3.59 ಲಕ್ಷ ಅತ್ಯಾಚಾರ ಪ್ರಕರಣ | ರಾಮಮಂದಿರದ ಬಳಿಕ ನಿರ್ಮಾಣವಾಗುವುದೇ ರಾಮರಾಜ್ಯ?

Date:

Advertisements

ದೇಶವನ್ನ ರಾಮರಾಜ್ಯ ಆಗಿ ಕಾಣಬೇಕು ಎಂದು ಮಹಾತ್ಮ ಗಾಂಧೀಜಿ ಅವರು ಕನಸು ಕಂಡಿದ್ದರು. ಆ ಕನಸನ್ನ ನನಸು ಮಾಡತೀವಿ ಅಂತ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಸರ್ಕಾರಗಳು ಹೇಳತಾನೇ ಇದಾವೆ. ಆದರೆ, ಇಂದಿಗೂ ಆ ಕನಸು ಕನಸಾಗೇ ಉಳಿದಿದೆ. ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಹಿಂಸೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಹೊರತು ಯಾವತ್ತೂ ಕಡಿಮೆಯಾಗಿಲ್ಲ. ಅದು ಎಷ್ಟರ ಮಟ್ಟಿಗೆ ಅಂದರೆ, ಪ್ರತಿ ಗಂಟೆಗೆ ಸರಾಸರಿ 4 ಅತ್ಯಾಚಾರಗಳು ಹಾಗೂ ಪ್ರತಿ 2 ನಿಮಿಷಕ್ಕೊಂದು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ.

ಕಳೆದ ವರ್ಷ ಅಂದರೆ, 2022ರಲ್ಲಿ ಭಾರತದಲ್ಲಿ 31,516 ಅತ್ಯಾಚಾರ ಪ್ರಕರಣಗಳು ಮತ್ತು 4,45,256 ದೌರ್ಜನ್ಯ ಪ್ರಕರಣಗಳು ನಡೆದಿವೆ. ಅಂದರೆ, ದಿನಕ್ಕೆ ಸರಾಸರಿ 86 ಅತ್ಯಾಚಾರ ಮತ್ತು ಪ್ರತಿ ಗಂಟೆಗೆ ಸರಾಸರಿ 49 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಿವೆ. ಇದು ದೂರು ದಾಖಲಾದ ಅಥವಾ ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣಗಳು. ಇನ್ನು, ಬೆಳಕಿಗೆ ಬಾರದೇ ಇರುವ ಸಾವಿರಾರು ಪ್ರಕರಣಗಳು ಈ ದೇಶದಲ್ಲಿ ನಡೆದಿವೆ.

ಈ ಪ್ರಮಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ, ಅಪರಾಧಿಗಳಿಗೆ ಶಿಕ್ಷೆಯಾಗಿರುವ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನಿಗೆ ತಿದ್ದುಪಡಿ ತರುವಂತೆ ಕಿಚ್ಚು ಹಚ್ಚಿದ 2012ರಲ್ಲಿ ನಡೆದ ನಿರ್ಭಯಾ ಪ್ರಕರಣದಲ್ಲಿಯೂ ಕೂಡ ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗೋಕೆ ಬರೋಬ್ಬರಿ 8 ವರ್ಷಗಳೇ ಬೇಕಾಯಿತು.

Advertisements

ನಿರ್ಭಯಾ ಪ್ರಕರಣದ ವಿರುದ್ಧ ದೇಶಾದ್ಯಂತ ನಡೆದ ಹೋರಾಟಗಳ ಫಲವಾಗಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ, 2013ರ ಮಾರ್ಚ್ 21ರಂದು ನಿರ್ಭಯಾ ಕಾಯ್ದೆಯೆಂದೇ ಹೆಸರಾದ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ-2013ರನ್ನು ಜಾರಿಗೆ ತಂದಿತು. ಈ ಕಾಯ್ದೆಯಡಿ ಮಹಿಳೆಯರ ಮೇಲಿನ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ ಮತ್ತು ಅಪರಾಧಗಳನ್ನು ತಡೆಯುತ್ತೇವೆಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಕಾಯ್ದೆಯ ಉದ್ದೇಶಗಳು ಇಂದಿಗೂ ಈಡೇರಿಲ್ಲ. ಈಗಲೂ ಮಹಿಳೆಯರ ಮೇಲೆ ಪೈಶಾಚಿತ ಕೃತ್ಯಗಳು ನಡೆಯುತ್ತಲೇ ಇವೆ ಎಂಬುದು ವಾಸ್ತವ…

ಭಾರತದಲ್ಲಿ 2012ರಿಂದ 2022ರವರೆಗೆ 10 ವರ್ಷಗಳಲ್ಲಿ ಬರೋಬ್ಬರಿ 3,59,247 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆ ಪೈಕಿ 2016ರಲ್ಲಿ ಅತೀ ಹೆಚ್ಚು ಅಂದರೆ, 38,947 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) ವರದಿಯ ಪ್ರಕಾರ, ನಿರ್ಭಯಾ ಪ್ರಕರಣ ನಡೆದ 2012ರಲ್ಲಿಯೇ 24,923 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇನ್ನು ನಿರ್ಭಯಾ ಕಾಯ್ದೆ ಜಾರಿಗೆ ಬಂದ ವರ್ಷ ಅಂದ್ರೆ, 2013ರಲ್ಲಿ 33,707 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅಂದರೆ, 2012ಕ್ಕಿಂತ 2013ರಲ್ಲಿ ಬರೋಬ್ಬರಿ 9 ಸಾವಿರ ಅಧಿಕ ಪ್ರಕರಣಗಳು ವರದಿಯಾಗಿವೆ.

ಅತ್ಯಾಚಾರ 1 2

ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗಿದ್ದಾಗ ದೇಶವೇ ಲಾಕ್‌ಡೌನ ಆಗಿದ್ದ ಸಮಯದಲ್ಲೂ ಕೂಡ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ. ಕೊರೋನಾ ಅಬ್ಬರ ಆರಂಭವಾದ 2020ರಲ್ಲಿ 28,046 ಅತ್ಯಾಚಾರ ಪ್ರಕರಣಗಳು ನಡೆದಿದ್ದರೆ, 2021ರಲ್ಲಿ 31,677 ಪ್ರಕರಣಗಳು ವರದಿಯಾಗಿವೆ. ಇನ್ನು ಕಳೆದ ವರ್ಷ 2022ರಲ್ಲಿ 31,516 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಅತ್ಯಾಚಾರ 1 3

2022ರ ಅಂಕಿಅಂಶಗಳ ಪ್ರಕಾರ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ರಾಜಸ್ಥಾನದಲ್ಲಿ ದಾಖಲಾಗಿವೆ. ಆ ಒಂದೇ ರಾಜ್ಯದಲ್ಲಿ 5,399 ಪ್ರಕರಣಗಳು ದಾಖಲಾಗಿವೆ. ಎರಡನೇ ಸ್ಥಾನದಲ್ಲಿ ಅತ್ಯಾಚಾರಗಳ ರಾಜಧಾನಿ ಎಂದೇ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶದಲ್ಲಿ 3,690 ಪ್ರಕರಣಗಳು ದಾಖಲಾಗಿವೆ. ಮೂರನೇ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ 3,029 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲೂ ಕೂಡ ಕಳೆದ ವರ್ಷ 595 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಅಂತ ಎನ್‌ಸಿಆರ್‌ಬಿ ಹೇಳಿದೆ.

ಇನ್ನು ದೂರು ದಾಖಲಾದ ಮತ್ತು ಮಾಧ್ಯಮಗಳಲ್ಲಿ ವರದಿಯಾದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆಯೇ ನಮ್ಮ ಕರುಳನ್ನು ಹಿಚುಕುತ್ತವೆ. ಆದರೆ, ಬೆಳಕಿಗೆ ಬಾರದ, ವರದಿಯಾಗದ ಹಲವಾರು ಅತ್ಯಾಚಾರ ಪ್ರಕರಣಗಳು ಕತ್ತಲೆಯಲ್ಲಿಯೇ ಕರಗಿ ಹೋಗಿವೆ.

ಹೌದು, ಕೆಲವು ತಜ್ಞರು, ಹೋರಾಟಗಾರರು ಹೇಳುವ ಪ್ರಕಾರ, ದೇಶದಲ್ಲಿ ನಡೆದಿರುವ 90% ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಮರ್ಯಾದೆಗೆ ಹೆದರಿ ಸಂತ್ರಸ್ತೆಯರು ತಮ್ಮ ಮೇಲಾದ ದೌರ್ಜನ್ಯಗಳ ಬಗ್ಗೆ ಹೊರ ಜಗತ್ತಿಗೆ ಹೇಳಿಕೊಳ್ಳುವುದೇ ಇಲ್ಲ.

ಇನ್ನು ಸಂತ್ರಸ್ತೆ ದಿಟ್ಟ ಹೆಜ್ಜೆ ಇಟ್ಟು ದೂರು ದಾಖಲು ಮಾಡಿ ತನಗಾಗಿರುವ ಅನ್ಯಾಯದ ಬಗ್ಗೆ ನ್ಯಾಯ ಕೊಡಿಸಿ ಎಂದು ನ್ಯಾಯಾಲಯಕ್ಕೆ ದುಂಬಾಲು ಬಿದ್ದರೆ, ವಿಚಾರಣೆ ವೇಳೆ ಆಕೆಗೆ ಆಗಿರುವ ಘಟನೆ ಬಗ್ಗೆ ಅಸಹ್ಯ, ಅಸಭ್ಯವಾಗಿ ಪ್ರಶ್ನಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಾರೆ. ದುಡ್ಡಿದ್ದರೆ ಮಾತ್ರ ಈ ಜಗತ್ತಿನಲ್ಲಿ ಎಲ್ಲ ನಡೆಯುತ್ತದೆ ಎಂಬಂತೆ ಹಣ ಇದ್ದವರಿಗೆ ನ್ಯಾಯ ಎಂಬುದು ಈಗಾಗಲೇ ಸಮಾಜದಲ್ಲಿ ಬೇರೂರಿದೆ. ಹಣದ ಆಸೆಗೆ ಬಿದ್ದು ಪ್ರಕರಣದ ತನಿಖೆ ನಡೆಸುವವರೇ ಹಾದಿ ತಪ್ಪಿಸುವಂತಹ ಹುನ್ನಾರ ನಿರ್ಮಾಣ ಮಾಡುತ್ತಾರೆ ಎಂಬ ಕಾರಣಗಳಿಂದ ಸಂತ್ರಸ್ತರು ದೂರು ಕೊಡುವುದರಿಂದ ಹಿಂಜರಿಯುತ್ತಿದ್ದಾರೆ ಎಂಬುದು ಕೂಡ ಸತ್ಯ.

ಎನ್‌ಸಿಆರ್‌ಬಿ ವರದಿ ಪ್ರಕಾರ, ದೇಶದಲ್ಲಿ ಕಳೆದ ವರ್ಷ, ಅಂದರೆ, 2022ರಲ್ಲಿ ಬರೋಬ್ಬರಿ 4,45,256 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. 2020ರಲ್ಲಿ 3,71,503 ಹಾಗೂ 2021ರಲ್ಲಿ 4,28,278 ಪ್ರಕರಣಗಳು ವರದಿಯಾಗಿದ್ದವು. ಆ ಎರಡು ವರ್ಷಗಳಿಗೆ ಹೋಲಿಕೆ ಮಾಡಿದ್ರೆ, 2022ರಲ್ಲಿ ಸುಮಾರು 17 ಸಾವಿರದಷ್ಟು ಪ್ರಕರಣಗಳು ಹೆಚ್ಚಾಗಿವೆ. ಕಳೆದ ವರ್ಷ ಸರಾಸರಿ ಪ್ರತಿ ಗಂಟೆಗೆ ಸುಮಾರು 51 ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಪ್ರಕರಣಗಳು ಮಾತ್ರವಲ್ಲದೆ, ಮಹಿಳೆಯರ ಮೇಲಿನ ನಾನಾ ರೀತಿಯ ದೌರ್ಜನ್ಯಗಳನ್ನು ನೋಡಿದರೆ, ದೇಶ ಎಂತಹ ಆಘಾತಕಾರಿ ಪರಿಸ್ಥಿತಿಯಲ್ಲಿದೆ ಎನ್ನುವುದು ಗೊತ್ತಾಗುತ್ತದೆ.

ಎನ್‌ಸಿಆರ್‌ಬಿ

ಗಂಡು ಮೇಲೆಂಬ ರೋಗಗ್ರಸ್ತ ಸಮಾಜದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ, ಆನಂದದ ಸರಕಿನಂತೆ ನೋಡಲಾಗುತ್ತಿದೆ. ಹೆಣ್ಣು, ಮಗು ಹೆರುವ ಯಂತ್ರವೆಂದು ಈ ಸಮಾಜ ಭಾವಿಸಿದೆ. ತನ್ನ ಕಾಮವಾಂಛೆ ತೀರಿಸಿಕೊಳ್ಳಲು ಅತ್ಯಾಚಾರಗೈಯುವ ವಿಕೃತಕಾಮಿಗಳು ಸಾಕ್ಷ್ಯನಾಶ ಮಾಡಲು ಸಂತ್ರಸ್ತೆಯನ್ನೇ ಕೊಂದು ಕ್ರೌರ್ಯ ಮೆರೆಯುತ್ತಿದ್ದಾರೆ.

ಈ ಅತ್ಯಾಚಾರ ಪ್ರಕರಣಗಳಲ್ಲಿ ಅತಿ ಹೆಚ್ಚು ಸಂತ್ರಸ್ತ ಹೆಣ್ಣು ಮಕ್ಕಳು ದಲಿತರು ಎಂಬುದು ಮತ್ತೊಂದು ಆಘಾತಕಾರಿ ಸಂಗತಿ. ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಆಕೆ ಹೆಣ್ಣೆ. ಆಕೆಯ ಮೇಲೆ ದೌರ್ಜನ್ಯಗಳು ನಡೆಯಬಾರದು. ಈಗ ನಡೆಯುತ್ತಿರುವಂತಹ ಕೃತ್ಯಗಳು, ದೌರ್ಜನ್ಯದ ಹಲವು ಪ್ರಕರಣಗಳು ಜಾತಿ ಮತ್ತು ವರ್ಗದ ಕಾರಣಕ್ಕಾಗಿಯೂ ನಡೆಯುತ್ತಿವೆ.

ದಲಿತೆ, ತಳ ಸಮುದಾಯದವಳು, ತಮಗಿಂತ ಕೀಳು ಜಾತಿಯವಳು ಎಂಬ ಕಾರಣಕ್ಕೆ ಬಲಿಷ್ಠ ಜಾತಿಯ ಕಾಮುಕರು ಆಕೆಯ ಮೇಲೆ ವಿಕೃತಿ ಮೆರೆದಿರುವ ಸಾವಿರಾರು ಪ್ರಕರಣಗಳು ನಮ್ಮ ಮುಂದಿವೆ.

ವಿಪರ್ಯಾಸ ಏನಂದ್ರೆ, ಕಳೆದ 11 ವರ್ಷಗಳಲ್ಲಿ 9 ವರ್ಷಗಳ ಕಾಲ ಅಧಿಕಾರ ನಡೆಸಿರೋದು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ‘ಬೇಟಿ ಬಚಾವೋ-ಬೇಟಿ ಪಡಾವೋ’ ಅಂತ ಮೋದಿ ಅವರು ಕೆಂಪುಕೋಟೆ ಮೇಲೆ ನಿಂತು ಘೋಷಣೆ ಕೂಗಿದ್ದರು. ಆದರೆ, ಅದೇನೂ ಉಪಯೋಗಕ್ಕೆ ಬಂದಿಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ.

2018ರಲ್ಲಿ ಜಮ್ಮು ಕಾಶ್ಮೀರದ ಕತುವಾದಲ್ಲಿ ನಡೆದ 8 ವರ್ಷದ ಬಾಲಕಿ ಆಶೀಫಾ ಬಾನು ಅತ್ಯಾಚಾರ ಪ್ರಕರಣದಲ್ಲಿ ಅರೋಪಿಗಳ ಪರವಾಗಿ ಬಿಜೆಪಿ ಸಂಸದ, ಸಚಿವರೇ ಪ್ರತಿಭಟನೆ ನಡೆಸಿದ್ದರು. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಪೊಲೀಸರೇ ರಾತ್ರೋ ರಾತ್ರಿ ಸಂತ್ರಸ್ತೆಯ ಮೃತದೇಹವನ್ನು ಸುಟ್ಟು ಹಾಕಿದರು. ಉತ್ತರ ಪ್ರದೇಶದ ಉನ್ನಾವೋದಲ್ಲಿ 2017ರಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲ್ದಿಪ್ಸಿಂಗ್ ಸೆಂಗಾರ್ ಎಂಬಾತನೇ ಆರೋಪಿಯಾಗಿದ್ದಾನೆ. ಇತ್ತೀಚೆಗೆ, ಕುಸ್ತಿ ಫೆಡರೇಷನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಅಂತ ಮಹಿಳಾ ಕುಸ್ತಿ ಪಟುಗಳು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ತಮಗೆ ನ್ಯಾಯ ಸಿಗಲಿಲ್ಲವೆಂದು ಕುಸ್ತಿಪಟು ಸಾಕ್ಷಿ ಮಲಿಕ್ ಕುಸ್ತಿ ಕ್ರೀಡೆಗೆ ನಿವೃತ್ತಿಯನ್ನೇ ಘೋಷಿಸಿದ್ದರು.

ಕರ್ನಾಟಕದಲ್ಲೂ ಕೂಡ ಧರ್ಮಸ್ಥಳದ ಸೌಜನ್ಯ, ಬಿಜಾಪುರದ ದಾನಮ್ಮ, ಚಿತ್ರದುರ್ಗ ಮುರುಘಾ ಮಠದ ಅತ್ಯಾಚಾರ ಪ್ರಕರಣಗಳು ನಡೆದಿವೆ. ಇಂತಹ ಲಕ್ಷಾಂತರ ಪ್ರಕರಣಗಳಲ್ಲಿ ಇನ್ನೂ ಅಪರಾಧಿಗಳಿಗೆ ಶಿಕ್ಷೆ ಆಗಿಲ್ಲ ಅನ್ನುವುದು ಮರೆಮಾಚುವುದಕ್ಕೆ ಸಾಧ್ಯವೇ ಇಲ್ಲದ ಸಂಗತಿ.

ವಿಷಾದನೀಯ ಸಂಗತಿ ಏನಂದರೆ, ಮಹಿಳೆಯರ ಮೇಲಿನ ದೌರ್ಜನ್ಯ ಸಂಬಂಧ ಎಷ್ಟು ಪ್ರಕರಣಗಳು ದಾಖಲಾಗಿವೆಯೋ ಅದರ ಅರ್ಥದಷ್ಟು ಪ್ರಕರಣಗಳಲ್ಲಿಯೂ ಅಪರಾಧಿಗಳಿಗೆ ಇನ್ನೂ ಶಿಕ್ಷೆ ಆಗಿಲ್ಲ. ಶಿಕ್ಷೆ ಅಥವಾ ಪ್ರಕರಣಗಳ ವಿಚಾರಣೆಗಳು ಮುಗಿದಿರುವ ಪ್ರಮಾಣ ತೀರಾ ಕಡಿಮೆ ಇದೆ.

2013ರಲ್ಲಿ 33,707 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ದಾಖಲಾದ ಪ್ರಕರಣಗಳಿಗೆ ಹೋಲಿಸಿದರೆ, ಆ ವರ್ಷ ಶಿಕ್ಷೆ ವಿಧಿಸಲಾದ ಪ್ರಕರಣಗಳ ಪ್ರಮಾಣ ಬರೀ 27.1% ಮಾತ್ರ. ಅಂದ್ರೆ ಪ್ರತಿ 100 ಪ್ರಕರಣಗಳ ಪೈಕಿ ಬರೀ 27 ಪ್ರಕರಣಗಳ ವಿಚಾರಣೆ ಪೂರ್ಣಗೊಂಡು ಆದೇಶ ಪ್ರಕಟವಾಗಿದೆ.

ಅತ್ಯಾಚಾರ 1 4

2020ರಲ್ಲಿ 39.3% ಪ್ರಕರಣಗಳಲ್ಲಿ ಅಂದರೆ, ವಿಚಾರಣೆ ನಡೆದ ಪ್ರತಿ 100 ಪ್ರಕರಣಗಳ ಪೈಕಿ 39 ಪ್ರಕರಣಗಳಲ್ಲಿ ಮಾತ್ರ ವಿಚಾರಣೆ ಪೂರ್ಣಗೊಂಡು ಆದೇಶ ಹೊರಬಿದ್ದಿದೆ.

ಇನ್ನು 2021ರಲ್ಲಿ 31,677 ಅತ್ಯಾಚಾರ ಪ್ರಕರಣಗಳೂ ಸೇರಿ ಒಟ್ಟು 4,28,278 ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ. ಆದರೆ, ಆ ವರ್ಷ ಕೇವಲ 23,243 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಅದಕ್ಕಿಂತ ಎರಡೂವರೆ ಪಟ್ಟು ಅಂದರೆ, 60,290 ಪ್ರಕರಣಗಳನ್ನ ಖುಲಾಸೆ ಮಾಡಲಾಗಿದೆ. 2021ರಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾದ ಪ್ರಮಾಣ ಬರೀ 6.5% ಮಾತ್ರ. ಇದಕ್ಕಿಂತ ಖುಲಾಸೆಯಾದ ಪ್ರಕರಣಗಳ ಪ್ರಮಾಣ 20% ಇದೆ.

ಇನ್ನು ಕಳೆದ 10 ವರ್ಷಗಳಲ್ಲಿ ವಿಚಾರಣೆ ಹಂತದಲ್ಲಿರುವ, ತೀರ್ಪು ಪ್ರಕಟ ಆಗದೇ ಇರುವ ಪ್ರಕರಣಗಳ ಪ್ರಮಾಣ ಬರೋಬ್ಬರಿ 95% ಇದೆ. ಈ ಎಲ್ಲ ಪ್ರಕರಣಗಳು ಯಾವಾಗ ಮುಗಿಯುತ್ತವೆ ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿ ಉಳಿದಿದೆ.

‘Justice delayed is justice denied’ ಅಂದ್ರೆ ‘ವಿಳಂಬವಾದ ನ್ಯಾಯ ಕೂಡ ನ್ಯಾಯದ ನಿರಾಕರಣೆ’ಯೇ ಆಗಿದೆ ಎಂಬ ಮಾತಿದೆ. ಹೀಗಾಗಿ, ಸಂತ್ರಸ್ತರಿಗೆ ಸಿಗುವ ನ್ಯಾಯ ವಿಳಂಬವಾಗಬಾರದು. ಆದರೆ, ಭಾರತದಂತಹ ವ್ಯವಸ್ಥೆಯಲ್ಲಿ ನ್ಯಾಯದ ವಿಳಂಬ ಹೇಳತೀರದ ಹಂತದಲ್ಲಿದೆ.

ಇದಕ್ಕೆ ನಾನಾ ಕಾರಣಗಳಿವೆ. ಪುರುಷಾಧಿಪತ್ಯವೇ ಬೇರೂರಿರುವ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಮತ್ತು ಹೆಣ್ಣಿಗೆ ನ್ಯಾಯ ಕೊಡಿಸಬೇಕೆಂಬ ಮನಸ್ಥಿತಿಯುಳ್ಳ ಪೊಲೀಸರು ಮತ್ತು ನ್ಯಾಯಾಧೀಶರ ಸಂಖ್ಯೆಯೇ ವಿರಳ. ಅತ್ಯಾಚಾರ ಪ್ರಕರಣಗಳಲ್ಲಿ ಹೆಣ್ಣನ್ನೇ ದೂಷಿಸುವ ಅಧಿಕಾರಿಗಳು ನಮ್ಮೆದುರೇ ಇದ್ದಾರೆ.

ಈ ಸುದ್ದಿ ಓದಿದ್ದೀರಾ? ದುರ್ಗೆ ಕಾಳಿಯರನ್ನ ಪೂಜಿಸ್ತೀರಿ, ಹೆಣ್ಣು ಭ್ರೂಣಗಳನ್ನೇಕೆ ಕೊಲ್ಲುತ್ತೀರಿ?

ಅಪರಾಧಗಳು ನಡೆಯುವ ಪ್ರಮಾಣದಲ್ಲಿ ಅವುಗಳ ತನಿಖೆಗೆ ಅಗತ್ಯವಿರುವಷ್ಟು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಫೋರೆನ್ಸಿಕ್ ಲ್ಯಾಬ್, ಸೈಬರ್ ಸೆಲ್‌ಗಳಲ್ಲಿಯೂ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಯಲ್ಲಿಯೂ ತರಬೇತಿಯ ಕೊರತೆ ಇದೆ. ಅತ್ಯಾಚಾರಗಳಂತಹ ಪ್ರಕರಣಗಳಲ್ಲಿ ತನಿಖಾ ಪ್ರಕ್ರಿಯೆಯನ್ನು ಹೇಗೆ ನಡೆಸಬೇಕು ಎಂಬ ತರಬೇತಿಯೇ ಪೊಲೀಸರಿಗೆ ಸರಿಯಾಗಿ ನೀಡಲಾಗಿಲ್ಲ.

ಇನ್ನು ಭಾರತದ ಎಲ್ಲ ನ್ಯಾಯಾಲಯಗಳಲ್ಲಿ ಒಟ್ಟು 4.4 ಕೋಟಿ ಪ್ರಕರಣಗಳ ವಿಚಾರಣೆ ಬಾಕಿ ಇದೆ. ಎಲ್ಲ ಕೋರ್ಟ್‌ಗಳು ಪ್ರಕರಣಗಳ ಹೊರೆಯನ್ನು ಎದುರಿಸುತ್ತಿವೆ. ತ್ವರಿತವಾಗಿ ಪ್ರಕರಣಗಳ ವಿಲೇವಾರಿ ಮಾಡಲಾಗದ ಸ್ಥಿತಿಯಲ್ಲಿವೆ. ಹೀಗಾಗಿ, ಪ್ರಕರಣಗಳ ಹೊರೆ ಹೊತ್ತು ಕುಳಿತ ನ್ಯಾಯಾಧೀಶರು ಸಣ್ಣ-ಪುಟ್ಟ ಕಾರಣಗಳಿಗೂ ವಿಚಾರಣೆಯನ್ನು ಮುಂದೂಡುತ್ತಾರೆ.

ಇದೆಲ್ಲದರ ಜತೆಗೆ, ತಜ್ಞರ ವರದಿ ನೀಡುವಲ್ಲಿ ವಿಳಂಬ, ಮೇಲುಸ್ತುವಾರಿ ಮತ್ತು ತಪಾಸಣೆ ಕೊರತೆ, ಪ್ರತ್ಯೇಕ ತನಿಖಾ ವಿಭಾಗ/ಸಂಸ್ಥೆಯ ಕೊರತೆ, ರಾಜಕೀಯ ಪ್ರಭಾವ ಮತ್ತು ಭ್ರಷ್ಟಾಚಾರವೂ ಪ್ರಮುಖ ಕಾರಣಗಳಾಗಿವೆ.

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಕಾನೂನು ಎಷ್ಟು ಮುಖ್ಯವೋ, ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿರುವುದೂ ಕೂಡ ಅಷ್ಟೇ ಮುಖ್ಯ. ಪೋಷಕರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳು ಕೂಡ ಗಂಡಿಗೆ ಸಮಾನಳಂತೆ ನೋಡುವುದನ್ನು ಕಲಿಸಬೇಕು. ಹೆಣ್ಣು ಭೋಗದ ವಸ್ತುವಲ್ಲ, ಹೆಣ್ಣು ಅಮಲಿನ ಪದಾರ್ಥವಲ್ಲ ಎಂಬುದನ್ನು ಕಲಿಸಬೇಕು. ನಿಸರ್ಗದ ಸೃಷ್ಟಿಯಲ್ಲಿ ಹೆಣ್ಣು-ಗಂಡು ಸಮಾನರು, ಹೆಣ್ಣನ್ನು ಗೌರವಿಸಬೇಕು ಎಂಬುದನ್ನು ಕಲಿಸಬೇಕು. ಅದು ನಮ್ಮ-ನಿಮ್ಮೆಲ್ಲರ ಮನೆಗಳಿಂದಲೇ ಆರಂಭವಾಗಬೇಕು.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

Download Eedina App Android / iOS

X