ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿ ಇದೆ. ಈ ನಡುವೆಯೇ ದೇಶದಲ್ಲಿ ವ್ಯಾಪಕ ಹಿಂಸಾಚಾರ ಘಟನೆಗಳು ನಡೆಯುತ್ತಿರುವುದಾಗಿ ವರದಿಯಾಗುತ್ತಿದೆ. ಈ ನಡುವೆಯೇ ವಾಯುವ್ಯ ಪಾಕಿಸ್ತಾನದಲ್ಲಿನ ಪೊಲೀಸ್ ಠಾಣೆಯೊಂದರ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಕನಿಷ್ಠ 10 ಪೊಲೀಸ್ ಸಿಬ್ಬಂದಿ ಮೃತಪಟ್ಟಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಪಾಕ್ ಪೊಲೀಸರು, “ಸ್ಥಳೀಯ ಕಾಲಮಾನ ಮುಂಜಾನೆ 3 ಗಂಟೆಗೆ ಉಗ್ರರು ಪೊಲೀಸ್ ಠಾಣೆಯ ಮೇಲೆ ಸ್ಟೈಪರ್ ದಾಳಿ ನಡೆಸಿ , ಈ ಕೃತ್ಯ ಎಸಗಿದ್ದಾರೆ. ಬಳಿಕ ಠಾಣೆಯೊಳಗೆ ಪ್ರವೇಶಿಸಿ ಹ್ಯಾಂಡ್ ಗ್ರೆನೇಡ್‌ಗಳನ್ನು ಸಿಡಿಸಿದ್ದಾರೆ. ಇದರಿಂದಾಗಿ ಕನಿಷ್ಠ 10 ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಖೈಬರ್-ಪಸ್ತುಂಕ್ವಾ ಪ್ರಾಂತ್ಯದ ದ್ರಾಬಾನ್ ಪ್ರದೇಶದ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಸಿಬ್ಬಂದಿಗಳ ಮೃತದೇಹಗಳನ್ನು ಠಾಣೆಯ ಮುಂಭಾಗದಲ್ಲಿ ಮಂಚವೊಂದರ ಮೇಲೆ ಮಲಗಿಸಿರುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
BREAKING : Pashtun fighters attacked a police station in Dera Ismail Khan area of Pakistan occupied Pashtunistan. At least 10 personnel of occupational forces liquidated while 6 are critically injured. pic.twitter.com/nTZzgQblza
— Baba Banaras™ (@RealBababanaras) February 5, 2024
“ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚುತ್ತೇವೆ. ಇದು ಚುನಾವಣೆಗೆ ಸಂಬಂಧಿಸಿದ ದಾಳಿಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ” ಎಂದು ಪಾಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಫೆ. 8 ರಂದು ಪಾಕಿಸ್ತಾನ ಲೋಕಸಭೆಗೆ ಚುನಾವಣೆ ನಡೆಯಲಿದೆ. ಈ ನಡುವೆಯೇ ಹಿಂಸಾಚಾರ ಪ್ರಕರಣಗಳು ವರದಿಯಾಗುತ್ತಿದೆ.
ಬಲೂಚಿಸ್ತಾನದ ಚುನಾವಣಾ ಆಯೋಗದ ಹೊರಗೆ ಸ್ಫೋಟ
ಬಲೂಚಿಸ್ತಾನದ ನುಷ್ಕಿ ಜಿಲ್ಲೆಯ ಪಾಕಿಸ್ತಾನ ಚುನಾವಣಾ ಆಯೋಗದ (ಇಸಿಪಿ) ಕಚೇರಿಯ ಹೊರಗೆ ಬಾಂಬ್ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಳೆದ ವಾರ ಕರಾಚಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಯ ಹೊರಗೆ ಸ್ಫೋಟ ಸಂಭವಿಸಿತ್ತು.