ನಂತರ ಈ ಇಬ್ಬರು ಗಗನಯಾತ್ರಿಗಳು ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್ ಪರೀಕ್ಷಿಸಲು ಮುಂದಾದರು. ಸಮಸ್ಯೆ ಸರಿಯಾಗದ ಕಾರಣ ಇಬ್ಬರು ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿಯೇ ಸಿಲುಕಿದರು. ಥ್ರಸ್ಟರ್‌ ಅಂದರೆ ಸಣ್ಣ ಇಂಜಿನ್‌ಗಳಾಗಿದ್ದು, ಸ್ಟಾರ್‌ಲೈನರ್ ಅಂತಹ ಒಟ್ಟು 28 ಇಂಜಿನ್‌ಗಳನ್ನು ಹೊಂದಿದೆ. ಇವುಗಳು ಬಾಹ್ಯಾಕಾಶ ನೌಕೆ ಚಲಿಸುವ ಪಥವನ್ನು ನಿಯಂತ್ರಿಸಲು ನೆರವಾಗುತ್ತವೆ. ಇವನ್ನು ಐಎಸ್‌ಎಸ್‌ಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸರಿಪಡಿಸಬೇಕಿತ್ತು. ತಾಂತ್ರಿಕ ದೋಷ ಬಹುತೇಕ ನಿವಾರಣೆಯಾದ ಹಿನ್ನೆಲೆಯಲ್ಲಿ ಇಬ್ಬರು ಗಗನಯಾತ್ರಿಗಳು ಅಪಾಯವಿಲ್ಲದೆ ಮರಳಿದ್ದಾರೆ.

608 ದಿನ ಬಾಹ್ಯಾಕಾಶದಲ್ಲಿದ್ದ ಸುನಿತಾ

ಈಗಿನ 286 ದಿನಗಳ ಗಗನಯಾತ್ರಿ ವಾಸದೊಂದಿಗೆ ಸುನಿತಾ ವಿಲಿಯಮ್ಸ್‌ ಒಟ್ಟು 608 ದಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸವಿದ್ದರು. ಇದರೊಂದಿಗೆ ಸುನಿತಾ ಅವರು ಐಎಸ್‌ಎಸ್‌ನಲ್ಲಿ ದೀರ್ಘ ಕಾಲ ವಾಸವಿದ್ದ ಎರಡನೇ ಬಾಹ್ಯಾಕಾಶ ಯಾತ್ರಿಯಾಗಿದ್ದಾರೆ. ಅತಿ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ವಾಸವಿದ್ದವರು ಪಿಗ್ಗಿ ವಿಟ್ಸನ್‌ ಎಂಬ ಅಮೆರಿಕದ ಮಹಿಳೆ. ತಮ್ಮ 15 ವರ್ಷಗಳ ಹಲವು ಬಾರಿಯ ಗಗನಯಾತ್ರೆಯಲ್ಲಿ ಒಟ್ಟು 675 ದಿನಗಳ ಕಾಲ ವಾಸವಿದ್ದರು. ಪಿಗ್ಗಿ ವಿಟ್ಸನ್‌ ಒಮ್ಮೆ 289 ದಿನಗಳ ಕಾಲ ಸತತವಾಗಿ ಐಎಸ್‌ಎಸ್‌ನಲ್ಲಿ ಕಳೆದಿದ್ದರು. ಜೆಫ್ ವಿಲಿಯಮ್ಸ್ – 534 ದಿನಗಳು, ಮಾರ್ಕ್ ವಂದೇ ಹೇ – 523 ದಿನಗಳು, ಸ್ಕಾಟ್ ಕೆಲ್ಲಿ – 520 ದಿನಗಳು, ಸುನಿತಾ ಜೊತೆಯಿದ್ದ ಬುಚ್‌ ವಿಲ್ಮೋರ್ 464 ದಿನಗಳು ಹಾಗೂ ಫ್ರಾಂಕ್‌ ರುಬಿಯೋ 371 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸವಿದ್ದರು. ಒಟ್ಟು 275 -300 ಗಗನಯಾತ್ರಿಗಳು ಈಗಾಗಲೇ ಪ್ರಯಾಣ ಮಾಡಿದ್ದಾರೆ. ತಾಂತ್ರಿಕ ಸಮಸ್ಯೆಯಾಗದಿದ್ದರೆ ಮೂರು ತಿಂಗಳು ಅಲ್ಲಿ ನೆಲೆಸುವುದು ಗಗನ ಯಾತ್ರಿಗಳಿಗೆ ಅಂತಹ ದೊಡ್ಡ ವಿಷಯವಲ್ಲ.

ಪ್ರಸ್ತುತ ಯಾತ್ರೆಯಲ್ಲಿ ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 121,347,491 ಮೈಲುಗಳಷ್ಟು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದ ಇವರು ಭೂಮಿಯ ಸುತ್ತ 4,576 ಕಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ.

ಐಎಸ್‌ಎಸ್‌ ಹೇಗಿರುತ್ತದೆ, ಏನಿರುತ್ತದೆ?

400 ಕಿ.ಮೀ ದೂರದಲ್ಲಿರುವ ಐಎಸ್‌ಎಸ್‌ನಲ್ಲಿ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್ ವಾಸವಿದ್ದರು. ಈ ಬಾಹ್ಯಾಕಾಶ ಕೇಂದ್ರ ಪ್ರತಿ 90 ನಿಮಿಷಕ್ಕೆ ಭೂಮಿಗೆ ಒಂದು ಪರಿಭ್ರಮಣೆ ನಡೆಸುತ್ತದೆ. ಪ್ರತಿದಿನ 16 ಬಾರಿ ಭೂಮಿಯ ಸುತ್ತ ಸುತ್ತುತಿರುತ್ತದೆ. ಇಲ್ಲಿ ದಿನದಲ್ಲಿ 16 ಬಾರಿ ಬೆಳಕು ಹಾಗೂ 16 ಬಾರಿ ಕತ್ತಲಾಗುತ್ತದೆ. ಐಎಸ್‌ಎಸ್‌ನ ಒಟ್ಟು ವಿಸ್ತೀರ್ಣ 375 ಅಡಿಯಷ್ಟು ಅಗಲ ಮತ್ತು ಉದ್ದವಿರುತ್ತದೆ. ಈ ಗಾತ್ರದ ಅಂದಾಜು ಸುಮಾರು ಅಮೆರಿಕಾದ ಫುಟ್‌ಬಾಲ್‌ ಮೈದಾನದಷ್ಟು ದೊಡ್ಡದಾಗಿರುತ್ತೆ. ಇದರಲ್ಲಿ ಆರು ಮಲಗುವ ಜಾಗಗಳು, ಎರಡು ಸ್ನಾನಗೃಹಗಳು, ಒಂದು ವ್ಯಾಯಾಮ ಕೇಂದ್ರ, ಅಡುಗೆ ಮಾಡಿಕೊಳ್ಳಲು ಸ್ಥಳ ಕೂಡ ಲಭ್ಯವಿರುತ್ತದೆ ಮತ್ತು 360 ಡಿಗ್ರಿಗಳ ನೋಟ ಒದಗಿಸುವ ಕಿಟಕಿಗಳಿವೆ. ಭೂಮಿಯಿಂದ ಉಡಾವಣೆಗೊಂಡ ಬಾಹ್ಯಾಕಾಶ ನೌಕೆ ನಾಲ್ಕು ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಬಲ್ಲದು. ಏಕಕಾಲದಲ್ಲಿ ಐಎಸ್ಎಸ್ ಎಂಟು ಬಾಹ್ಯಾಕಾಶ ನೌಕೆಗಳ ನಿಲುಗಡೆಗೆ ಅವಕಾಶ ನೀಡಬಲ್ಲದು.

ಈ ಸುದ್ದಿ ಓದಿದ್ದೀರಾ? 9 ತಿಂಗಳ ಬಳಿಕ ಅಂತರಿಕ್ಷದಿಂದ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್, ಬುಚ್‌ ವಿಲ್ಮೋರ್‌

ಗಗನಯಾತ್ರಿಗಳಿಗೆ ಸಂಶೋಧನೆಗೆ ಬೇಕಾದ ಎಲ್ಲ ವಸ್ತುಗಳನ್ನು ಕೂಡ ಅದರಲ್ಲಿಯೇ ಇರುತ್ತದೆ. ಬಾಹ್ಯಾಕಾಶದಲ್ಲಿ ಒಂದು ಬಾರಿಗೆ ಆರರಿಂದ ಏಳು ಜನರು ಮಾತ್ರ ಇರಲು ಸಾಧ್ಯ. ಬಾಹ್ಯಾಕಾಶದಲ್ಲಿ ಸಾಮಾನ್ಯವಾಗಿ ಗಗನಯಾನಿಗಳು 6 ತಿಂಗಳು ಕಾಲ ಇರುತ್ತಾರೆ. ಕೆಲವೊಮ್ಮೆ ಎಂಟು ದಿನ ಆರು ದಿನ ಇರುವ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಭೂಮಿಯಿಂದ ಆಗಾಗ್ಗೆ ಕಾರ್ಗೋ ರಾಕೆಟ್‌ಗಳ ಮೂಲಕ ಕೆಲ ವಸ್ತುಗಳನ್ನು ರವಾನೆ ಮಾಡಲಾಗುತ್ತದೆ. ನಾಸಾ ಐಎಸ್‌ಎಸ್‌ಅನ್ನು ನಿರಂತರವಾಗಿ ಗಮನಿಸುತ್ತಾ, ಅಲ್ಲಿನ ವಾಯು ಒತ್ತಡವನ್ನು ಭೂಮಿಯ ಒತ್ತಡವಾದ 14.7 ಪೌಂಡ್‌ಪರ್ ಸ್ಕ್ವೇರ್ ಇಂಚ್ (ಪಿಎಸ್ಐ) ಅಥವಾ 1 ಅಟ್ಮಾಸ್ಫಿಯರ್ ಮಟ್ಟದಲ್ಲಿ ಇಡಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣದ ತಾಪಮಾನವನ್ನು ಸಾಮಾನ್ಯವಾಗಿ 18.3 ಡಿಗ್ರಿ ಸೆಲ್ಸಿಯಸ್‌ನಿಂದ 26.7 ಡಿಗ್ರಿ ಸೆಲ್ಸಿಯಸ್ ನಡುವೆ ಇಡಲಾಗುತ್ತದೆ. ಐಎಸ್ಎಸ್ ಇರುವ ಸ್ಥಳಕ್ಕೆ ಅನುಗುಣವಾಗಿ ಈ ತಾಪಮಾನ ಬದಲಾಗುತ್ತಿರುತ್ತದೆ. ಬಾಹ್ಯಾಕಾಶವು ನಿಲ್ದಾಣದ ಹೊರಭಾಗದಲ್ಲಿ, ಸೂರ್ಯನಿಗೆ ಎದುರಾಗಿರುವ ಬದಿ ಅಂದಾಜು 121 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಹೊಂದಿದ್ದರೆ, ನೆರಳಿಗೆ ಎದುರಾಗಿರುವ ಬದಿ ಅಂದಾಜು -157 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ಹೊಂದಿರುತ್ತದೆ.

ಪ್ರತಿಯೊಬ್ಬ ಗಗನಯಾತ್ರಿಗೂ ದಿನಕ್ಕೆ ಅಂದಾಜು 3.79 ಲೀಟರ್ ನೀರಿನ ಅವಶ್ಯಕತೆ ಇರುತ್ತದೆ. ಈ ನೀರನ್ನು ಅವರು ಕುಡಿಯಲು, ಅಡುಗೆ ಮಾಡಲು, ಹಲ್ಲುಜ್ಜುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಬಳಸುತ್ತಾರೆ. ಒಂದು ವೇಳೆ ಗಗನಯಾತ್ರಿಗಳು ತಿಂಗಳಾನುಗಟ್ಟಲೆ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆಯುತ್ತರೆಂದರೆ, ತಮ್ಮೊಡನೆ ತಂದ ಶೇ. 98 ನೀರನ್ನು ಯಶಸ್ವಿಯಾಗಿ ಮರುಬಳಕೆ ಮಾಡುತ್ತಾರೆ. ಇದರಲ್ಲಿ ಗಗನಯಾತ್ರಿಗಳ ಮೂತ್ರ ಮತ್ತು ಬೆವರೂ ಸೇರಿದ್ದು, ಅದನ್ನು ಮರಳಿ ಶುದ್ಧ ನೀರನ್ನಾಗಿ ಪರಿವರ್ತಿಸಲಾಗುತ್ತದೆ. ಎನ್ವಿರಾನ್‌ಮೆಂಟಲ್‌ ಕಂಟ್ರೋಲ್ ಆ್ಯಂಡ್ ಲೈಫ್ ಸಪೋರ್ಟ್ ಸಿಸ್ಟಮ್ (ಇಸಿಎಲ್ಎಸ್ಎಸ್) ಎಂಬ ವ್ಯವಸ್ಥೆಯನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ನೀರಿನ ಮರುಬಳಕೆ ನಡೆಸಲೆಂದೇ ಅಳವಡಿಸಲಾಗಿದೆ. ಇದು ಸ್ವಚ್ಛ ನೀರು ಒದಗಿಸಲು ಕೆಲಸ ಮಾಡುತ್ತದೆ. ಈ ಯಂತ್ರ ಕೇವಲ ಗಗನಯಾತ್ರಿಗಳ ಮೂತ್ರವನ್ನು ಮಾತ್ರವೇ ಶುದ್ಧ ನೀರನ್ನಾಗಿ ಪರಿವರ್ತಿಸುವುದಿಲ್ಲ; ಅದರೊಡನೆ, ಗಗನಯಾತ್ರಿಗಳ ಉಸಿರಿನ ತೇವಾಂಶ, ಬೆವರಿನ ತೇವಾಂಶವನ್ನೂ ಸಂಗ್ರಹಿಸಿ, ಮರುಬಳಕೆಗೆ ಶುದ್ಧ ನೀರನ್ನಾಗಿ ಪರಿವರ್ತಿಸುತ್ತದೆ.

ಆಹಾರ, ಆಮ್ಲಜನಕದ ವಿಷಯಕ್ಕೆ ಬಂದರೆ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಬಹುತೇಕ ಭೂಮಿಯಲ್ಲಿ ಸೇವಿಸುವಂತಹ ಆಹಾರವನ್ನೇ ಸೇವಿಸುತ್ತಾರೆ. ಹಣ್ಣುಗಳು, ತರಕಾರಿಗಳು, ಮೊದಲೇ ಸಿದ್ಧಪಡಿಸಿರುವ ಆಹಾರ ಪದಾರ್ಥಗಳು, ಸಿಹಿ ತಿನಿಸುಗಳು, ಕೆಚಪ್ ಮತ್ತು ಸಾಸಿವೆಯಂತಹ ವಸ್ತುಗಳೂ ಸೇರಿವೆ. ಅವರು ಪ್ರತಿದಿನವೂ ಮೂರು ಬಾರಿ ಆಹಾರ ಸೇವಿಸುತ್ತಾರೆ. ಅದರೊಡನೆ ಹೆಚ್ಚುವರಿ ಕ್ಯಾಲರಿಗಾಗಿ ಇತರ ತಿನಿಸುಗಳನ್ನೂ ತಿನ್ನುತ್ತಾರೆ. ಅವರ ಆಹಾರ ಆಯ್ಕೆಗಳನ್ನು ಖುದ್ದಾಗಿ ಯೋಜನಾ ತಂಡ ಮತ್ತು ಗಗನಯಾತ್ರಿಗಳೇ ಜಾಗರೂಕತೆಯಿಂದ ಆಯ್ಕೆ ಮಾಡಿಕೊಂಡು ರೂಪಿಸುತ್ತಾರೆ. ಸುದೀರ್ಘ ಅವಧಿಯ ಬಾಹ್ಯಾಕಾಶ ಯೋಜನೆಗಳಲ್ಲಿ ಗಗನಯಾತ್ರಿಗಳು ಉಳಿಯುವ ಸಲುವಾಗಿ ವಿಜ್ಞಾನಿಗಳು ಆಹಾರ ತಯಾರಿ ಮತ್ತು ಪ್ಯಾಕೇಜಿಂಗ್ ಕ್ರಮವನ್ನು ವಿಶಿಷ್ಟವಾಗಿಸಿದ್ದಾರೆ. ಬಾಹ್ಯಾಕಾಶಕ್ಕೆ ಕಳುಹಿಸುವ ಆಹಾರ ವಸ್ತುಗಳನ್ನು ಆರಿಸುವಾಗ, ಕಡಿಮೆ ತೂಕ, ಹೆಚ್ಚು ಪೋಷಕಾಂಶ ಹೊಂದಿರುವ, ತಿನ್ನಲು ಸುಲಭ ಮತ್ತು ರುಚಿಕರವಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಂಶೋಧನೆ

ಬಾಹ್ಯಾಕಾಶ ಯಾತ್ರಿಗಳು ಅಂತರಿಕ್ಷ ಕೇಂದ್ರದಲ್ಲಿ ಕೆಲ ವೈದ್ಯಕೀಯ ಸಂಶೋಧನೆಗಳನ್ನು ಮಾಡುತ್ತಾರೆ. ಗುರುತ್ವಾಕರ್ಷಣೆ ಇಲ್ಲದೇ ಆಗುವ ರಾಸಾಯನಿಕ ಪ್ರಕ್ರಿಯೆಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಕೆಲ ಕಾಯಿಲೆಗಳಿಗೆ ಔಷಧಿಗಳ ಸಂಶೋಧನೆಯೂ ಕೂಡ ನಡೆಯುತ್ತದೆ. ಗುರುತ್ವಾಕರ್ಷಣೆ ಇಲ್ಲದೇ ಗಿಡಗಳನ್ನು ಬೆಳೆಸಬಹುದಾ ಅನ್ನುವುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.

ಮರಳಿದ ನಂತರ ರಿಹ್ಯಾಬಿಲಿಟೇಶನ್‌ ಕಡ್ಡಾಯ

ನೌಕೆಯಿಂದ ಹೊರ ಬಂದ ಗಗನಯಾತ್ರಿಗಳನ್ನು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸೇರಿಸಲಾಗಿದೆ. ಅಲ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಗಗನ ಯಾತ್ರಿಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಭೂಮಿಗೆ ಬಂದಿರುವ ಗಗನಯಾತ್ರಿಗಳಿಗೆ ನಾಸಾ 45 ದಿನಗಳ ರಿಹ್ಯಾಬಿಲಿಟೇಶನ್‌ ಯೋಜನೆ ರೂಪಿಸಿದೆ. 45 ದಿನಗಳಲ್ಲಿ ದೇಹದ ಚಟುವಟಿಕೆ ಮತ್ತು ಆರೋಗ್ಯ ಪರೀಕ್ಷೆಗಳನ್ನು ಗಗನಯಾತ್ರಿಗಳಿಗೆ ಮಾಡಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಅವಕಾಶ ನೀಡಲಾಗುತ್ತದೆ. ನೆಲದ ಮೇಲೆ ನಡೆಯಲು ಸಹಾಯ, ಆಹಾರ, ಅಗತ್ಯ ಔಷಧಗಳನ್ನು ಒದಗಿಸುವುದು, ಕಾಲುಗಳನ್ನು ಬಲಪಡಿಸುವ ವ್ಯಾಯಾಮ, ಕಾಲುಗಳು ತಮ್ಮ ನಿಯಂತ್ರಣಕ್ಕೆ ಬರುವವರೆಗೂ ಮೇಲ್ವಿಚಾರಣೆ ನಡೆಯಲಿದೆ.

ಭೂಮಿಗೆ ವಾಪಸ್ ಆದ ತಕ್ಷಣ ಗಗನಯಾನಿಗಳಿಗೆ ನಡೆದಾಡಲು ಆಗುವುದಿಲ್ಲ. ಕೆಲವು ಕಾಲ ನಿಂತುಕೊಳ್ಳಲೂ ಸಮಸ್ಯೆ ಆಗಲಿದೆ. ಅಧಿಕ ರೇಡಿಯೇಷನ್ ಕಾರಣ ಕ್ಯಾನ್ಸರ್ ಭೀತಿ, ಡಿಎನ್‌ಎಗೆ ಹಾನಿಯಾಗುವ ಸಾಧ್ಯತೆಯಿದೆ. ಒಂಟಿತನ, ಮಾನಸಿಕ ಒತ್ತಡ, ನಿದ್ರಾಹೀನತೆ, ದೃಷ್ಟಿ ಕೇಂದ್ರೀಕರಿಸಲು ಸಮಸ್ಯೆ ಅನುಭವಿಸುತ್ತಾರೆ. ಈ ಎಲ್ಲವುಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ.

ಗುರುತ್ವಾಕರ್ಷಣೆ ಪ್ರಭಾವ ಇಲ್ಲದ ಕಾರಣ ದೇಹದಲ್ಲಿ ಕೆಲ ಬದಲಾವಣೆ ಆಗುತ್ತದೆ. ದೇಹ ಭಾರವಿಲ್ಲ ಎನ್ನುವಂತೆ ಅವರಿಗೆ ಅನಿಸುತ್ತದೆ. ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ ಸ್ನಾಯು, ಮೂಳೆಗಳ ಸಾಂದ್ರತೆ ಶೇ.30 ಕ್ಷೀಣಿಸುತ್ತದೆ. ಮೂಳೆಗಳು ಬಲ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಈ ಕಾರಣಗಳಿಂದ ಗಗನಯಾನಿಗಳಿಗೆ ಮೂಳೆ ಮುರಿತದ ಸಮಸ್ಯೆ ಎದುರಿಸುತ್ತಾರೆ. ಗಗನಯಾತ್ರಿಗಳ ದೇಹದ ಮೇಲೆ ಭೂಮಿಯ ಗುರುತ್ವಾಕರ್ಷಣೆಯ ಕೊರತೆಯಿಂದ ಮೂಳೆಯ ಸಾಂದ್ರತೆ ಮತ್ತು ಸ್ನಾಯು ಕ್ಷೀಣತೆ ಅನುಭವಿಸುತ್ತಾರೆ. ಶೂನ್ಯ ಗುರುತ್ವಾಕರ್ಷಣೆ ಮತ್ತು ಹೆಚ್ಚಿನ ವಿಕಿರಣದಲ್ಲಿ ದೀರ್ಘಕಾಲ ಬಾಹ್ಯಾಕಾಶದಲ್ಲಿ ಕಾಲ ಕಳೆದಿದ್ದರಿಂದ ಮೂಳೆಗಳ ದೌರ್ಬಲ್ಯ, ದೃಷ್ಟಿಯ ಮೇಲೆ ಪರಿಣಾಮ ಉಂಟಾಗಬಹುದು. ವಿಕಿರಣವು ಕ್ಯಾನ್ಸರ್ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.

ಸುನಿತಾ ತಂದೆ ಗುಜರಾತಿ ಮೂಲ

ಸುನಿತಾ ವಿಲಿಯಮ್ಸ್‌ ಹಿನ್ನೆಲೆ ಗಮನಿಸಿದರೆ ಅವರ ತಂದೆ ಡಾ.ದೀಪಕ್ ಪಾಂಡ್ಯ ಅವರು ಗುಜರಾತ್‌ನ ಮೆಹಸನಾ ಜಿಲ್ಲೆಯವರು. ಉದ್ಯೋಗದ ನಿಮಿತ್ತ 1950ರ ದಶಕದಲ್ಲಿ ಅಮೆರಿಕಕ್ಕೆ ತೆರಳಿ ವೈದ್ಯರಾಗಿ ಅಲ್ಲಿಯೇ ಬದುಕು ಕಟ್ಟಿಕೊಂಡರು. ಅಮೆರಿಕದ ಪ್ರಜೆ ಬೋನಿ ಝಲೋಕರ್‌ ಅವರನ್ನು ವಿವಾಹವಾದರು. ಸುನಿತಾ ಜನಿಸಿದ್ದು 1965ರ ಸೆ.19ರಂದು ಅಮೆರಿಕದ ಒಹಿಯೊದಲ್ಲಿ. 1983ರಲ್ಲಿ ಪದವಿ, 1987ರಲ್ಲಿ ಯುಎಸ್‌ಎನ್‌ ಅಕಾಡೆಮಿಯಿಂದ ಭೌತಿಕ ವಿಜ್ಞಾನದಲ್ಲಿ ಬಿಎಸ್‌ಸಿ ಪದವಿ ಹಾಗೂ 1995 ರಲ್ಲಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿ ಅಮೆರಿಕದ ನೌಕಾಪಡೆಯಲ್ಲಿ ಕ್ಯಾಪ್ಟನ್‌ ಆಗಿ ಸೇವೆ ಸಲ್ಲಿಸಿದ್ದರು. 1998ರಲ್ಲಿ ನಾಸಾ ಸುನಿತಾ ಅವರ ಸೇವೆಯನ್ನು ಗುರುತಿಸಿ ಗಗನಯಾತ್ರಿಯನ್ನಾಗಿ ಆಯ್ಕೆ ಮಾಡಿತು. ಆ ನಂತರ 2007 ಹಾಗೂ 2012ರಲ್ಲಿ ಗಗನಯಾತ್ರಿಯಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಮೈಕಲ್‌ ಜೆ ವಿಲಿಯಮ್ಸ್‌ ಅವರನ್ನು ಸುನಿತಾ ವಿವಾಹವಾಗಿದ್ದಾರೆ.

ಮರಳಿ ತರಲು 1200 ಕೋಟಿ ಖರ್ಚು

ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಕಕ್ಷೆಗೆ ಕಳುಹಿಸಲು ಮತ್ತು ಗಗನಯಾತ್ರಿಗಳನ್ನು ಮರಳಿ ತರಲು ಒಟ್ಟು 140 ಅಮೆರಿಕನ್ ಮಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಸುಮಾರು 1,200 ಕೋಟಿ ರೂಪಾಯಿ ಆಗಿದೆ. ಇಷ್ಟೊಂದು ದೊಡ್ಡ ವೆಚ್ಚಕ್ಕೆ ಕಾರಣ ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾದ ಹಲವು ಸಾಧನಗಳು. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್, ಕಕ್ಷೆಗೆ ಉಡಾಯಿಸುವ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್​​ಗೆ ಇಷ್ಟೊಂದು ವೆಚ್ಚ ಮಾಡಲಾಗಿದೆ. ಬಾಹ್ಯಾಕಾಶ ಪ್ರಯಾಣಕ್ಕೆ ಅಗತ್ಯವಾದ ಹೆಚ್ಚುವರಿ ತೂಕ, ಲೈಫ್ ಸಪೋರ್ಟಿಂಗ್ ಸಿಸ್ಟಮ್ ಸೇರಿದಂತೆ ಎಲ್ಲಾ ವ್ಯವಸ್ಥಗಳಿಗೆ ಇಷ್ಟೊಂದು ಹಣ ಖರ್ಚು ಆಗಿದೆ.

ಮರೆಯಲಾಗದ ಕಲ್ಪನಾ ಚಾವ್ಲಾ

ಸುನಿತಾ ವಿಲಿಯಮ್ಸ್‌ ಮರಳಿದ ಸಂದರ್ಭದಲ್ಲಿ ಭಾರತದ ಕಲ್ಪನಾ ಚಾವ್ಲಾ ಕೂಡ ನೆನಪಾಗುತ್ತಾರೆ. ಅವರು ಬದುಕಿದ್ದರೆ 60ನೇ ವರ್ಷಕ್ಕೆ ಕಾಲಿಡುತ್ತಿದ್ದರು. 2003ರಲ್ಲಿ ಅವರು ಬಾಹ್ಯಾಕಾಶಕ್ಕೆ ಹೋಗಿ ಪುನಃ ಭೂಮಿಗೆ ಹಿಂದಿರುಗುವಾಗ ಫೆ. 1ರಂದು ಅವರು ವಾಪಸ್ ಬರುತ್ತಿದ್ದ ಸ್ಪೇಸ್ ಶಟಲ್ ಕೊಲಂಬಿಯಾ ಆಕಸ್ಮಿಕವಾಗಿ ಸ್ಫೋಟಗೊಂಡು ಅವರು ಬಾಹ್ಯಾಕಾಶದಲ್ಲೇ ಸುಟ್ಟು ಬೂದಿಯಾದರು. ಅವರೊಂದಿಗೆ, ಇನ್ನೂ ಆರು ಮಂದಿ ವಿಜ್ಞಾನಿಗಳು ಅಂತರಿಕ್ಷ ಪ್ರಾಣ ಕಳೆದುಕೊಂಡರು. ಎಸ್‌ಟಿಎಸ್ – 107 ಹೆಸರಿನ ಗಗನನೌಕೆಯಲ್ಲಿ ಕಲ್ಪನಾ ಚಾವ್ಲಾ ಸೇರಿ 6 ಗಗನಯಾತ್ರಿಗಳಿದ್ದರು. 2003ರ ಜ. 16ರಂದು ಈ ತಂಡ ಬಾಹ್ಯಾಕಾಶಕ್ಕೆ ತೆರಳಿತ್ತು. ಅಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದ ಬಳಿಕ, ಫೆ. 1ರಂದು ಅವರಿದ್ದ ಆಕಾಶಕಾಯದಲ್ಲಿ ಅವರೆಲ್ಲರೂ ಭೂಮಿಯ ಕಡೆಗೆ ಪ್ರಯಾಣ ಬೆಳೆಸಿದ್ದರು. ಆದರೆ, ಫೆ. 1ರ ಬೆಳಗ್ಗೆ 8.44ರ ಸುಮಾರಿಗೆ ಅವರಿದ್ದ ಆಕಾಶಕಾಯದ ನಾಲ್ಕೂ ಸೆಸ್ಸರ್‍‌ಗಳು ನಿಷ್ಕ್ರಿಯವಾದವು. ಅದರಿಂದ ಅವರ ಆಕಾಶಕಾಯದ ವಿಂಗ್‌ಗಳು ಕೆಲಸ ಮಾಡದಂತಾದವು. ಇದರಿಂದ ಟೆಕ್ಸಾಸ್ ಮೇಲಿನ ಆಕಾಶದಲ್ಲಿ ಅವರಿದ್ದ ಎಸ್‌ಟಿಎಸ್ – 107 ಆಕಾಶಕಾಯ ನಾಸಾದ ರೇಂಜ್‌ನಿಂದ ಆಚೆ ಸರಿಯಿತು. ಮತ್ತೆ ಅದನ್ನು ಭೂಮಿಯ ಕಕ್ಷೆಗೆ ರಿ-ಎಂಟ್ರಿ ಮಾಡಿಸಲು ಪ್ರಯತ್ನಿಸಲಾಯಿತು. ಆದರೆ, ಅಷ್ಟರಲ್ಲಿ ಭೂಮಿಯಲ್ಲಿನ ಗಾಳಿಯ ಕಣಗಳ ಘರ್ಷಣೆಯಿಂದ ಆಕಾಶಕಾಯಕ್ಕೆ ಬೆಂಕಿ ಹೊತ್ತಿಕೊಂಡಿತು. ಕಡೆಗೆ ಅದು ಸ್ಫೋಟಗೊಂಡಿತು.

ಒಂದು ಸಣ್ಣ ಕೂದಲೆಳೆಯಷ್ಟು ತಪ್ಪಾದರೂ ಇಡೀ ಯೋಜನೆಯೆ ವಿಫಲವಾಗಿ ಅಂತರಿಕ್ಷದಲ್ಲಿಯೇ ಸುಟ್ಟು ಭಸ್ಮವಾಗಬೇಕಾಗುತ್ತದೆ. ಕಲ್ಪನಾ ಚಾವ್ಲಾ ಅವರಿದ್ದ ಸ್ಪೇಸ್ ಕ್ರಾಫ್ಟ್ ಸ್ಫೋಟಗೊಳ್ಳಲು ಕಾರಣವಾಗಿದ್ದು ಒಂದು ಸಣ್ಣ ಸ್ಕ್ರಾಚ್. ಭೂಮಿಯತ್ತ ಬರುವಾಗ ಆಕಾಶಕಾಯ ಲಾಂಚ್ ಆಗುತ್ತಿದ್ದಂತೆ ಆಕಾಶಕಾಯದೊಳಗಿದ್ದ ಇನ್ಸುಲೇಟಿಂಗ್ ಫೋಮ್‌ನ ಚೂರೊಂದು ಎಗರಿ ಹೋಗಿ ಆಕಾಶಕಾಯದ ವಿಂಗ್ ತಾಕಿಕೊಂಡು ಹೋಗಿ ಅದರ ಮೇಲೆ ಒಂದು ಸಣ್ಣ ಸ್ಕ್ರಾಚ್ ಬಿದ್ದಿತ್ತು. ಆ ಆಕಾಶಕಾಯ ಅತ್ಯಂತ ವೇಗವಾಗಿ ಭೂಮಿಯತ್ತ ಬರುವಾಗ ಅಗಲವಾಗಿ ಸಣ್ಣ ಬಿರುಕು ಉಂಟಾಗಿತ್ತು. ಅದೇ ಭೂಮಿಯ ವಾತಾವರಣಕ್ಕೆ ಆಗಮಿಸಿದ ಕೂಡಲೇ ವಾಯುವಿನ ಕಣಗಳ ಘರ್ಷಣೆಗೆ ತಾಗಿ ಬಿರುಕು ದೊಡ್ಡದಾಗಿ, ಅದು ಸೆನ್ಸರ್‌ಗಳ ವಿಫಲತೆಗೆ ಕಾರಣವಾಗಿ, ವಿಂಡ್‌ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಕಡೆಗೆ ಸ್ಫೋಟಕ್ಕೆ ಕಾರಣವಾಯಿತು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X