ಸಹೋದರ ಸಂಬಂಧಿಯನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವ ನೆಪದಲ್ಲಿ ಅಮೆರಿಕಾಕಕ್ಕೆ ಕರೆತಂದು ಮೂರು ವರ್ಷಗಳ ಕಾಲ ತಮ್ಮ ಪೆಟ್ರೋಲ್ ಪಂಪ್, ಗ್ಯಾಸ್ ಸ್ಟೇಷನ್ ಮತ್ತು ಸ್ಟೋರ್‌ನಲ್ಲಿ ಕೆಲಸ ಮಾಡಿಸಿದ ಭಾರತೀಯ-ಅಮೆರಿಕನ್ ದಂಪತಿಗೆ ಯುಎಸ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಾಲಯವು 31 ವರ್ಷದ ಹರ್ಮನ್‌ಪ್ರೀತ್ ಸಿಂಗ್‌ಗೆ 135 ತಿಂಗಳ (11.25 ವರ್ಷ) ಜೈಲು ಶಿಕ್ಷೆ ಮತ್ತು 43 ವರ್ಷದ ಕುಲಬೀರ್ ಕೌರ್‌ಗೆ 87 ತಿಂಗಳು (7.25 ವರ್ಷ) ಶಿಕ್ಷೆ ವಿಧಿಸಿದೆ. ಜೊತೆಗೆ ಈ ದಂಪತಿಯ ಸೋದರಸಂಬಂಧಿ ಸಂತ್ರಸ್ತನಿಗೆ 225,210.76 ಯುಎಸ್ ಡಾಲರ್ (1.87 ಕೋಟಿ ರೂಪಾಯಿ) ಪಾವತಿಸುವಂತೆ ತಿಳಿಸಲಾಗಿದೆ. ಇನ್ನು ದಂಪತಿಗಳು ವಿಚ್ಛೇದನ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
“ಪ್ರತಿವಾದಿಗಳು ಸಂತ್ರಸ್ತನೊಂದಿಗಿನ ತಮ್ಮ ಸಂಬಂಧವನ್ನು ದುರ್ಬಳಕೆ ಮಾಡಿದ್ದಾರೆ. ದಂಪತಿಯನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಯುಎಸ್‌ಗೆ ಕರೆತಂದಿದ್ದಾರೆ” ಎಂದು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗದ ಸಹಾಯಕ ಅಟಾರ್ನಿ ಜನರಲ್ ಕ್ರಿಸ್ಟನ್ ಕ್ಲಾರ್ಕ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಭಾರತೀಯ ಸಿಬ್ಬಂದಿಗಳಿಗೆ ಶೋಷಣೆ: ಬ್ರಿಟನ್ ಉದ್ಯಮಿಗಳಾದ ಹಿಂದೂಜಾ ಸಹೋದರರಿಗೆ 4 ವರ್ಷ ಜೈಲು
“ದಂಪತಿಗಳು ಸಂತ್ರಸ್ತನ ವಲಸೆ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕನಿಷ್ಠ ವೇತನಕ್ಕಾಗಿ ದೀರ್ಘ ಗಂಟೆಗಳ ಕಾಲ ಕೆಲಸ ಮಾಡಿಸಿದ್ದಾರೆ. ಬೆದರಿಕೆ ಹಾಕಿದ್ದಾರೆ, ದೈಹಿಕ ಹಲ್ಲೆ ನಡೆಸಿದ್ದಾರೆ, ಮಾನಸಿಕ ನಿಂದನೆ ಮಾಡಿದ್ದಾರೆ” ಎಂದು ದೂರಿದ್ದಾರೆ.
ಇನ್ನು “2018ರಲ್ಲಿ ಪ್ರತಿವಾದಿಗಳು ಸಂತ್ರಸ್ತ, ಸಿಂಗ್ ಅವರ ಸೋದರಸಂಬಂಧಿ ಮತ್ತು ಅಪ್ರಾಪ್ತನನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವ ಸುಳ್ಳು ಭರವಸೆಯೊಂದಿಗೆ ಭಾರತದಿಂದ ಯುಎಸ್‌ಗೆ ಪ್ರಯಾಣಿಸಲು ಆಮಿಷ ಒಡ್ಡಿದರು ಎಂಬುವುದು ಸಾಬೀತಾಗಿದೆ” ಎಂದು ನ್ಯಾಯಾಂಗ ಇಲಾಖೆ ಹೇಳಿದೆ.
ಸಂತ್ರಸ್ತ ಯುಎಸ್‌ಗೆ ಆಗಮಿಸಿದ ನಂತರ, ಆರೋಪಿಗಳು ಆತನ ವಲಸೆ ದಾಖಲೆಗಳನ್ನು ತೆಗೆದುಕೊಂಡು ಮಾರ್ಚ್ 2018 ಮತ್ತು ಮೇ 2021ರ ನಡುವೆ ಮೂರು ವರ್ಷಗಳ ಕಾಲ ಸಿಂಗ್ ಅವರ ಅಂಗಡಿಯಲ್ಲಿ ಕೆಲಸ ಮಾಡಿಸಿದ್ದಾರೆ. ಸಿಂಗ್ ಮತ್ತು ಕೌರ್ ಕನಿಷ್ಠ ವೇತನ ನೀಡಿ ಅಂಗಡಿಯಲ್ಲಿ ಶುಚಿಗೊಳಿಸುವುದು, ಅಡುಗೆ ಮಾಡುವುದು, ನಗದು ರಿಜಿಸ್ಟರ್ ಮತ್ತು ಅಂಗಡಿಯ ದಾಖಲೆಗಳನ್ನು ನಿರ್ವಹಿಸುವುದು ಸೇರಿದಂತೆ ದಿನಕ್ಕೆ 12ರಿಂದ 17 ಗಂಟೆಗಳ ಕಾಲ ಕೆಲಸ ಮಾಡಿಸಿದ್ದಾರೆ ಎಂದು ವರದಿಯಾಗಿದೆ.