- ಮೃತ ಯುವಕನ ತಂದೆಯಿಂದ ದೂರು: ಉತ್ತರ ಪ್ರದೇಶದ ಕಾನ್ಪುರದಲ್ಲಿ ದಾಖಲಾದ ಎಫ್‌ಐಆರ್
- 2022ರ ಜನವರಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಅಪಘಾತದಲ್ಲಿ ಮೃತಪಟ್ಟಿದ್ದ ಯುವಕ ಅಪೂರ್ವ್ ಮಿಶ್ರಾ
ತನ್ನ ಮಗ ಚಲಾಯಿಸುತ್ತಿದ್ದ ಸ್ಕಾರ್ಪಿಯೋ ಅಪಘಾತ ಸಂಭವಿಸಿದಾಗ ‘ಏರ್ ಬ್ಯಾಗ್’ ಬಿಚ್ಚಿಕೊಳ್ಳದ ಪರಿಣಾಮ ಆತನ ಸಾವಿಗೆ ಮಹೀಂದ್ರಾ ಕಂಪೆನಿಯು ಎಸ್‌ಯುವಿ ವಾಹನದ ಸುರಕ್ಷತೆಯ ಬಗ್ಗೆ ಸುಳ್ಳು ಭರವಸೆ ನೀಡಿದ್ದೇ ಕಾರಣ ಎಂದು ಯುವಕನ ತಂದೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಸೇರಿ 12 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎಸ್‌ಯುವಿ ವಾಹನ ಸುರಕ್ಷತೆಯ ಬಗ್ಗೆ ಸುಳ್ಳು ಭರವಸೆ ನೀಡಿದ್ದು, ರಸ್ತೆ ಅಪಘಾತದ ವೇಳೆ ತನ್ನ ಮಗನ ಸಾವು ಸಂಭವಿಸಿದೆ ಎಂದು ಆರೋಪಿಸಿ ರಾಜೇಶ್ ಮಿಶ್ರಾ ಎಂಬವರು ನೀಡಿರುವ ದೂರಿನ ಆಧಾರದ ಮೇಲೆ ಕಾನ್ಪುರದಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತು ಇತರ 12 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
FIR registered against Mahindra chairman in Kanpur, UP.
— Piyush Rai (@Benarasiyaa) September 25, 2023
Rajesh Mishra, a UP's Kanpur resident, gifted Mahindra Scorpio to his son Apoorv Mishra. On 14 January 2022, Apoorv returning to Kanpur from Lucknow in Scorpio met with an accident and died. He was wearing the seat belt… pic.twitter.com/7Pk3q9Mbgr
2022ರ ಜನವರಿ 14ರಂದು ಅಪಘಾತದಲ್ಲಿ ತನ್ನ ಮಗ ಡಾ. ಅಪೂರ್ವ್ ಮಿಶ್ರಾ ಅವರನ್ನು ಕಳೆದುಕೊಂಡಿದ್ದ ರಾಜೇಶ್ ಮಿಶ್ರಾ, ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಕಾನ್ಪುರದ ರಾಯ್‌ಪುರವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದವರಲ್ಲಿ ಡೀಲರ್‌ಶಿಪ್ ಮ್ಯಾನೇಜರ್ ಆನಂದ್ ಗೋಪಾಲ್ ಮಹೀಂದ್ರ ಕೂಡ ಸೇರಿದ್ದಾರೆ.
ರಾಜೇಶ್ ಮಿಶ್ರಾ ಅವರು ನೀಡಿರುವ ದೂರಿನಲ್ಲಿ, “ಡಿಸೆಂಬರ್ 2, 2020ರಂದು 17.39 ಲಕ್ಷ ರೂಪಾಯಿ ಕೊಟ್ಟು ನಾನು ಕಪ್ಪು ಬಣ್ಣದ ಮಹೀಂದ್ರ ಸ್ಕಾರ್ಪಿಯೋ ಎಸ್‌ಯುವಿ ಖರೀದಿಸಿದ್ದೆ. ಖರೀದಿಸುವ ಮೊದಲು ಆನಂದ್ ಮಹೀಂದ್ರಾ ಅವರು ಈ ವಾಹನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಜಾಹೀರಾತು ಮತ್ತು ಪೋಸ್ಟ್‌ಗಳನ್ನು ನೋಡಿದ್ದೆ. ಅದರಲ್ಲಿ ವಾಹನದ ಸುರಕ್ಷತೆಯ ಅಂಶವನ್ನು ಉಲ್ಲೇಖಿಸಿದ್ದರು” ಎಂದು ತಿಳಿಸಿದ್ದಾರೆ.
“ತನ್ನ ಮಗ ಡಾ. ಅಪೂರ್ವ್ ಮಿಶ್ರಾ ಅವರಿಗೆ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದು, ಜನವರಿ 14, 2022 ರಂದು, ನನ್ನ ಮಗ ಡಾ ಅಪೂರ್ವ್ ಅದೇ ವಾಹನದಲ್ಲಿ ಲಕ್ನೋದಿಂದ ಕಾನ್ಪುರಕ್ಕೆ ಹಿಂದಿರುಗುತ್ತಿದ್ದನು. ಅಪೂರ್ವ್ ಜೊತೆಗೆ, ಅವರ ಸ್ನೇಹಿತರು ಕೂಡ ಸಹ ಕಾರಿನಲ್ಲಿದ್ದರು. ಅವರೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರು. ಮಂಜಿನಿಂದಾಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ನನ್ನ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
FIR against Mahindra Chairman Anand Mahindra and 12 others in Kanpur, UP.
— Mohammed Zubair (@zoo_bear) September 25, 2023
Rajesh Mishra, a UP's Kanpur resident, gifted Mahindra Scorpio to his son Apoorv Mishra. On 14 January 2022, Apoorv returning to Kanpur from Lucknow in Scorpio met with an accident and died. He was… pic.twitter.com/yGQRKmJGt1
“ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದರೂ, ಕಾರಿನಲ್ಲಿರುವ ಏರ್‌ಬ್ಯಾಗ್‌ಗಳು ತೆರೆಯಲಿಲ್ಲ, ಇದರಿಂದಾಗಿ ಮಗನ ಸಾವಿಗೆ ಕಾರಣವಾಯಿತು. ಅಲ್ಲದೇ, ಆ ಬಳಿಕ ತಾನು ಅಪಘಾತಕ್ಕೀಡಾದ ವಾಹನವನ್ನು ಪರಿಶೀಲಿಸಿದಾಗ ವಾಹನದಲ್ಲಿ ಏರ್‌ಬ್ಯಾಗ್ ಅಳವಡಿಸಿಲ್ಲ” ಎಂದು ರಾಜೇಶ್ ಮಿಶ್ರಾ ದೂರಿನಲ್ಲಿ ಆರೋಪಿಸಿದ್ದಾರೆ.
ಹೀಗಾಗಿ ಕಂಪನಿ ಸುಳ್ಳು ಆಶ್ವಾಸನೆ ನೀಡಿ ವಂಚಿಸಿದೆ. ಸುರಕ್ಷತೆಯ ಭರವಸೆಯನ್ನು ನೀಡದಿದ್ದರೆ ತಾನು ಎಸ್‌ಯುವಿಯನ್ನು ಎಂದಿಗೂ ಖರೀದಿಸುತ್ತಿರಲಿಲ್ಲ ಎಂದು ದೂರುದಾರರು ಹೇಳಿದ್ದಾರೆ.

ಈ ವಿಚಾರವಾಗಿ ಮೊದಲು ಶೋರೂಂ ಉದ್ಯೋಗಿಗೆ ದೂರು ನೀಡಿದಾಗ ಮೊದಲು ಜಗಳ ಆರಂಭಿಸಿದ್ದಾರೆ. ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ರಾಜೇಶ್ ಮಿಶ್ರಾ, ಎಫ್‌ಐಆರ್ ದಾಖಲಿಸಲು ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆ ಬಳಿಕ, ನ್ಯಾಯಾಲಯದ ಸೂಚನೆಯ ಮೇರೆಗೆ ಮಹೀಂದ್ರಾ ಅಧ್ಯಕ್ಷ ಆನಂದ್ ಗೋಪಾಲ್ ಮಹೀಂದ್ರಾ ಮತ್ತು ಇತರ 12 ಮಂದಿ ವಿರುದ್ಧ ರಾಯ್ಪುರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಏರ್‌ಬ್ಯಾಗ್‌ಗಳು ಇರಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಾನ್ಪುರದ ಶ್ರೀ ತಿರುಪತಿ ಮೋಟಾರ್ಸ್‌ನ ಹಿರಿಯ ಸಿಬ್ಬಂದಿಯೋರ್ವರು, ಏರ್‌ಬ್ಯಾಗ್‌ಗಳು ತೆರೆಯದ ನಿರ್ದಿಷ್ಟ ಜಾಗದಲ್ಲಿ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಏರ್‌ಬ್ಯಾಗ್ ಇರಲಿಲ್ಲ ಎಂಬ ದೂರುದಾರರ ಹೇಳಿಕೆಯನ್ನು ಅವರು ತಳ್ಳಿ ಹಾಕಿದ್ದಾರೆ.
ರಾಯ್ಪುರ ಪೊಲೀಸರು ಭಾರತೀಯ ದಂಡ ಸಂಹಿತೆ 420 (ವಂಚನೆ), 287 (ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ), 304-ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
506 (ಕ್ರಿಮಿನಲ್ ಬೆದರಿಕೆ), ಮತ್ತು 102-ಬಿ (ಅಪರಾಧ ಬೆದರಿಕೆ). ಪ್ರಕರಣದ ತನಿಖೆ ಮುಂದುವರಿದಿದೆ ಎಂದು ರಾಯ್ಪುರದ ಪೊಲೀಸ್ ಅಧಿಕಾರಿ ಅಮನ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಿಂದ್ರಾ ಕಂಪನಿ, “ಪ್ರಕರಣವು 18 ತಿಂಗಳುಗಳಿಗಿಂತ ಹಳೆಯದಾಗಿದ್ದು, 2022ರ ಜನವರಿಯಲ್ಲಿ ನಡೆದಿದೆ. ಆ ವಾಹನದಲ್ಲಿ ಏರ್‌ಬ್ಯಾಗ್ ಇರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಅಪಘಾತಕ್ಕೆ ಒಳಗಾಗಿದ್ದ ಸ್ಕಾರ್‌ಪಿಯೋ ಎಸ್9 ವಾಹನವು 2020ರಲ್ಲಿ ರೂಪಾಂತರಗೊಂಡಿದ್ದು, ಆ ವಾಹನ ಏನ್‌ಬ್ಯಾಗ್‌ಗಳನ್ನು ಹೊಂದಿದೆ. ನಾವು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದೇವೆ. ಘಟನೆವೇಳೆ ಏರ್‌ಬ್ಯಾಗ್‌ಗಳ ಅಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಆ ಘಟನೆ ರೋಲ್‌ಓವರ್ ಪ್ರಕರಣವಾದ್ದರಿಂದ ಮುಂಭಾಗದ ಏರ್‌ಬ್ಯಾಗ್‌ಗಳು ಬಿಚ್ಚಿಕೊಂಡಿಲ್ಲ” ಎಂದು ವಿವರಿಸಿದೆ.
“ಪ್ರಕರಣವು ಪ್ರಸ್ತುತ ನ್ಯಾಯಾಂಗದಲ್ಲಿದೆ. ಅಗತ್ಯವಿರುವ ಯಾವುದೇ ಹೆಚ್ಚಿನ ತನಿಖೆಗಾಗಿ ನಾವು ಅಧಿಕಾರಿಗಳೊಂದಿಗೆ ಸಹಕರಿಸಲು ಬದ್ಧರಾಗಿದ್ದೇವೆ” ಎಂದು ಹೇಳಿದೆ.