ವಿಶ್ವಸಂಸ್ಥೆಯ ಜಾಗತಿಕ ಆಹಾರ ಕಾರ್ಯಕ್ರಮವು (WFP) ಹಣಕಾಸಿನ ಅಭಾವದಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವುದಾಗಿ ಹೇಳಿಕೊಂಡಿದೆ. ಇದೇ ಕಾರಣವನ್ನು ಮುಂದಿಟ್ಟು, ಯುದ್ಧದ ಬಲಿಯಾಗಿ ದುರಂತದ ಅಂಚಿನಲ್ಲಿರುವ ಗಾಜಾಪಟ್ಟಿ ಮತ್ತು ವೆಸ್ಟ್ ಬ್ಯಾಂಕ್‌ನ ಲಕ್ಷಾಂತರ ಪ್ಯಾಲೆಸ್ತೀನಿಯರ ನೀಡಲಾಗುತ್ತಿದ್ದ ಆಹಾರ ನೆರವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಡಬ್ಲ್ಯೂಎಫ್‌ಪಿಯ ಈ ನಿರ್ಧಾರದಿಂದಾಗಿ, ತಮ್ಮ ಪಾಲಿಗೆ ಸಿಗುತ್ತಿದ್ದ ಏಕೈಕ ಆಹಾರ ನೆರವನ್ನು ಕಳೆದುಕೊಳ್ಳಲಿರುವ ಸುಮಾರು 7 ಲಕ್ಷ ಪ್ಯಾಲೆಸ್ತೀನಿಯರ ಜೀವ-ಜೀವನ ಅತಂತ್ರಗೊಂಡಿದೆ.
ಈ ಹಿಂದೆ, ಡಬ್ಲ್ಯೂಎಫ್‌ಪಿ ಗಾಜಾಪಟ್ಟಿಯಲ್ಲಿ 16 ಲಕ್ಷ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ 4 ಲಕ್ಷ ಜನರಿಗೆ ಆಹಾರ ನೆರವು ಒದಗಿಸುತ್ತಿತ್ತು. ಇದೀಗ, ಹಣಕಾಸಿನ ತೀವ್ರ ಅಭಾವದಿಂದಾಗಿ ಗಾಜಾಪಟ್ಟಿಯ 11 ಲಕ್ಷ ಮತ್ತು ವೆಸ್ಟ್ ಬ್ಯಾಂಕ್‌ನ 2 ಲಕ್ಷ ಮಂದಿಗೆ ಮಾತ್ರವೇ ಆಹಾರ ನೆರವು ನೀಡುವುದಾಗಿ ಘೋಷಿಸಿದೆ. ಪರಿಣಾಮ, ಈ ಎರಡೂ ಪ್ರದೇಶಗಳ ಒಟ್ಟು 7 ಲಕ್ಷ ಅಮಾಯಕರ ದೈನಂದಿನ ತುತ್ತು ಅನ್ನಕ್ಕೂ ಸಂಚಕಾರ ಬಂದೊದಗಿದೆ.
ವಿಶ್ವಸಂಸ್ಥೆಯ ಆಹಾರ ಏಜೆನ್ಸಿಯ ಹಂಗಾಮಿ ಮುಖ್ಯಸ್ಥ ಕಾರ್ಲ್ ಸ್ಕೌ ಅವರು ಜೆರುಸಲೇಂನಲ್ಲಿ ವಿಶೇಷ ಸುದ್ಧಿಗೋಷ್ಠಿ ನಡೆಸಿ ಗಾಜಾದಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. “ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮದ ನಂತರ ಹಸಿವಿನ ಮಹಾಮಾರಿ ವ್ಯಾಪಿಸದಂತೆ ವಿಶ್ವಸಂಸ್ಥೆ ಸತತ ಯತ್ನ ನಡೆಸುತ್ತಿದೆ. ಆದರೂ, ಇಂದಿಗೂ ಗಾಜಾದ ಒಟ್ಟು ಜನಸಂಖ್ಯೆಯ 67%ರಷ್ಟು ಜನರು (ಸುಮಾರು 14 ಲಕ್ಷ) ತೀವ್ರ ಸ್ವರೂಪದ ಆಹಾರ ಅಭದ್ರತೆ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಕನಿಷ್ಠ 2 ಲಕ್ಷ ಜನರು ತಕ್ಷಣವೇ ಆಹಾರ ನೆರವು ಸಿಗದಿದ್ದರೆ ಹಸಿವಿನಿಂದಲೇ ಪ್ರಾಣ ಕಳೆದುಕೊಳ್ಳುವ ಕರಾಳ ಸ್ಥಿತಿಯಲ್ಲಿದ್ದಾರೆ” ಎಂದು ಎಚ್ಚರಿಸಿದ್ದಾರೆ.
“ಗಾಜಾದಲ್ಲಿನ ಪ್ರಸ್ತುತ ಪರಿಸ್ಥಿತಿ ‘ಅತ್ಯಂತ ಕ್ರೂರ ಮತ್ತು ಊಹಿಸಲೂ ಸಾಧ್ಯವಾಗದಷ್ಟು ಅಪಾಯಕಾರಿ’ಯಾಗಿದೆ. ವಿಶ್ವಸಂಸ್ಥೆಯ ಪರಿಹಾರ ತಂಡಗಳು ಕಾರ್ಯನಿರ್ವಹಿಸುವಾಗಲೂ ದಿನವೊಂದಕ್ಕೆ ಸರಾಸರಿ 50ಕ್ಕೂ ಹೆಚ್ಚು ಮಿಲಿಟರಿ ದಾಳಿಗಳು ಮತ್ತು ಸಂಘರ್ಷದ ಘಟನೆಗಳು ದಾಖಲಾಗುತ್ತಿವೆ. ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಿರುವ ಇಸ್ರೇಲ್ ಇಲಿಟರಿಯು ಇತ್ತೀಚೆಗೆ ಗಾಜಾಗೆ ಬರುವ ವಾಣಿಜ್ಯ ಸರಕುಗಳು ಮತ್ತು ಆಹಾರ ಧಾನ್ಯಗಳ ವಾಹನಗಳ ಪ್ರವೇಶವನ್ನು ತಡೆಹಿಡಿದಿತ್ತು. ಪ್ರಸ್ತುತ ಎದುರಾಗಿರುವ ಧನಸಹಾಯದ ಕೊರತೆಯನ್ನು ತಕ್ಷಣವೇ ನೀಗಿಸಿ, ಮುಂಬರುವ ಆರು ತಿಂಗಳ ಕಾಲ ತೀವ್ರ ಸಂಕಷ್ಟದಲ್ಲಿರುವ ಜನರಿಗೆ ಬಿಸಿ ಊಟ ಮತ್ತು ತುರ್ತು ಆಹಾರ ಪೊಟ್ಟಣಗಳನ್ನು ತಲುಪಿಸಲು ಕನಿಷ್ಠ 45 ಕೋಟಿ ಡಾಲರ್ (4,266 ಕೋಟಿ ರೂ.) ಹಣಕಾಸಿನ ನೆರವು ಅಗತ್ಯವಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಯೂರೋಪ್ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!
ಇನ್ನೊಂದೆಡೆ, “ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲೂ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಅಲ್ಲಿನ ಇಸ್ರೇಲಿಗರ ಹಿಂಸಾತ್ಮಕ ದಾಳಿಗಳು ದುಪ್ಪಟ್ಟಾಗಿದ್ದು, ಹಿಂದೆ ಕೇವಲ ಮಾನವ ಹಕ್ಕುಗಳ ಬಿಕ್ಕಟ್ಟಾಗಿದ್ದ ಪರಿಸ್ಥಿತಿ ಈಗ ತೀವ್ರ ಹಸಿವಿನ ಬಿಕ್ಕಟ್ಟಾಗಿ ಮಾರ್ಪಟ್ಟಿದೆ. ಪ್ರಸಕ್ತ ಸಾಲಿನ ಒಲೀವ್ ಕೊಯ್ಲಿನ ಮೊದಲ ಎರಡು ವಾರಗಳಲ್ಲೇ ನಡೆದಿರುವ ದಾಳಿಗಳ ಸಂಖ್ಯೆಯು ಕಳೆದ ಇಡೀ ವರ್ಷದಲ್ಲಿ ನಡೆದ ದಾಳಿಗಳ ಸಂಖ್ಯೆಯನ್ನು ಮೀರಿಸಿದೆ. ಸಾಲು ಸಾಲಾಗಿ ಸುಟ್ಟುಕರಕಲಾದ ಒಲೀವ್ ತೋಟಗಳು, ಧ್ವಂಸಗೊಂಡ ನಿರಾಶ್ರಿತರ ಶಿಬಿರಗಳು ಹಾಗೂ ಹಳ್ಳಿಗಳು ಅಲ್ಲಿನ ಕರಾಳತೆಗೆ ಸಾಕ್ಷಿಯಾಗಿವೆ. ಪ್ರಸ್ತುತ ವೆಸ್ಟ್ ಬ್ಯಾಂಕ್ ಒಂದರಲ್ಲೇ 10 ಲಕ್ಷಕ್ಕೂ ಹೆಚ್ಚು ಜನರಿಗೆ ತುರ್ತು ಆಹಾರ ಧಾನ್ಯದ ಅಗತ್ಯವಿದೆ” ಎಂದು ಅವರು ತಿಳಿಸಿದ್ದಾರೆ.
“ಈ ಎಲ್ಲ ಆಡಳಿತಾತ್ಮಕ ಮತ್ತು ಹಣಕಾಸಿನ ಅಡೆತಡೆಗಳ ನಡುವೆಯೂ ಸಿಗುವ ಅತ್ಯಲ್ಪ ಸಂಪನ್ಮೂಲಗಳನ್ನು ಬಳಸಿಕೊಂಡು, ಸಾವಿನ ದವಡೆಯಲ್ಲಿರುವ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು, ತೀವ್ರ ಅಪೌಷ್ಟಿಕತೆಯ ಅಪಾಯದಲ್ಲಿರುವ ಗರ್ಭಿಣಿಯರು, ಎಳೆಯ ಮಕ್ಕಳು ಹಾಗೂ ಇಸ್ರೇಲ್ ಪಡೆಗಳು ನಿಯಂತ್ರಿಸುವ ಯೆಲ್ಲೋ ಲೈನ್’ನ ಗಡಿಭಾಗದಲ್ಲಿರುವ ಅತ್ಯಂತ ಸಂಕಷ್ಟದ ಜನರಿಗೆ ಮೊದಲ ಆದ್ಯತೆಯ ಮೇಲೆ ಆಹಾರ ತಲುಪಿಸಲು ನಿರ್ಧರಿಸಲಾಗಿದೆ. ಯಾವ ಭೂಭಾಗದಲ್ಲಿ ಹಸಿವು ಹೆಚ್ಚಾಗಿ ವ್ಯಾಪಿಸುತ್ತದೆಯೋ, ಅಲ್ಲಿ ತಾನಾಗಿಯೇ ಅಸ್ಥಿರತೆ ಮತ್ತು ಅರಾಜಕತೆ ಆವರಿಸುತ್ತದೆ. ಆಹಾರ ಎಂಬುದು ಮಾನವೀಯತೆಯ ಕೊನೆಯ ಗೆರೆ; ಅದನ್ನು ನಾವು ಯಾವುದೇ ಕಾರಣಕ್ಕೂ ದಾಟಲು ಬಿಡಬಾರದು” ಎಂದು ಕಾರ್ಲ್ ಸ್ಕೌ ಹೇಳಿದ್ದಾರೆ.




