ದೇಶದ ಅತೀ ದೊಡ್ಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಯೆಟ್ನಾಂ ನ ರಿಯಲ್ ಎಸ್ಟೇಟ್ ಉದ್ಯಮಿ, ಶತ ಕೋಟ್ಯಾಧೀಶೆ ಟ್ರೂಂಗ್ ಮೈ ಲಾನ್ ಎಂಬುವವರಿಗೆ ಸ್ಥಳೀಯ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.
67 ವರ್ಷದ ಉದ್ಯಮಿ ಲಾನ್ ಅವರು ವಾನ್ ಥಿನ್ ಪಾತ್ ಎಂಬ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿದ್ದು, 2022ರಲ್ಲಿ ಬಂಧಿತರಾಗಿದ್ದರು. 12 ಬಿಲಿಯನ್ ಡಾಲರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಇವರ ಮೇಲಿದೆ ಎಂದು ಸ್ಥಳೀಯ ಪತ್ರಿಕೆಗಳು ಆರೋಪಿಸಿವೆ.
2012ರಿಂದ 2022ರವರೆಗೂ ಲಾನ್ ಅವರು ಹಲವು ಬಿಲಿಯನ್ ಡಾಲರ್ ಹಣ ಪಡೆಯಲು ಸಾವಿರಾರು ಅಗೋಚರ ಕಂಪನಿಗಳ ಮೂಲಕ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಪ್ರಮುಖ ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿಯೆಟ್ನಾಂ ಸರ್ಕಾರ ಭ್ರಷ್ಟಾಚಾರವನ್ನು ನಿಯಂತ್ರಿಸುವ ಸಲುವಾಗಿ 2022ರಲ್ಲಿ ತೀವ್ರ ಕ್ರಮ ಕೈಗೊಂಡ ನಂತರ ಲಾನ್ ಅವರನ್ನು ಬಂಧಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಪ್ರಣಾಳಿಕೆ- ಸುಳ್ಳು ಸುಳ್ಳೇ ಮುಸ್ಲಿಮ್ ಲೀಗ್ ಮೊಹರು ಹಾಕಿದ ಮೋದಿ
ಸರ್ಕಾರದ ಭ್ರಷ್ಟಾಚಾರ ನಿಯಂತ್ರಣ ಕ್ರಮದ ಭಾಗವಾಗಿ ವಿಯೆಟ್ನಾಂ ಮಾಜಿ ಅಧ್ಯಕ್ಷ ವೊ ವಾಮ್ ತೌಂಗ್ ಕೂಡ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು.
ಟ್ರೂಂಗ್ ಮೈ ಲಾನ್ ಅವರು ವಿಯೆಟ್ನಾಂ ನ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಇವರ ಸಂಸ್ಥೆ ಐಶಾರಾಮಿ ವಸತಿ ಕಟ್ಟಡಗಳು, ಕಚೇರಿಗಳು ಶಾಪಿಂಗ್ ಮಾಲ್‌ಗಳು ಹಾಗೂ ಹೋಟೆಲ್‌ಗಳನ್ನು ನಿರ್ಮಿಸುತ್ತದೆ.
ಲಾನ್ ಅವರ ಕಂಪನಿಯು ಖರೀದಿದಾರರನ್ನು ಸೆಳೆಯಲು ವಿನಾಯಿತಿಗಳು ಹಾಗೂ ಚಿನ್ನದ ಕೊಡುಗೆಗಳನ್ನು ನೀಡುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮ ಕುಸಿದ ಪರಿಣಾಮ ಲಾನ್ ಅವರ ಕಂಪನಿ ನಿರ್ಮಿಸಿದ ಹಲವು ಕಟ್ಟಡಗಳು ಖಾಲಿಯಾಗಿ ಉಳಿದಿವೆ.
ವಿಯೆಟ್ನಾಂನ ಪ್ರಮುಖ ರಾಜಕಾರಣಿ, ಕಮ್ಯೂಮಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ನುಗೆಯನ್ ಫೂ ಟ್ರೋಂಗ್, ಭ್ರಷ್ಟಾಚಾರ ವಿರೋಧಿ ಅಭಿಯಾನ ದೀರ್ಘಕಾಲದವರೆಗೂ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
