ನಡೆಯುತ್ತಿದೆ ತಿಂಗಳಿಂದ ಯುದ್ಧ
ಮುಗಿಯಲಿಲ್ಲ ರಕ್ತ ರಂಗಿನಾಟ
ಪಟಪಟ ಸಿಡಿವ ಮದ್ದು ಗುಂಡು
ಎದೆ ನಡುಗಿಸುವ ಶಬ್ದಕ್ಕೆ
ಬೆದರಿದ ಗರ್ಭದಲ್ಲಿರುವ ಶಿಶುವಿನ
ತಳಮಳದ ಹೊಯ್ದಾಟ.
ಎತ್ತರೆತ್ತರದ ಕಟ್ಟಡಗಳು
ಥರಗುಟ್ಟಿ ನೆಲಕ್ಕುರುಳುವಾಗ
ಒಳಗಿರುವ ಮಹಿಳೆ ಮಕ್ಕಳು
ಜೀವಂತ ಸಮಾಧಿ
ನೋವಿನ ಪರಮಾವಧಿ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…
ಶೌಚಕ್ಕೆ ಉದ್ದನೆಯ ಸಾಲು ಸಾಲು
ನಿಸರ್ಗದ ಒತ್ತಡಕ್ಕೆ ತಡೆ
ಮುಟ್ಟಿಗೆ ಶುದ್ಧ ಪ್ಯಾಡುಗಳಿಲ್ಲ
ಸ್ನಾನಕ್ಕೆ ಶುದ್ದ ನೀರಿಲ್ಲ
ನರಕವಾಗಿದೆ ಬದುಕು
ಗಾಝಾದಲ್ಲಿ ಬಿದ್ದಿರುವ ಶವಗಳು
ಭೀಕರ ಸಾವಿನ ದೃಶ್ಯಗಳು
ಗಾಝಾ ಎಂದರೆ ಮಕ್ಕಳ ಮಸಣ
ಶೌಚ, ನೀರು, ಒಳ ಉಡುಪುಗಳು
ಲಭ್ಯವಿಲ್ಲ, ಎಲ್ಲೆಡೆಯೂ ಅಪಾಯ
ಮಹಿಳೆ ಮಕ್ಕಳಿಗೆ, ಗರ್ಭಿಣಿಯರಿಗೆ
ಸುರಕ್ಷಿತ ತಾಣಗಳೇ ಇಲ್ಲ
ಅಂಗಲಾಚುವ ಹೆಂಗಳೆಯರಿಗೆ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…
ಹೆರಿಗೆ ನೋವು ಕಾಣಿಸಿದೆ
ಯಾವ ಜಾಗವೂ ಸುರಕ್ಷಿತವಲ್ಲ
ಜೀವ ಉಳಿಸಿಕೊಳ್ಳುವ ಹೋರಾಟ
ಹೊಸಜೀವ ಉಳಿಸುವ ಪರದಾಟ
ಅಲ್ಲಿಂದ ಇಲ್ಲಿಗೆ ಅಲೆದಾಟ
ವಲಸೆ ಹೋಗುವುದಾದರೂ ಎಲ್ಲಿಗೆ?
ಮೇಲಿಂದ ಹೆರಿಗೆಯ ನೋವು, ಸಂಕಟ
ಯಾವ ಜಾಗವೂ ಸುರಕ್ಷಿತವಲ್ಲ.
ಮನೆ, ಆಸ್ಪತ್ರೆ, ಶಾಲೆ ಭದ್ರತೆಯ
ತಾಣಗಳೇ ಮಾಯವಾಗಿವೆ.
ಭೂಮಿಯ ಮೇಲೆ ಹೆರಿಗೆಗೊಂದು
ಸುರಕ್ಷಿತ ತಾಣವನ್ನು
ಎಲ್ಲಿ ಹುಡುಕಲಿ ಹೇಳು ಪ್ರಭುವೇ!
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…
ಕುಡಿಯಲು ನೀರಿಲ್ಲ
ಅನ್ನ ಆಹಾರ ದೂರದ ಮಾತು
ನೀರಿಲ್ಲದೇ ಬಾಣಂತಿಯರ
ಎದೆ ಹಾಲು ಬತ್ತಿ ಹೋಗಿದೆ
ಹಸಿವು ತಡೆಯದೆ ಹಸುಳೆಗಳ
ಅಕ್ರಂದನ ಮುಗಿಲು ಮುಟ್ಟಿದೆ
ಬಿಕ್ಕಿ ಬಿಕ್ಕಿ ಕಣ್ಣುಮುಚ್ಚುವ ಕಂದ
ವಿದ್ಯುತ್ತಿಲ್ಲ, ಆಮ್ಲಜನಕವಿಲ್ಲದೇ ಜೀವಬಿಟ್ಟ
ಮಕ್ಕಳು ಅಂಗಳದ ಶವವಾಗಿ
ಕೊಳೆತ ವಾಸನೆ ತಡೆಯಲಾಗದು
ಸುರಕ್ಷಿತ ಜಾಗವಿಲ್ಲ ಹೆರಿಗೆಗೆ
ಎಲ್ಲಿ ಹೋಗಲಿ ಹೇಳು ಪ್ರಭುವೇ?
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…
ಇಸ್ರೇಲಿನ ಯಹೂದಿಗಳ
ಯುದ್ಧಕ್ಕೆ ಗಾಝಾ ಮಸಣವಾಯ್ತು
ಪ್ಯಾಲೆಸ್ತೇನಿಯರ ನರಮೇಧವಾಯ್ತು
ಉರಿದುಬಿದ್ದ ಮನೆಗಳು
ಛಿದ್ರವಾದ ದೇಹಗಳು
ಹಾಲುಗಲ್ಲದ ಹಸುಮಕ್ಕಳ
ಎದೆಗವುಚಿ ರೋದಿಸುವ ತಾಯಂದಿರು
ಕರುಣೆಯ ಹನಿ ಅಮೃತ ನೀಡಲು
ಅಲ್ಲಾಹ್‍ನಲ್ಲಿ ಪ್ರಾರ್ಥಿಸುವ ಕೈಗಳು
ಹೆರಿಗೆಗೆ ಸುರಕ್ಷಿತ ತಾಣ ಒದಗಿಸಲು
ಕೋರುತ್ತಿದ್ದಾರೆ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ
ನೀಡು ಪ್ರಭುವೇ…
ಢಾಂ.ಢುಂ.ಧಡ್, ಧಡಲ್
ನಿರಂತರ ಬೀಳುವ ಬಾಂಬು
ಎದೆ ನಡುಗಿಸುವ ಶಬ್ದ
ಹಸಿವು, ನೀರು, ಬಟ್ಟೆಯಿಲ್ಲದೆ
ಪರಿಣಾಮಗಳು ಮುಂದಿವೆ
ಹೆರಿಗೆ ನೋವು ಕಾಣಿಸಿದೆ
ಯಾವ ಜಾಗವೂ ಸುರಕ್ಷಿತವಿಲ್ಲ
ಜೀವ ಉಳಿಸಿಕೊಳ್ಳುವ
ಹೊಸಜೀವ ಉಳಿಸುವ ಪರದಾಟ
ಅಲ್ಲಿಂದ ಇಲ್ಲಿಗೆ ಅಲೆದಾಟ
ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ ನೀಡು ಪ್ರಭುವೇ…

ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ