- ಬಾಬರಿ ಮಸೀದಿ ರಾಮನ ಜನ್ಮಭೂಮಿ ಅಲ್ಲ ಎಂದು ಟ್ವೀಟ್ ಮಾಡಿದ್ದ ನಟ
- ಚೇತನ್ ಅಹಿಂಸಾ ವಿರುದ್ಧ ಬಲಪಂಥೀಯ ಸಂಘಟನೆಗಳಿಂದ ದೂರು
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಟ ಚೇತನ್ ಅಹಿಂಸಾ ಅವರನ್ನು ಶೇಷಾದ್ರಿಪುರ ಪೊಲೀಸರು ಮಂಗಳವಾರ ಬಂಧಿಸಿದ್ದು, ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.
ತಮ್ಮ ನೇರ ಹೇಳಿಕೆಗಳಿಂದಲೇ ಸದಾ ಸುದ್ದಿಯಾಗುವ ಚೇತನ್ ಅಹಿಂಸಾ ಅವರು ಅವರು ಮಾರ್ಚ್ 20ರಂದು ಹಿಂದುತ್ವದ ಕುರಿತು ಟ್ವೀಟ್‌ವೊಂದನ್ನು ಮಾಡಿದ್ದರು. ಅವರ ಟ್ವೀಟ್ ಇದೀಗ ವಿವಾದಕ್ಕೀಡಾಗಿದೆ. ಶಿವಕುಮಾರ್ ಎಂಬುವವರ ದೂರಿನ ಆಧಾರದ ಮೇಲೆ ಶೇಷಾದ್ರಿಪುರ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಹಿಂದುತ್ವದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ದೂರಿನ ಅನ್ವಯ ಚೇತನ್ ಅವರನ್ನು ಬಂಧಿಸಲಾಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲೂ ಚೇತನ್ ಅವರನ್ನು ಬಂಧಿಸಲಾಗಿತ್ತು. ಒಂದು ವರ್ಷದ ಅಂತರದೊಳಗೆ ಎರಡನೇ ಬಾರಿ ಬಂಧನಕ್ಕೊಳಗಾಗಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಪೊಲೀಸ್ ಅಧಿಕಾರಿ, “ಶಿವಕುಮಾರ್ ಎಂಬುವವರು ದೂರು ನೀಡಿದ್ದರು. ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಚೇತನ್ ಅವರನ್ನು ಅವರ ಮನೆಯಲ್ಲಿಯೇ ಮಂಗಳವಾರ ಬೆಳಗ್ಗೆ ಬಂಧಿಸಲಾಗಿದೆ” ಎಂದು ಮಾಧ್ಯಮಗಳಿಗೆ ತಿಳಿಸಿದರು.
ಬಲಪಂಥೀಯ ಸಂಘಟನೆಗಳ ದೂರಿನ ಅನ್ವಯ ಐಪಿಸಿ ಸೆಕ್ಷನ್ 295ಎ, 505ಬಿ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ಅನ್ವಯವೇ ನಟ ಚೇತನ್ ಅಹಿಂಸಾ ಬಂಧಿಸಲಾಗಿದೆ. ನ್ಯಾಯಾಯಲವು ಚೇತನ್ ಅಹಿಂಸಾ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಚೇತನ್ ಅಹಿಂಸಾ ಟ್ವೀಟ್ನಲ್ಲೇನಿದೆ?
“ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎಂದು ಸಾವರ್ಕರ್ ಸುಳ್ಳು ಹೇಳಿದ್ದರು” ಎಂದು ಚೇತನ್ ಅಹಿಂಸಾ ಟ್ವೀಟ್ ಮಾಡಿದ್ದಾರೆ.
https://twitter.com/ChetanAhimsa/status/1637866290009485314?s=20
ಮುಂದುವರೆದು, “1992ರಲ್ಲಿ ಬಾಬರಿ ಮಸೀದಿ ರಾಮನ ಜನ್ಮಭೂಮಿ ಎಂದು ಸುಳ್ಳು ಹೇಳಿದ್ದರು. ಇದೀಗ ಉರಿಗೌಡ-ನಂಜೇಗೌಡ ಎನ್ನುವವರು ಟಿಪ್ಪು ಸುಲ್ತಾನನನ್ನು ಕೊಂದಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ” ಎಂದಿದ್ದರು.