ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಮಾಣ ತಗ್ಗಿದೆ. ವರ್ಷಕ್ಕೆ 400ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ, 90ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದ ರಸ್ತೆಯಲ್ಲಿ ಈಗ ಅಪಘಾತಗಳ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಈ ಮೊದಲು ‘ಸಾವಿನ ಹೆದ್ದಾರಿ’ ಎಂದೇ ಕರೆಸಿಕೊಳ್ಳುತ್ತಿದ್ದ ರಸ್ತೆಯಿದು.
2023ರ ಮೇವರೆಗಿನ ಐದು ತಿಂಗಳ ಅವಧಿಯಲ್ಲಿ 187 ಅಪಘಾತ ಸಂಭವಿಸಿದ್ದವು. ಅವುಗಳಲ್ಲಿ 39 ಮಂದಿ ಮೃತಪಟ್ಟು, 176 ಮಂದಿ ಗಾಯಗೊಂಡಿದ್ದರು. ನಂತರದ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ 30 ಅಪಘಾತಗಳು ಸಂಭವಿಸಿದವು. ಅವುಗಳಲ್ಲಿ ಇಬ್ಬರು ಮೃತಪಟ್ಟು, 18 ಮಂದಿ ಗಾಯಗೊಂಡರು. ಅಕ್ಟೋಬರ್‌ನಲ್ಲಿ ಎರಡು ಅಪಘಾತ ಪ್ರಕರಣ ಸಂಭವಿಸಿ, ಮೂವರು ಗಾಯಗೊಂಡರು. ಡಿಸೆಂಬರ್‌ನಲ್ಲಿ ಅಪಘಾತ ಪ್ರಕರಣಗಳು ಶೂನ್ಯಕ್ಕೆ ಇಳಿದಿದೆ.
ಜೂನ್‌ನಿಂದ ಡಿಸೆಂಬರ್‌ವರೆಗಿನ ಏಳು ತಿಂಗಳ ಅವಧಿಯಲ್ಲಿ ಶೇ. 90ರಷ್ಟು ಅಪಘಾತ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಕಾರಣ, ಇಕ್ಕಟ್ಟಾದ ಬೈಪಾಸ್ ರಸ್ತೆ ಷಟ್‌ಪಥ ರಸ್ತೆಯಾಗುವಲ್ಲಿ ನಡೆಯುತ್ತಿರುವ ಕಾಮಗಾರಿ.
ಅಪಘಾತಗಳು ನಡೆಯುತ್ತಿದ್ದ ಸ್ಥಳದಲ್ಲಿ ರಸ್ತೆಯನ್ನು ವಿಸ್ತರಿಸಲಾಗಿದೆ. ಅಲ್ಲಲ್ಲಿ ಎಚ್ಚರಿಕೆ ಫಲಕ ಹಾಕಲಾಗಿದೆ. ಸವಾರರು ಜಾಗೃತೆಯಿಂದ ವಾಹನಗಳನ್ನು ಓಡಿಸುತ್ತಿದ್ದಾರೆ. ಪರಿಣಾಮ ಗಣನೀಯ ಪ್ರಮಾಣದಲ್ಲಿ ಸಾವು-ನೋವಿನ ಸಂಖ್ಯೆ ಇಳಿಕೆಯಾಗಿದೆ.
ಈ ಮೊದಲು ತಾರಿಹಾಳ ಬೈಪಾಸ್ ರಸ್ತೆಯ ಪಕ್ಕ ರಾತ್ರಿವೇಳೆ ಗೂಡ್ಸ್, ಕಂಟೇನರ್, ಟ್ಯಾಂಕರ್ ವಾಹನಗಳು ಕೆಟ್ಟು ನಿಂತಿರುತ್ತಿದ್ದವು. ಬೈಪಾಸ್ ರಸ್ತೆಯೆಂದು ಕೆಲವರು ವಾಹನಗಳನ್ನು ವೇಗವಾಗಿ ಚಲಾಯಿಸಿ, ಕೆಟ್ಟು ನಿಂತ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದರು. ಇನ್ನು ಕೆಲವರು ಮದ್ಯಪಾನ, ಮಾದಕ ವಸ್ತುಗಳ ಸೇವನೆ ಮಾಡಿ ನಿಯಂತ್ರಣ ಕಳೆದುಕೊಂಡು ರಸ್ತೆಯ ವಿಭಜಕಕ್ಕೋ, ಎದುರಿಗೆ ಇರುವ ವಾಹನಗಳಿಗೋ ಡಿಕ್ಕಿ ಹೊಡೆಯುತ್ತಿದ್ದರು ಎನ್ನುತ್ತಾರೆ ಪೊಲೀಸರು.
ಬಹುತೇಕ ಬೈಕ್ ಸವಾರರು ಹೆಲ್ಮೆಟ್‌ಗಳನ್ನೇ ಧರಿಸುತ್ತಿರಲಿಲ್ಲ. ಈಗ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸುತ್ತಾರೆ. ಹತ್ತಾರು ಜೆಸಿಬಿ ವಾಹನಗಳು, ಮೂವತ್ತಕ್ಕೂ ಹೆಚ್ಚು ಟ್ರಕ್‌ಗಳು ಕಾಮಗಾರಿ ಸ್ಥಳದಲ್ಲಿ ಇರುವುದರಿಂದ ಸವಾರರು ನಿಧಾನವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಹೀಗಾಗಿ ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ ಎನ್ನುವುದು ಪೊಲೀಸರ ಅಭಿಪ್ರಾಯ.
ಉತ್ತರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ರಮೇಶ ಗೋಕಾಕ, ಪ್ರತಿದಿನ ಒಂದು-ಎರಡು ಅಪಘಾತ, ವಾರಕ್ಕೆ ಎರಡು, ಮೂರು ಸಾವು ಬೈಪಾಸ್ ರಸ್ತೆಯಲ್ಲಿ ಸಾಮಾನ್ಯವಾಗಿತ್ತು. ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲು ಕಾಯಂ ಸಿಬ್ಬಂದಿ ನಿಯೋಜಿಸಬೇಕಿತ್ತು. ರಕ್ತಸಿಕ್ತ ದೇಹ, ನಜ್ಜು-ಗುಜ್ಜಾದ ವಾಹನಗಳನ್ನು ನೋಡುತ್ತಲೇ ಕರ್ತವ್ಯ ನಿರ್ವಹಿಸುತ್ತಿದ್ದೆವು. ಕಾಮಗಾರಿ ಆರಂಭವಾದಾಗಿನಿಂದ ಅಪಘಾತಗಳು ಹಂತ-ಹಂತವಾಗಿ ಕಡಿಮೆಯಾಗಿದೆ ಎಂದು ಮಾದ್ಯಮಗಳಿಗೆ ಹೇಳಿದ್ದಾರೆ.