ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಮೈತ್ರಿಕೂಟದಲ್ಲಿ ಲೋಕಸಭಾ ಚುನಾವಣೆಯ ಕ್ಷೇತ್ರ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಬಿರುಕು ಮೂಡುವಂತೆ ಕಾಣುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅದೇ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾದ ಅಧೀರ್ ರಂಜನ್ ಚೌಧರಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಧೀರ್ ರಂಜನ್ ಚೌಧರಿ, ”ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯ ಸೇವೆಯಲ್ಲಿ ನಿರತರಾಗಿದ್ದಾರೆ. ನಾವು ಭಿಕ್ಷೆ ಬೇಡುತ್ತಿಲ್ಲ. ಮಮತಾ ಅವರು ನಮಗೆ ಕರುಣೆ ತೋರಿಸುವುದು ಬೇಡ. ನಾವು ನಮ್ಮ ಸ್ವಂತ ಬಲದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇವೆ. ಮಮತಾ ಅವರು ಸ್ವತಃ ಮೈತ್ರಿ ಬಯಸುವುದಾಗಿ ಹೇಳುತ್ತಾರೆ. ಆದರೆ ನಿಜವಾಗಿಯು ಒಕ್ಕೂಟದೊಂದಿಗೆ ಮೈತ್ರಿ ಹೊಂದಲು ಬಯಸದೆ ಪ್ರಧಾನಿ ನರೇಂದ್ರ ಮೋದಿಯವರ ಸೇವೆಯಲ್ಲಿ ನಿರತರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನ ನೀಡುವುದಾಗಿ ಹೇಳಿದ ನಂತರ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಅವರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹರಿಗೆ ಗುಡಿ ಕಟ್ಟುವ ಮುನ್ನ ದರಿದ್ರ ನಾರಾಯಣರತ್ತ ನೋಡುವರೇ ದೊರೆಗಳು?
ಮೂಲಗಳ ಪ್ರಕಾರ ಕ್ಷೇತ್ರ ಹಂಚಿಕೆಯು ಮುಂಬರುವ ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಯ ಸ್ಪಷ್ಟ ಸೂತ್ರವನ್ನು ಒಳಗೊಂಡಿರುತ್ತದೆ. ಅಲ್ಲದೆ ಪ್ರಮುಖ ಪಕ್ಷವಾದ ಟಿಎಂಸಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕೆಂದು ಬಯಸಿದೆ.
ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಒಕ್ಕೂಟದ ಸಂಚಾಲಕರಾಗುವುದು ತಮ್ಮ ಆಯ್ಕೆ ಎಂದು ಟಿಎಂಸಿ ಮತ್ತೆ ಪುನರುಚ್ಚರಿಸಿದೆ. ಜೆಡಿಯು ಅಧ್ಯಕ್ಷರಾದ ನಿತೀಶ್ ಕುಮಾರ್ ಅವರ ಬಗ್ಗೆ ಯಾವುದೇ ವಿರೋಧವಿಲ್ಲ. ಖರ್ಗೆಯವರು ವಿಪಕ್ಷಗಳ ಒಕ್ಕೂಟದ ಸಂಚಾಲಕರಾದರೆ ಚುನಾವಣೆಯಲ್ಲಿ ಉತ್ತಮ ಪರಿಣಾಮ ಬೀರಬಹುದು ಎಂದು ಪಕ್ಷ ನಂಬುತ್ತದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.
ದಲಿತ ಸಮುದಾಯದವರಾಗಿರುವ ಖರ್ಗೆ ಅವರು ಸಂಚಾಲಕ ಸ್ಥಾನದ ಉತ್ತಮ ಆಯ್ಕೆಯಾಗಿದ್ದು ಅವರು ದೇಶದ 58 ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಾರೆ ಎಂದು ಟಿಎಂಸಿ ತಿಳಿಸಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲಿ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಕ್ಷೇತ್ರ ಹಂಚಿಕೆಯ ಬಗ್ಗೆ ಮಾತುಕತೆಗಳು ನಡೆದಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎನ್ನಲಾಗಿದೆ.
ಕ್ಷೇತ್ರ ಹಂಚಿಕೆ ಡಿಸೆಂಬರ್ 31ರೊಳಗೆ ಅಂತಿಮಗೊಳ್ಳಬೇಕು ಎಂದು ಟಿಎಂಸಿ ಬಯಸಿತ್ತು. ಆದರೆ ಗಡುವು ಮುಗಿದಿದ್ದು, ಇಂಡಿಯಾ ಒಕ್ಕೂಟವು ಕ್ಷೇತ್ರ ಹಂಚಿಕೆಯ ಬಗ್ಗೆ ಇನ್ನೂ ಒಮ್ಮತಕ್ಕೆ ಬರಬೇಕಿದೆ.