ನೂತನ ಬಿಜೆಪಿ ಮಧ್ಯಪ್ರದೇಶ ಸರ್ಕಾರವು ವಿಧಾನಸಭೆ ಅಧಿವೇಶನದ ಮೊದಲ ದಿನದಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ತೆಗೆದು ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಳವಡಿಸಿದೆ.
ಸಭಾಧ್ಯಕ್ಷರ ಪೀಠದ ಹಿಂದೆ ಇರುವ ಇಬ್ಬರು ಮಹನೀಯರಲ್ಲಿ ಇದು ಒಂದಾಗಿತ್ತು. ಇನ್ನೊಂದು ಮಹಾತ್ಮ ಗಾಂಧಿಯವರದು. ಭಾವಚಿತ್ರವನ್ನು ಬದಲಾಯಿಸಿದ ನಂತರ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಈ ಬದಲಾವಣೆಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ವಿದಾನಸಭೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕಲು ನಮ್ಮ ಪಕ್ಷದ ಅಭ್ಯಂತರವಿಲ್ಲ. ಆದರೆ ನೆಹರೂ ಅವರ ಭಾವಚಿತ್ರವನ್ನು ತೆಗೆದುಹಾಕುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
“ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಇತಿಹಾಸ ಅಳಿಸಿಹಾಕಲು ಹಗಲಿರುಳು ಶ್ರಮಿಸುತ್ತಿದೆ. ನೆಹರು ಅವರ ಭಾವಚಿತ್ರವನ್ನು ತೆಗೆದುಹಾಕುವುದನ್ನು ಪಕ್ಷವು ಖಂಡಿಸುತ್ತದೆ ಮತ್ತು ಇದು ಬಿಜೆಪಿಯ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಪಕ್ಷವು ಭಾವಚಿತ್ರವನ್ನು ತಕ್ಷಣ ಮರುಸ್ಥಾಪಿಸಲು ಒತ್ತಾಯಿಸುತ್ತದೆ. ಇಲ್ಲದಿದ್ದರೆ ನಾವು ಮುಂದಿನ ದಿನಗಳಲ್ಲಿ ಭಾವಚಿತ್ರವನ್ನು ಅದೇ ಸ್ಥಳದಲ್ಲಿ ಮರುಸ್ಥಾಪಿಸುತ್ತೇವೆ” ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ಸಂಸ್ಕೃತಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಿಜೆಪಿ ಅಂತಃಕಲಹ
ಸ್ಪೀಕರ್ ಗಿರೀಶ್ ಗೌತಮ್ ಅವರ ಆದೇಶದ ಮೇರೆಗೆ ಜುಲೈನಲ್ಲಿ ಬದಲಾಯಿಸಲಾಗಿದೆ ಎಂದು ವಿಧಾನಸಭೆ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ತಿಂಗಳ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 230 ಸ್ಥಾನಗಳಲ್ಲಿ 163 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಿದೆ. ಕಾಂಗ್ರೆಸ್ 66 ಸ್ಥಾನ ಪಡೆದುಕೊಂಡಿದೆ.
ಪೂರ್ಣಾವಧಿ ಸ್ಪೀಕರ್ ಹುದ್ದೆಗೆ ಬಿಜೆಪಿ ಮಾಜಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ನಾಮನಿರ್ದೇಶನ ಮಾಡಿದೆ. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಮೂವರು ಮಾಜಿ ಕೇಂದ್ರ ಸಚಿವರಲ್ಲಿ ತೋಮರ್ ಕೂಡ ಒಬ್ಬರು.
ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.