ತಂತ್ರಜ್ಞಾನ ನಮ್ಮ ಕೈಗೆ ಅಪಾರ ಶಕ್ತಿಯನ್ನು ಕೊಟ್ಟಿದೆ. ಆ ಶಕ್ತಿಯನ್ನು ವಿವೇಚನೆಯಿಂದ ಬಳಸುವ ವಿವೇಕವನ್ನು ಬೆಳೆಸಿಕೊಳ್ಳಬೇಕು. ದುರಾಸೆಗಳಿಗೆ ಇತಿಮಿತಿಗಳಿರಬೇಕು. ಸಾಮಾಜಿಕ ಮಾಧ್ಯಮಗಳು ಜನರನ್ನು ಪರಸ್ಪರ ಗೌರವಿಸುವಂತೆ ಮಾಡುವ ವೇದಿಕೆಗಳಾಗಬೇಕಾದರೆ, ನಾಗರಿಕ ಸಭ್ಯತೆಯನ್ನು ವೈಯಕ್ತಿಕ ಆಯ್ಕೆಯಾಗಿ ಮಾತ್ರವಲ್ಲ, ಸಾಮಾಜಿಕ ಹೊಣೆಗಾರಿಕೆಯಾಗಿಯೂ ಸ್ವೀಕರಿಸಬೇಕು.
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ. ಅವು ಕೇವಲ ಸಂವಹನದ ಸಾಧನಗಳಾಗಿ ಉಳಿದಿಲ್ಲ. ಅವು ಜನರ ಬದುಕಿನ ಭಾಗವಾಗಿ, ಸಮಾಜದ ಪ್ರತಿಬಿಂಬವಾಗಿ, ಸಮಾಜವನ್ನು ರೂಪಿಸುವ ಶಕ್ತಿಯಾಗಿ ಮಾರ್ಪಟ್ಟಿವೆ.
ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಂತ ಮಹತ್ವದ ಮೂಲಭೂತ ಹಕ್ಕು. ಪ್ರಭುತ್ವವನ್ನು ಪ್ರಶ್ನಿಸುವುದು, ಅಧಿಕಾರಸ್ಥರನ್ನು ಟೀಕಿಸುವುದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಮತ್ತು ಜನಪ್ರತಿನಿಧಿಗಳ ಹೊಣೆಗಾರಿಕೆಯನ್ನು ನೆನಪಿಸುವುದು- ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣಗಳು.
ಸಾಮಾಜಿಕ ಮಾಧ್ಯಮಗಳು ಈಗ ಈ ಅವಕಾಶಗಳನ್ನು ಸಾಮಾನ್ಯ ನಾಗರಿಕರಿಗೂ ವಿಸ್ತರಿಸಿವೆ. ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಅವಕಾಶ ಸಿಗದವರಿಗೂ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ವೇದಿಕೆಯೊದಗಿಸಿವೆ. ಆದರೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತೊಬ್ಬರ ಘನತೆಯನ್ನು ಹಾಳುಮಾಡುವ ಪರವಾನಗಿ ಎಂದು ಭಾವಿಸಲಾಗುತ್ತಿದೆ.
ಇದಕ್ಕೆ ಉದಾಹರಣೆಯಾಗಿ ಇತ್ತೀಚಿನ ಎರಡು ಘಟನೆಗಳನ್ನು ಅವಲೋಕಿಸಬಹುದು. ಒಂದು ಜೆನ್ ಜೀ ಹೋರಾಟವಾದರೆ, ಮತ್ತೊಂದು ರಾಜ್ಯದ ಸ್ಟಿಂಗ್ ಆಪರೇಷನ್.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಬೇಸತ್ತ ದೇಶದ ಯುವಸಮೂಹ, ಪ್ರಭುತ್ವದ ವಿರುದ್ಧ ಒಮ್ಮೆಲೆ ಸ್ಫೋಟಿಸಿತು. ಸ್ಫೋಟಗೊಂಡ ಯುವಸಮೂಹ ಸಂಘಟಿತರಾಗಿದ್ದು ಇದೇ ಸಾಮಾಜಿಕ ಮಾಧ್ಯಮಗಳಿಂದ. ಡಿಜಿಟಲ್ ಯುಗದೊಂದಿಗೇ ಜನ್ಮ ತಳೆದ ಜೆನ್ ಜೀಗಳು, ಸಾಮಾಜಿಕ ಮಾಧ್ಯಮಗಳನ್ನು ಸಂವಹನದ ಸಾಧನವನ್ನಾಗಿ ಬಳಸಿಕೊಂಡರು. ಅದರ ಮೂಲಕವೇ ಹೊಸ ಬಗೆಯ ಹೋರಾಟ ಕಟ್ಟಿದರು. ಸಾರ್ವಜನಿಕ ಅಭಿಪ್ರಾಯ ರೂಪಿಸುವ, ರಾಜಕೀಯ ಚರ್ಚೆಗಳನ್ನು ಪ್ರಭಾವಿಸುವ, ಸಾಮಾಜಿಕ ಸಂಬಂಧಗಳನ್ನು ಬೆಸೆಯುವ ಮತ್ತು ಪ್ರಜಾಸತ್ತಾತ್ಮಕ ಸಂವಾದಕ್ಕೆ ವೇದಿಕೆಯಾಗುವ ಶಕ್ತಿಯುತ ಮಾಧ್ಯಮವನ್ನಾಗಿ ಮಾರ್ಪಡಿಸಿಕೊಂಡರು. ಪ್ರಭುತ್ವದ ಮೇಲೆ ಒತ್ತಡ ತಂದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವ ಮೂಲಕ ಯಶಸ್ಸನ್ನೂ ಕಂಡರು.
ಇದನ್ನು ಓದಿದ್ದೀರಾ?: ʼಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದೆಯಾ ಈ ಪ್ರಪಂಚದಲ್ಲಿ?ʼ
ಆದರೆ, ಜೆನ್ ಜೀಗಳ ಹೋರಾಟ ಕೂಡ ಸಂಯಮದ ಎಲ್ಲೆ ಮೀರಿತು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿತು ಎಂದು ಸಂಘಪರಿವಾರ ಮತ್ತು ಬಿಜೆಪಿ ದೂರುಗಳ ಸುರಿಮಳೆ ಸುರಿಸಿತು. ಆ ದೂರುಗಳನ್ನು ದೃಢಪಡಿಸಲು ಪ್ರಧಾನಿ ಮೋದಿಯವರನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿದ ಬಾಲಕಿಯೊಬ್ಬಳ ಬಾಯಿಮಾತನ್ನು ಮುಂದಿಟ್ಟಿತು. ಆಕೆಯಿಂದ ಕ್ಷಮೆ ಕೇಳಿಸಲಾಯಿತು.
ವಿಪರ್ಯಾಸಕರ ಸಂಗತಿ ಎಂದರೆ, ಸಾಮಾಜಿಕ ಮಾಧ್ಯಮಗಳನ್ನು ಟೂಲ್ ಕಿಟ್ನಂತೆ ಬಳಸಿದ್ದೇ ಈ ಸಂಘಪರಿವಾರ ಮತ್ತು ಬಿಜೆಪಿ. ಅದರಲ್ಲೂ ಕೋಟಿಗಟ್ಟಲೆ ಹಣ ವ್ಯಯಿಸಿ, ಐಟಿ ಅಕ್ಷೋಹಿಣಿ ಸೈನ್ಯ ಬಳಸಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ‘ಪಪ್ಪು’ ಎಂದು ಪ್ರತಿಷ್ಠಾಪಿಸಲು ಹೆಣಗಾಡಿತು. ಕಳೆದ ಹನ್ನೆರಡು ವರ್ಷಗಳಿಂದ ಆ ಟ್ರೋಲ್, ಮೀಮ್ಸ್ ನೋಡಿ ನಗಾಡಿದ; ವಾಟ್ಸ್ಯಾಪ್ ಸಾಹಿತ್ಯವನ್ನು ಓದಿಕೊಂಡು ಅದೇ ಸತ್ಯವೆಂದು ನಂಬಿದ ದೇಶದ ಜನರ ಮಕ್ಕಳೇ ಈಗಿನ ಜೆನ್ ಜೀಗಳು. ಈಗ ಆ ಮಕ್ಕಳು, ರಾಹುಲ್ರನ್ನು ಪಪ್ಪು ಮಾಡಿದವರನ್ನು ಬೆಪ್ಪರನ್ನಾಗಿ ಮಾಡಿದ್ದಾರೆ. ವಯೋಸಹಜ ಹುಮ್ಮಸ್ಸಿನಲ್ಲಿ ಕೊಂಚ ಅತಿ ಮಾಡಿರಬಹುದು. ಆದರೆ, ಹೊರದೇಶಗಳಂತೆ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ದೇಶದ ಶಾಂತಿ ಸಹಬಾಳ್ವೆಗೆ ಭಂಗ ತಂದಿಲ್ಲ. ಗಾಂಧೀಯ ಮಾರ್ಗ ಬಿಟ್ಟಿಲ್ಲ.
ಆದರೆ ಇದೇ ಮಾತುಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕವೇ ಹೊರಬಂದ ರಾಜ್ಯದ ಸ್ಟಿಂಗ್ ಆಪರೇಷನ್ ವಿಷಯದಲ್ಲಿ ಹೇಳುವಂತಿಲ್ಲ. ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐವರು ಸಚಿವರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಹೊರಬಿತ್ತು. ಅದರ ಮುಂದುವರೆದ ಭಾಗವಾಗಿ, ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸ್ಟಿಂಗ್ ಆಪರೇಷನ್ ಮಾಡಲಾಗಿದೆ, ತನಿಖೆಯಾಗಲಿ ಎಂದರು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೋ ಕಂಡ ಸಿದ್ದರಾಮಯ್ಯನವರು, ಕೋರ್ಟಿನಿಂದ ಸ್ಟೇ ತಂದರು.
ರಾಜಕಾರಣದ ಅಂಗಳದಲ್ಲಿ ಅಧಿಕಾರಕ್ಕಾಗಿ ನಡೆದ, ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಅಸಹ್ಯಕ್ಕೆ ಸಿದ್ದರಾಮಯ್ಯನವರು ಸ್ಟೇ ತಂದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಯಾವ ನಿರ್ಬಂಧವೂ ಇಲ್ಲದೆ ಹಂಚಿಕೆಯಾಗತೊಡಗಿತು. ಸಾಮಾಜಿಕ ಮಾಧ್ಯಮಗಳ ಸಮಸ್ಯೆ ಎಂದರೆ ಗಮನ ಸೆಳೆಯುವ ಹಂಬಲ. ಹೆಚ್ಚು ವೀಕ್ಷಣೆಗಳು, ಪ್ರತಿಕ್ರಿಯೆಗಳು, ಹಂಚಿಕೆಗಳು ಮತ್ತು ಅನುಯಾಯಿಗಳನ್ನು ಗಳಿಸುವ ಕೆಟ್ಟ ಸ್ಪರ್ಧೆ.
ಅದರ ಪರಿಣಾಮವಾಗಿ ಸುಳ್ಳು ಸುದ್ದಿಯೊಂದು ಕ್ಷಣಾರ್ಧದಲ್ಲಿ ಸಾವಿರಾರು ಜನರನ್ನು ತಲುಪಬಹುದು. ಅದರ ಸತ್ಯಾಸತ್ಯತೆ ತಿಳಿಯುವ ಹೊತ್ತಿಗೆ ಅದು ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸಬಹುದು. ವ್ಯಕ್ತಿಯ ಗೌರವಕ್ಕೆ ಹಾನಿ ಮಾಡಬಹುದು ಅಥವಾ ಸಾಮಾಜಿಕ ಉದ್ವಿಗ್ನತೆಯನ್ನು ಹೆಚ್ಚಿಸಬಹುದು. ನಂತರ ನೀಡುವ ಸ್ಪಷ್ಟೀಕರಣಕ್ಕೆ ಆರಂಭದ ಸುಳ್ಳಿನಷ್ಟು ಮಹತ್ವ ಸಿಗದೇ ಹೋಗಬಹುದು.
ಸಾಮಾಜಿಕ ಮಾಧ್ಯಮಗಳ ಆಯ್ಕೆಯ ಅವಕಾಶ ನಮ್ಮ ಕೈಯಲ್ಲಿಯೇ ಇದೆ. ಆದ್ದರಿಂದ, ಯಾವುದೇ ಸುದ್ದಿ/ಚಿತ್ರ/ವಿಡಿಯೋವನ್ನು ಹಂಚಿಕೊಳ್ಳುವ ಮೊದಲು ಅದರ ಮೂಲವನ್ನು ಪರಿಶೀಲಿಸುವುದು ಬಹಳ ಮುಖ್ಯ. ಹರಿದುಬಂದ ಮಾಹಿತಿ-ಚಿತ್ರಗಳನ್ನು ನೈಜವೆಂದು ನಂಬದಿರುವುದು ಮತ್ತು ದೃಢೀಕರಿಸದ ಆರೋಪಗಳನ್ನು ಮುಂದಕ್ಕೆ ಕಳುಹಿಸದಿರುವುದು ಪ್ರತಿಯೊಬ್ಬ ಡಿಜಿಟಲ್ ನಾಗರಿಕನ ಜವಾಬ್ದಾರಿಯಾಗಬೇಕಾದ್ದು ಇನ್ನೂ ಮುಖ್ಯ.
ಇದನ್ನು ಓದಿದ್ದೀರಾ?: ಕಬ್ಬು ಬೆಳೆಗಾರರ ಬೇಡಿಕೆ ಬಗೆಹರಿಸಲಾಗದ ಬಿಕ್ಕಟ್ಟೇ?
ಡಿಜಿಟಲ್ ನಾಗರಿಕತೆಯನ್ನು ಬೆಳೆಸುವುದು ಕೇವಲ ತಂತ್ರಜ್ಞಾನ ಕಂಪನಿಗಳ ಅಥವಾ ಸರ್ಕಾರದ ಜವಾಬ್ದಾರಿಯಲ್ಲ. ಕುಟುಂಬ, ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳು, ರಾಜಕೀಯ ನಾಯಕರು ಮತ್ತು ವಿಚಾರವಂತರೂ ಇದರಲ್ಲಿ ಪಾಲುದಾರರು. ಮಕ್ಕಳಿಗೆ ಮೊಬೈಲ್ ಬಳಕೆಯ ನಿಯಮಗಳನ್ನು ಕಲಿಸುವಷ್ಟೇ ಮುಖ್ಯವಾಗಿ, ಆನ್ಲೈನ್ನಲ್ಲಿ ಮತ್ತೊಬ್ಬರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನೂ ಹೇಳಿಕೊಡಬೇಕು. ಇನ್ನೊಬ್ಬರ ಗೌಪ್ಯತೆಯನ್ನು ಗೌರವಿಸುವುದು ಡಿಜಿಟಲ್ ಶಿಕ್ಷಣದ ಭಾಗವಾಗಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಕಾಣುವ ಅಸಭ್ಯತೆ, ಅಸಹನೆ ಮತ್ತು ಅಸೂಯೆ ಕೇವಲ ತಂತ್ರಜ್ಞಾನದ ಸಮಸ್ಯೆಯಲ್ಲ. ಅದನ್ನು ಅಷ್ಟೇ ಸುಲಭವಾಗಿ ಸರಳೀಕರಿಸಿ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಅವು ನಮ್ಮ ಸಾಮಾಜಿಕ ಸಂಬಂಧಗಳು, ರಾಜಕೀಯ ಸಂಸ್ಕೃತಿ, ಸಾರ್ವಜನಿಕ ಸಂವಾದ ಮತ್ತು ನೈತಿಕ ಮೌಲ್ಯಗಳ ಸ್ಥಿತಿಯನ್ನೂ ಪ್ರತಿಬಿಂಬಿಸುತ್ತವೆ ಎಂಬುದನ್ನು ಅರಿಯಬೇಕು.
ತಂತ್ರಜ್ಞಾನ ನಮ್ಮ ಕೈಗೆ ಅಪಾರ ಶಕ್ತಿಯನ್ನು ಕೊಟ್ಟಿದೆ. ಆ ಶಕ್ತಿಯನ್ನು ವಿವೇಚನೆಯಿಂದ ಬಳಸುವ ವಿವೇಕವನ್ನು ಬೆಳೆಸಿಕೊಳ್ಳಬೇಕು. ದುರಾಸೆಗಳಿಗೆ ಇತಿಮಿತಿಗಳಿರಬೇಕು. ಸಾಮಾಜಿಕ ಮಾಧ್ಯಮಗಳು ಜನರನ್ನು ಪರಸ್ಪರ ಗೌರವಿಸುವಂತೆ ಮಾಡುವ ವೇದಿಕೆಗಳಾಗಬೇಕಾದರೆ, ನಾಗರಿಕ ಸಭ್ಯತೆಯನ್ನು ವೈಯಕ್ತಿಕ ಆಯ್ಕೆಯಾಗಿ ಮಾತ್ರವಲ್ಲ, ಸಾಮಾಜಿಕ ಹೊಣೆಗಾರಿಕೆಯಾಗಿಯೂ ಸ್ವೀಕರಿಸಬೇಕು. ಸ್ವೀಕರಿಸಲು ಸಾಧ್ಯವಾಗದ ಸಂದರ್ಭ ಸೃಷ್ಟಿಯಾದರೆ, ಸರ್ಕಾರ ಕಟ್ಟುನಿಟ್ಟಿನ, ನ್ಯಾಯಸಮ್ಮತ ನಿಯಮಗಳನ್ನು ಜಾರಿಗೊಳಿಸಬೇಕು.





