ರೇಷ್ಮಾ ಎಂಬ ಮರಳುಗಾಡಿನ ಸಿರಿಗಂಧದ‌ ಪರಿಮಳ

Date:

Advertisements
ರೇಷ್ಮಾ ಹಾಡಿದ ‘ಲಂಬಿ ಜುದಾಯಿ’ ಗೀತೆ ಭಾರತ ಮಾತ್ರವಲ್ಲ ಪ್ರಪಂಚದ ಬಹುತೇಕ ಸಂಗೀತ ಪ್ರಿಯರ ಪ್ರೀತಿಗೆ ಪಾತ್ರವಾಗಿದೆ. ಇವತ್ತಿಗೂ ಕಾಡು ಕಟುಕರಂಥವರಲ್ಲೂ ಕರುಣೆ ಉಕ್ಕಿಸಬಲ್ಲ ಹೃದಯಸ್ಪರ್ಶಿ ಹಾಡು ಅದಾಗಿದೆ. ಹೀಗೆ ಅವಳ ಒಡಲು ಮತ್ತು ಕೊರಳ ತುಂಬಾ ಮನ ಮಿಡಿಯುವ ಆರ್ದ್ರಭಾವದ ನೂರಾರು ಲೋಕಗೀತೆಗಳು. ಒಂದು ಬಾರಿಯಲ್ಲ ನೂರಾರು ಬಾರಿ ಕೇಳಿದರೂ ಹೃನ್ಮನಗಳಿಗೆ ಮತ್ತೆ ಮತ್ತೆ ಕೇಳಬೇಕೆನ್ನುವ ಉನ್ಮಾದದ ಕಾತರ

‘ಚಲೋ ಏಕ್ ಬಾರ್ ಫಿರ್ಸೆ ಅಜನಬೀ ಬನ್ ಜಾಯೇ ಹಮ್ ದೋನೋ. ಬತಾವೋ ಕಿಸ್ ತರಹ್ ಅಜನಬೀ ಬನ್ ಜಾಯೇ ಹಮ್ ದೋನೋಂ..’ ಇದು ಸಾಹಿರ್ ಲೂಧಿಯಾನ್ವಿ ರಚನೆಯ ಮಧುರವಾದ ಪ್ರೇಮಗೀತೆ. ಈ ಜೋಡಿ ಹಾಡು ಪ್ರಬುದ್ಧ ಪ್ರೇಮಿಗಳನ್ನು ಹಿಡಿದು ಕಾಡಿಸುತ್ತದೆ.

ಮನ ಕರಗಿಸಬಹುದಾದ ಮತ್ತೊಂದು: ‘ಹಮ್ ತೇರೆ ಶಹರ್ ಮೇ ಆಯೇ ಹೈ ಮುಸಾಫಿರ್ ಕೇ ತರಹ್’ ಎಂಬ ದಾರುಣ ಸ್ವರದ ಪ್ಯಾಥೋ ಗೀತೆ. ಹಾಗೆಯೇ ಲಾಹೋರಿನ ಗುಲಾಮ ಅಲಿಯ ದಿವ್ಯಸ್ವರದ ‘ಚುಪ್ಕೆ ಚುಪ್ಕೆ ರಾತ್ ದಿನ್ ಆಂಸು ಬಹಾನಾ ಯಾದ್ ಹೈ…’ ಎಂಬ ಗಝಲ್ ಕೇಳುವುದೆಂದರೆ ಹಂಡೆಯೊಳಗಿನ ಹಾಲು ಕುಡಿದ ಖಂಡುಗ ಖುಷಿಯೋ ಖುಷಿ.

ಭಾವಕೋಶದ ತುಂಬಾ ಈ ಎಲ್ಲ ಹಾಡುಗಳು ಒಂದು ತೂಕವೆನಿಸಿದರೆ, ಕರಾಚಿಯ ರೇಷ್ಮಾ ಎಂಬ ಲೋಕಸಂಗೀತ ಸೂಫಿ ಗಾಯಕಿಯದೇ ಮತ್ತೊಂದು ವಜನ್. ನೆಲಮೂಲದ ದೇಸೀಸಂಗೀತ ಸಂವೇದನೆ ಮೂಲಕ ಜಾಗತಿಕ ಮಟ್ಟದಲ್ಲಿ ಆಕೆ ಮಾಡಿದ ಹೆಸರು ಕಂಡಾಪಟ್ಟೆ ದೊಡ್ಡದು. ಹೌದು ಅನಕ್ಷರಸ್ಥೆ ರೇಷ್ಮಾ, ಅಲೌಕಿಕ ಮತ್ತು ಸಂಗೀತ ಲೋಕವೆಂಬ ಇಹಪರದ ಪ್ರೀತಿಯ ಕಾರುಣ್ಯನಿಧಿ‌.

Advertisements

‘ಗೋರಿಯೇ ಮೈ ಜಾಣಾ ಪರ್ದೇಸ್… ಮಾಹಿರೇ’ ಎಂಬ ಸುದೀರ್ಘ ಆಲಾಪನೆಯ ಗಝಲ್. ಪರ್ವೇಜ್ ಮೆಹ್ದಿ ಹಸನ್ ಜತೆಗಿನ ರೇಷ್ಮಾಳ ಈ ಜುಗಲ್ ಗೀತೆಯು ಜಗತ್ತಿನ ತುಂಬಾ ಇದುವರೆಗೆ ಅದೆಷ್ಟು ಕೋಟಿ, ಕೋಟಿ ಜನರ ಮೆಚ್ಚುಗೆ ಗಳಿಸಿದೆಯೆಂಬ ಲೆಕ್ಕವೇ ಸಿಕ್ಕಿಲ್ಲ. ಏನಿಲ್ಲವೆಂದರೂ ನಾನೇ ನಾನೂರಕ್ಕೂ ಹೆಚ್ಚು ಬಾರಿ ಕೇಳಿದರೂ ಅದರ ಮೇಲಿನ ಮೋಹ ತೀರಿಲ್ಲ. ಅಂತೆಯೇ ಆಕೆಯನ್ನು ಆಮಂತ್ರಿಸಿ ಅವಳ ಸಂಗೀತಕ್ಕೆ ಮಾರುಹೋಗದೇ ಇರುವ ದೇಶಗಳೇ ಅಪರೂಪ.

ಭಾರತ, ಪಾಕಿಸ್ತಾನ ಸೇರಿದಂತೆ ಅಮೆರಿಕಾ, ರಷಿಯಾ, ಕೆನಡಾ, ನಾರ್ವೇ, ರುಮೇನಿಯಾ, ಟೊರಾಂಟೋ, ನೈರೋಬಿ, ಅಬುದಾಬಿ, ಟರ್ಕಿ ಹೀಗೆ ಹತ್ತಾರು ದೇಶಗಳ ಆಹ್ವಾನವನ್ನು ಮನ್ನಿಸಿ ಆಯಾ ದೇಶಗಳಿಗೆ ಹೋಗಿ ಹಾಡಿ ಬಂದಿದ್ದಾಳೆ. ಭಾರತ ಸಂಜಾತೆ ರೇಷ್ಮಾಗೆ ‘ಮುಂಬಯಿ’ ತುಂಬಾ ಪ್ರಿಯವಾದ ನಗರ. ಹಲವಾರು ಹಿಂದಿ ಸಿನೆಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಲು ಹೋದಾಗ ದಿಲೀಪಕುಮಾರ ಮನೆಯಲ್ಲಿ ಇರುತ್ತಿದ್ದಳು.  ರಾಜಕಪೂರ ಕೂಡಾ ರೇಷ್ಮಾ ಒಡನಾಟದ ಸಿನೆಮಾ ಸೆಲೆಬ್ರಿಟಿ.

ಮುಖ್ಯವಾಗಿ ಸುಭಾಷ್ ಘಾಯ್ ಅವರ ‘ಹೀರೋ’ ಸಿನೆಮಾಕ್ಕೆ ರೇಷ್ಮಾ ಹಾಡಿದ ‘ಲಂಬಿ ಜುದಾಯಿ’ ಗೀತೆ ಭಾರತ ಮಾತ್ರವಲ್ಲ ಪ್ರಪಂಚದ ಬಹುತೇಕ ಸಂಗೀತ ಪ್ರಿಯರ ಪ್ರೀತಿಗೆ ಪಾತ್ರವಾಗಿದೆ. ಇವತ್ತಿಗೂ ಕಾಡು ಕಟುಕರಂಥವರಲ್ಲೂ ಕರುಣೆ ಉಕ್ಕಿಸಬಲ್ಲ ಹೃದಯಸ್ಪರ್ಶಿ ಹಾಡು ಅದಾಗಿದೆ. ಹೀಗೆ ಅವಳ ಒಡಲು ಮತ್ತು ಕೊರಳ ತುಂಬಾ ಮನ ಮಿಡಿಯುವ ಆರ್ದ್ರಭಾವದ ನೂರಾರು ಲೋಕಗೀತೆಗಳು. ಒಂದು ಬಾರಿಯಲ್ಲ ನೂರಾರು ಬಾರಿ ಕೇಳಿದರೂ ಹೃನ್ಮನಗಳಿಗೆ ಮತ್ತೆ ಮತ್ತೆ ಕೇಳಬೇಕೆನ್ನುವ ಉನ್ಮಾದದ ಕಾತರ.

ಇನ್ನೇನು ಬೇಡ. ಆಕೆ ಹಾಡಿದ ‘ಹೈಯೋ ರಬ್ಬಾ….ನಯ್ಯೋಂ ಲಗ್ದಾ ದಿಲ್‌ಮೇರಾ…’  ಇದೊಂದೇ ಹಾಡು, ಸಂಗೀತ ಜಗತ್ತಿನ ಅವಳ ಮಹತ್ತರ ವ್ಯಕ್ತಿತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ನಿಲ್ಲಿಸಬಲ್ಲದು. ಇದನ್ನು ‌ಹಾಡುತ್ತಾ, ಹಾಡುತ್ತಾ… ಕೇಳುಗ ಸಹೃದಯರನ್ನು ತನ್ಮಯಲೋಕಕ್ಕೆ ಕರೆದೊಯ್ಯುತ್ತದೆ. ಅಂತಹ ಅಂತಃಕರಣದ ಭಾವ ಪರವಶ ಶಕ್ತಿ ಈ ಪದಕ್ಕಿದೆ. ಹಾಡುತ್ತಲೇ ಅಗ್ದೀ ಸೋಜ್ ಆಗಿ ರೇಷ್ಮಾ ತನ್ನ ಅಡಿಕೆ ಎಲೆಯ ರಸತುಂಬಿದ ನರುಗೆಂಪಿನ ಹಲ್ಲುಗಳಿಂದ ತುಟಿಗೆ ಒಸರುವ‌ ರಸವನ್ನು ದುಪ್ಪಟ್ಟಾದಿಂದ ಒರೆಸಿಕೊಳ್ಳುವುದು, ನಜಮ‌್ ಗಳನ್ನು ನೆನಪಿಸುವಂತೆ ಓಲಾಡುವ ಅವಳ ಝುಮ್ಕೆಗಳು, ಪಕ್ಕದಲ್ಲಿಟ್ಟುಕೊಂಡ ಪೀಕದಾನಿಯಲ್ಲಿ ಆಗಾಗ ಪಾನಿನ ರಸ ಸುರಿಸುವ ಈ ಎಲ್ಲ ಗಾಂವಟಿತನವೂ ಬಿಲ್ಕುಲ್ ಖುಷಿ ಕೊಡುತ್ತದೆ.

Reshma2

ರೇಷ್ಮಾಳ ಇರಾನಿ ಶೈಲಿಯ ಪಂಜಾಬಿ ಚೂಡಿದಾರದ ಉಡುಗೆ, ಅದೇ ತರಹದ ಮೋಹಕ ಮೈ ಭಾಷೆ‌… ಇನ್ನೂ ಇತ್ಯಾದಿಯೆಲ್ಲ ಶುದ್ಧ ನೆಲಧರ್ಮದ್ದು. ಅದರಲ್ಲೂ ಮತ್ತದು ರಾಜಸ್ಥಾನೀ ಮತ್ತು ಪಂಜಾಬಿ ಜನಪದ ಮೂಲದ ಮಾರ್ದವತೆಯಲ್ಲಿ ಅದ್ದಿ ತೆಗೆದಂತಿರುತ್ತದೆ. ಆಕೆ ನೆರೆಯ ಪಾಕಿಸ್ತಾನದ ಕರಾಚಿ ನಿವಾಸಿಯೇ ಆಗಿದ್ದರೂ ತಾನು ಹುಟ್ಟಿ ಬೆಳೆದ ರಾಜಸ್ತಾನೀ ಪ್ರಾಂತ್ಯದ ‘ಮಣ್ಣುಗುಣ’ ಮಮಕಾರದಿಂದ ಆಕೆಯ ಮನಸು ಬಿಡುಗಡೆಗೊಂಡಿಲ್ಲ. ಹೌದು ಅದು ಯಾವತ್ತೂ ಬೇರ್ಪಡದ ಭಾವಸುದೀಪ್ತ ಸಂಬಂಧ. ಅದು ಆಕೆ ಹಾಡಿದ ಲಂಬೀ ಜುದಾಯಿ ಹಾಡು ‘ಇಬ್ಭಾಗಗೊಂಡ ಮನಸುಗಳ’ ಅಗಲಿಕೆಯ ಸಂಕೇತ ಮಾತ್ರವಲ್ಲ. ಅದರಾಚೆಯ ಅಂತಃಕರಣ ಮತ್ತು ತಾಯ್ತನದ ಪ್ರತೀಕ.

ಅವಳ ಹಾಡುಗಳು ಕೇವಲ ಧ್ವನಿಭರಿತ ಹಾಡು ಹೂರಣ ಆಗಿರದೇ ಜೀವ ಮತ್ತು ಭಾವಗಳನ್ನು ಬೆಸೆಯುವ ಬಂಧುರಪ್ರೀತಿ. ಮಧುರ ಬಾಂಧವ್ಯದ ಮೆಡಿಸಿನ್. ಆಕೆಯೇ ಹೇಳುವಂತೆ ಭಕ್ತಿ ಔರ್ ಮೆಹನತ್. ಅಂದರೆ ಬೆವರು ಮತ್ತು ಭಕ್ತಿಯ ಲಾಲಿತ್ಯ. ಗಾಯಕಿ ರೇಷ್ಮಾ ಎದುರು ನೆರೆದಿರುವ ಶ್ರೋತೃಗಣದ ಗಂಡು ಹೆಣ್ಣುಗಳೆಂಬ ಪ್ರಬುದ್ಧರೆಲ್ಲ ಆಕೆಯ ಸಂಗೀತದ ಎಲ್ಲ ಜವಾರಿತನಗಳಿಗೆ ಫಿದಾ ಆಗುತ್ತಾರೆ. ರೇಷ್ಮಾ ಹೇಳುವಂತೆ ರಾಜಸ್ತಾನ ಮತ್ತು ಪಾಕಿಸ್ತಾನ ಇವೆರಡೂ ತನ್ನ ಎರಡು ಕಣ್ಣುಗಳು ಇದ್ದಂತೆ. ಅದು ವಿಶ್ವ ಕುಟುಂಬ ಪ್ರೀತಿ, ಮಮಕಾರಗಳ ಅನುಸಂಧಾನ.

ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ರೇಷ್ಮಾ ಹಾಡುಗಳಿಗೆ ಮರುಳಾಗಿ “ಮರಳಿ ಭಾರತಕ್ಕೆ ಬರುವುದಾದರೆ ನಿಮಗೆ ಭಾರತದ ಪೌರತ್ವ ನೀಡಲು ಭಾರತ ಸಿದ್ಧವಿದೆ” ಎಂದು ನೇರವಾಗಿ ಆಮಂತ್ರಣ ನೀಡುತ್ತಾರೆ. ಅದಕ್ಕೆ ರೇಷ್ಮಾ ಹೇಳಿದ್ದು “ನಿಮ್ಮ ಪ್ರೀತಿ ಗೌರವಗಳಿಗೆ ಕೃತಜ್ಞತೆಗಳು. ಈ ಪ್ರೀತಿ ಹೀಗೇ ಕೊನೆಯತನಕ ಇರಲಿ. ನಾನು ಹುಟ್ಟಿ ಬೆಳೆದ ರಾಜಸ್ತಾನದ ನನ್ನ ಹಳ್ಳಿಯ ಕಡೆಗೆ ಓಡಾಡಲು ಸರಿಯಾದ ಸಡಕುಗಳಿಲ್ಲ. ದಯವಿಟ್ಟು ರಸ್ತೆಗಳನ್ನು ನಿರ್ಮಿಸಿ” ಎಂದು ರೇಷ್ಮಾ ಮನವಿ ಮಾಡಿಕೊಳ್ಳುತ್ತಾಳೆ. ಕೂಡಲೇ ಇಂದಿರಾಗಾಂಧಿ ಒಪ್ಪಿಗೆ ನೀಡಿ, ರೇಷ್ಮಾ ಹುಟ್ಟಿಬೆಳೆದ ಬಿಕಾನೇರ್ ಜಿಲ್ಲೆಯ ಲೋಹಾ ಎಂಬ ಹಳ್ಳಿಗೆ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಮತ್ತು ರಸ್ತೆಗಳಿಗೆ ರೇಷ್ಮಾ ಹೆಸರನ್ನೇ ಇಡಲಾಗುತ್ತದೆ. ಇದು ರೇಷ್ಮಾ ಎಂಬ ಲೋಕಪ್ರಿಯ ಗಾಯಕಿಯ ಭಾರತದ ನೆಲಮೂಲ ಪ್ರೀತಿ. ಪ್ರಧಾನಮಂತ್ರಿ ಐ.ಕೆ. ಗುಜ್ರಾಲ್ ಸಹಿತ ರೇಷ್ಮಾ ಹಾಡುಗಳ ಅಭಿಮಾನಿ.

ಮುಖಾಮುಖಿಯಾಗಿ ಕುಂತು ಕೇಳುವ ರೇಷ್ಮಾ ಗಾಯನ ಗೋಷ್ಠಿಯೆಂದರೆ ಮಾಧುರ್ಯದ ಸಾಕ್ಷಾತ್ಕಾರ. ಕೇಳುಗರಲ್ಲೂ ಅಂತಹದೇ ಜೀವಸಂವೇದನೆಗಳು ದೃಗ್ಗೋಚರ. ಇದೆಲ್ಲವೂ ಸೇರಿಯೇ ಅಲ್ಲೊಂದು ದೇಸೀ ನೆಲೆಯ ಸ್ವರ ಸಾಮ್ರಾಜ್ಯವೇ ನಿರ್ಮಾಣ ಆಗಿರುತ್ತದೆ. ಹಾಡಿನ ಅಕ್ಷರಕ್ಷರಗಳು ಅರ್ಥ ಆಗಬೇಕೆಂಬ ಅಲವತ್ತು ಯಾರಿಗೂ ಇರುವುದಿಲ್ಲ. ಆದರೆ ಒಂದಂತೂ ಖರೇ. ಅವಳ ಹಾಡುಗಳ ಮೋಡಿ ಸಹೃದಯ ಶ್ರೋತೃಗಳ ಅರಿವಿಗೆ ಬಾರದೇ ರಸಾನುಭೂತಿಯ ಮಾಯಾಲೋಕದಲ್ಲಿ ಅಂತಃಶ್ರೋತಗೊಳ್ಳುತ್ತವೆ. ಸಾಕು ನಮ್ಮ ಬದುಕು ಸಾರ್ಥಕ ಆಯಿತೆಂಬ ಪರಮಾನಂದ. ಧನ್ಯೋಷ್ಮಿ ಎಂಬ ಆತ್ಮಸಂವೇದಿ ಸಂತೃಪ್ತಭಾವ. ಪಂಜಾಬಿ, ರಾಜಸ್ತಾನಿ, ಉರ್ದು, ಪಾರ್ಸಿ, ತುರ್ಕಿ, ಸಿಂಧ್ ಹೀಗೆ ಸಕಲೆಂಟು ಪ್ರಾಂತ್ಯ, ಪ್ರಾದೇಶಿಕ ಭಾವಗಳ ಜೀವಧ್ವನಿ ಆವಾಹನೆ. ಗಂಧರ್ವದೇವತೆ ರೂಪದಲಿ ಕೇಳುಗರ ಅಕ್ಕ ತಂಗಿಯೇ ಹಾಡುತ್ತಿರುವ ಅಪ್ಪುಗೆಯ ಭಾವ. ರೇಷ್ಮಾ ಅಂದರೆ ರಾಜಸ್ತಾನದ ಮರಳು ಭೂಮಿಯಲ್ಲಿ ಅರಳಿದ ಸಿರಿಗಂಧದ ಪರಿಮಳ.

ಇದನ್ನು ಓದಿದ್ದೀರಾ?: ದೇಶ ವಿಭಜನೆ | ಯಾವ ಪ್ರಭುತ್ವವೂ ಅಳಿಸಲಾಗದ ಅಶ್ರುಧಾರೆಯ ಕತೆ…

ಕರಾಚಿಯ ಆಕಾಶವಾಣಿ, ಟಿವಿಗಳಲ್ಲಿ ಹಾಡುವುದಷ್ಟೇ ಅಲ್ಲ. ಅನೇಕ ಬಾರಿ ಸುದೀರ್ಘ ಸಂದರ್ಶನ. ಜಗತ್ತಿನ ಹತ್ತಾರು ರಾಷ್ಟ್ರಗಳನ್ನು ಸುತ್ತಿ ಬಂದಾಕೆ. ಹಾಗೆ ಹೋದಲ್ಲಿಯೂ ಮಾಧ್ಯಮಗಳ ವಾತ್ಸಲ್ಯದ ಮುಖಾಮುಖಿ. ರಾಜಸ್ತಾನೀ ಮೂಲದ ಆಕೆ ಪಂಜಾಬಿ ಮತ್ತು ಉರ್ದುವಿನಲ್ಲಿ ಲೋಕಸಂಗೀತ ಹಾಡುವ ಮೂಲಕ ಅತಿಲೋಕ ಚೆಲುವೆ ಕೀರ್ತಿಗೆ ಭಾಜನಳು. ಅವಳ ಮೈಮಾತು, ಕಂಠಸಿರಿ, ಉಡುಪು, ಜರ್ದಾಪಾನ್ ಹೀಗೆ ಎಲ್ಲವೂ ಅಪ್ಪಟ ದೇಸೀತನದ ಪ್ರತಿರೂಪ.

‘ದಮಾದಮ್ ಮಸ್ತ್ ಖಲಂದರ್, ಲಂಬೀ ಜುದಾಯಿ, ಲಾಲ್ ಮೇರಿ’ ಇಂತಹ ಹತ್ತಾರು ಲೋಕಪ್ರಿಯ ಹಾಡುಗಳು. ‘ಗೋರಿಯೇ ಮೈ ಜಾಣಾ ಪರ್ದೇಸ್… ಮಾಹಿರೇ’ ತರಹದ ಸಂಕೀರ್ಣ ಗಝಲ್, ಸೂಫಿ ಗೀತೆಗಳು, ಖವ್ವಾಲಿ, ನಝ್ಮೇ, ಗಝಲ್, ಒಟ್ಟಾರೆ ಸಂಗೀತ ಲೋಕವನ್ನು ಸಂಪನ್ನಗೊಳಿಸಿವೆ. ತನ್ಮೂಲಕ ಪ್ರಪಂಚದ ಕೋಟ್ಯಂತರ ಜನರ ಹೃನ್ಮನ ಗೆದ್ದಿವೆ.

ರಾಜಸ್ತಾನದ ಬಿಕಾನೇರ್ ಜಿಲ್ಲೆಯ ‘ಲೋಹಾ’ ಎಂಬ ಹಳ್ಳಿಯ ಅಲೆಮಾರಿ – ಬುಡಕಟ್ಟು ಬಂಜಾರ ಕುಟುಂಬದಲ್ಲಿ ಹುಟ್ಟಿ ಬೆಳೆದಾಕೆ ರೇಷ್ಮಾ. ಆಕೆಯ ಬಾಲ್ಯದ ಹೆಸರು ಪಠಾಣಿ ಬೇಗಂ. ಪಠಾಣಿಗೆ ಸಹಜವಾಗಿ ಮರಳುಗಾಡಿನ ಕುದುರೆ, ಒಂಟೆಗಳ ಒಡನಾಟ. ಅವಳ ಅಪ್ಪ ಹಾಜಿ ಮಹ್ಮದ್ ಮುಸ್ತಾಫ್ ಪಶುಪಾಲಕ. ಒಂಟೆ, ಕುದುರೆ, ಆಕಳುಗಳ‌ ಸಾಧಾರಣ ವ್ಯಾಪಾರಿ. ಬಾಲ್ಯದಲ್ಲಿಯೇ ಲೋಕಸಂಗೀತದ, ಅದರಲ್ಲೂ ಬಂಜಾರ ಸಂಸ್ಕೃತಿಯ ಹಾಡು, ಕುಣಿತ, ಉಡುಗೆ, ತೊಡುಗೆಗಳ ದಟ್ಟಪ್ರಭಾವ. ಪ್ರಮುಖವಾಗಿ ಸೂಫಿ ಸಂತರ ಜಾತ್ರೆ, ಭಜನೆಗಳ ಗಾಯನ ಪ್ರಭಾವ. ಇದನ್ನು ಹೊರತು ಪಡಿಸಿದರೆ ಯಾವುದೇ ಶಾಲೆ, ಮದರಸಾ ಅಕ್ಷರಗಳ ಪರಿಚಯ‌ ಅಕ್ಷರಶಃ ಅವಳಿಗಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರೆತು ದೇಶ ಇಬ್ಭಾಗವಾದ ನಂತರ ಇವರ ಕುಟುಂಬ ಪಾಕಿಸ್ತಾನಕ್ಕೆ ಸೇರುತ್ತದೆ. ಅಲ್ಲಿಗೆ ಸೇರುವಷ್ಟರಲ್ಲಿ ಹಾಡುಗಾರಿಕೆ ಶುರುವಾಗಿತ್ತು.

ಆರಂಭದಲ್ಲಿ ಕರಾಚಿಯ ಆಕಾಶವಾಣಿಗೆ ರೇಷ್ಮಾ ಕಂಠಸಿರಿಯನ್ನು ಪರಿಚಯಿಸಿದ್ದು ಸಲೀಂ ಗಿಲಾನಿ. ತದನಂತರ ಟಿವಿ, ಅಲ್ಬಮ್ ಸಾಂಗ್ಸ್, ಸಿನೆಮಾ ಹಿನ್ನೆಲೆ ಗಾಯನಗಳದ್ದು ಹಿಂತಿರುಗಿ ನೋಡದ ಹಿರಿಮೆ. ಅಲೆಮಾರಿ ಕುಟುಂಬಕ್ಕೆ ಸೇರಿದ ಆಕೆ ಮಾಂಸಾಹಾರಿ ಆಗಿರಲಿಲ್ಲ. ತಾಲಿ, ತಂದೂರಿ ರೋಟಿ, ಸಬ್ಜಿ ಅವಳಿಗೆ ಪ್ರಿಯವಾದ ಆಹಾರ. ಅದನ್ನು ಖುದ್ದು ತಾನೇ ತಯಾರಿಸಿಕೊಳ್ಳುತ್ತಿದ್ದಳು. ಮಾವನ ಮಗನನ್ನೇ ಮದುವೆಯಾಗಿದ್ದ ಅವಳಿಗೆ ಎರಡು ಹೆಣ್ಣು ಎರಡು ಗಂಡುಮಕ್ಕಳು. ಮಗ ಕೂಡಾ ಗಝಲ್ ಗಾಯಕನಾಗಿದ್ದ.

ಸೂಫಿ, ಪೀರ್, ಫಕೀರರ ಸಾಹಿತ್ಯದಷ್ಟೇ ಅವರ ಗೋರಿ, ಸಮಾಧಿ, ಮಜಾರ, ದರ್ಗಾಗಳೆಂದರೆ ಆಕೆಗೆ ಪಂಚಪ್ರಾಣ. ಅವುಗಳ ಭೇಟಿಯೆಂದರೆ ಲೋಕವರುಷದ ಅಪರಿಮಿತ ಪ್ರೀತಿ. ಹಾಜಿ ಅಲಿಬಾಬಾ, ಅಮೀರ್ ಖುಷ್ರೋ, ಶಾಬಾಜ್ ಖಲಂದರ್, ಸಿಜಾಬುದ್ದೀನ್ ವಲಿಯಾ ಮಜಾರು, ದರ್ಗಾಗಳಿಗೆ ಭೆಟ್ಟಿ ಕೊಟ್ಟು, ಹಣೆಹಚ್ಚಿ  ಸೆರಗೊಡ್ಡಿ ನಮಸ್ಕರಿಸುವುದು ರೂಢಿ. ಸಮಾಧಿಗಳ ಸಾನಿಧ್ಯದಲ್ಲಿ ತಾಸೊಪ್ಪತ್ತು ನಿವಾಂತ ಕುಂತು ಹಾಡಿದಾಗಲೇ ಆಕೆಗೆ ಅದೇನೋ ದೈವದರ್ಶನದ ಸಮಾಧಾನ.

Reshma1

ಪ್ರೌಡ್ ಆಫ್ ಪಾಕಿಸ್ತಾನ್ ಸೇರಿದಂತೆ ಪಾಕಿಸ್ತಾನ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳು ರೇಷ್ಮಾ ಮುಡಿಯೇರಿವೆ‌. ಪಾಕಿಸ್ತಾನದ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ರೇಷ್ಮಾ ಗಾಯನದ ಕಟ್ಟಾ ಅಭಿಮಾನಿ. ಗಂಟಲು ಕ್ಯಾನ್ಸರ್‌ನಿಂದ ಅನೇಕ ವರ್ಷಗಳ ಕಾಲ ನರಳುತ್ತಲೇ ರೇಷ್ಮಾ ತನ್ನ ಗಂಟಲ ಪ್ರಾಣದಲ್ಲಿ ತ್ರಾಣ ಇರುವತನಕ ಹಾಡಿದಳು. ಆಕೆಗೆ ಬದುಕಿನ ಕೊನೆಯ ಗಳಿಗೆಗಳಲ್ಲಿ ಸೂಕ್ತ ಇಲಾಜು, ಇತರೆ ನೆರವುಗಳು ದೊರಕಲಿಲ್ಲ ಎಂದು ಹೇಳಲಾಗುತ್ತದೆ. ತಿಂಗಳ ಪರ್ಯಂತ ಕೋಮಾ ಸ್ಥಿತಿಯಲ್ಲೇ ಕಳೆದು 03.11. 2013 ರಂದು ರೇಷ್ಮಾ ಲಾಹೋರಿನಲ್ಲಿ ನಿಧನರಾದರು. ಲೋಕಸಂಗೀತವೆಂಬ ಅತಿಲೋಕ ಸೌಂದರ್ಯದ ಅಮರ ಗಾಯಕಿ ತೀರಿಹೋಗಿ ಹತ್ತು ವರುಷಗಳೇ ಕಳೆದಿವೆ. ದಶಕ ಕಳೆದರೂ ಅವಳ ಹಾಡುಗಳ ಜನಪ್ರಿಯತೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಅದಿನ್ನೂ ಹೆಚ್ಚುತ್ತಲೇ ನಡೆದಿದೆ.

ಕಡಕೋಳ
ಮಲ್ಲಿಕಾರ್ಜುನ ಕಡಕೋಳ
+ posts

ಸಾಹಿತಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

Download Eedina App Android / iOS

X