ಈಸ್ಟರ್ ಹಬ್ಬಕ್ಕೆ ಜನರನ್ನು ಹೊತ್ತು ಸಂಚರಿಸುತ್ತಿದ್ದ ಬಸ್ಸೊಂದು ಭೀಕರ ರಸ್ತೆ ಅಪಘಾತಕ್ಕೊಳಗಾದ ಘಟನೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಗುರುವಾರ ಸಂಭವಿಸಿದೆ.
ಇಲ್ಲಿನ ಮಮಟ್ಲಕಲಾ ಸೇತುವೆಯಿಂದ ಸುಮಾರು 164 ಅಡಿಗಳಷ್ಟು ಆಳದಲ್ಲಿರುವ ಕಂದಕಕ್ಕೆ ಬಸ್ ಉರುಳಿ ಬಿದ್ದಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, 45 ಜನರು ಮೃತಪಟ್ಟಿದ್ದಾರೆ ಎಂದು ದೇಶದ ಉತ್ತರ ಪ್ರಾಂತ್ಯದ ಲಿಂಪೊಪೊದಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬದುಕುಳಿದ ಏಕೈಕ ಮಗು
ಅಪಘಾತದಲ್ಲಿ ಬದುಕುಳಿದ 8 ವರ್ಷದ ಮಗು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ. ಈ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.
An 8-year-old girl is said to be the sole survivor of a bus crash in South Africa that killed at least 45 people when the vehicle plunged off a bridge into a ravine. pic.twitter.com/pzG4dBVHd3
— Al Jazeera English (@AJEnglish) March 29, 2024
ಬೆಂಕಿಯಲ್ಲಿ ಅನೇಕ ದೇಹಗಳು ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದವು. ಕೆಲವು ಮೃತದೇಹಗಳು ವಾಹನದೊಳಗೆ ಸಿಲುಕಿಕೊಂಡಿದ್ದವು. ಈ ಬಸ್ ನೆರೆಯ ದೇಶವಾದ ಬೋಟ್ಸ್‌ವಾನಾದಿಂದ ಈಸ್ಟರ್ ತೀರ್ಥಯಾತ್ರೆಗೆಂದು ಜನಪ್ರಿಯ ಮೋರಿಯಾ ಪಟ್ಟಣಕ್ಕೆ ಪ್ರಯಾಣಿಸುತ್ತಿತ್ತು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಸಂಬಂಧ ಅಧಿಕಾರಿಗಳು ಮೃತಪಟ್ಟವರ ವಿವರಗಳನ್ನು ಕಲೆ ಹಾಕುತ್ತಿದ್ದು, ಘಟನೆಗೆ ಏನು ಕಾರಣ ಎಂಬುದನ್ನು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಸಾರಿಗೆ ಸಚಿವ ಸಿಂದಿಸಿವೆ ಚಿಕುಂಗ, ಸಂತ್ರಸ್ತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ರಸ್ತೆ ಸುರಕ್ಷತೆ ವಿಚಾರಕ್ಕೆ ಸಂಬಂಧಿಸಿ ದಕ್ಷಿಣ ಆಫ್ರಿಕಾವು ಕಳಪೆ ದಾಖಲೆಯನ್ನು ಹೊಂದಿದೆ ಎಂದು ಬಿಬಿಸಿ ವರದಿ ಮಾಡಿದೆ.
