- ಅಮೆರಿಕ ಡಲ್ಲಾಸ್ ಉತ್ತರಕ್ಕೆ ಅಲನ್ ಪ್ರೀಮಿಯಂ ಮಾಲ್‌ನಲ್ಲಿ ಗುಂಡಿನ ದಾಳಿ
- ಸ್ವತಃ ಗುಂಡು ಹಾರಿಸಿಕೊಂಡು ಬಂದೂಕುಧಾರಿ ಸಾವು ವರದಿ
ಅಮೆರಿಕ ದೇಶದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿದೆ. ಟೆಕ್ಸಾಸ್ ನಗರದ ಹೊರವಲಯದ ಮಾಲ್‌ವೊಂದರಲ್ಲಿ ಬಂದೂಕುಧಾರಿಯೊಬ್ಬ ಒಳನುಗ್ಗಿ ಮನಸೋಯಿಚ್ಛೆ ಗುಂಡಿನ ದಾಳಿ ನಡೆಸಿದ ಪರಿಣಾಮ ಎಂಟು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ಶನಿವಾರ (ಮೇ 6) ಸುಮಾರು ಮಧ್ಯಾಹ್ನ 3.30ಕ್ಕೆ (ಸ್ಥಳೀಯ ಕಾಲಮಾನ) ನಡೆದಿದೆ. ಬಂದೂಕುಧಾರಿ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ ನಂತರ ತನಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮಕ್ಕಳೂ ಸೇರಿ 7 ಮಂದಿ
ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು, ಶೋಧ ನಡೆಯುತ್ತಿದೆ ಎಂದು ಅಲೆನ್ ಪೊಲೀಸ್ ಅಧಿಕಾರಿ ಬ್ರಿಯಾನ್ ಹಾರ್ವೆ ಹೇಳಿದರು.
ಡಲ್ಲಾಸ್‌ನ ಉತ್ತರಕ್ಕೆ 25 ಮೈಲು (40 ಕಿ.ಮೀ) ದೂರದ ಅಲೆನ್ಸ್‌ನಲ್ಲಿ ವಿಶಾಲವಾದ ವಾಣಿಜ್ಯ ಸಂಕೀರ್ಣ ಅಲನ್ ಪ್ರೀಮಿಯಂ ಮಾಲ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ವಾರಾಂತ್ಯದ ದಿನಗಳಲ್ಲಿ ಅಲೆನ್ ವ್ಯಾಪಾರಗಳಿಂದ ತುಂಬಿರುತ್ತದೆ.
ಗಾಯಗೊಂಡವರ ಸ್ಥಿತಿ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ. ದಾಳಿಕೋರ ಗುಂಡು ಹಾರಿಸಿದ ನಂತರ ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆಯೇ ಅಥವಾ ಪೊಲೀಸರು ಗುಂಡು ಹಾರಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಬಿಲಾವಲ್ ಭುಟ್ಟೊ ಭಯೋತ್ಪಾದಕ ಉದ್ಯಮದ ವಕ್ತಾರ: ಜೈಶಂಕರ್ ಟೀಕೆ
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಮೆರಿಕ ಟೆಕ್ಸಾಸ್‌ನ ಮಾಲ್‌ನಲ್ಲಿಯ ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆ ಕರೆದೊಯ್ಯುತ್ತಿರುವ ದೃಶ್ಯ ಹರಿದಾಡಿದೆ.
ಬಂದೂಕುಧಾರಿ ಮಾಲ್‌ನ ವಾಹನ ತಂಗುದಾಣ ಪ್ರದೇಶಕ್ಕೆ ಬಂದು ಗುಂಡಿನ ದಾಳಿ ಪ್ರಾರಂಭಿಸಿದ್ದಾನೆ. ದಾಳಿಕೋರ ಮೃತಪಟ್ಟಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.
“ಇದೊಂದು ಅನಿರ್ವಚನೀಯ ದುರಂತ” ಎಂದು ಟೆಕ್ಸಾಸ್ ರಾಜ್ಯಪಾಲ ಗ್ರೆಗ್ ಅಬ್ಬಾಟ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅಧ್ಯಕ್ಷ ಜೋ ಬೈಡನ್ ಅವರಿಗೆ ಗುಂಡಿನ ದಾಳಿ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.