- ಅಮೆಜಾನ್‌ನಿಂದ ಉದ್ಯೋಗ ಕಳೆದುಕೊಂಡವರ ಸಂಖ್ಯೆ 27 ಸಾವಿರಕ್ಕೆ ಏರಿಕೆ
- 3 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಶೇ. 9ರಷ್ಟು ಉದ್ಯೋಗಿಗಳ ವಜಾ
ಇ-ವಾಣಿಜ್ಯ ದೈತ್ಯ ಸಂಸ್ಥೆ ಅಮೆಜಾನ್ ತನ್ನ ಎರಡನೇ ಸುತ್ತಿನ ಉದ್ಯೋಗ ಕಡಿತದಲ್ಲಿ ಜಾಗತಿಕವಾಗಿ 9 ಸಾವಿರ ಮಂದಿಯನ್ನು ಮನೆಗೆ ಕಳಿಸುವುದಾಗಿ ತಿಳಿಸಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಕಂಪನಿಯ ಸಿಇಒ ಆಂಡಿ ಜೆಸ್ಸಿ, ಪಿಎಕ್ಸ್‌ಟಿ, ಜಾಹಿರಾತು ಮತ್ತು ಟ್ವಿಟ್ಚ್ ವಿಭಾಗಗಳಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದ್ದಾರೆ.
ಕಳೆದ ಜನವರಿಯಲ್ಲಿ ಆರ್ಥಿಕ ವೆಚ್ಚ ಕಡಿತಗೊಳಿಸುವುದಕ್ಕಾಗಿ 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇನ್ನು ಎರಡನೇ ಸುತ್ತಿನಲ್ಲೂ ಹಣಕಾಸು ನಿರ್ವಹಣೆಯನ್ನು ಸರಿದೂಗಿಸುವುದಕ್ಕಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿರುವುದಾಗಿ ಕಂಪನಿ ಸಿಇಒ ತಿಳಿಸಿದ್ದಾರೆ.
ಇದರೊಂದಿಗೆ ಈ ವರ್ಷ ಅಮೆಜಾನ್‌ನಿಂದ ಒಟ್ಟು 27 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಈ ಮೂಲಕ ಸರಿಸುಮಾರು 3 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಶೇ. 9ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಮುಂದಿನ ವಾರದಲ್ಲಿ 9 ಸಾವಿರ ಮಂದಿಗೂ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ.
ಸದ್ಯ ಕಂಪನಿಯಲ್ಲಿ ವಾರ್ಷಿಕ ಯೋಜನೆ ನಡೆಯುತ್ತಿದ್ದು, ಸಂಸ್ಥೆಯು ತನ್ನ ಕೆಲ ವೆಚ್ಚ ಸರಿದೂಗಿಸುವುದಕ್ಕಾಗಿ ಉದ್ಯೋಗ ಕಡಿತದ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆಜಾನ್ ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿದೆಯಾದರೂ ಹೊಸ ನೇಮಕಾತಿಗಳನ್ನೂ ನಡೆಸಲಾಗುತ್ತಿದೆ.
ಉದ್ಯೋಗ ಕಡಿತದ ಬೆನ್ನಲ್ಲೇ ಅಮೆಜಾನ್ ಷೇರುಗಳು ಸೋಮವಾರ ಜಾಗತಿಕವಾಗಿ ಶೇ. 2ರಷ್ಟು ಕುಸಿತ ಕಂಡಿವೆ. ಮೈಕ್ರೋಸಾಫ್ಟ್ ಕಾರ್ಪ್ ಮತ್ತು ಆಲ್ಫಾಬೆಟ್ ಇಂಕ್ ಸೇರಿದಂತೆ ವಿಶ್ವದ ಜನಪ್ರಿಯ, ಬೃಹತ್ ಕಂಪನಿಗಳಲ್ಲೇ ಈ ರೀತಿಯ ಉದ್ಯೋಗ ಕಡಿತಗಳು ನಡೆಯುತ್ತಿರುವುದು ಭಾರೀ ಆತಂಕ ಮೂಡಿಸಿದೆ.