ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂ ಭಕ್ತರಿಗೆ ಪ್ರಾರ್ಥನೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿ ನಿನ್ನೆ ಆದೇಶ ಹೊರಡಿಸಿತ್ತು. ಈ ಆದೇಶ ಬಂದ ಕೆಲವೇ ಗಂಟೆಗಳಲ್ಲಿ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಪ್ರಾರಂಭಿಸಲಾಗಿದೆ. ಈ ನಡುವೆ ಸಂಘರ್ಷ ಉಂಟಾಗದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ನಾಗೇಂದ್ರ ಪಾಂಡೆ, “ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಬುಧವಾರ (ಜನವರಿ 31) ರಾತ್ರಿ ಪೂಜೆ ಸಲ್ಲಿಸಲಾಯಿತು” ಎಂದು ತಿಳಿಸಿದ್ದಾರೆ.
ಕಾನೂನು ಹೋರಾಟದ ಮಹತ್ವದ ಬೆಳವಣಿಗೆಯಲ್ಲಿ ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ವಿಗ್ರಹಗಳಿಗೆ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ಜಿಲ್ಲಾ ನ್ಯಾಯಾಲಯ ಬುಧವಾರ (ಜನವರಿ 31) ತೀರ್ಪು ನೀಡಿತ್ತು.
ವಾರಣಾಸಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲ ಮಹಡಿ ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಇನ್ನು ಒಂದು ವಾರದೊಳಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ನ್ಯಾಯಾಲಯವು ತನ್ನ ವಿಚಾರಣೆಯ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.
#WATCH | Gyanvapi case | After the court grants permission for puja in the ‘Vyas Ka Tekhana’, a devotee says, “We all come here by 3-3:00 am every day for darshan…We are extremely happy and emotional with the court’s order. Our happiness knows no bounds…” pic.twitter.com/TbceC6Cm79
— ANI (@ANI) February 1, 2024
“ಬುಧವಾರ ರಾತ್ರಿ 10.30ಕ್ಕೆ ಸುಮಾರು 31 ವರ್ಷಗಳ ನಂತರ ವ್ಯಾಸ್ ಅವರ ನೆಲಮಹಡಿಯನ್ನು ಪ್ರಾರ್ಥನೆಗಾಗಿ ತೆರೆಯಲಾಯಿತು. ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತವು ಪೂಜೆ ಸಲ್ಲಿಸಲು ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಅತ್ಯಂತ ತ್ವರಿತವಾಗಿ ಮಾಡಿದೆ” ಎಂದು ನಾಗೇಂದ್ರ ಪಾಂಡೆ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರದ ಬಜೆಟ್ ನಡುವೆಯೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ
ನ್ಯಾಯಾಲಯದ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹಿಂದೂ ಭಕ್ತಾದಿಗಳಿಗೆ ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಪೂಜೆಗೆ ಅವಕಾಶ ಕಲ್ಪಿಸಲಾಗದೆ. ಜೊತೆಗೆ ಸೂಕ್ತ ಪೊಲೀಸ್ ಭದ್ರತೆಯನ್ನು ಕೂಡ ಏರ್ಪಡಿಸಲಾಗಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ರಾಜಲಿಂಗಂ ತಿಳಿಸಿದ್ದಾರೆ.
ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ ಮುಸ್ಲಿಂ ಪರ ಅರ್ಜಿದಾರರು
ವಾರಣಾಸಿ ನ್ಯಾಯಾಲಯದ ಈ ಆದೇಶದ ಕುರಿತು ಪ್ರತಿಕ್ರಿಯಿಸಿದ ಮುಸ್ಲಿಂ ಪರ ವಕೀಲ ಅಖ್ಲಾಕ್ ಅಹ್ಮದ್, ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗುವುದಾಗಿ ಹೇಳಿದ್ದಾರೆ.
“ಈ ಆದೇಶವು 2022ರ ಅಡ್ವೊಕೇಟ್ ಕಮಿಷನರ್ ವರದಿ, 1937ರ ಎಎಸ್‌ಐ ವರದಿಯನ್ನು ಕಡೆಗಣಿಸಿದೆ. 1993ರ ಮೊದಲು ಪ್ರಾರ್ಥನೆಗಳನ್ನು ನಡೆಸಿರುವ ಬಗ್ಗೆ ಹಿಂದೂ ಕಡೆಯವರು ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಸ್ಥಳದಲ್ಲಿ ಅಂತಹ ಯಾವುದೇ ವಿಗ್ರಹವಿರಲಿಲ್ಲ” ಎಂದು ಹೇಳಿದ್ದಾರೆ.
ಈ ಆದೇಶದ ಬಗ್ಗೆ ಮಾತನಾಡಿರುವ ವಕೀಲ ಮೆರಾಜುದ್ದೀನ್ ಸಿದ್ದಿಕಿ, “ಆದೇಶದ ವಿರುದ್ಧ ಉನ್ನತ ನ್ಯಾಯಾಲಯಗಳ ಮೊರೆ ಹೋಗುತ್ತೇವೆ. ನಾನು ಅಂತಹ ಯಾವುದೇ ಆದೇಶವನ್ನು ಸ್ವೀಕರಿಸುವುದಿಲ್ಲ, ನಾವು ಕಾನೂನು ಹೋರಾಟ ಮಾಡುತ್ತೇವೆ, ರಾಜಕೀಯ ಲಾಭ ಪಡೆಯಲು ಇದು ನಡೆಯುತ್ತಿದೆ, ಬಾಬರಿಯಲ್ಲಿ ಮಾಡಿದ ಅದೇ ವಿಧಾನವನ್ನು ಇಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಮೊದಲು ಕಮಿಷನರ್ ವರದಿ ಮತ್ತು ಎಎಸ್‌ಐ ವರದಿಯು ಒಳಗೆ ಏನೂ ಇಲ್ಲ ಎಂದು ಹೇಳಿತ್ತು. ನ್ಯಾಯಾಲಯದ ಆದೇಶದಿಂದ ನಮಗೆ ತುಂಬಾ ಅಸಮಾಧಾನವಾಗಿದೆ. 1993ಕ್ಕಿಂತ ಮೊದಲು ಅಲ್ಲಿ ಪ್ರಾರ್ಥನೆಗಳು ನಡೆದಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿದ್ದಾರೆ.