ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಆತ್ಮೀಯ ಗೆಳೆಯರು ಎಂಬುದು ಜಗಜ್ಜಾಹೀರು. ಮೋದಿ ಗೆದ್ದಾಗ ಟ್ರಂಪ್ ‘ಮೋದಿ ನನ್ನ ಉತ್ತಮ ಗೆಳೆಯ’ ಎಂದಿದ್ದು, ಟ್ರಂಪ್ ಗೆದ್ದಾಗ, ‘ಕಂಗ್ರಾಜುಲೇಷನ್ಸ್ ಮೈ ಫ್ರೆಂಡ್’ ಎಂದು ಮೋದಿ ಹೇಳಿದ್ದು ಎಲ್ಲವೂ ನಡೆದಿದೆ. ಆದರೆ, ಟ್ರಂಪ್ ಅವರು 2ನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಮೋದಿ ಅವರನ್ನು ಆಹ್ವಾನಿಸಿಲ್ಲ. ಇತ್ತೀಚೆಗೆ, ಸ್ನೇಹಿತನನ್ನೇ ಟ್ರಂಪ್ ಮರೆತಂತಿದೆ. ಟ್ರಂಪ್- ಮೋದಿ ನಡುವೆ ಬಿರುಕು ಕಂಡುಬಂದಿದೆ. ಇದು ದೊಡ್ಡಣ್ಣನ ಚಾಳಿಯೋ ಅಥವಾ ದೋಸ್ತ್ ಎಲಾನ್ ಮಸ್ಕ್ ಪ್ರಭಾವವೋ ಎಂಬ ಪ್ರಶ್ನೆಗಳಿವೆ.
ಜನವರಿ 20ರಂದು ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಅಮೆರಿಕದ ವೈರಿ ಎಂದೇ ಪರಿಗಣಿಸಲಾಗಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಟ್ರಂಪ್ ಆಹ್ವಾನ ನೀಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಈವರೆಗೂ ಆಮಂತ್ರಣ ಬಂದು ತಲುಪಿಲ್ಲ. ಆದಾಗ್ಯೂ, ಭಾರತವನ್ನು ಪ್ರತಿನಿಧಿಸಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ರಂಪ್ ಪದಗ್ರಹಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಅಮೆರಿಕನ್ನರಲ್ಲಿ ಭಯ ಹುಟ್ಟಿಸಿದ ಟ್ರಂಪ್ ಕಾರ್ಯಕಾರಿ ಆದೇಶಗಳು: ಸರ್ವಾಧಿಕಾರಿ ಆಡಳಿತಕ್ಕೆ ನಾಂದಿಯೇ?
ಇವೆಲ್ಲದರ ನಡುವೆ ನೆಟ್ಟಿಗರು, ಟ್ರೋಲಿಗರು ಆಹ್ವಾನ ಸಿಗದ ಮೋದಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. “ಅಯ್ಯೋ ಪಾಪ, ಗೆಳೆಯನನ್ನೇ ಮರೆತರೇ ಟ್ರಂಪ್” ಎಂದು ಲೇವಡಿ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಇತ್ತೀಚೆಗೆ ಜೈಶಂಕರ್ ಅಮೆರಿಕಕ್ಕೆ ಭೇಟಿ ನೀಡಿ ಮೋದಿಗೆ ಆಹ್ವಾನ ನೀಡುವಂತೆ ಮನವಿ ಮಾಡಿದ್ದರು ಎಂಬ ಊಹಾಪೋಹಗಳೂ ಹರಿದಾಡುತ್ತಿವೆ.
ಮಸ್ಕ್ ಮಾತು ಕೇಳಿ ಮೋದಿಯಿಂದ ದೂರವಾಗುವರೇ ಟ್ರಂಪ್?
ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ, ಟೆಸ್ಲಾ ಒಡೆಯ ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಈ ಚುನಾವಣೆಯ ಸಂದರ್ಭದಲ್ಲಿ ಆತ್ಮೀಯರಾಗಿದ್ದಾರೆ. ಟ್ರಂಪ್ ಗೆಲುವಿಗೆ ಮಸ್ಕ್ ಅವರೇ ಕಾರಣ ಎಂಬ ಮಾತುಗಳಿವೆ. ಟೆಸ್ಲಾವನ್ನು ಭಾರತ ಮಾರುಕಟ್ಟೆಗೆ ತರುವ ವಿಚಾರದಲ್ಲಿ ಈ ಹಿಂದಿನಿಂದಲೇ ಮಸ್ಕ್ ಮತ್ತು ಭಾರತ ಸರ್ಕಾರದ ನಡುವೆ ಇರಿಸು ಮುರಿಸುಗಳಿದ್ದವು.
ಇದನ್ನು ಓದಿದ್ದೀರಾ? ಕೆನಡಾ ಅಧ್ಯಕ್ಷ ಸ್ಥಾನಕ್ಕೆ ಟ್ರುಡೊ ರಾಜೀನಾಮೆ: ಮತ್ತೆ ಶುರು ಟ್ರಂಪ್ ತಿಕ್ಕಲುತನ; ನೆಲದ ದಾಹ
2019ರಿಂದಲೇ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಎಲಾನ್ ಮಸ್ಕ್ ಹರಸಾಹಸ ಮಾಡುತ್ತಿದ್ದಾರೆ. ಆದರೆ, ಈವರೆಗೂ ಕಾರ್ಯಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಭಾರತದ ತೆರಿಗೆ ನೀತಿಗಳು. ಹೀಗಾಗಿ, ಭಾರತೀಯ ತೆರಿಗೆ ನೀತಿಯ ಮೇಲೆ ಮಸ್ಕ್ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೆಸ್ಲಾದಂತಹ ಐಷಾರಾಮಿ ಕಾರುಗಳಿಗೆ ಭಾರತದಲ್ಲಿ ಶೇಕಡ 60ರಿಂದ ಶೇಕಡ 100ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಈ ತೆರಿಗೆಯನ್ನು ಕಡಿತಗೊಳಿಸಬೇಕು ಎಂಬುದು ಮಸ್ಕ್ ಬೇಡಿಕೆ. ಆದರೆ, ಮಸ್ಕ್ ಮತ್ತು ಭಾರತ ಸರ್ಕಾರದ ಮಾತುಕತೆ ಇಂದಿಗೂ ಯಶಸ್ವಿಯಾಗಿಲ್ಲ. ಇತ್ತೀಚೆಗೆ, ಭಾರತಕ್ಕೆ ಭೇಟಿ ನೀಡಲು ಯೋಜಿಸಿದ್ದ ಮಸ್ಕ್, ತಮ್ಮ ಭೇಟಿಯನ್ನು ರದ್ದುಗೊಳಿಸಿ ಚೀನಾಕ್ಕೆ ಭೇಟಿ ನೀಡಿದ್ದರು. ಇದೀಗ ಟ್ರಂಪ್ ಮತ್ತು ಮಸ್ಕ್ ಆತ್ಮೀಯರಾಗಿರುವ ಕಾರಣ ಟ್ರಂಪ್ ಭಾರತದಿಂದ ದೂರವಾಗುವಂತೆ ಮಸ್ಕ್ ತಂತ್ರ ಹೂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಅಲ್ಲದೆ,ಈ ಹಿಂದೆ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಟ್ರಂಪ್ ಅವರನ್ನು ಭೇಟಿಯಾಗದಿರುವುದೇ ಆಹ್ವಾನ ಲಭಿಸದಿರಲು ಕಾರಣ ಎಂದು ಹೇಳಲಾಗುತ್ತಿದೆ. 2019 ಮತ್ತು 2020ರ ಹೌಸ್ಟನ್ ಮತ್ತು ಅಹಮದಾಬಾದ್‌ನಲ್ಲಿ ಟ್ರಂಪ್ ಜೊತೆ ರ್‍ಯಾಲಿ ನಡೆಸಿದ್ದ ಮೋದಿ ಇತ್ತೀಚೆಗೆ ಅಮೆರಿಕ ಭೇಟಿ ವೇಳೆ ಟ್ರಂಪ್ ಚುನಾವಣಾ ರ್‍ಯಾಲಿಯಿಂದ ದೂರ ಉಳಿದಿದ್ದರು. ಇದೂ ಕೂಡ, ಮೋದಿ- ಟ್ರಂಪ್ ಗೆಳೆತನದಲ್ಲಿ ಬಿರುಕು ಮೂಡಲು ಕಾರಣವೆಂದು ಹೇಳಲಾಗುತ್ತಿದೆ.
ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಎಂದಿನಂತೆ ಮೋದಿ- ಜೈಶಂಕರ್ ವಿರುದ್ಧ ‘ವೇಟರ್’ (ಸೇವಕ) ಪದದ ಬಳಕೆ ಮಾಡಿದ್ದಾರೆ. “ಟ್ರಂಪ್ ಪದಗ್ರಹಣಕ್ಕೆ ‘ವೇಟರ್’ (ಜೈಶಂಕರ್)ಗೆ ಆಹ್ವಾನ ನೀಡಲಾಗಿದೆ. ಆದರೆ ಪ್ರಧಾನಿಗೆ ಆಹ್ವಾನವೇ ನೀಡಿಲ್ಲ” ಎಂದು ಲೇವಡಿ ಮಾಡಿದ್ದಾರೆ.
ಯಾವುದೇ ದೇಶದ ವಿಚಾರ ಬಂದರೂ ಮೂಗು ತೂರಿಸಿ ತನ್ನ ದರ್ಪವನ್ನು ಮೆರೆಯುವ ಅಮೆರಿಕ ಭಾರತವನ್ನೂ ಬಹುತೇಕ ತನ್ನ ಹಿಡಿತಕ್ಕೆ ತಂದುಕೊಳ್ಳುವಲ್ಲಿ ಸಫಲವಾಗಿತ್ತು. ಗಡಿಯಲ್ಲಿ ತಂಟೆ ಮಾಡುವ ಚೀನಾದ ವಿರುದ್ಧ ಬರೀ ಚೀನಾ ಆ್ಯಪ್, ವಸ್ತುಗಳನ್ನು ಬ್ಯಾನ್ ಮಾಡುವುದಕ್ಕೆ ಸೀಮಿತವಾದ ಭಾರತದ ಆಕ್ರೋಶಕ್ಕೂ ಅಮೆರಿಕ ಪರೋಕ್ಷ ಕುಮ್ಮಕ್ಕು ನೀಡಿತ್ತು ಎನ್ನಬಹುದು. ಅವೆಲ್ಲವೂ ಆದ ಬಳಿಕ ಈಗ ಅಮೆರಿಕ ಚೀನಾದತ್ತ ತನ್ನ ಸ್ನೇಹ ಬಾಹು ಚಾಚುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಚೀನಾದತ್ತ ವಾಲುತ್ತಿದೆಯೇ ಅಮೆರಿಕ?
ತನ್ನ ಮೊದಲ ಅಧಿಕರಾವಧಿಯಲ್ಲಿ ಚೀನಾ ವಿರುದ್ಧ ‘ವ್ಯಾಪಾರ ಯುದ್ಧ’ ಘೋಷಿಸಿದ್ದ ಟ್ರಂಪ್, ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಶೇಕಡ 100ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ‘ಉತ್ತಮ ಮನುಷ್ಯ’ ಎಂದು ಹೇಳಿಕೊಳ್ಳುತ್ತಲೇ ಭಾರತದ ವಸ್ತುಗಳ ಮೇಲೆಯೂ ಆಮದು ತೆರಿಗೆ ವಿಧಿಸುವುದಾಗಿ ನಯವಾಗಿ ಹೇಳಿಕೊಂಡಿದ್ದರು.
ಇದನ್ನು ಓದಿದ್ದೀರಾ? ಸೇವಕನನ್ನು ಟ್ರಂಪ್ ಆಹ್ವಾನಿಸಿರುವುದು ಪ್ರಧಾನಿಗೆ ದೊಡ್ಡ ಅಪಮಾನ: ಸುಬ್ರಮಣಿಯನ್ ಸ್ವಾಮಿ
ಆದರೆ ತನ್ನ ಎರಡನೇ ಅವಧಿಯ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನ ಸಮೀಪಿಸುತ್ತಿದ್ದಂತೆ ಟ್ರಂಪ್ ತನ್ನ ವರಸೆ ಬದಲಾಯಿಸಿಕೊಂಡಿದ್ದಾರೆ. ಚೀನಾದ ಜನಪ್ರಿಯ ಆ್ಯಪ್‌ಗಳಲ್ಲಿ ಒಂದಾದ ಟಿಕ್‌ಟಾಕ್ ಅನ್ನು ಬ್ಯಾನ್ ಮಾಡದೆ ಉಳಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ತನ್ನ ಗೆಳೆಯ ಮೋದಿ ಅವರನ್ನು ಪದಗ್ರಹಣಕ್ಕೆ ಆಹ್ವಾನಿಸದಿದ್ದರೂ ಚೀನಾ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ. ಚೀನಾ ಈವರೆಗೂ ಈ ಆಹ್ವಾನವನ್ನು ತಿರಸ್ಕರಿಸಲ್ಲ ಅಥವಾ ಸ್ವೀಕರಿಸಿಲ್ಲ. ಜಿನ್‌ಪಿಂಗ್ ನಡೆಯ ಮೇಲೆ ಅಮೆರಿಕ- ಚೀನಾದ ಮುಂದಿನ ನಂಟು ನಿರ್ಧಾರವಾಗಲಿದೆ.
My US friends are laughing away at reported India media news that “India has been invited” for Trump’s formal take over as US President. Waiter has been invited but PM was not!! Is it not an even bigger insult? Sack Waiter for accepting.
— Subramanian Swamy (@Swamy39) January 12, 2025
‘ಗಾಳಿ ಬಂದೆಡೆ ತೂರಿಕೊ’ ಎಂಬ ಮಾತಿನಂತೆ ಅಮೆರಿಕ ತನ್ನ ಲಾಭಕ್ಕೆ ಯಾವ ದಾರಿ ಬೇಕಾದರೂ ತುಳಿಯುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಒಟ್ಟಾರೆ ವಿಶ್ವದಲ್ಲಿ ತಾನೇ ‘ದೊಡ್ಡಣ್ಣ’ ಎಂದೆನಿಸಿಕೊಂಡಿರಬೇಕು ಎಂಬುದು ಅಮೆರಿಕದ ಇರಾದೆ. ಇದಕ್ಕೆ ಧಕ್ಕೆ, ತೊಡಕು ಉಂಟಾಗದಂತೆ ಸಾಗುವ, ಯೋಜನೆ ರೂಪಿಸುವ ಸಕಲ ಪ್ರಯತ್ನ ಅಲ್ಲಿನ ಅಧ್ಯಕ್ಷರದ್ದು. ತನ್ನ ಧೋರಣೆ ಸಾಕಾರಗೊಳಿಸಲು ತನ್ನ ಶತ್ರು ದೇಶ ಎನಿಸಿಕೊಂಡಿರುವ ಚೀನಾದೊಂದಿಗೆ ಬಂಧುತ್ವ ಬೆಳೆಸುವುದೇ ಅಮೆರಿಕ? ವ್ಯಾಪಾರ ಲಾಭಕ್ಕಾಗಿ ಚೀನಾವೂ ಅಮೆರಿಕದ ಆಹ್ವಾನ ಸ್ವೀಕರಿಸುವುದೇ? ಇವೆಲ್ಲವುದರ ನಡುವೆ ಟ್ರಂಪ್ ಅನ್ನು ನಂಬಿದ್ದ ಮೋದಿ ಗತಿಯೇನು?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.