2024ರ ಜ. 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ಮೂರ್ತಿ ಪ್ರತಿಷ್ಠಾಪನೆ ದಿನವು ದೇಶದ ಜನರ ಪಾಲಿಗೆ ಅತ್ಯಂತ ಸಂತಸದ ಕ್ಷಣ. ಹಾಗಾಗಿ, ಅಂದು ದೇಶಾದ್ಯಂತ ಆ ದಿನವನ್ನು ಹಬ್ಬದಂತೆ ಆಚರಣೆ ಮಾಡಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಕರೆ ನೀಡಿದೆ.
ಗುಜರಾತ್‌ನ ಕಛ್ ಜಿಲ್ಲೆಯ ಭುಜ್‌ನಲ್ಲಿ ಇತ್ತೀಚೆಗೆ ನಡೆದ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ರಾಮ ಮಂದಿರ ಉದ್ಘಾಟನೆ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೂ ಮುನ್ನ ಜನವರಿ 1 ರಿಂದ 15ರ ವರೆಗೆ ಮನೆ ಮನೆಗೆ ತೆರಳಿ ಆರ್‌ಎಸ್‌ಎಸ್ ಕಾರ್ಯಕರ್ತರು ಆಹ್ವಾನ ಪತ್ರಿಕೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
‘ಭವ್ಯವಾದ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದ್ದು, ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ವಿದೇಶದಲ್ಲಿ ಇರುವವರು ಸೇರಿ ಇದು ನಮಗೆಲ್ಲ ಸಂತಸದ ದಿನ. ಹಲವು ವರ್ಷಗಳ ಪ್ರಯತ್ನದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ದೇಶದಾದ್ಯಂತ ಜನರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಆರ್‌ಎಸ್‌ಎಸ್‌ನ ಪ್ರಚಾರ ಮುಖ್ಯಸ್ಥ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಅವತ್ತು ನಮಗೆಲ್ಲ ಹಬ್ಬದ ಕ್ಷಣ. ಎಲ್ಲರಿಗೂ ಅಯೋಧ್ಯೆಗೆ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಅವರು ಹತ್ತಿರದ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಸಂಭ್ರಮವನ್ನು ಆಚರಿಸಬೇಕು. ರಾತ್ರಿ, ಎಲ್ಲರೂ ಮನೆಯಲ್ಲಿ ದೀಪ ಬೆಳಗಿಸಬೇಕು. ಇದು ದೇಶದ ಪ್ರತಿಯೊಬ್ಬರಿಗೆ ಆರ್‌ಎಸ್‌ಎಸ್ ನೀಡುತ್ತಿರುವ ಕರೆ ಎಂದು ಅಂಬೇಕರ್ ತಿಳಿಸಿದ್ದಾರೆ.
‘ಶ್ರೀರಾಮ ಘನತೆ, ಪ್ರೀತಿ ಮತ್ತು ಧರ್ಮದ ಸಂಕೇತ. ಪ್ರತಿಷ್ಠಾಪನೆ ದಿನವನ್ನು ಹಬ್ಬದಂತೆ ಆಚರಿಸಿ. ಅದೊಂದು ಸೌಹಾರ್ದದ ಕ್ಷಣ. ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಭಾರತವು ಪ್ರಗತಿಯ ಪಥದಲ್ಲಿ ತನ್ನ ನಡಿಗೆಯನ್ನು ಮುಂದುವರಿಸಲಿದೆ’ ಎಂದು ಆರ್‌ಎಸ್‌ಎಸ್ ಹೇಳಿದೆ.