ಮಣಿಪುರದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿನ ನಾಗರಿಕ ಸಂಘ ಸಂಸ್ಥೆಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದವು.
ಈ ಸಂದರ್ಭದಲ್ಲಿ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲು ಸಂಸತ್ತಿನಲ್ಲಿ ಕಾಂಗ್ರೆಸ್ ಒತ್ತಾಯಿಸುವಂತೆ ಸಂಘಟನೆಗಳು ಒತ್ತಾಯಿಸಿದವು.
ಯುವಕರು, ನಾಗರಿಕ ಸಂಘಸಂಸ್ಥೆಯ ಸದಸ್ಯರು ಹಾಗೂ ಸಮುದಾಯ ಸಂಘಟನೆಗಳು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಕಳೆದ ಎಂಟು ತಿಂಗಳಿಂದ ಭೇಟಿ ಮಾಡದ ಪ್ರಧಾನಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾದ ಜೈರಾಮ್ ರಮೇಶ್ ತಿಳಿಸಿದರು.
ಜೀವ ಮತ್ತು ಆಸ್ತಿಪಾಸ್ತಿ ನಾಶವಾಗಿರುವ ಈ ಸಂದರ್ಭದಲ್ಲಿ ನಮಗೆ ರಾಜ್ಯದಲ್ಲಿ ಸೂಕ್ಷ್ಮ, ಜವಾಬ್ದಾರಿಯುತ ಹಾಗೂ ಪಾರದರ್ಶಕ ಸರ್ಕಾರದ ಅಗತ್ಯವಿದೆ ಎಂದು ಸಂಘಟನೆಗಳು ರಾಹುಲ್ ಅವರಿಗೆ ತಿಳಿಸಿವೆ ಎಂದು ಜೈರಾಮ್ ರಮೇಶ್ ಹೇಳಿದರು.
ಈ ಮೊದಲು ಮಣಿಪುರಕ್ಕೆ ಭೇಟಿ ನೀಡುವಾಗ ಇಲ್ಲಿನ ಸಂಘ ಸಂಸ್ಥೆಗಳನ್ನು ಭೇಟಿಯಾಗುತ್ತಿದ್ದೆವು. ಆದರೆ ಈಗ ಅವರೊಂದಿಗೆ ಸಭೆ ನಡೆಸಿದ್ದೇವೆ. ಎಲ್ಲರೂ ಶಾಂತಿಗಾಗಿ ಬೇಡಿಕೆಯಿಡುತ್ತಿದ್ದಾರೆ. ಇಬ್ಬರು ರಾಜ್ಯ ಸಚಿವರು ನಾಪತ್ತೆಯಾಗಿದ್ದು, ಕೇವಲ ಆನ್ಲೈನ್ ಮೂಲಕ ಮಾತ್ರ ವ್ಯವಹರಿಸುತ್ತಿದ್ದಾರೆ. ಪ್ರಧಾನಿ ಕೂಡ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡದೆ ಕೇವಲ ಆನ್ಲೈನ್ನಲ್ಲಿ ಮಾತ್ರ ಸ್ವಾಗತಿಸುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ಇಲ್ಲಿನ ಸಂಸದರು ಅಥವಾ ಮಣಿಪುರದ ಸಚಿವರು ಮೋದಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಇತ್ತೀಚಿಗೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಿಜೋರಾಂಗೆ ಪ್ರಚಾರ ಕೈಗೊಂಡಿದ ಸಂದರ್ಭದಲ್ಲಿ ಪಕ್ಕದ ಹಿಂಸಾಪೀಡಿತ ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ ಎಂದು ಜೈರಾಮ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಅವರು ಮಣಿಪುರದ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಬಿಹಾರ ಮೂಲದ ಕಿರಾಣಿ ಅಂಗಡಿಯವರು ಹಾಗೂ ಟ್ರಕ್ ಚಾಲಕರನ್ನು ಭೇಟಿ ಮಾಡಿ ಅವರ ಕಷ್ಟಸುಖಗಳನ್ನು ಆಲಿಸಿದರು.
ಕಾಂಗ್ರೆಸ್ ನಾಯಕ ಕನ್ನಯ್ಯ ಕುಮಾರ್ ಮಾತನಾಡಿ, ಮೇ ತಿಂಗಳಲ್ಲಿ ಮಣಿಪುರದ ಮುಖ್ಯಮಂತ್ರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದನ್ನು ಹೊರತುಪಡಿಸಿ ಪ್ರಧಾನಿ ಇಲ್ಲಿಯವರೆಗೂ ಎಂದಿಗೂ ಮಣಿಪುರದ ಹೆಸರನ್ನು ಬಳಸಲಿಲ್ಲ. ಪ್ರಧಾನಿ ಎರಡು ಚುನಾವಣೆಗಳನ್ನು ಗೆದ್ದಿದ್ದಾರೆ. ಅವರ ಬಳಿ ವಿಮಾನವಿದೆ, ಕಾರುಗಳಿವೆ, ಎಸ್ಪಿಜಿ ಕಮಾಂಡೋಗಳಿದ್ದಾರೆ. ಆದರೆ ಮಣಿಪುರಕ್ಕೆ ಮಾತ್ರ ಭೇಟಿ ನೀಡಿಲ್ಲ ಎಂದು ಟೀಕಿಸಿದರು.