- ಎರಡು ದೇಶಗಳ ಹಲವು ಸಮಸ್ಯೆ ಕುರಿತು ಫ್ಯುಮಿಯೋ ಕಿಶಿಡಾ ಚರ್ಚೆ
- 12 ವರ್ಷಗಳ ನಂತರ ದಕ್ಷಿಣ ಕೊರಿಯಾಗೆ ಜಪಾನ್ ನಾಯಕರ ಭೇಟಿ
ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಅವರು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್-ಯೋಲ್ ಅವರನ್ನು ಭೇಟಿಯಾಗಲು ಭಾನುವಾರ (ಮೇ 7) ರಾಜಧಾನಿ ಸಿಯೋಲ್‌ಗೆ ಬಂದಿಳಿದಿದ್ದಾರೆ.
ಪೂರ್ವ ಏಷ್ಯಾದ ರಾಷ್ಟ್ರಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾ ಶತಮಾನಗಳಿಂದ ಸಾಂಪ್ರದಾಯಿಕ ಶತ್ರು ರಾಷ್ಟ್ರಗಳು. ಆದರೆ ಇದೀಗ ಉತ್ತರ ಕೊರಿಯಾ ಮತ್ತು ಚೀನಾದ ಆತಂಕ ಎರಡೂ ದೇಶಗಳು ಪರಸ್ಪರ ಸ್ನೇಹ ಹಸ್ತ ಚಾಚುವಂತೆ ಮಾಡಿದೆ. ಉತ್ತರ ಕೊರಿಯಾ ದೇಶದಿಂದ ಪರಮಾಣು ಯುದ್ಧದ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕೊರಿಯಾಗೆ ಪ್ರಧಾನಿ ಕಿಶಿಡಾ ಅವರ ಭೇಟಿಯು ಮಹತ್ವ ಪಡೆದಿದೆ.
ಭಾನುವಾರ ಸಿಯೋಲ್‌ಗೆ ದ್ವಿಪಕ್ಷೀಯ ಮಾತುಕತೆ ಸಂಬಂಧ ಫ್ಯುಮಿಯೋ ಕಿಶಿದಾ ಅವರು ಭೇಟಿ ನೀಡಿದ್ದು, ಇದು ಕಳೆದ 12 ವರ್ಷಗಳಲ್ಲಿ ಸಿಯೋಲ್‌ಗೆ ಜಪಾನ್ ನಾಯಕರೊಬ್ಬರ ಮೊದಲ ಭೇಟಿಯಾಗಿದೆ.
ಮಾರ್ಚ್‌ನಲ್ಲಿ ಯೂನ್ ಅವರು ಜಪಾನ್‌ನ ಟೊಕಿಯೋಗೆ ಭೇಟಿ ನೀಡಿದ್ದರು. ಈ ವೇಳೆ ಇಬ್ಬರೂ ನಾಯಕರು ಜಪಾನ್ ಹಾಗೂ ದಕ್ಷಿಣ ಕೊರಿಯಾ ನಡುವಿನ ವಿವಾದಗಳನ್ನು ಕೊನೆಗೊಳಿಸಲು ಚರ್ಚೆ ನಡೆಸಿದ್ದರು.
ಫ್ಯುಮಿಯಾ ಕಿಶಿಡಾ ಅವರು ಸಿಯೋಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ನಮ್ಮ ವಿಶ್ವಾಸಾರ್ಹ ಬಾಂಧವ್ಯದ ಆಧಾರದ ಮೇಲೆ ಅಧ್ಯಕ್ಷ ಯೂನ್ ಅವರೊಂದಿಗೆ ಮುಕ್ತ ವಿಷಯಗಳ ವಿನಿಮಯ ದೃಷ್ಟಿಕೋನ ಹೊಂದಲು ಬಯಸುತ್ತೇನೆ” ಎಂದು ತಿಳಿಸಿದರು.
“ಮಾರ್ಚ್‌ನಿಂದ ದಕ್ಷಿಣ ಕೊರಿಯಾ ಜೊತೆ ಹಣಕಾಸು ಮತ್ತು ರಕ್ಷಣಾ ವಲಯ ಸೇರಿದಂತೆ ನಾನಾ ಹಂತದ ಸಂವಹನ ನಡೆಯಲಿದೆ. ಈ ಪ್ರವೃತ್ತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಯೋಜಿಸಿದ್ದೇನೆ” ಎಂದು ಫ್ಯುಮಿಯೋ ಕಿಶಿಡಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಕ್ರಿಯವಾಗಿರುವ ಚೀನಾ ನೌಕಾಪಡೆ ಮೇಲೆ ನಿಗಾ
ಫ್ಯುಮಿಯೋ ಕಿಶಿಡಾ ಮತ್ತು ಯೂನ್ ಅವರು ಉತ್ತರ ಕೊರಿಯಾದ ಪರಮಾಣು ಯೋಜನೆ, ದಕ್ಷಿಣ ಕೊರಿಯಾ- ಜಪಾನ್ ನಡುವಿನ ಆರ್ಥಿಕ ಭದ್ರತೆ, ಒಟ್ಟಾರೆ ಸಂಬಂಧಗಳು ಹಾಗೂ ಇತರ ಅನಿರ್ದಿಷ್ಟ ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ಉಭಯ ದೇಶಗಳ ಅಧಿಕಾರಿಗಳು ಹೇಳಿದರು.
1910ರಿಂದ 1945ರವರೆಗೆ ಕೊರಿಯಾ ದ್ವೀಪದ ಮೇಲೆ ಜಪಾನಿನ ವಸಾಹತುಶಾಹಿ ಆಡಳಿತವಿತ್ತು. ಹೀಗಾಗಿ ಎರಡೂ ರಾಷ್ಟ್ರಗಳು ಪರಸ್ಪರ ಶತ್ರು ಭಾವದಿಂದ ನೆಲೆಸಿದ ಅವಧಿಯೇ ಹೆಚ್ಚಾಗಿದೆ.