- ಟ್ವಿಟರ್ ಮೂಲಕ ಅಮೆಝಾನ್‌ಗೆ ದೂರು ನೀಡಿದ ಗ್ರಾಹಕ
- ಜು. 5ರಂದು ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದ್ದ ಅರುಣ್ ಕುಮಾರ್ ಮೆಹರ್
ಈಗ ಬಹಳಷ್ಟು ಮಂದಿ ಇ-ಕಾಮರ್ಸ್ ವೆಬ್‌ಸೈಟ್ ಅಥವಾ ಆಪ್‌ಗಳಿಂದಲೇ ತಮಗೆ ಬೇಕಾದ ವಸ್ತುಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡುತ್ತಾರೆ. ಹೀಗೆ, ಆನ್‌ಲೈನ್ ಮೂಲಕ ಹೆಚ್ಚು ವ್ಯವಹಾರ ಮಾಡುವವರು ಈ ಸುದ್ದಿಯನ್ನು ಓದಿದರೆ ನಿಮಗೆ ಆಶ್ಚರ್ಯವೂ ಹಾಗೂ ಆಘಾತವೂ ಆಗಬಹುದು.
ಅಮೆಝಾನ್ ಗ್ರಾಹಕರೊಬ್ಬರು 90,000 ರೂ.ಗಳ ಕ್ಯಾಮೆರಾ ಲೆನ್ಸ್‌ಗೆ ಆರ್ಡರ್ ಮಾಡಿದ್ದರು. ಆದರೆ ತಮ್ಮ ಪಾರ್ಸೆಲ್ ಓಪನ್ ಮಾಡಿ ನೋಡಿದಾಗ ಅವರಿಗೆ ಆಘಾತವಾಗಿದೆ. ಲೆನ್ಸ್ ಬದಲು ಬಂದಿದ್ದು ಮಾತ್ರ ನವಣೆ ಅಕ್ಕಿಯ ಪ್ಯಾಕೆಟ್. ಹೌದು, ಇದು ನಿಜ, ಸುಳ್ಳು ಸುದ್ದಿಯಲ್ಲ. ಸ್ವತಃ ಗ್ರಾಹಕನೇ ತಮಗಾದ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಅಮೆಝಾನ್ ವಿರುದ್ಧ ಆಕ್ರೋಶ ಹೊರಹಾಕಿರುವ ಬೆಂಗಳೂರಿನ ಅರುಣ್ ಕುಮಾರ್ ಮೆಹರ್ ಎಂಬವರು, “ಜು 5ರಂದು ಸಿಗ್ಮಾ ಕಂಪೆನಿಯ 24-70 ಎಫ್ 28 ಲೆನ್ಸ್ ಗಾಗಿ ಅಮೆಝಾನ್‌ನಲ್ಲಿ ಆರ್ಡರ್ ನೀಡಿದ್ದೆ. ಪಾರ್ಸಲ್ ಬಂದಾಗ ತೆರೆದು ನೋಡಿದರೆ ಅದರಲ್ಲಿ ನವಣೆ ಅಕ್ಕಿಯ ಕಾಳುಗಳಿದ್ದ ಪ್ಯಾಕೆಟ್ ಇದೆ. ಅಲ್ಲದೇ, ಪಾರ್ಸೆಲ್ ಬಾಕ್ಸ್ ಕೂಡ ತೆರೆದ ಸ್ಥಿತಿಯಲ್ಲಿದ್ದವು. ಅಮೆಜಾನ್‌ನಿಂದ ದೊಡ್ಡ ಹಗರಣ ಇದು. ದಯವಿಟ್ಟು ಈ ಕೂಡಲೇ ಕ್ರಮ ಕೈಗೊಳ್ಳಿ” ಎಂದು ಬರೆದು ಲೆನ್ಸ್ ಪೆಟ್ಟಿಗೆಯಲ್ಲಿ ನವಣೆ ಅಕ್ಕಿಯ ಕಾಳುಗಳನ್ನು ತುಂಬಿರುವ ಫೋಟೋಗಳನ್ನು ಜು.7ರಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಮೆಝಾನ್‌ನ ಜಿತೇಶ್ವರ ಎಂಬವರು, ತಪ್ಪಾದ ಐಟಂ ತಮಗೆ ತಲುಪಿ, ಸಮಸ್ಯೆಯಾಗಿರುವುದಕ್ಕೆ ನಾವು ಕ್ಷಮೆ ಯಾಚಿಸುತ್ತೇವೆ. ನೀವು ಇದನ್ನು ನಮ್ಮ ಗ್ರಾಹಕ ಸೇವಾ ವಿಭಾಗಕ್ಕೆ ವರದಿ ಮಾಡಿದ್ದೀರಿ ಎಂಬುದು ತಿಳಿದುಬಂದಿದೆ. ನಿರ್ದಿಷ್ಟ ಸಮಯದ ಒಳಗೆ ಉತ್ತರಿಸುತ್ತೇವೆ ಎಂದು ತಿಳಿಸಿದೆ.
ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ಗ್ರಾಹಕ ಅರುಣ್, ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಎಂದು ಅಮೆಝಾನ್ ಹೇಳುತ್ತಿದೆ. ಆದರೆ ಇದು ಹೇಗೆ ಸಂಭವಿಸಿತು. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಆದಷ್ಟೂ ಬೇಗನೆ ಈ ಸಮಸ್ಯೆಯನ್ನು ಬಗೆಹರಿಸಬೇಕು. ಒಂದೋ ಆರ್ಡರ್ ಮಾಡಿರುವ ಲೆನ್ಸ್ ಕಳಿಸಿಕೊಡಿ ಅಥವಾ ತಾನು ಈಗಾಗಲೇ ಕಟ್ಟಿರುವ ಹಣವನ್ನು ಮರುಪಾವತಿ ಮಾಡಿ ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಮುಂದಾದ ವಿಪಕ್ಷಗಳು; ಇಂದಿನಿಂದ ಎರಡು ದಿನ ಸಭೆ
ಅರುಣ್ ಕುಮಾರ್ ಟ್ವೀಟ್ ಗೆ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದು, ಕೆಲವರು ತಮಗೂ ಅಂತಹದೇ ರೀತಿಯ ಕೆಟ್ಟ ಅನುಭವ ಆಗಿದೆ ಎಂದು ಹೇಳಿಕೊಂಡಿದ್ದರೆ, ಮತ್ತೆ ಕೆಲವರು ನೀವು ಫ್ಲಿಪ್‌ಕಾರ್ಟ್ ಬಳಸಬೇಕಿತ್ತು ಎಂದು ಸಲಹೆ ನೀಡಿದ್ದಾರೆ.
ಒಟ್ಟಾರೆಯಾಗಿ ಇ-ಕಾಮರ್ಸ್ ವೆಬ್‌ಸೈಟ್ ಅಥವಾ ಆಪ್ ಬಳಸುವವರು ವಸ್ತು ಆರ್ಡರ್ ಮಾಡುವಾಗ ಮತ್ತು ಆರ್ಡರ್ ಮಾಡಿದ ವಸ್ತುಗಳ ತಲುಪಿದಾಗ ಡೆಲಿವರಿ ಮಾಡುವವರ ಎದುರೇ ಓಪನ್ ಮಾಡಿ ನೋಡುವ ಕಾಯಕವನ್ನು ರೂಢಿಸಿಕೊಳ್ಳಬೇಕಿದೆ. ಯಾಕೆಂದರೆ ಅದೆಷ್ಟೋ ಗ್ರಾಹಕರು ಅದಾಗಲೇ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋದ ಪ್ರಕರಣಗಳೂ ಇದ್ದರೂ ಕೂಡ, ಎಲ್ಲವೂ ಹೊರಬರುವುದಿಲ್ಲ ಎಂಬುದು ವಾಸ್ತವ.