ದೀಪಾವಳಿಯ ಹಿನ್ನೆಲೆಯಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ‘ಛಠ್’ ಪೂಜೆಯ ಹಿನ್ನೆಲೆಯಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶದಗಳಿಗೆ ರೈಲಿನಲ್ಲಿ ತೆರಳಲು ಮುಂಬೈನ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಕಂಡುಬಂದಿದ್ದು, ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಛಠ್ ಪೂಜೆ ಆಚರಣೆಗೆ ಮುನ್ನ ಬಿಹಾರದ ರಕ್ಸೌಲ್‌ಗೆ ರೈಲು ಹತ್ತಲು ಮುಂಬೈನ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದಲ್ಲಿ ಭಾರಿ ಜನಸಮೂಹ ನೆರೆದಿತ್ತು. ಸುದ್ದಿ ಸಂಸ್ಥೆ ಪಿಟಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರೈಲು ಬರುವ ಮುನ್ನವೇ ಜನರು ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದು ಕಂಡು ಬಂದಿದ್ದು, ನೂಕು ನುಗ್ಗಲಿನ ಪರಿಸ್ಥಿತಿ ನಿರ್ಮಾಣವಾಗಿತ್ತು.
VIDEO | People throng Mumbai’s Lokmanya Tilak Terminus to board a train for Raxaul, Bihar for the upcoming Chhath Puja celebrations. #ChhathPuja2023
(Full video available on PTI Videos – https://t.co/n147TvqRQz) pic.twitter.com/Y2Phs1VeHJ
— Press Trust of India (@PTI_News) November 13, 2023
ಛಠ್ ಪೂಜೆ ಸಮೀಪಿಸುತ್ತಿದ್ದಂತೆ ಮಂಗಳವಾರ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್‌ನಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈಲಿನಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ರಿಸರ್ವೇಶನ್ ಟಿಕೆಟ್ ಮಾಡಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಕೂಡ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜನರು ಟಿಕೆಟ್‌ಗಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಏತನ್ಮಧ್ಯೆ, ಯಾವುದೇ ಕಾಲ್ತುಳಿತ ಸಂಭವಿಸದಂತೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ಸಿಬ್ಬಂದಿಗಳು ಎಚ್ಚರಿಕೆ ವಹಿಸುವಂತೆ ಆದೇಶ ಹೊರಡಿಸಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕೆಲವು ಪ್ರಯಾಣಿಕರು, ಟಿಕೆಟ್ ಇದ್ದರೂ ರೈಲಿನಲ್ಲಿ ಜನಜಂಗುಳಿಯಿಂದಾಗಿ ರೈಲು ಹತ್ತಲು ಆಗುತ್ತಿಲ್ಲ. ಸುಗಮ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ದೀಪಾವಳಿ ಮತ್ತು ಛಠ್ ಪೂಜೆಯ ಹಿನ್ನೆಲೆಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ ಜನರು ತಮ್ಮ ರಾಜ್ಯಗಳಿಗೆ ಹೋಗಲು ಪ್ರಯತ್ನಿಸುತ್ತಿರುವುದರಿಂದ ಈ ರೀತಿಯ ಜನದಟ್ಟಣೆ ಆಗಿದೆ. ಪ್ರತಿ ವರ್ಷ ಈ ರೀತಿಯ ಸಮಸ್ಯೆ ಇದೆ. ಈ ಬಾರಿ ಹೆಚ್ಚು ಆಗಿದೆ. ಎಲ್ಲವೂ ಗೊತ್ತಿದ್ದರೂ ರೈಲ್ವೆ ಇಲಾಖೆ ಸುಮ್ಮನಿದೆ, ಇನ್ನಷ್ಟು ಹೆಚ್ಚು ರೈಲುಗಳನ್ನು ಬಿಡಬೇಕಿತ್ತು ಎಂದು ತಿಳಿಸಿದ್ದಾರೆ.
ರೈಲ್ವೆ ಇಲಾಖೆ ಕೂಡ ಛಠ್ ಪೂಜೆಗೆ ವಿಶೇಷ ರೈಲುಗಳನ್ನು ಆರಂಭಿಸಿದ್ದರೂ ಜನರ ಸಂಖ್ಯೆ ಕಡಿಮೆಯಾಗಿಲ್ಲ. ನಿರಂತರವಾಗಿ ಜನರು ಬರುತ್ತಲೇ ಇರುವುದರಿಂದ ಭಾರೀ ಜನದಟ್ಟಣೆ ಉಂಟಾಗಿದೆ ಎಂದು ವರದಿಯಾಗಿದೆ.
ಛಠಿ, ಛಠ್ ಪರ್ವ್, ದಲಾ ಪೂಜೆ, ಸೂರ್ಯ ಷಷ್ಟಿ, ಪ್ರತಿಹಾರ್ ಮತ್ತು ದಲಾ ಛಾತ್ ಎಂದೂ ಕರೆಯಲ್ಪಡುವ ಛಠ್ ಪೂಜೆಯು ಸೂರ್ಯನಿಗೆ ಸಮರ್ಪಿಸಲಾಗುತ್ತದೆ. ಮಹಿಳೆಯರು ಛತ್ ಸಮಯದಲ್ಲಿ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಕುಟುಂಬಿಕರು ಊರಲ್ಲೇ ಇರಬೇಕೆಂಬ ಪ್ರತೀತ ಅವರಲ್ಲಿದೆ. ಹೀಗಾಗಿ ಮುಂಬೈ ಹಾಗೂ ಸುತ್ತಮುತ್ತಲಿನಲ್ಲಿ ದುಡಿಯುತ್ತಿರುವ ಬಿಹಾರ, ಉತ್ತರ ಪ್ರದೇಶದ ಎಲ್ಲರೂ ಊರಿಗೆ ಹೊರಟಿದ್ದರಿಂದ ಈ ರೀತಿಯ ಜನದಟ್ಟಣೆ ಉಂಟಾಗಿದೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ಹಬ್ಬಕ್ಕೆ ಬಹಳ ಮಹತ್ವವಿದೆ.
ಇದೇ ರೀತಿಯ ದೃಶ್ಯಗಳು ಕಳೆದ ಶನಿವಾರ ಸೂರತ್ ರೈಲು ನಿಲ್ದಾಣದಲ್ಲಿ ಕಂಡುಬಂದಿದ್ದವು. ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾದ ಹಿನ್ನೆಲೆಯಲ್ಲಿ ಯುವಕನೋರ್ವ ಸಾವನ್ನಪ್ಪಿದ್ದನು.