ಕಳೆದ ಮೂರು ವರ್ಷಗಳಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಸಂಘರ್ಷ ನಡೆಯುತ್ತಿದೆ. ಉಕ್ರೇನ್ ಮೇಲೆ ರಷ್ಯಾ ನಿರಂತರವಾಗಿ ದಾಳಿ ಮಾಡುತ್ತಿದೆ. ಈ ನಡುವೆ, ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಣೆಯ ಮಾತುಕತೆಗಳು ಆರಂಭವಾಗಿದ್ದವು. ಆದರೆ, ಇಂದು (ಶನಿವಾರ) ಮಾತುಕತೆ ವಿಫಲವಾದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ಮತ್ತೆ ದಾಳಿ ನಡೆಸಿದೆ. ರಷ್ಯಾ ನಡೆಸಿದ ಡ್ರೋನ್ ದಾಳಿಗೆ ಉಕ್ರೇನ್‌ನ ಒಂಬತ್ತು ಮಂದಿ ಬಲಿಯಾಗಿದ್ದಾರೆ.
ರಷ್ಯಾ ಹಾರಿಸಿದ ಡ್ರೋನ್ ಉಕ್ರೇನ್‌ನ ಈಶಾನ್ಯ ಸುಮಿ ಪ್ರದೇಶದ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದೆ. ರಷ್ಯಾ ಹಾರಿಸಿದ ಡ್ರೋನ್ ಚಲಿಸುತ್ತಿದ್ದ ಬಸ್ ಮೇಲೆ ದಾಳಿ ಮಾಡಿದ್ದು, ಬಸ್‌ನಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದಾರೆ.
ದಾಳಿ ಬಗ್ಗೆ ಸುಮಿ ಸ್ಥಳೀಯ ಆಡಳಿತವು ಮಾಹಿತಿ ನೀಡಿದ್ದು, “ರಷ್ಯಾ ಮತ್ತೊಂದು ಯುದ್ಧ ಅಪರಾಧ ಎಸಗಿದೆ. ನಾಗರಿಕ ಸಾರಿಗೆಯ ಮೇಲೆ ದುರುದ್ದೇಶದಿಂದ ದಾಳಿ ನಡೆಸಿ, ಅಮಾಯಕ ನಾಗರಿಕರನ್ನು ಕೊಂದಿದೆ” ಎಂದು ಆರೋಪಿಸಿದೆ.
ಶುಕ್ರವಾರ ಬೆಳಗ್ಗೆ ಉಭಯ ರಾಷ್ಟ್ರಗಳು ಕದನ ವಿರಾಮ ಸ್ಥಾಪಿಸುವುದಕ್ಕಾಗಿ ಟರ್ಕಿಯಲ್ಲಿ ಸಭೆ ಸೇರಿ, ಮಾತುಕತೆ ನಡೆಸಿದ್ದವು. ನಿರಂತರವಾಗಿ ನಡೆದ ಮಾತುಕತೆಯಲ್ಲಿ ಯಾವುದೇ ಮಹತ್ವದ ನಿರ್ಧಾರ ಅಥವಾ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಒಮ್ಮತ ವ್ಯಕ್ತಪಡಿಸಿಲ್ಲ. ಉಭಯ ರಾಷ್ಟ್ರಗಳ ಖೈದಿಗಳ ವಿನಿಮಯಕ್ಕೆ ಇಬ್ಬರೂ ಸಮ್ಮತಿಸಿದರೂ, ಸಂಘರ್ಷ ಕೊನೆಗೊಳಿಸಲು ಅಗತ್ಯವಾದ ಪ್ರಮುಖ ಷರತ್ತುಗಳಿಗೆ ಎರಡೂ ರಾಷ್ಟ್ರಗಳ ಭಿನ್ನಾಭಿಪ್ರಾಯ ಹೊಂದಿದ್ದವು. ಹೀಗಾಗಿ, ಮಾತುಕತೆ ವಿಫಲವಾಗಿದೆ ಎಂದು ವರದಿಯಾಗಿದೆ.
ಆ ಸಭೆಗೂ ಮುನ್ನ ಉಕ್ರೇನ್ ಅಧ್ಯಕ್ಷ ವ್ಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ, ಫ್ರಾನ್ಸ್, ಜರ್ಮನಿ, ಯುಕೆ ಮತ್ತು ಪೋಲೆಂಡ್ ನಾಯಕರೊಂದಿಗೆ ಚರ್ಚಿಸಿದ್ದಾರೆ. ಆ ಬಳಿಕ ರಷ್ಯಾದೊಂದಿಗೆ ಸಭೆ ನಡೆದಿದೆ. ಆದರೆ, ಸಭೆಯಲ್ಲಿ “ಪೂರ್ಣ ಮತ್ತು ಬೇಷರತ್ತಾದ ಕದನ ವಿರಾಮ ಮತ್ತು ಹತ್ಯೆಗಳನ್ನು ಕೊನೆಗೊಳಿಸಬೇಕು ಎಂಬ ಷರತ್ತನ್ನು ರಷ್ಯಾ ತಿರಸ್ಕರಿಸಿದೆ” ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಭಾರತ-ಪಾಕ್ ಸಂಘರ್ಷ | ಜಾಗತಿಕವಾಗಿ ಭಾರತಕ್ಕೆಷ್ಟು ಬೆಂಬಲ ಸಿಕ್ಕಿತು?
“ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಸಿದ್ಧವಾಗುವವರೆಗೆ ರಷ್ಯಾದ ಮೇಲೆ ಒತ್ತಡ ಹೇರಬೇಕು. ಕದನ ವಿರಾಮವು ಶಾಂತಿ ಸಾಧಿಸುವುದರ ಮೊದಲ ಹೆಜ್ಜೆಯಾಗಿದೆ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ ಪಡೆಗಳು ಉಕ್ರೇನ್‌ನ ಸರಿಸುಮಾರು ಐದನೇ ಒಂದು ಭಾಗವನ್ನು ಆಕ್ರಮಿಸಿಕೊಂಡಿವೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರು ಕೈವ್ ಪ್ರದೇಶವನ್ನು ರಷ್ಯಾ ಸುಪರ್ದಿಗೆ ನೀಡಬೇಕು, ನ್ಯಾಟೋಗೆ ಸೇರುವ ನಿರ್ಧಾರವನ್ನು ಉಕ್ರೇನ್ ಕೈಬಿಡಬೇಕು, ತಟಸ್ಥ ನಿಲುವನ್ನು ಅಳವಡಿಸಿಕೊಳ್ಳಬೇಕು ಎಂದು ತಾಕೀತು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.