ಲಕ್ನೋದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ನಡೆದಿದೆ.
ಈ ವೇಳೆ ಆಕ್ರೋಶಿತಗೊಂಡ ಸ್ವಾಮಿ ಪ್ರಸಾದ್ ಮೌರ್ಯ ಅವರ ಅಭಿಮಾನಿಗಳು ಶೂ ಎಸೆದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶೂ ಮೈಮೇಲೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಶೂ ಎಸೆದ ವ್ಯಕ್ತಿಯನ್ನು ಆಕಾಶ್ ಸೈನಿ ಎಂದು ಹೇಳಲಾಗುತ್ತಿದ್ದು, ವಕೀಲನ ಬಟ್ಟೆ ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ. ಆದರೆ ಆತ ವಕೀಲನೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆಯ ಬಳಿಕಷ್ಟೇ ಶೂ ಎಸೆದ ಕಾರಣ ಬಹಿರಂಗವಾಗಲಿದೆ.
ಶೂ ಎಸೆದ ವೇಳೆ ಕಾರ್ಯಕ್ರಮದಲ್ಲಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರ ಅಭಿಮಾನಿಗಳು ಬೆಲ್ಟ್ ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹಲ್ಲೆ ನಡೆಸಿದ್ದಲ್ಲದೇ, ಕಾಲಿನಿಂದ ಒದ್ದು ಆತನ ಮೇಲೆಯೇ ಕುಳಿತಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ. ಸಮಾಜವಾದಿ ಪಕ್ಷದ ಒಬಿಸಿ ಮಹಾ ಸಮ್ಮೇಳನದ ವೇಳೆ ಈ ಘಟನೆ ನಡೆದಿದೆ.