ಮೋರೆಹ್ ಗಡಿಯಲ್ಲಿ ಈ ಬುಲೆಟ್ ಪ್ರೂಫ್ ವಾಹನಗಳು 5-ಅಸ್ಸಾಂ ರೈಫಲ್ಸ್‌ನ ಕೀ ಲೊಕೇಶನ್ ಪಾಯಿಂಟ್ (ಕೆಎಲ್‌ಪಿ) ಕ್ಯಾಂಪ್- ದಲಾಯಿ ಲಾಮಾ ಬೆಟಾಲಿಯನ್ ಆವರಣದಿಂದ ಮೋರೆಹ್ ಕಡೆ ತೆರಳಿರುವುದಕ್ಕೆ Eedina.com ಸಾಕ್ಷಿಯಾಗಿದೆ. ಸಂಪೂರ್ಣ ಕಾರ್ಯಾಚರಣೆಯು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು ಎನ್ನಲಾಗಿದೆ.
ಮ್ಯಾನ್ಮಾರ್‌ಗೆ ಪಲಾಯನಗೈದಿದ್ದ ಸುಮಾರು 200 ಮೈತೇಯಿ ಜನರನ್ನು ಮಣಿಪುರ ಪೊಲೀಸರೊಂದಿಗೆ ಸೇರಿ ಭಾರತೀಯ ಅರೆಸೇನಾ ಪಡೆ ಶುಕ್ರವಾರ (ಆಗಸ್ಟ್ 18, 2023) ಯಶಸ್ವಿಯಾಗಿ ಮರಳಿ ಮಣಿಪುರಕ್ಕೆ ಕರೆತಂದಿದೆ. ಇವರು ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ದಿನ, ಮೇ 3 ರಂದು ಮ್ಯಾನ್ಮಾರ್‌ಗೆ ಪಲಾಯನ ಮಾಡಿದ್ದರು.
ಅರೆಸೇನಾ ಪಡೆ ನಡೆಸಿದ ಈ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಕಳೆದ ಕೆಲವು ವಾರಗಳಿಂದ ಸಣ್ಣ ಸಂಖ್ಯೆಯ ಮೈತೇಯಿಗಳನ್ನು ಮರಳಿ ತಮ್ಮ ರಾಜ್ಯಕ್ಕೆ ಕರೆತರಲಾಗಿದೆ.
ಗೂರ್ಖಾ ರೆಜಿಮೆಂಟಿನ ಸೈನಿಕರು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಮಣಿಪುರ ಪೊಲೀಸರೊಂದಿಗೆ ಅಸ್ಸಾಂ ರೈಫಲ್ಸ್ 5ರ ತುಕಡಿಗಳು ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸಿವೆ.
ಈ ಸಶಸ್ತ್ರ ಪಡೆಗಳು ಭಾರತ-ಮ್ಯಾನ್ಮಾರ್ ಗಡಿಯಿಂದ ಮೈತೇಯಿಗಳನ್ನು ಬುಲೆಟ್ ಪ್ರೂಫ್ ವಾಹನಗಳಲ್ಲಿ ಅಂತರಾಷ್ಟ್ರೀಯ ಗಡಿ ಪಟ್ಟಣವಾದ ಮೋರೆಹ್ ಮೂಲಕ ಸುರಕ್ಷಿತವಾಗಿ ಮಣಿಪುರಕ್ಕೆ ಮರಳಿ ಕರೆತಂದಿವೆ.

ಕರ್ಫ್ಯೂ ಜಾರಿಯಲ್ಲಿದ್ದ ಸಮಯದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು. ಮೊರೆಹ್‌ನಲ್ಲಿ ಮತ್ತೆ ಬೆಂಕಿ ಮತ್ತು ಗುಂಡಿನ ದಾಳಿಗಳಾದಂತೆ ಆರಂಭವಾದ ಜುಲೈ 26 ರ ಹಿಂಸಾಚಾರದ ನಂತರ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಮೋರೆಹ್ ಗಡಿಯಲ್ಲಿ ಈ ಬುಲೆಟ್ ಪ್ರೂಫ್ ವಾಹನಗಳು 5-ಅಸ್ಸಾಂ ರೈಫಲ್ಸ್‌ನ ಕೀ ಲೊಕೇಶನ್ ಪಾಯಿಂಟ್ (ಕೆಎಲ್‌ಪಿ) ಕ್ಯಾಂಪ್- ದಲಾಯಿ ಲಾಮಾ ಬೆಟಾಲಿಯನ್ ಆವರಣದಿಂದ ಮೊರೆಹ್ ಕಡೆ ತೆರಳಿರುವುದಕ್ಕೆ Eedina.com ಸಾಕ್ಷಿಯಾಗಿದೆ. ಸಂಪೂರ್ಣ ಕಾರ್ಯಾಚರಣೆಯು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು ಎನ್ನಲಾಗಿದೆ.
ಈ ನಿರಾಶ್ರಿತರನ್ನು ಸದ್ಯ ತೆಂಗನೌಪಾಲ್ ಜಿಲ್ಲೆಯ ಮೋರೆಹ್ ಪಟ್ಟಣದ ಗಡಿಯಲ್ಲಿರುವ ಕೆಎಲ್‌ಪಿ ಶಿಬಿರದ ಆವರಣದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ರಕ್ಷಣಾ ಶಿಬಿರದಲ್ಲಿ ಇರಿಸಲಾಗಿದೆ. ಮುಂದೆ ಇವರನ್ನು ರಾಜ್ಯ ರಾಜಧಾನಿಗೆ ಸ್ಥಳಾಂತರಿಸಲಾಗುತ್ತದೆ.

ಮಣಿಪುರದಾದ್ಯಂತ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 250 ಕ್ಕೂ ಹೆಚ್ಚು ಜನರು ಮ್ಯಾನ್ಮಾರ್‌ಗೆ ಪಲಾಯನ ಮಾಡಿದ್ದರು.
ಇವರು ಮ್ಯಾನ್ಮಾರ್‌ನ ಬೌದ್ಧ ವಿಹಾರವೊಂದರಲ್ಲಿ ಆಶ್ರಯ ಪಡೆದಿದ್ದರು. ಮ್ಯಾನ್ಮಾರ್‌ನ ಅಸ್ಥಿರ ಪರಿಸ್ಥಿತಿಯ ಕಾರಣದಿಂದ ಹತಾಶೆಗೊಂಡು ಮಣಿಪುರಿ ಸರ್ಕಾರವನ್ನು ಸಂಪರ್ಕಿಸಿ ತಮ್ಮನ್ನು ರಕ್ಷಿಸುವಂತೆ ಕೇಳಿಕೊಂಡಿದ್ದರು.
ಮ್ಯಾನ್ಮಾರ್ ಸೇನೆ ಮತ್ತು ಜುಂಟಾ ವಿರೋಧಿ ಬಂಡುಕೋರರ ನಡುವಿನ ಹೊಡೆದಾಟ ಕೊನೆಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲವಾದ್ದರಿಂದ ಮ್ಯಾನ್ಮಾರ್ ಕೂಡ ಹೊತ್ತಿ ಉರಿಯುತ್ತಿದೆ.
ಮಣಿಪುರ ಹಿಂಸಾಚಾರ ಆರಂಭವಾಗುವ ಮೊದಲು ಮೋರೆಹ್‌ನಲ್ಲಿ ಸುಮಾರು 4,000 ಮೈತೇಯಿಗಳು ವಾಸಿಸುತ್ತಿದ್ದರು. ಹಿಂಸಾಚಾರ ಆರಂಭವಾದ ಸಂದರ್ಭದಲ್ಲಿ ಅಸ್ಸಾಂ ರೈಫಲ್ಸ್ ಇವರಲ್ಲಿ ಹೆಚ್ಚಿನವರನ್ನು ಮೋರೆಹ್‌ನಿಂದ ಸ್ಥಳಾಂತರಿಸಿತು ಮತ್ತು ಇಂಫಾಲ್ ಹಾಗೂ ಇತರ ಮೈತೇಯಿ ಸಮುದಾಯ ಪ್ರಬಲವಾಗಿರುವ ಪ್ರದೇಶಗಳಿಗೆ ಕರೆದೊಯ್ಯಿತು. ಮಿನಿ ಇಂಡಿಯಾ ಎಂದೂ ಕರೆಯಲ್ಪಡುವ ಮೋರೆಹ್, ಕುಕಿ-ಜೋ ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶವಾಗಿದೆ.

ಅಶ್ವಿನಿ ವೈ ಎಸ್
ಪತ್ರಕರ್ತೆ
ಗಲಬೆಪೀಡಿತ ಮಣಿಪುರಕ್ಕೆ ಹೋಗಿ ವರದಿ ಮಾಡುತ್ತಿರುವ ನಿಮ್ಮ ದೈರ್ಯ, ಸಾಹಸ ಮೆಚ್ಚುವಂತದ್ದು.