ಬಾಹ್ಯಾಕಾಶ ಅನ್ವೇಷಣೆಯ ಕ್ಷೇತ್ರದಲ್ಲಿ ಪಾಕಿಸ್ತಾನ ಐತಿಹಾಸಿಕ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಬುಧವಾರ ಮುಂಜಾನೆ ಚೀನಾದ ಶೆನ್ಝೌ ಬಾಹ್ಯಾಕಾಶ ನೌಕೆಯ ಮೂಲಕ ಪಾಕಿಸ್ತಾನದ ಮೊದಲ ಗಗನಯಾತ್ರಿ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ನೆಗೆದಿದ್ದು, ಚೀನಾದ ‘ಟಿಯಾಂಗಾಂಗ್’ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದಾರೆ. ಇದು ಪಾಕಿಸ್ತಾನದ ವೈಜ್ಞಾನಿಕ ಮಹತ್ವಾಕಾಂಕ್ಷೆಗಳಿಗೆ ಹೊಸ ರೆಕ್ಕೆ ನೀಡುವುದರ ಜೊತೆಗೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಹಕಾರದಲ್ಲಿ ಚೀನಾದ ಬೆಳೆಯುತ್ತಿರುವ ಪ್ರಾಬಲ್ಯಕ್ಕೂ ಸಾಕ್ಷಿಯಾಗಿದೆ.
ಭಾರತೀಯ ಕಾಲಮಾನ ಬುಧವಾರ ಮುಂಜಾನೆ 5:48ಕ್ಕೆ ಚೀನಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ‘ಲಾಂಗ್ ಮಾರ್ಚ್-2ಎಫ್’ ರಾಕೆಟ್ ನಭಕ್ಕೆ ಚಿಮ್ಮಿತು. ಪಾಕಿಸ್ತಾನ ವಾಯುಪಡೆಯ ಅಧಿಕಾರಿ ಹಾಗೂ ಗಗನಯಾತ್ರಿ ಮುಹಮ್ಮದ್ ಜೀಶನ್ ಅಲಿ ಅವರು ಚೀನಾದ ಅನುಭವಿ ಗಗನಯಾತ್ರಿಗಳಾದ ಟ್ಯಾಂಗ್ ಹಾಂಗ್ಬೋ ಮತ್ತು ವೂ ಯಿ ಅವರೊಂದಿಗೆ ಈ ಐತಿಹಾಸಿಕ ಯಾನ ಕೈಗೊಂಡಿದ್ದಾರೆ. ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಶೆನ್ಝೌ ನೌಕೆಯು ನಿಗದಿತ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.
ಈ ಸಾಧನೆಯು ಪಾಕಿಸ್ತಾನದ ಪಾಲಿಗೆ ದಶಕಗಳ ಕನಸಿನ ನನಸಾಗಿದೆ. 2023ರಲ್ಲಿ ನಮೀರಾ ಸಲೀಂ ಅವರು ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆಯ ಸಬ್-ಆರ್ಬಿಟಲ್ ಪ್ರವಾಸಿ ವಿಮಾನದ ಮೂಲಕ ಬಾಹ್ಯಾಕಾಶದ ಅಂಚನ್ನು ತಲುಪಿ ಕೆಲವೇ ನಿಮಿಷಗಳಲ್ಲಿ ಭೂಮಿಗೆ ಮರಳಿದ್ದರು. ಆದರೆ, ಜೀಶನ್ ಅಲಿ ಅವರ ಈ ಯಾನವು ಅದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಅವರು ಕೇವಲ ಬಾಹ್ಯಾಕಾಶ ಪ್ರವಾಸಿಗರಲ್ಲ, ಬದಲಾಗಿ ಸರ್ಕಾರಿ ಪ್ರಾಯೋಜಿತ ಮಾನವಸಹಿತ ಬಾಹ್ಯಾಕಾಶ ಯೋಜನೆಯಡಿ ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದಲ್ಲಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸಿ, ಸಂಶೋಧನೆ ನಡೆಸಲಿರುವ ಪಾಕಿಸ್ತಾನದ ಮೊದಲ ವೃತ್ತಿಪರ ಗಗನಯಾತ್ರಿಯಾಗಿದ್ದಾರೆ.
China launched the Shenzhou-24 crewed spaceship on Wednesday, sending three astronauts, including a Pakistani payload specialist, to its orbiting Tiangong space station.
The spaceship, atop a Long March-2F carrier rocket, blasted off from the Jiuquan Satellite Launch Center in… pic.twitter.com/17k2kC6ADx— China Xinhua News (@XHNews) November 25, 2026
ಈ ಐತಿಹಾಸಿಕ ಪಯಣದ ಹಿಂದೆ ವರ್ಷಗಳ ಸಿದ್ಧತೆಯಿದೆ. ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆ ‘ಸುಪಾರ್ಕೋ’ ಮತ್ತು ಚೀನಾದ ಜಂಟಿ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 200 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ಪಾಕಿಸ್ತಾನ ಸೇನೆಯ ಮುಹಮ್ಮದ್ ಜೀಶನ್ ಅಲಿ ಮತ್ತು ಖುರ್ರಂ ದಾವೂದ್ ಅವರನ್ನು ಆಯ್ಕೆ ಮಾಡಲಾಗಿತ್ತು. 2025ರಿಂದ ಚೀನಾದಲ್ಲಿ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆ, ತುರ್ತು ಪರಿಸ್ಥಿತಿ ನಿರ್ವಹಣೆ, ಬದುಕುಳಿಯುವ ತಂತ್ರಗಳು ಮತ್ತು ಕಠಿಣ ದೈಹಿಕ ತರಬೇತಿಯನ್ನು ಇವರಿಗೆ ನೀಡಲಾಗಿತ್ತು. ಉಡಾವಣೆಗೆ ಕೇವಲ ಒಂದು ದಿನ ಮುಂಚಿತವಾಗಿ ಜೀಶನ್ ಅಲಿ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
‘ಸ್ವರ್ಗೀಯ ಅರಮನೆ’ ಎಂಬ ಅರ್ಥ ನೀಡುವ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಜೀಶನ್ ಅಲಿ ಸುಮಾರು ಒಂದು ವಾರ ಕಾಲ ತಂಗಲಿದ್ದಾರೆ. ಈ ಅವಧಿಯಲ್ಲಿ ಅವರು ಸೂಕ್ಷ್ಮ ಗುರುತ್ವಾಕರ್ಷಣೆ ಪರಿಸರದಲ್ಲಿ ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ಬಾಹ್ಯಾಕಾಶದಲ್ಲಿ ವಸ್ತುಗಳು, ಜೈವಿಕ ವ್ಯವಸ್ಥೆಗಳು ಮತ್ತು ಭೌತಿಕ ಪ್ರಕ್ರಿಯೆಗಳು ಹೇಗೆ ವರ್ತಿಸುತ್ತವೆ ಎಂಬುದರ ಕುರಿತು ಇವರ ಸಂಶೋಧನೆ ಬೆಳಕು ಚೆಲ್ಲಲಿದೆ. ಅಲ್ಲದೆ, ಬಾಹ್ಯಾಕಾಶದಿಂದಲೇ ಪಾಕಿಸ್ತಾನದ ವಿದ್ಯಾರ್ಥಿಗಳು ಮತ್ತು ಸಂಶೋಧಕರೊಂದಿಗೆ ಸಂವಾದ ನಡೆಸಿ, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸಲಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಚೀನಾವನ್ನು ಹೊರಗಿಟ್ಟ ನಂತರ, ಬೀಜಿಂಗ್ ಸ್ವಂತ ಬಲದಿಂದ ಟಿಯಾಂಗಾಂಗ್ ನಿಲ್ದಾಣವನ್ನು ನಿರ್ಮಿಸಿತ್ತು. ಐದು ವರ್ಷಗಳ ಹಿಂದೆ ಪೂರ್ಣಗೊಂಡ ಈ ನಿಲ್ದಾಣವನ್ನು ಅಂತಾರಾಷ್ಟ್ರೀಯ ವೈಜ್ಞಾನಿಕ ಸಹಕಾರದ ಕೇಂದ್ರವನ್ನಾಗಿ ರೂಪಿಸುವುದಾಗಿ ಚೀನಾ ಹೇಳಿಕೊಂಡಿತ್ತು. ಇದೀಗ ಮೊದಲ ಬಾರಿಗೆ ವಿದೇಶಿ ಗಗನಯಾತ್ರಿಯೊಬ್ಬರಿಗೆ ತನ್ನ ನಿಲ್ದಾಣದ ಬಾಗಿಲು ತೆರೆಯುವ ಮೂಲಕ ಚೀನಾ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ತನ್ನ ಸೇವಾವಧಿಯ ಅಂತಿಮ ಘಟ್ಟದಲ್ಲಿದ್ದು, ಭವಿಷ್ಯದಲ್ಲಿ ಟಿಯಾಂಗಾಂಗ್ ಅನ್ನು ಜಾಗತಿಕ ಬಾಹ್ಯಾಕಾಶ ಸಂಶೋಧನೆಯ ಪರ್ಯಾಯ ಕೇಂದ್ರವಾಗಿ ಬೆಳೆಸುವುದು ಚೀನಾದ ಕಾರ್ಯತಂತ್ರವಾಗಿದೆ.
ಈ ಬೆಳವಣಿಗೆಯು ದಕ್ಷಿಣ ಏಷ್ಯಾದ ಬಾಹ್ಯಾಕಾಶ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಿದೆ. 1984ರ ಏಪ್ರಿಲ್‌ನಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಸೋವಿಯತ್ ಒಕ್ಕೂಟದ ‘ಸೋಯುಜ್ ಟಿ-11’ ನೌಕೆಯಲ್ಲಿ ಪ್ರಯಾಣಿಸಿ, ‘ಸಲ್ಯೂಟ್ 7’ ನಿಲ್ದಾಣದಲ್ಲಿ 8 ದಿನ ಕಳೆಯುವ ಮೂಲಕ ಬಾಹ್ಯಾಕಾಶಕ್ಕೆ ಕಾಲಿಟ್ಟ ಮೊದಲ ದಕ್ಷಿಣ ಏಷ್ಯಾದ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಾಲ್ಕು ದಶಕಗಳ ಬಳಿಕ ಪಾಕಿಸ್ತಾನ ಈ ಸಾಧನೆ ಮಾಡಿದ್ದರೂ, ಬದಲಾದ ಜಾಗತಿಕ ಬಾಹ್ಯಾಕಾಶ ಸಹಕಾರದ ಹೊಸ ಯುಗಕ್ಕೆ ಇದು ಸಾಕ್ಷಿಯಾಗಿದೆ.
ವಿಶೇಷವೆಂದರೆ, ಪಾಕಿಸ್ತಾನ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲೇ ಈ ಐತಿಹಾಸಿಕ ಉಡಾವಣೆ ನಡೆದಿದೆ. ಕಳೆದ ಒಂದು ದಶಕದಿಂದ ಉಪಗ್ರಹ ತಂತ್ರಜ್ಞಾನ, ಸಂವಹನ ಮತ್ತು ದೂರಸಂವೇದಿ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದ ಉಭಯ ದೇಶಗಳ ‘ಸರ್ವಋತು ಮೈತ್ರಿ’ ಈಗ ಬಾಹ್ಯಾಕಾಶದ ಎತ್ತರಕ್ಕೂ ವಿಸ್ತರಿಸಿದೆ.



