ತಂತ್ರಜ್ಞಾನ ಯುಗದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ನಮ್ಮ ಹಣ ಹಾಗೂ ಡಿಜಿಟಲ್ ಮಾಹಿತಿ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಸೈಬರ್ ಅಪರಾಧಿಗಳು ದಿನದಿಂದ ದಿನಕ್ಕೆ ವಿನೂತನ ಸೈಬರ್ ತಂತ್ರಜ್ಞಾನಗಳನ್ನು ಅಳವಡಿಸಿ ನಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣಕ್ಕೆ ಕನ್ನ ಹಾಕುತ್ತಾರೆ. ಕ್ಷಣಕ್ಷಣಕ್ಕೂ ಜಾಗರೂಕರಾಗಿರಬೇಕಾದ ಸನ್ನಿವೇಷ ಈಗ ಎದುರಾಗಿದೆ. ಇಂಟರ್‌ನೆಟ್, ಫೋನ್ ಕರೆಗಳು, ಲಿಂಕ್‌ಗಳು, ಡಿಜಿಟಲ್ ಕರೆ, ಸಂದೇಶಗಳು ಮಾತ್ರವಲ್ಲ ಪರಿಚಿತರನ್ನು ನಂಬಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಹತ್ತಾರು ಸೈಬರ್ ವಂಚನೆಗಳ ಜೊತೆಗೆ ಈಗೊಂದು ಹೊಸ ವಿಧಾನದ ಸೈಬರ್ ಅಪರಾಧ ಶುರುವಾಗಿದೆ. ನಿಮ್ಮ ಜೊತೆಯಲ್ಲಿದ್ದೆ ನಿಮಗೆ ಗೊತ್ತೆ ಆಗದ ರೀತಿಯಲ್ಲಿ ನಿಮ್ಮನ್ನು ವಂಚಿಸುತ್ತಾರೆ. ನೂತನ ವಂಚನೆಯ ಬಗ್ಗೆ ಜೆರೋಧಾ ಸಹ ಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ನಿತಿನ್ ಅವರು ತಮ್ಮ ವಿಡಿಯೋದಲ್ಲಿ ವಂಚಕರು ಯಾರನ್ನು ಗುರಿಯಾಗಿರಿಸಿಕೊಳ್ಳುತ್ತಾರೆ, ಈ ರೀತಿಯ ವಂಚನೆಗಳಿಂದ ಸಾಮಾನ್ಯ ಜನರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದ್ದಾರೆ.
ಅಪರಿಚಿತ ವ್ಯಕ್ತಿ ನಿಮ್ಮ ಬಳಿ ಬಂದು, ನನ್ನ ಫೋನ್ ಕಳೆದು ಹೋಗಿದೆ ಅಥವಾ ಬಿಟ್ಟು ಬಂದಿದ್ದೇನೆ ನನಗೆ ತುರ್ತು ಕರೆ ಮಾಡುವುದಿದೆ, ಸ್ವಲ್ಪ ನಿಮ್ಮ ಮೊಬೈಲ್ ನೀಡುತ್ತೀರಾ ಎಂದು ಕೇಳುತ್ತಾರೆ. ಅಮಾಯಕ ಜನರು ಮನ ಕರಗಿಯೋ ಅಥವಾ ಆತನನ್ನು ನಂಬಿ ತಮ್ಮ ಮೊಬೈಲ್ ಫೋನ್‌ಅನ್ನು ಆತನಿಗೆ ಕೊಡಬಹುದು. ಆದರೆ ಇದೊಂದು ವಂಚನೆಯ ಹೊಸ ವಿಧಾನವಾಗಿದೆ. ಆ ವ್ಯಕ್ತಿ ನಿಮ್ಮ ಒಟಿಪಿಯನ್ನು ಪ್ರತಿಬಂಧಿಸುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಖಾಲಿ ಮಾಡಿಬಿಡಬಹುದು. ವಂಚಕ ನಿಮಗೆ ಅರಿವಿಲ್ಲದೆಯೇ ಮೋಸಗೊಳಿಸುತ್ತಾನೆ.
ವಂಚಕ ನಿಮ್ಮ ಮೊಬೈಲ್ ಅನ್ನು ಬಳಸುತ್ತಿರುವಂತೆ ನಟಿಸಿ ಇಲ್ಲೆ ನೆಟ್‌ವರ್ಕ್ ಸಿಗುತ್ತಿಲ್ಲವೆಂದು ಸ್ವಲ್ಪ ದೂರ ಹೋಗಿ ವಂಚನೆಯ ಹೊಸ ಆಪ್‌ಗಳನ್ನು ಡೌನ್‌ಲೋಡ್ ಮಾಡಬಹುದು ಇಲ್ಲವೇ ವೈಯಕ್ತಿಕ ಮಾಹಿತಿಯನ್ನು ಡೌನ್ ಲೋಡ್ ಮಾಡಲು ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ಗಳನ್ನು ತೆರೆಯಬಹುದು ಅಥವಾ ನಿಮಗೆ ಬರುವ ಕರೆ, ಬ್ಯಾಂಕ್ ಅಲರ್ಟ್ ಸಂದೇಶ ಸೇರಿದಂತೆ ಎಲ್ಲವು ತನ್ನ ಮೊಬೈಲ್ ನಂಬರ್‌ಗೆ ಬರುವಂತೆ ನಿಮ್ಮ ಫೋನ್ ಸೆಟ್ಟಿಂಗ್ಸ್ ಬದಲು ಮಾಡಬಹುದು.
ಈ ಸುದ್ದಿ ಓದಿದ್ದೀರಾ? ಸೈಬರ್ ಜಗತ್ತಿನ ಕರಾಳ ಮುಖ ಡಿಜಿಟಲ್ ಅರೆಸ್ಟ್: ಎಚ್ಚರ ವಹಿಸದಿದ್ದರೆ ಹಣ, ಜೀವನ ಎರಡೂ ಮಾಯ!
ನಂತರ ವಂಚಕರಿಗೆ ಬ್ಯಾಂಕ್ ಅಕೌಂಟ್ ಖಾತೆಯ ವಿವರ, ಒಟಿಪಿ ಲಭ್ಯವಾಗುವ ಮೂಲಕ ಅನಧಿಕೃತವಾಗಿ ನಿಮ್ಮ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಅಷ್ಟೇ ಅಲ್ಲ ನಿಮ್ಮ ಮೊಬೈಲ್‌ನ ಪಾಸ್ ವರ್ಡ್ಸ್‌ಗಳನ್ನು ಬದಲಾಯಿಸಬಹುದು. ಒಂದು ಬಾರಿ ತನ್ನಿಷ್ಟಕ್ಕೆ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸಿಕೊಂಡರೆ ಸುಲಭವಾಗಿ ನಿಮ್ಮ ಖಾತೆಯಲ್ಲಿನ ಹಣವನ್ನು ನಿಮಗೆ ಅರಿವಿಲ್ಲದೆ ಮೋಸಗಾರರು ವಂಚಿಸುತ್ತಾರೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ದುಡ್ಡೆಲ್ಲ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಈ ಕಾರಣದಿಂದ ಇಂತಹ ವಂಚನೆಗಳಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬೇಕು.
ಆದ್ದರಿಂದ ಯಾರೇ ನಿಮ್ಮ ಬಳಿ ಮೊಬೈಲ್ ಕೇಳಿದರೂ ಅವರ ಕೈಗೆ ನೇರವಾಗಿ ಮೊಬೈಲ್ ಕೊಡಬೇಡಿ. ಒಂದು ವೇಳೆ ಯಾರಾದರು ನಿಮ್ಮಲ್ಲಿ ಮೊಬೈಲ್ ಕೊಡುವಂತೆ ವಿನಂತಿಸಿಕೊಂಡರೆ, ಅವರಿಗೆ ಬೇಕಾದವರ ನಂಬರ್ ಡಯಲ್ ಮಾಡಿ, ಫೋನ್ ಸ್ಪೀಕರ್ ಅನ್ನು ಆನ್ ಮಾಡಿ ಮಾತನಾಡಿಸಬೇಕು ಎಂದು ನಿತಿನ್ ಕಾಮತ್ ವಿಡಿಯೋದಲ್ಲಿ ಸಲಹೆ ನೀಡಿದ್ದಾರೆ.
