ನಿನ್ನೆಯಷ್ಟೇ(ಏ.11) ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಜೆಪಿ, ಇದೀಗ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಬಿಡುಗಡೆ ಮಾಡಿದ್ದು, ಅಚ್ಚರಿ ಮೂಡಿಸಿದೆ.
ಎರಡನೇ ಪಟ್ಟಿಯಲ್ಲಿ 23 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು. ಈ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಅವರ ಹುಬ್ಬಳ್ಳಿ ಹೆಸರು ಘೋಷಣೆಯಾಗಿಲ್ಲ.
ಈ ಎರಡನೇ ಪಟ್ಟಿಯಲ್ಲಿ ಬಿಜೆಪಿಯ ಏಳು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದ್ದು, ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಹೆಚ್ಚಳವಾಗುವ ಸಾಧ್ಯತೆ ಇದೆ. 224 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಮಾತ್ರ ಬಾಕಿ ಉಳಿದಿದ್ದು, ನಾಳೆ ಬಿಡುಗಡೆ ಮಾಡುವ ಎಲ್ಲ ಸಾಧ್ಯತೆಗಳಿವೆ.
ಕಾಂಗ್ರೆಸ್ ತೊರೆದಿದ್ದ ನಾಗರಾಜ್ ಛಬ್ಬಿಗೆ ಕಲಘಟಗಿಯಿಂದ ಟಿಕೆಟ್ ದೊರಕಿದ್ದು, ಮೂಡಿಗೆರೆಯ ಶಾಸಕ ಕುಮಾರಸ್ವಾಮಿಯವರ ಸ್ಥಾನಕ್ಕೆ ದೀಪಕ್ ದೊಡ್ಡಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಈ ನಡುವೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಬಳಿಕ ರಾಜ್ಯದಲ್ಲಿ ಉಂಟಾಗಿರುವ ಭಿನ್ನಮತದ ಹಿನ್ನೆಲೆಯಲ್ಲಿ ಶಮನಗೊಳಿಸಲು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಅವಕಾಶ ನೀಡಿದೆ. ಈ ಬೆಳವಣಿಗೆಯಿಂದ ಪಕ್ಷದ ಕಾರ್ಯಕರ್ತರು ಖುಷಿಯಾಗಿದ್ದಾರೆ. ಭಿನ್ನಮತಗಳನ್ನು ಸರಿಪಡಿಸಲಿದ್ದೇವೆ” ಎಂದು ಹೇಳಿ ತೆರಳಿದರು.