ಈ ದಿನ ಸಂಪಾದಕೀಯ | ಬೋರ್ಡ್ ಪರೀಕ್ಷೆ ರದ್ದು ಸ್ವಾಗತಾರ್ಹ; ಮೇಲ್ಮನವಿಗೆ ಹೋಗದಿರಲಿ ಸರ್ಕಾರ

ಶಿಕ್ಷಣ ಗ್ಯಾರಂಟಿಯು ಬಡವರಿಗೆ ಸಿಗಬೇಕು. ಇದನ್ನು ಅರ್ಥಮಾಡಿಕೊಂಡು ಹೈಕೋರ್ಟ್ ತೀರ್ಪನ್ನು ಸರ್ಕಾರ ಒಪ್ಪಿಕೊಂಡು, ಬಿಜೆಪಿ ತಂದಿರುವ ತಿದ್ದುಪಡಿಗಳಿಗೂ ಮರು ತಿದ್ದುಪಡಿ ತರುವತ್ತ ಸರ್ಕಾರ ಹೆಜ್ಜೆ ಇರಿಸಲಿ.

ಕೋವಿಡ್ ಕಾಲದಲ್ಲಿ ಏಕಾಏಕಿ ಜಾರಿಗೆ ತರಲಾದ ರಾಷ್ಟ್ರೀಯ ಶಿಕ್ಷಣ ನೀತಿ- 2020, ಅಂಚಿನಲ್ಲಿರುವ ಸಮುದಾಯಗಳನ್ನು ಶಿಕ್ಷಣದಿಂದ ಹೊರಗಿಡಲು ಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು ಆತಂಕಕಾರಿ ಸಂಗತಿ. ಸ್ಪರ್ಧಾತ್ಮಕತೆ, ಪ್ರತಿಭೆ, ಮೆರಿಟ್‌ ಹೆಸರಲ್ಲಿ ಮಕ್ಕಳನ್ನು ಭಯಗೊಳಿಸಿ, ಅಲಕ್ಷಿತ ಜನವರ್ಗವು ಕಲಿಕೆಯಿಂದಲೇ ದೂರ ಉಳಿಯುವಂತೆ ಎನ್‌ಇಪಿ ರಚನೆಯಾಯಿತು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ, ಎನ್‌ಇಪಿಯ ಪ್ರತಿರೂಪವೇ ಆದ ‘ಬೋರ್ಡ್ ಪರೀಕ್ಷೆ’ಗಳನ್ನು 5, 8, 9 ಮತ್ತು 11ನೇ ತರಗತಿಗಳಿಗೆ ಪರಿಚಯಿಸಿತು.

ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತಿ ಹಿಂದುಳಿದ ಜನಾಂಗಗಳಿಗೆ ಸಾಮಾಜಿಕ ನ್ಯಾಯದ ಮೂಲಕ ಅವಕಾಶಗಳನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಆದರೆ ಎಲ್ಲ ಸವಲತ್ತುಗಳನ್ನು ಹೊಂದಿರುವ ಜನವರ್ಗ ಮೆರಿಟ್‌ ಬಗ್ಗೆ ಮಾತನಾಡುತ್ತದೆ. ಹಸಿವು, ಬಡತನದ ಕಾರಣಕ್ಕೆ ಶಿಕ್ಷಣದಿಂದ ಹೊರಗುಳಿಯುವ ಬಹುದೊಡ್ಡ ಸಮೂಹವನ್ನು ಮೇಲೆತ್ತುವುದು ಸರ್ಕಾರದ ಜವಾಬ್ದಾರಿ. ಬಡವರ ವಿರೋಧಿ ಶಿಕ್ಷಣ ನೀತಿಗಳನ್ನು ತಂದು, ಹೊರಗಿಡುವ ಪ್ರಕ್ರಿಯೆಯನ್ನು ಪೋಷಿಸುವುದು ಸಂವಿಧಾನ ವಿರೋಧಿ ನಿಲುವಾಗುತ್ತದೆ. ಇದನ್ನು ಮನಗಂಡಿರುವ ಕರ್ನಾಟಕ ಹೈಕೋರ್ಟ್ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿ ತೀರ್ಪು ನೀಡಿರುವುದು ಸ್ವಾಗತಾರ್ಹ. ಕೋರ್ಟ್ ಎತ್ತಿರುವ ತಾಂತ್ರಿಕ ಅಂಶಗಳ ಹಿಂದಿನ ಆಶಯವನ್ನು ಸರ್ಕಾರ ಅರಿತುಕೊಳ್ಳಬೇಕಿದೆ.

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8, 9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಅಧಿಸೂಚನೆಗಳನ್ನು ಹೊರಡಿಸಿತ್ತು. ಇದನ್ನು ಪ್ರಶ್ನಿಸಿ, ‘ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ ಕರ್ನಾಟಕ’ ಮತ್ತು ‘ಅನುದಾನರಹಿತ ಮಾನ್ಯತೆ ಹೊಂದಿದ ಶಾಳೆಗಳ ಸಂಘ’ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿ ರವಿ ವಿ.ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ”ಕರ್ನಾಟಕ ಶಿಕ್ಷಣ ಕಾಯ್ದೆ- 1983ರ ಕಲಂ 22ರ ಅನುಸಾರ ಪರೀಕ್ಷಾ ವ್ಯವಸ್ಥೆಯಲ್ಲಿ ಆಂತರಿಕ ಅಥವಾ ಬಾಹ್ಯ ಮೌಲ್ಯಮಾಪನ ಮಾಡಲು ನಿಯಮಗಳಿಗೆ ತಿದ್ದುಪಡಿ ಮಾಡಬೇಕು. ಅಲ್ಲದೆ, ಕಲಂ 145 (4)ರ  ಪ್ರಕಾರ ಯಾವುದೇ ನಿಯಮಗಳಲ್ಲಿ ಬದಲಾವಣೆ ತರಬೇಕಾದರೆ ಅದನ್ನು ಶಾಸನ ಸಭೆಯಲ್ಲಿ ಚರ್ಚಿಸಿದ ಬಳಿಕವೇ ಕ್ರಮಕ್ಕೆ ಮುಂದಾಗಬೇಕಿದೆ. ಆದರೆ ಸರ್ಕಾರ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಈ ರೀತಿಯ ಯಾವುದೇ ನಿಯಮಕ್ಕೆ ತಿದ್ದುಪಡಿ ಮಾಡಿಲ್ಲ. ವಿಧಾನಸಭೆಯಲ್ಲಿ ಚರ್ಚೆಗಳನ್ನು ನಡೆಸಿಲ್ಲ. ಆದ್ದರಿಂದ ಬೋರ್ಡ್ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮ ಶಿಕ್ಷಣ ಕಾಯ್ದೆಯ ಕಲಂ 22ಕ್ಕೆ ತದ್ವಿರುದ್ಧವಾಗಿದೆ” ಎಂದು ತಿಳಿಸಿದೆ.

ಹೈಕೋರ್ಟ್ ತೀರ್ಪನ್ನು ಶಿಕ್ಷಣ ತಜ್ಞರು ಸ್ವಾಗತಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಚಿಂತನೆಯನ್ನು ಮಾಡಬಾರದು ಎಂದೂ ಒತ್ತಾಯಿಸುತ್ತಿದ್ದಾರೆ.

ಎನ್‌ಇಪಿಯನ್ನು ಕಟುವಾಗಿ ಟೀಕಿಸುತ್ತಲೇ ಬಂದಿರುವ ಕಾಂಗ್ರೆಸ್ ಸರ್ಕಾರ ಎಸ್‌ಇಪಿ ರೂಪಿಸಲು ಮುಂದಾಯಿತು. ಹೀಗಾಗಿ ಬಿಜೆಪಿ ಜಾರಿಗೆ ತಂದ ಅವೈಜ್ಞಾನಿಕ ಬೋರ್ಡ್ ಪರೀಕ್ಷೆಗಳು ರದ್ದಾಗಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಕಳೆದ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು ಕಳವಳಕಾರಿ ಸಂಗತಿ. ಈಗ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧವೂ ಮೇಲ್ಮನವಿ ಸಲ್ಲಿಸಲು ಸರ್ಕಾರ ಯೋಜಿಸುತ್ತಿದೆ ಎಂಬ ವರದಿಗಳು ಬರುತ್ತಿವೆ.

ಬ್ರಾಹ್ಮಣೀಯ ಸಿದ್ಧಾಂತವನ್ನೇ ಉಸಿರಾಡುತ್ತಾ ಬಂದಿರುವ ಬಿಜೆಪಿಗಿಂತ ಕಾಂಗ್ರೆಸ್ ಭಿನ್ನವೆಂದು ಸಾಬೀತು ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಮತ್ತೊಂದು ಅವಕಾಶ ದೊರಕಿದೆ. ಬಡಮಕ್ಕಳ ಶಿಕ್ಷಣಕ್ಕೆ ಮಾರಕವಾಗಿರುವ ಬೋರ್ಡ್ ಪರೀಕ್ಷೆಗಳತ್ತ ಆಸಕ್ತಿ ತೋರದೆ, ಹೈಕೋರ್ಟ್‌ನ ಆದೇಶವನ್ನು ಸರ್ಕಾರ ಒಪ್ಪಿಕೊಳ್ಳಬೇಕಿದೆ.

ಶಾಲೆಗಳು ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆ, ಅಸಮರ್ಪಕ ಪಠ್ಯಪುಸ್ತಕ ವಿತರಣೆ, ಶಿಕ್ಷಕರ ಕೊರತೆ ಮೊದಲಾದವುಗಳನ್ನು ನೀಗಿಸಲು ಸರ್ಕಾರ ಗಮನ ಹರಿಸಬೇಕಿದೆ.

“ಈ ಕೊರತೆಗಳ ಕಾರಣದಿಂದಾಗಿ ಗ್ರಾಮೀಣ ಭಾಗದ, ವಂಚಿತ ಸಮುದಾಯದ ಮಕ್ಕಳು ರಾಜ್ಯ ಮಟ್ಟದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ತರಬೇತಿ ಪಡೆದಿರುವುದಿಲ್ಲ. ಪ್ರತಿಭೆ ಇದ್ದರೂ ಇಂತಹ ಅನಾಹುತಕಾರಿ ನಿರ್ಧಾರಗಳ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ” ಎಂದು ಅಭಿಪ್ರಾಯ ತಾಳುತ್ತಾರೆ ಶಿಕ್ಷಣತಜ್ಞ ಬಿ.ಶ್ರೀಪಾದ ಭಟ್.

“5, 8, 9 ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ಶಿಕ್ಷಣ ಹಕ್ಕುಗಳ ಕಾಯ್ದೆ (ಆರ್‍‌ಟಿಇ) 2009ರ ಸೆಕ್ಷನ್ 16ರ ಉಲ್ಲಂಘನೆಯಾಗುತ್ತದೆ. ಅದರ ಪ್ರಕಾರ ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೂ ಮಕ್ಕಳನ್ನು ಫೇಲು ಮಾಡುವಂತಿಲ್ಲ. ಆದರೆ 2019ರಲ್ಲಿ ಬಿಜೆಪಿ ತನ್ನ ಅನೀತಿಗಳನ್ನು ಮುಂದುವರಿಸಲು ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ಸೆಕ್ಷನ್ 16ನ್ನು ತಿದ್ದುಪಡಿ ಮಾಡಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸದೆ ಸತತವಾಗಿ ಪರೀಕ್ಷೆಗಳ ಮೂಲಕ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಮೌಲ್ಯಮಾಪನ ಮಾಡುವುದು ಅಮಾನವೀಯವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿಗಳಂತಹ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವುದು ಮೆಚ್ಚುಗೆಯ ಸಂಗತಿ. ಆದರೆ ಶಿಕ್ಷಣ ಗ್ಯಾರಂಟಿಯು ಬಡವರಿಗೆ ಸಿಗಬೇಕು. ಇದನ್ನು ಅರ್ಥಮಾಡಿಕೊಂಡು ಹೈಕೋರ್ಟ್ ತೀರ್ಪನ್ನು ಸರ್ಕಾರ ಒಪ್ಪಿಕೊಂಡು, ಬಿಜೆಪಿ ತಂದಿರುವ ತಿದ್ದುಪಡಿಗಳಿಗೂ ಮರು ತಿದ್ದುಪಡಿ ತರುವತ್ತ ಸರ್ಕಾರ ಹೆಜ್ಜೆ ಇರಿಸಲಿ.

LEAVE A REPLY

Please enter your comment!
Please enter your name here