ಕೇರಳದ ಕಳಮಶ್ಶೇರಿಯಲ್ಲಿರುವ ಕನ್ವೆನ್ಸನ್ ಸೆಂಟರ್ನಲ್ಲಿ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, 36 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಗಾಯಗೊಂಡವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟ ಘಟನೆ ಇಂದು ಬೆಳಗ್ಗೆ 9ರ ಸುಮಾರಿಗೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಳಮಶ್ಶೇರಿಯ ಝಮ್ರಾ ಇಂಟರ್ನ್ಯಾಷನಲ್ ಕನ್ವೆನ್ಸನ್ ಸೆಂಟರ್ನಲ್ಲಿ ಮೂರು ದಿನಗಳ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ಇಂದು ಕೊನೆಯ ದಿನವಾಗಿತ್ತು. ಇಂದು(ಭಾನುವಾರ) ಪ್ರಾರ್ಥನಾ ಸಭೆ ಆರಂಭಗೊಳ್ಳುತ್ತಿದ್ದಂತೆಯೇ, ಈ ಸ್ಫೋಟ ಸಂಭವಿಸಿದೆ. ಸಮಾವೇಶದಲ್ಲಿ 2200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕದ ದಳದ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸ್ಥಳದಲ್ಲಿ ಹಲವು ಬಾರಿ ಸ್ಫೋಟ ಸಂಭವಿಸಿದ್ದು, ಘಟನೆಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಸ್ಫೋಟದ ಕುರಿತು ನಿಖರ ಕಾರಣಗಳು ತಿಳಿದುಬಂದಿಲ್ಲ. ಘಟನೆ ಬಳಿಕ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದು, ಜನರನ್ನು ಚದುರಿಸುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ.
Just after the blasts happened at the Jehovah’s Witnesses convention in Kalamassery in Kerala pic.twitter.com/wV8IkHbT33
— Dhanya Rajendran (@dhanyarajendran) October 29, 2023
ಭಾನುವಾರ ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ನಂತರ ಎರಡು ಅಥವಾ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಗಾಯಾಳುಗಳನ್ನು ಕಲಮಸೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಸಭಾಂಗಣದಲ್ಲಿದ್ದ ಎಲ್ಲ ಜನರನ್ನು ರಕ್ಷಿಸಲಾಗಿದ್ದು, ಸಭಾಂಗಣದ ಮಧ್ಯಭಾಗದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣದ ಬಗ್ಗೆ ಕೇರಳ ಪೊಲೀಸರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಘಟನೆಯ ಹಿನ್ನೆಲೆಯಲ್ಲಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಆರೋಗ್ಯ ಸಚಿವ ವೀಣಾ ಜಾರ್ಜ್ ಸೂಚಿಸಿದ್ದಾರೆ. ರಜೆಯಲ್ಲಿರುವ ವೈದ್ಯರು ಸೇರಿದಂತೆ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಕೂಡಲೇ ಕೆಲಸಕ್ಕೆ ಹಿಂದಿರುಗುವಂತೆ ಆದೇಶಿಸಿದ್ದಾರೆ.
ಕಳಮಶ್ಶೇರಿ ವೈದ್ಯಕೀಯ ಕಾಲೇಜು, ಎರ್ನಾಕುಲಂ ಜನರಲ್ ಆಸ್ಪತ್ರೆ ಮತ್ತು ಕೊಟ್ಟಾಯಂ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಸಿದ್ಧಪಡಿಸಲು ಕೇರಳ ಸರ್ಕಾರ ಸೂಚನೆ ನೀಡಿದೆ. ಘಟನಾ ಸ್ಥಳಕ್ಕೆ ಎನ್ಐಎ ಅಧಿಕಾರಿಗಳ ತಂಡ ಕೂಡ ಭೇಟಿ ನೀಡಿದೆ ಎಂದು ವರದಿಯಾಗಿದೆ.