ಜರ್ಮನಿಯಲ್ಲಿ 62 ವಯಸ್ಸಿನ ವೃದ್ಧರೊಬ್ಬರು ಕಳೆದ 29 ತಿಂಗಳಲ್ಲಿ ಬರೋಬ್ಬರಿ 217 ಕೋವಿಡ್ ಲಸಿಕೆ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಈ ಲಸಿಕೆ ಪಡೆದಿರುವುದು ಯಾವುದೇ ವೈದ್ಯಕೀಯ ಪ್ರಯೋಗವಾಗಿರಲಿಲ್ಲ. ಈ ವ್ಯಕ್ತಿಯು ತನ್ನ ‘ಖಾಸಗಿ ಕಾರಣಕ್ಕಾಗಿ’ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಜೂನ್ 2021ರಿಂದ ನವೆಂಬರ್ 2023ರವರೆಗೆ ಕೋವಿಡ್ ಲಸಿಕೆಯ 217 ಡೋಸ್‌ಗಳನ್ನು ಪಡೆದಿದ್ದಾರೆ. ಆದರೆ ಖಾಸಗಿ ಹಕ್ಕು ಕಾರಣ ಈ ವ್ಯಕ್ತಿಯ ಹೆಸರು, ಇತರೆ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಒಟ್ಟು 217 ಡೋಸ್‌ಗಳಲ್ಲಿ 134 ಅಧಿಕೃತವಾಗಿ ಪಡೆದಿದ್ದರೆ, ಇನ್ನುಳಿದ ಡೋಸ್‌ಗಳನ್ನು ಸ್ವತಃ ಹಾಕಿಕೊಂಡಿದ್ದಾರೆ.
ಇನ್ನು ಈ ವ್ಯಕ್ತಿ ನಿರಂತರವಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿರುವುದು ಮಾತ್ರವಲ್ಲದೆ ಕಳೆದ 29 ತಿಂಗಳ ಅವಧಿಯಲ್ಲಿ ಪದೇ ಪದೇ ಕೋವಿಡ್ ಪರೀಕ್ಷೆಯನ್ನು ಮಾಡಿಸಿದ್ದಾರೆ. ಈವರೆಗೂ ಈ ಲಸಿಕೆ ಸಂಬಂಧಿತ ಯಾವುದೇ ಅಡ್ಡ ಪರಿಣಾಮಗಳು ಈ ವ್ಯಕ್ತಿಯಲ್ಲಿ ಕಂಡುಬಂದಿಲ್ಲ ಮತ್ತು ಈ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿಲ್ಲ.
ತಜ್ಞರು ಹೇಳುವುದೇನು?
“ಇದು ಅಸಾಮಾನ್ಯ ಪ್ರಕರಣವಾಗಿದೆ. ಇಷ್ಟೊಂದು ಡೋಸ್‌ಗಳನ್ನು ಪಡೆದುಕೊಳ್ಳಲು ಯಾವುದೇ ಮಾರ್ಗಸೂಚಿಯಿಲ್ಲ. ಮೊದಲ ಮೂರು ಡೋಸ್ ಪಡೆದ ಬಳಿಕ ಈ ವ್ಯಕ್ತಿಯಲ್ಲಿ ಕೋವಿಡ್ ಪ್ರತಿರೋಧಕ ಶಕ್ತಿ ಹೆಚ್ಚಾದ ಕಾರಣ ಕೋವಿಡ್ ಬಂದಿರದೆ ಇರಬಹುದು. ಈ ವ್ಯಕ್ತಿಯ ನಡವಳಿಕೆ ಬಗ್ಗೆ ತಿಳಿದಿರದ ಕಾರಣ ಏನೇ ಬದಲಾವಣೆಯಾದರೂ ನಮಗೆ ತಿಳಿಯುತ್ತಿಲ್ಲ,” ಎಂದು ಸಿಎನ್‌ಎನ್‌ಗೆ ಅಲ್ಬರ್ಟ್ ಐನ್‌ಸ್ಟೀನ್ ವೈದ್ಯಕೀಯ ಕಾಲೇಜಿನ ಡಾ ಎಮಿಲಿ ಹ್ಯಾಪಿ ಮಿಲ್ಲರ್ ತಿಳಿಸಿದ್ದಾರೆ.
ಇನ್ನು ಫ್ರೆಡ್‌ರಿಚ್-ಅಲೆಕ್ಸಾಂಡರ್ ವಿಶ್ವವಿದ್ಯಾನಿಲಯದ ಸಂಶೋಧಕಿ ಡಾ ಕಿಲಿಯಾನ್ ಸೋಬರ್ ಹೇಳುವಂತೆ, “ನಾವು ಮೂರು ಬಾರಿ ಡೋಸ್ ಪಡೆದರೂ 200 ಬಾರಿ ಡೋಸ್ ಪಡೆದರೂ ಪ್ರಯೋಜನವೇನು ಬದಲಾಗುವುದಿಲ್ಲ.”
ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಂಶೋಧಕರು 2022ರ ಮೇ ತಿಂಗಳಲ್ಲಿ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ಆ ಸಂದರ್ಭದಲ್ಲಾಗಲೇ ವೃದ್ಧ 213 ಕೋವಿಡ್ ಡೋಸ್‌ಗಳನ್ನು ಪಡೆದುಕೊಂಡಿದ್ದರು. ಈ ವ್ಯಕ್ತಿ ತನ್ನ ವೈದ್ಯಕೀಯ ಮಾಹಿತಿ, ಪರೀಕ್ಷೆಗಾಗಿ ರಕ್ತ, ಇತರೆ ದಾಖಲೆಗಳನ್ನು ನೀಡಲು ಒಪ್ಪಿಕೊಂಡಿದ್ದರು. ಈ ಪರೀಕ್ಷೆಗಳ ಸಂದರ್ಭದಲ್ಲೇ ವ್ಯಕ್ತಿ ಮತ್ತೆ ನಾಲ್ಕು ಕೋವಿಡ್ ಡೋಸ್ ಪಡೆದುಕೊಂಡಿದ್ದಾರೆ.
ಈ ವ್ಯಕ್ತಿ ನೀಡಿದ ರಕ್ತವನ್ನು ಮೂರು ಕೋವಿಡ್ ಲಸಿಕೆ ಡೋಸ್‌ಗಳನ್ನು ಪಡೆದಿರುವ 29 ಜನರ ರಕ್ತದೊಂದಿಗೆ ಪರೀಕ್ಷೆ ಮಾಡಲಾಗಿದೆ. ಈ ವ್ಯಕ್ತಿಯ 214 ಮತ್ತು 215ನೇ ಲಸಿಕೆ ಡೋಸ್ ಬಳಿಕ ದೇಹದಲ್ಲಿ ಪ್ರತಿರೋಧಕ ಶಕ್ತಿಯು ತೀವ್ರವಾಗಿ ಹೆಚ್ಚಾಗಿರುವುದು ತಿಳಿದುಬಂದಿದೆ. ಇಷ್ಟೊಂದು ಡೋಸ್‌ಗಳನ್ನು ಪಡೆದಿದ್ದರೂ ಕೂಡಾ ಯಾವುದೇ ದುಷ್ಪರಿಣಾಮಗಳು ಕಂಡುಬಂದಿಲ್ಲ.