ಈಗಿನ ಅಂತರ್ಜಾಲ ಯುಗದಲ್ಲಿ ಸುದ್ದಿಗಳು ನಕಲಿ ಎಂದು ಕೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವು ಕಡೆ ನಕಲಿ ಪೊಲೀಸ್, ನಕಲಿ ಸರ್ಕಾರಿ ಅಧಿಕಾರಿ ಕೂಡ ಈಗಾಗಲೇ ಸುದ್ದಿಯಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲೇ ವಿಚಿತ್ರ ನಕಲಿ ಪ್ರಕರಣವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅದು ‘ನಕಲಿ ಟೋಲ್ ಪ್ಲಾಜಾ’.
ಹೌದು. ಈ ಸುದ್ದಿಯನ್ನು ನೀವು ನಂಬಲೇಬೇಕು. ಸರ್ಕಾರಿ ನಿಧಿಯಿಂದ 18 ಕೋಟಿ ರೂಪಾಯಿ ವಂಚಿಸಿದ್ದ ಆರು ನಕಲಿ ಸರ್ಕಾರಿ ಕಚೇರಿಗಳನ್ನು ಇತ್ತೀಚೆಗೆ ಭೇದಿಸಿದ್ದ ಗುಜರಾತ್ ಪೊಲೀಸರು, ಕಳೆದ ಸೋಮವಾರ ಮೋರ್ಬಿ ಜಿಲ್ಲೆಯಲ್ಲಿ ‘ನಕಲಿ ಟೋಲ್ ಬೂತ್’ ನಡೆಸಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೋರ್ಬಿ ಜಿಲ್ಲೆಯಲ್ಲಿ ನೈಜ ಟೋಲ್‌ಗಿಂತ ಕಡಿಮೆ ಹಣವನ್ನು ವಿಧಿಸಿ, ಖಾಸಗಿ ಮಾರ್ಗದಿಂದ ಸಂಚರಿಸಲು ಅನುವು ಮಾಡಿಕೊಟ್ಟಿದ್ದಲ್ಲದೇ, ನಕಲಿ ಟೋಲ್ ಪ್ಲಾಜಾವನ್ನು ನಡೆಸುತ್ತಿರುವ ಆರೋಪದ ಮೇಲೆ ಗುಜರಾತ್ ಪೊಲೀಸರು ಐದು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Morbi Fake Toll Plaza; Series of meeting held & officers will table report#Gujarat #TV9News pic.twitter.com/yyDW9trl8D
— Tv9 Gujarati (@tv9gujarati) December 6, 2023
ಮೂಲಗಳ ಪ್ರಕಾರ, ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಯುತ್ತಿದ್ದ ಮತ್ತು ವಾಹನಗಳಿಂದ ₹75 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿರುವುದಾಗಿ ವರದಿಯಾಗಿದೆ. ಪೊಲೀಸರು ಈ ಜಾಲವನ್ನು ಪತ್ತೆ ಹಚ್ಚಿದ್ದರಿಂದ, ಈಗ ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರಕ್ಕೇನೆ ಮುಖಭಂಗವಾದಂತಾಗಿದೆ.
‘ನಕಲಿ ಟೋಲ್ ಪ್ಲಾಜಾ‘ ಕುರಿತು ಮೋರ್ಬಿಯ ಕೆಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ಪೊಲೀಸರು, ದಾಳಿ ನಡೆಸಿದ್ದಾರೆ. ಈ ವೇಳೆ ಸೌರಾಷ್ಟ್ರ ಪ್ರದೇಶದ ಪಾಟಿದಾರ್ ಸಮುದಾಯದ ಪ್ರಭಾವಿ ನಾಯಕನ ಪುತ್ರನೇ ಈ ನಕಲಿ ಟೋಲ್ ಪ್ಲಾಜಾವನ್ನು ನಡೆಸುತ್ತಿದ್ದ ಎಂಬ ವಾಸ್ತವಾಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಖಾಸಗಿ ರಸ್ತೆಯ ವ್ಯವಸ್ಥೆ ಮಾಡಿದ್ದ ಸೆರಾಮಿಕ್ ಫ್ಯಾಕ್ಟರಿ ಮಾಲೀಕ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Morbi Fake Toll Plaza: ટોલનાકા વિવાદ મુદ્દે જેરામ બાપાનો લૂલો બચાવ
મોરબીના ગેરકાયદે ટોલનાકા મુદ્દે સિદસર ઉમિયાધામના પ્રમુખ જયરામ પટેલે જણાવ્યું કે, ફેક્ટરીને ભાડે આપીને અમે કરાર કર્યો હતો અને ભાડા કરારને પોલીસને આપ્યો છે. #Morbi #faketollplaza #Illegaltollscam #GTVideo pic.twitter.com/RtFFkeIpO0
— Gujarat Tak (@GujaratTak) December 5, 2023
ಎಫ್‌ಐಆರ್‌ನಲ್ಲಿ ಪೊಲೀಸರು ಸೆರಾಮಿಕ್ ಫ್ಯಾಕ್ಟರಿ ಮಾಲೀಕ ಅಮರ್ಷಿ ಪಟೇಲ್ ಮತ್ತು ಅವರ ಸಹಚರರಾದ ರವಿರಾಜ್‌ಸಿಂಹ ಝಾಲಾ, ಹರ್ವಿಜಯ್‌ಸಿಂಹ ಝಾಲಾ, ಧರ್ಮೇಂದ್ರಸಿಂಹ ಝಾಲಾ, ಯುವರಾಜಸಿಂಹ ಝಾಲಾ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಆರೋಪಿಗಳು ‘ವೈಟ್ ಹೌಸ್’ ಹೆಸರಿನ ಮುಚ್ಚಲ್ಪಟ್ಟಿದ್ದ ಸಿರಾಮಿಕ್ ಫ್ಯಾಕ್ಟರಿಯಲ್ಲಿ ಬೂತ್ ಸ್ಥಾಪಿಸಿದ್ದರು. ಮೋರ್ಬಿ ಮತ್ತು ವಾಂಕನೇರ್ ನಡುವಿನ ಬಮನ್‌ಬೋರ್-ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಘಾಸಿಯಾ ಟೋಲ್ ಪ್ಲಾಜಾವನ್ನು ಬೈಪಾಸ್ ಮಾಡಲು ರಸ್ತೆಯನ್ನು ರಚಿಸಿದ್ದಾರೆ. ಅವರು ವಾಂಕನೇರ್‌ನಿಂದ ಮೋರ್ಬಿಗೆ ಬರುವ ವಾಹನಗಳ ಸಂಚಾರಕ್ಕಾಗಿ ಇದೇ ರೀತಿಯ ರಸ್ತೆಯನ್ನು ನಿರ್ಮಿಸಿದ್ದಾರೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ದೂರು ನೀಡದ ಸ್ಥಳೀಯರು!
ಈ ನಕಲಿ ಟೋಲ್ ಪ್ಲಾಜಾವನ್ನು ನೈಜ ಟೋಲ್ ಪ್ಲಾಜಾಗಿಂತ ಹತ್ತಿರದಲ್ಲೇ ನಿರ್ಮಿಸಲಾಗಿತ್ತು. ಈ ನಕಲಿ ಟೋಲ್ ಬಗ್ಗೆ ಮಾಹಿತಿ ಇದ್ದರೂ ಕೂಡ ಯಾವುದೇ ಸ್ಥಳೀಯರು ಹಾಗೂ ಪ್ರಯಾಣಿಕರು ದೂರು ನೀಡಿರಲಿಲ್ಲ ಎಂದು ವರದಿಯಾಗಿದೆ.
ಆರೋಪಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನೈಜ ಟೋಲ್ ಪ್ಲಾಜಾಗಿಂತ ಕಡಿಮೆ ಮೊತ್ತವನ್ನು ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ನಕಲಿ ಟೋಲ್ ಮೂಲಕ ಪಾಪಸಾಗುತ್ತಿದ್ದ ಕಾರು ಚಾಲಕರಿಗೆ 20 ಹಾಗೂ ಭಾರೀ ವಾಹನಗಳಿಗೆ 110 ರೂಪಾಯಿ ಸುಂಕ ವಿಧಿಸುತ್ತಿದ್ದರು ಎಂದು ತಿಳಿದುಬಂದಿದೆ. ನಿಜವಾದ ಟೋಲ್ ಪ್ಲಾಜಾದಲ್ಲಿ ಕಾರಿಗೆ ₹200 ಮತ್ತು ₹595ಯನ್ನು ನಿಗದಿ ಮಾಡಲಾಗಿದೆ.
ನಕಲಿ ಟೋಲ್ ಪ್ಲಾಜಾದ ಹತ್ತಿರವೇ ಇರುವ ವಘಾಸಿಯಾ ಟೋಲ್ ಪ್ಲಾಜಾವು ರಾಷ್ಟ್ರೀಯ ಹೆದ್ದಾರಿ 8Aನ ಮೂಲಕ ಮೋರ್ಬಿಯನ್ನು ಕಚ್‌ಗೆ ಸಂಪರ್ಕಿಸುತ್ತದೆ.
ಖಾಸಗಿ ಒಡೆತನದ ಟೋಲ್ ಪ್ಲಾಜಾವು ಮುಖ್ಯ ಹೆದ್ದಾರಿಯಿಂದ ವಾಹನ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ನಂತರ, ಸ್ಥಳೀಯ ಆಡಳಿತ ಎಚ್ಚೆತ್ತು ಪೊಲೀಸರಿಗೆ ದೂರು ನೀಡಿತ್ತು.
ಈ ಬಗ್ಗೆ ಹೇಳಿಕೆ ನೀಡಿರುವ ಮೋರ್ಬಿ ಜಿಲ್ಲಾಧಿಕಾರಿ ಜಿ.ಟಿ.ಪಾಂಡ್ಯ, “ಹೆದ್ದಾರಿಯಲ್ಲಿ ಮುಖ್ಯ ಟೋಲ್ ಪ್ಲಾಜಾವನ್ನು ನಿರ್ವಹಿಸುವ ಏಜೆನ್ಸಿಯು ಖಾಸಗಿ ಟೋಲ್ ಬೂತ್ ನಿರ್ವಾಹಕರ ವಿರುದ್ಧ ದೂರು ನೀಡಲು ನಿರಾಕರಿಸಿದೆ” ಎಂದು ತಿಳಿಸಿದ್ದಾರೆ.
ಆಶ್ಚರ್ಯ ವ್ಯಕ್ತಪಡಿಸಿದ ನಿವೃತ್ತ ಐಪಿಎಸ್ ಅಧಿಕಾರಿ
ನಕಲಿ ಟೋಲ್ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕಿರುವ ಗುಜರಾತ್‌ನ ನಿವೃತ್ತ ಐಪಿಎಸ್ ಅಧಿಕಾರಿ ರಮೇಶ್ ಸವಾನಿ, “ಆರೋಪಿಗಳು ತಮ್ಮದೇ ಆದ ಟೋಲ್ ಬೂತ್ ಸ್ಥಾಪಿಸಿದ ನಂತರ 18 ತಿಂಗಳಲ್ಲಿ ಪ್ರಯಾಣಿಕರಿಂದ ಸುಮಾರು ₹82 ಕೋಟಿ ಸಂಗ್ರಹಿಸಿದ್ದಾರೆ” ಎಂದು ಆರೋಪಿಸಿದ್ದು “ಇಷ್ಟು ದಿನ ಜಿಲ್ಲಾಡಳಿತ ಗಮನಹರಿಸದೆ ಇರುವುದಾದರೂ ಹೇಗೆ? ಅವರ ಗಮನಕ್ಕೆ ಬಂದೇ ಇರಲಿಲ್ಲವೇ?” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ಪೈಕಿ ನಿವೃತ್ತ ಸೈನಿಕ!
ವರದಿಗಳ ಪ್ರಕಾರ, ಎಫ್‌ಐಆರ್ ದಾಖಲಾದ ಐವರು ಆರೋಪಿಗಳ ಪೈಕಿ ಓರ್ವ ನಿವೃತ್ತ ಸೈನಿಕ ಎಂದು ತಿಳಿದುಬಂದಿದೆ. ರವಿರಾಜ್‌ಸಿಂಹ ಝಾಲಾ ಎಂಬುವವ ಕೂಡ ಐವರ ಪೈಕಿ ಓರ್ವ ಆರೋಪಿಯಾಗಿದ್ದು, ಈತ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದು, ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಆರೋಪಿಗಳು ನೈಜ ಟೋಲ್ ಪ್ಲಾಜಾದ ಸಮೀಪವಿರುವ ವಘಾಸಿಯಾದಲ್ಲಿ ಕಾರ್ಯನಿರ್ವಹಿಸದ ಸೆರಾಮಿಕ್ ಕಾರ್ಖಾನೆಯನ್ನು ಬಾಡಿಗೆಗೆ ಪಡೆದಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಖಾನೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಪ್ರಕರಣದ ಮುಂದಿನ ತನಿಖೆಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಎಷ್ಟು ತೆರಿಗೆ ಸಂಗ್ರಹಿಸಲಾಗಿದೆ, ಪ್ರಮುಖ ಆರೋಪಿ ಯಾರು ಮತ್ತು ಈ ಹಗರಣದಲ್ಲಿ ಭಾಗಿಯಾಗಿರುವವರೆಲ್ಲರ ಹೆಚ್ಚಿನ ವಿವರಗಳನ್ನು ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.