- ‘ಪೊಲೀಸರು ತನಿಖೆ ನಡೆಸುವ ಸಾಮರ್ಥ್ಯ ಹೊಂದಿಲ್ಲ’ ಎಂದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ
- ಮಣಿಪುರ ಡಿಜಿಪಿ ಆಗಸ್ಟ್ 7ರಂದು ಖುದ್ದಾಗಿ ಸುಪ್ರೀಂಗೆ ಹಾಜರಾಗಲು ಖಡಕ್ ಆದೇಶ
ಮಣಿಪುರ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಮಣಿಪುರ ಆಡಳಿತ ವ್ಯವಸ್ಥೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮಣಿಪುರದ ಡಿಜಿಪಿ ಖುದ್ದು ಹಾಜರಾಗುವಂತೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್, ಹಿಂಸಾಚಾರದ ಕುರಿತಂತೆ ಅಲ್ಲಿನ ಪೊಲೀಸರಿಂದ ನಡೆಯುತ್ತಿರುವ ತನಿಖೆ ಜಡತ್ವದಿಂದ ಕೂಡಿದೆ ಎಂದು ಆಕ್ರೋಶ ಹೊರಹಾಕಿದೆ.
‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಮುಂದಿನ ವಿಚಾರಣೆ ಆಗಸ್ಟ್ 7ರಂದು ನಡೆಸುತ್ತೇವೆ. ಅಂದು ಮಣಿಪುರದ ಪೊಲೀಸ್ ಮಹಾನಿರ್ದೇಶಕರು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಬೇಕು’ ಎಂದು ಖಡಕ್ ಆದೇಶ ನೀಡಿದೆ.
ಎಫ್ಐಆರ್ಗಳನ್ನು ದಾಖಲಿಸುವಲ್ಲಿ, ಬಂಧನ ಮತ್ತು ಹೇಳಿಕೆಗಳನ್ನು ದಾಖಲಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗಮನಿಸಿರುವ ತ್ರಿಸದಸ್ಯ ಪೀಠವು, ಮೇ ಆರಂಭದಿಂದ ಜುಲೈ ಅಂತ್ಯದವರೆಗೆ ಇಲ್ಲಿ ಯಾವುದೇ ಕಾನೂನು ಇರಲಿಲ್ಲ ಎಂಬ ಭಾವನೆ ನ್ಯಾಯಾಲಯಕ್ಕೆ ಮೂಡುತ್ತದೆ ಎಂದು ಕಿಡಿಕಾರಿದೆ.
ಇದನ್ನು ಓದಿದ್ದೀರಾ? ಮಣಿಪುರ | ಲೋಕಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆ: ಆಗ ಮೈಕ್ ಕಿತ್ತರು, ಈಗ ಕ್ಯಾಮರಾ ತಿರುಗಿಸಿದರು!
ಹಿಂಸಾತ್ಮಕ ಘಟನೆಗಳು ನಡೆದು ಸುಮಾರು ಮೂರು ತಿಂಗಳುಗಳೇ ಸಂದರೂ ಎಫ್ಐಆರ್ಗಳು ದಾಖಲಾಗದೇ ಇರುವುದು ಮತ್ತು ಇಲ್ಲಿಯ ತನಕ ದಾಖಲಾಗಿರುವ 6000 ಎಫ್ಐಆರ್ಗಳಲ್ಲಿ ಕೆಲವೇ ಕೆಲವು ಮಂದಿಯ ಬಂಧನವಾಗಿರುವುದರ ಕಳವಳ ಹಾಗೂ ಆಘಾತ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ವಿಡಿಯೊ ಪ್ರಕರಣದಲ್ಲಿನ ಸಂತ್ರಸ್ತರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸಿಬಿಐಗೆ ಅನುಮತಿ ನೀಡಿದೆ.
ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡಿಯೋ ವೈರಲ್ ಆದ ಬಳಿಕ, ಹಿಂಸಾಚಾರದ ಕುರಿತು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠವು ವಿಚಾರಣೆ ನಡೆಸುತ್ತಿದೆ.
ಕೇಂದ್ರ ಮತ್ತು ಮಣಿಪುರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ಕೇಂದ್ರ ಸರ್ಕಾರವು, ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಎಲ್ಲಾ ಎಫ್ಐಆರ್ಗಳನ್ನು ಸಿಬಿಐಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವುದಾಗಿ ವರದಿಯಾಗಿದೆ.