ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯಕ್ಕೆ ಕೊನೆಗೂ ಫುಲ್‌ಸ್ಟಾಪ್ ಬಿದ್ದಿದೆ. ಹಮಾಸ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಲಾಗಿದೆ. ಈ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಸಚಿವ ಸಂಪುಟ ಶನಿವಾರ ಸಮ್ಮತಿ ಸೂಚಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಸಿದೆ.
ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವನ್ನು ಅಂಗೀಕರಿಸಲಾಗಿದೆ. ಪ್ಯಾಲೆಸ್ತೀನಿಯರ ಮೇಲೆ 15 ತಿಂಗಳಿನಿಂದ ನಡೆಯುತ್ತಿರುವ ಕ್ರೌರ್ಯಕ್ಕೆ ಅಂತ್ಯಕಾಣಲಿದೆ.
“ಹಮಾಸ್ ಮತ್ತು ಇಸ್ರೇಲ್ ವಶದಲ್ಲಿರುವ ಉಭಯ ರಾಷ್ಟ್ರಗಳ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದದೊಂದಿಗೆ ಕದನ ವಿರಾಮವನ್ನು ಅನುಮೋದಿಸಲಾಗಿದೆ. ಒತ್ತೆಯಾಳುಗಳ ಬಿಡುಗಡೆ ಭಾನುವಾರದಿಂದ ಜಾರಿಯಾಗಲಿದೆ” ಎಂದು ಇಸ್ರೇಲ್ ಸರ್ಕಾರ ಹೇಳಿದೆ.
ಗುರುವಾರವೇ ಕದನ ವಿರಾಮ ಘೋಷಿಸಲಾಗಿತ್ತು. ಆದಾಗ್ಯೂ, ಇಸ್ರೇಲ್ ತನ್ನ ಕ್ರೌರ್ಯದ ದಾಳಿಯನ್ನು ಮುಂದುವರೆಸಿತ್ತು. ಗಾಜಾದ ಖಾನ್ ಯೂನಿಸ್‌ನ ಪಶ್ಚಿಮದಲ್ಲಿರುವ ಮಾವಾಸಿ ಪ್ರದೇಶದಲ್ಲಿ ಇಸ್ರೇಲ್ ವಿಮಾನ ದಾಳಿ ನಡೆಸಿದ್ದು, ಐದು ಜನರನ್ನು ಬಲಿ ಪಡೆದಿದೆ ಎಂದು ಗಾಜಾ ವೈದ್ಯರು ತಿಳಿಸಿದ್ದಾರೆ.