ತೆಲುಗಿನ ಖ್ಯಾತ ಕ್ರಾಂತಿಕಾರಿ ಗಾಯಕ, ‘ಗದ್ದರ್’ ಎಂದೇ ಪ್ರಸಿದ್ಧರಾದ ಗುಮ್ಮಡಿ ವಿಠ್ಠಲ್ ರಾವ್ ಇಂದು ನಿಧನರಾಗಿದ್ದಾರೆ.
ಕೆಲವು ಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಗದ್ದರ್, ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಮೊನ್ನೆಯಷ್ಟೇ ಬೈಪಾಸ್ ಸರ್ಜರಿ ಮಾಡಲಾಗಿತ್ತು. ಅದರಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾಗಲೇ ಇತರೆ ಕಾಯಿಲೆಗಳು ಉಲ್ಭಣಗೊಂಡಿವೆ. ತಮ್ಮ ಹಾಡುಗಳ ಮೂಲಕ ಲಕ್ಷಾಂತರ ಜನರ ಹೃದಯ ಗೆದ್ದಿದ್ದ ಗದ್ದರ್ ಕೊನೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಗದ್ದರ್ ಅವರ ನಿಜವಾದ ಹೆಸರು ಗುಮ್ಮಡಿ ವಿಠ್ಠಲ್ ರಾವ್. ಪಂಜಾಬ್ನಲ್ಲಿ ಬ್ರಿಟೀಷ್ ಅಧಿಪತ್ಯವನ್ನು ವಿರೋಧಿಸಿದ್ದ ಗದಾರ್ ಪಕ್ಷದ ಹಿನ್ನೆಲೆಯಲ್ಲಿ ತಮ್ಮ ಹೆಸರನ್ನು ಗದ್ದರ್ ಎಂದು ಮರುನಾಮಕರಣ ಮಾಡಿಕೊಂಡಿದ್ದರು.
1949ರಲ್ಲಿ ತೆಲಂಗಾಣದ ತೂಪ್ರಾನ್ನಲ್ಲಿ ಹುಟ್ಟಿದ್ದ ಗದ್ದರ್, ನಿಜಾಮಾಬಾದ್, ಹೈದರಾಬಾದ್ಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು. 1975ರಲ್ಲಿ ಕೆನರಾ ಬ್ಯಾಂಕ್ನಲ್ಲಿ ಕೆಲಸಕ್ಕೆ ಸೇರಿದರು. ಆದರೆ, ಶೋಷಣೆ, ಅನ್ಯಾಯಗಳ ವಿರುದ್ಧ ಸಿಡಿದೆದ್ದು, ನಕ್ಸಲ್ ಚಳವಳಿಯತ್ತ ಆಕರ್ಷಿತರಾದರು. ಜನನಾಟ್ಯ ಮಂಡಳಿಯ ಮೂಲಕ ಅವಿಭಜಿತ ಆಂಧ್ರಪ್ರದೇಶದಲ್ಲಿ ಊರೂರು ತಿರುಗುತ್ತ ಜನರನ್ನು ಸಂಘಟಿಸತೊಡಗಿದರು. ಸ್ಥಳದಲ್ಲೇ ಹಾಡು ಕಟ್ಟಿ ಹಾಡುತ್ತಿದ್ದ ಗದ್ದರ್ ಅವರ ಹಾಡುಗಳು ತೆಲುಗು ಜನ ಸಮುದಾಯದ ನಡುವೆ ತುಂಬಾ ಜನಪ್ರಿಯವಾಗಿದ್ದವು.
ಗದ್ದರ್ ಹಾಡಲು ಶುರುವಿಟ್ಟರೆ ನೆರೆದವರಲ್ಲಿ ಶೋಷಣೆಯ ವಿರುದ್ಧ ಸಿಟ್ಟು ಸ್ಫೋಟಗೊಳ್ಳುತ್ತಿತ್ತು. ಇದೇ ಕಾರಣಕ್ಕೆ ಗದ್ದರ್ ಪೊಲೀಸರ ಟಾರ್ಗೆಟ್ ಆದರು. ಹಲವು ಬಾರಿ ಪೊಲೀಸರ ದಾಳಿಯಿಂದ ಗದ್ದರ್ ಸ್ವಲ್ಪದರಲ್ಲಿ ಪಾರಾಗಿದ್ದರು. ಪೊಲೀಸರು ಹಾರಿಸಿದ ಗುಂಡೊಂದು ಅವರ ದೇಹದಲ್ಲಿ ಹಾಗೆಯೇ ಉಳಿದುಬಿಟ್ಟಿತ್ತು. ನಂತರ ಗದ್ದರ್, ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ತಮ್ಮನ್ನು ಗುರುತಿಸಿಕೊಂಡರು. ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಘೋಷಣೆಯಾದಾಗ ವಿಪರೀತ ಖುಷಿ ಪಟ್ಟರು.
ಗದ್ದರ್ ಹಾಡುಗಳಿಗೆ ತೆಲಂಗಾಣ, ಆಂಧ್ರಪ್ರದೇಶಗಳ ಆಚೆಗೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕರ್ನಾಟಕದ ಹಲವು ಚಳವಳಿ, ಆಂದೋಲನಗಳಲ್ಲಿ ಗದ್ದರ್ ಭಾಗವಹಿಸಿದ್ದರು. ಎಲ್ಲೇ ಶೋಷಣೆ ನಡೆದರೂ ಅಲ್ಲಿ ಹಾಜರಿರುತ್ತಿದ್ದ ಗದ್ದರ್, ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಹಾಡು ಹಾಡಿದ್ದಾರೆ.
ಗದ್ದರ್ ಅವರ ಪಾರ್ಥಿವ ಶರೀರದ ದರ್ಶನ ಪಡೆಯಲು ಸಿಕಂದರಾಬಾದ್ನ ಭೂದೇವಿನಗರದ ಅವರ ಮನೆ ಮುಂದೆ ದೊಡ್ಡ ಪ್ರಮಾಣದ ಅಭಿಮಾನಿಗಳು ನೆರೆಯುತ್ತಿದ್ದಾರೆ.