- ಅರ್ಜಿಯೊಂದರ ವಿಚಾರಣೆ ವೇಳೆ ಸನಾತನ ಧರ್ಮದ ಬಗ್ಗೆ ಉಲ್ಲೇಖಿಸಿದ ನ್ಯಾಯಮೂರ್ತಿ ಎನ್ ಶೇಷಸಾಯಿ
- ವಾಕ್ ಸ್ವಾತಂತ್ರ್ಯ ಧರ್ಮದ ವಿರುದ್ಧ ದ್ವೇಷ ಭಾಷಣ ಆಗಬಾರದು: ಮದ್ರಾಸ್ ಹೈಕೋರ್ಟ್
ಸನಾತನ ಧರ್ಮ ಎಂಬುದು ಕರ್ತವ್ಯಗಳ ಗುಚ್ಛವಾಗಿದೆ. ಆದರೆ, ಜಾತೀಯತೆ, ಅಸ್ಪೃಶ್ಯತೆ ಎಂಬ ಅಂಶಗಳನ್ನಷ್ಟೇ ವೈಭವೀಕರಿಸಲಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಮದ್ರಾಸ್ ಹೈಕೋರ್ಟಿನಲ್ಲಿ ಸನಾತನ ಧರ್ಮದ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಈ ವಿಚಾರ ಉಲ್ಲೇಖಿಸಿದ ನ್ಯಾಯಮೂರ್ತಿ ಎನ್ ಶೇಷಸಾಯಿ, ಸನಾತನ ಧರ್ಮ ಎಂಬುದು ಕರ್ತವ್ಯಗಳ ಗುಚ್ಛವಾಗಿದೆ. ಅದರಲ್ಲಿ ದೇಶದ ಕರ್ತವ್ಯ, ರಾಜನ ಕರ್ತವ್ಯ, ಪೋಷಕರ ಕರ್ತವ್ಯ, ಗುರುವಿನ ಕರ್ತವ್ಯ ಹೀಗೆ ಹಲವು ಅಂಶಗಳು ಸೇರಿವೆ. ಸನಾತನ ಧರ್ಮದಲ್ಲಿ ಜಾತೀಯತೆ, ಅಸ್ಪೃಶ್ಯತೆಗಳು ವೈಭವೀಕರಣವಾಗುತ್ತಿದೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಹೀಗಾಗಿ, ಸನಾತನ ಧರ್ಮದ ವಿರೋಧವು ಈ ಎಲ್ಲ ಕರ್ತವ್ಯಗಳನ್ನು ನಾಶಪಡಿಸುತ್ತದೆ ಎಂದು ಅರ್ಥ ಎಂದು ತಿಳಿಸಿದೆ.
"Untouchability in a country of equal citizens, cannot be tolerated, and even if it is seen as permitted somewhere within the principles of 'Sanathana dharma', it still cannot have a space to stay",
— Live Law (@LiveLawIndia) September 16, 2023
Read more: https://t.co/ivDcMD0nnW#MadrasHighCourt #SanathanaDharma pic.twitter.com/KheGAMI6Do
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಅಣ್ಣಾದೊರೈ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ತಿರು ವಿ ಕಾ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಇತ್ತೀಚೆಗೆ ಸುತ್ತೋಲೆಯೊಂದನ್ನು ಹೊರಡಿಸಿ, ಸನಾತನ ಧರ್ಮದ ವಿರುದ್ಧದ ಅಂಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಶೇಷಸಾಯಿ ಅವರಿದ್ಧ ಪೀಠ, ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಸನಾತನ ಧರ್ಮವು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂಬುದೇ ಪ್ರಸ್ತುತ ಕಾಣಿಸಿಕೊಳ್ಳುತ್ತಿರುವ ಕಲ್ಪನೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಸಂವಿಧಾನದ 15ನೇ ಪರಿಚ್ಛೇದದ ಅಡಿಯಲ್ಲಿ ರದ್ದುಪಡಿಸಲಾದ ಅಸ್ಪೃಶ್ಯತೆಯನ್ನು ಸನಾತನ ಧರ್ಮದ ಒಳಗಡೆಯಾಗಲೀ, ಹೊರಗಡೆಯಾಗಲಿ ಅದನ್ನು ಆಚರಿಸಬಾರದು ಎಂಬುದನ್ನು ನ್ಯಾಯಾಲಯ ಒತ್ತಿ ಹೇಳುತ್ತದೆ ಎಂದು ಪೀಠ ಇದೇ ವೇಳೆ ಹೇಳಿದೆ.

ನ್ಯಾಯಮೂರ್ತಿ ಎನ್ ಶೇಷಸಾಯಿ
ಸಂವಿಧಾನದ 19(1)(ಎ) ಪರಿಚ್ಛೇದವು ವಾಕ್ ಸ್ವಾತಂತ್ರ್ಯಕ್ಕೆ ಮೂಲಭೂತ ಹಕ್ಕನ್ನು ನೀಡಿರುವುದು ನಿಜ. ಆದರೂ, ಮಾತನಾಡುವ ವಿಷಯಕ್ಕೆ ಮೌಲ್ಯ ಇರಬೇಕು ಎಂಬುದನ್ನೂ ಗಮನಿಸಬೇಕು. ವಾಕ್ ಸ್ವಾತಂತ್ರ್ಯವು ಸಂಪೂರ್ಣ ಮೂಲಭೂತ ಹಕ್ಕಲ್ಲ. ಧರ್ಮಕ್ಕೆ ಸಂಬಂಧಿಸಿದ ವಾಕ್ ಸ್ವಾತಂತ್ರ್ಯದ ವಿಚಾರದಲ್ಲಿ, ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವುದು ಅವಶ್ಯಕ ಎಂದು ಪೀಠವು ಇದೇ ವೇಳೆ ತಿಳಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಕೊರೋನಾಗೆ ಹೋಲಿಸಿದ್ದಲ್ಲದೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಇತ್ತೀಚೆಗೆ ಕರೆ ನೀಡಿದ್ದರು.
ಇದು ದೇಶಾದ್ಯಂತ ಬಲಪಂಥೀಯರಿಂದ ವ್ಯಾಪಕ ವಿರೋಧಕ್ಕೂ ಕಾರಣವಾಗಿತ್ತು. ಸ್ಟಾಲಿನ್ ಹೇಳಿಕೆಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಕೂಡ ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆ ‘ಸೂಕ್ತ ತಿರುಗೇಟು’ ನೀಡುವಂತೆ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದರು. ಈ ವಿವಾದ ಇನ್ನೂ ಹಸಿಯಾಗಿರುವುವಾಗಲೇ ಮದ್ರಾಸ್ ಹೈಕೋರ್ಟ್ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.