ಭಾರತ ಹಾಗೂ ಮಾಲ್ಡೀವ್ಸ್ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ತಮ್ಮ ದ್ವೀಪ ಸಮೂಹದಿಂದ ಮಾರ್ಚ್ 15ರೊಳಗೆ ಭಾರತೀಯ ಸೇನೆಯ ವಾಪಸಾತಿಗೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್‌ನ ಮೂವರು ಸಚಿವರು ಪ್ರಧಾನಿ ಹಾಗೂ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರದ ದಿನಗಳಲ್ಲಿ ಎರಡೂ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತಾ ಹೋಯಿತು.
ಮೊದಲಿಗೆ ಮಾಲ್ಡೀವ್ಸ್ ಸರ್ಕಾರವು ಸಚಿವರ ಹೇಳಿಕೆಗೂ ಹಾಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿ ಮೂವರು ಸಚಿವರನ್ನು ಅಮಾನತುಗೊಳಿಸಿತು. ನಂತರ ಎರಡೂ ರಾಷ್ಟ್ರಗಳು ಆಯಾ ದೇಶಗಳ ರಾಯಭಾರಿಗಳನ್ನು ಕರೆದು ಹೇಳಿಕೆಗಳನ್ನು ಪಡೆದುಕೊಂಡವು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂದು ಪಕೋಡ, ಇಂದು ಶ್ರೀರಾಮ ಭಜನೆ; ನಿರುದ್ಯೋಗ ನಿವಾರಣೆಯಾಯಿತೇ?
2023ರಲ್ಲಿ ಮಾಲ್ಡೀವ್ಸ್ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮೊಹಮ್ಮದ್ ಮುಯಿಝು ಭಾರತದ ಸಂಬಂಧಗಳನ್ನು ಕಡಿಮೆಗೊಳಿಸಿ ಚೀನಾ ಜೊತೆಗಿನ ಸಂಬಂಧ ಹೆಚ್ಚಿಸುವುದಾಗಿ ಹೇಳಿದ್ದರು. ಆದರೀಗ ಅಧಿಕೃತವಾಗಿ ಭಾರತೀಯ ಸೇನೆಯ ವಾಪಸಾತಿಗೆ ಕರೆ ನೀಡಿದ್ದಾರೆ.
ಭಾರತವು ಕಳೆದ ಹಲವು ವರ್ಷಗಳಿಂದ ಹಿಂದಿನ ಸರ್ಕಾರಗಳ ಅನುಮತಿಯ ಮೇರೆಗೆ ಮಾಲ್ಡೀವ್ಸ್‌ನಲ್ಲಿ ಸೇನೆಯನ್ನು ಬೀಡುಬಿಟ್ಟಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ ಪ್ರಸ್ತುತ 88 ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ನಲ್ಲಿ ಉಪಸ್ಥಿತರಿದ್ದಾರೆ. ಭಾರತೀಯ ಸೇನೆಯು ಕಡಲ ಭದ್ರತೆ ಹಾಗೂ ವಿಪತ್ತು ಪರಿಹಾರ ಕಾರ್ಯದಲ್ಲಿ ಮಾಲ್ಡೀವ್ಸ್‌ಗೆ ನೆರವು ನೀಡುತ್ತಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಮಾಲ್ಡೀವ್ಸ್ ಅಧಿಕಾರಿ ನಜೀಮ್ ಇಬ್ರಾಹಿಂ, “ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ನಲ್ಲಿ ಉಳಿದುಕೊಳ್ಳಬಾರದು. ಇದು ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಡಳಿತ ನಿಯಮವಾಗಿದೆ” ಎಂದು ತಿಳಿಸಿದ್ದಾರೆ.