- ಕಡಿದಿದ್ದ ಮರವನ್ನು ವಾಹನಕ್ಕೆ ತುಂಬಲು ಬಂದಿದ್ದಾಗ ಘಟನೆ
- ರಾಜಸ್ಥಾನದ ಆಲ್ವಾರ್‌ನಲ್ಲಿ ಘಟನೆ; 10 ಮಂದಿಯ ವಿರುದ್ಧ ಎಫ್‌ಐಆರ್
ರಾಜಸ್ಥಾನದ ಆಲ್ವಾರ್‌ನಲ್ಲಿ ಎಂಟರಿಂದ ಹತ್ತು ಮಂದಿಯಿದ್ದ ಗುಂಪೊಂದು ಸರ್ಕಾರಿ ವಾಹನದಲ್ಲಿ ಬಂದು ಮೂವರು ಮುಸ್ಲಿಂ ಯುವಕರ ಮೇಲೆ ದೊಣ್ಣೆ ಮತ್ತು ರಾಡ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಓರ್ವ ಯುವಕ ಮೃತಪಟ್ಟಿದ್ದು, ಮೃತಪಟ್ಟವನನ್ನು ವಸೀಮ್ (27) ಎಂದು ಗುರುತಿಸಲಾಗಿದೆ.
ಮೂವರು ಯುವಕರು ಕಡಿದು ಹಾಕಲಾಗಿದ್ದ ಮರವೊಂದನ್ನು ಪಿಕಪ್‌ನಲ್ಲಿ ತುಂಬಲು ಹೋಗಿದ್ದ ವೇಳೆ ಅರಣ್ಯ ಇಲಾಖೆ ವಾಹನ ಹಾಗೂ ಜೆಸಿಬಿಯಲ್ಲಿ ಅಲ್ಲಿಗೆ ಆಗಮಿಸಿದ ಗುಂಪೊಂದು, ‘ಮುಲ್ಲೋಂಕೊ ಮಾರೋ, ಮುಲ್ಲೊಂಕೋ ಕಾಟೋ'(ಮುಸಲ್ಮಾನರಿಗೆ ಹೊಡೆಯಿರಿ, ಮುಸಲ್ಮಾನರನ್ನು ಕೊಲ್ಲಿ) ಎಂದು ಬೊಬ್ಬೆ ಹೊಡೆಯುತ್ತಾ ಹಲ್ಲೆ ನಡೆಸಿದ್ದಾರೆ ಎಂದು ಮುಸ್ಲಿಂ ಕುಟುಂಬದ ಸಂಬಂಧಿಕರು ದೂರಿದ್ದಾರೆ.
ಆಲ್ವಾರ್ ಜಿಲ್ಲೆಯ ಹರ್ಸೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಸೀಮ್ ಹಾಗೂ ಆತನ ಇಬ್ಬರು ಸಹಚರರು ಮನೆ ಮಾಲೀಕನ ಒಪ್ಪಿಗೆಯೊಂದಿಗೆ ಬಾನ್ಸೂರಿಗೆ ತೆರಳಿದ್ದರು. ಮನೆಯ ಹೊರಗೆ ಕಡಿದು ಹಾಕಿದ್ದ ಮರಗಳನ್ನು ವಾಹನಕ್ಕೆ ತುಂಬಲು ಹೋಗಿದ್ದರು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ತಿರುಗುತ್ತಿದ್ದಾರೆ. ಈಗ ಮರಗಳನ್ನು ತೆಗೆದುಕೊಂಡು ಹೋಗಬೇಡಿ ಎಂದು ಕೆಲವು ಗ್ರಾಮಸ್ಥರು ಮಾಹಿತಿ ನೀಡಿದ್ದರು. ಹಾಗಾಗಿ, ಖಾಲಿ ವಾಹನದಲ್ಲಿ ಮತ್ತೆ ಹಿಂತಿರುಗುವಾಗ ಬಂದ ಗುಂಪು, ವಿನಾಕಾರಣ ದಾಳಿ ಮಾಡಿದ್ದಾರೆ ಎಂದು ಕುಟುಂಬಿಕರು ತಿಳಿಸಿದ್ದಾರೆ.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೂ ಭಾಗಿಯಾಗಿದ್ದಾರೆ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಆದರೆ ವಾಹನದ ನೋಂದಣಿ ಸಂಖ್ಯೆಯನ್ನು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕುಟುಂಬಸ್ಥರು ದಾಖಲಿಸಿದ್ದಾರೆ.
ಪೊಲೀಸರು ಹೇಳಿದ್ದೇನು?
ಜಗಳದ ಮಾಹಿತಿಯ ಮೇರೆಗೆ ಪೊಲೀಸರು ಗ್ರಾಮಕ್ಕೆ ತಲುಪಿದಾಗ ಅಲ್ಲಿ ಮೂವರು ಗಾಯಗೊಂಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂವರನ್ನೂ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯುವಕ ವಸೀಮ್‌ನನ್ನು ಕೊಟ್‌ಪುಟ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು. ಈಗಾಗಲೇ ಹತ್ತು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿ, ಎರಡು-ಮೂರು ಶಂಕಿತರನ್ನು ವಶಕ್ಕೆ ಪಡೆದಿದ್ದೇವೆ. ಅವರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.