ರಾಜ್ಯದಲ್ಲಿ ಕರಾವಳಿ ಆಚೆಗೆ ಕೋಮು ದ್ವೇಷವನ್ನು ಹರಡಲು ಯತ್ನಿಸುತ್ತಿರುವ ಬಿಜೆಪಿ, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮವನ್ನು ತನ್ನ ಕೋಮುವಾದದ ದಾಳವಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಕೂಡ ಕೇಸರಿ ವಿವಾದಕ್ಕೆ ಬೆಂಬಲ ನೀಡಿದ್ದು, ಕೋಮು ಬಣ್ಣ ಬಳಿದುಕೊಂಡಿದ್ದಾರೆ. ಸದಾ ರಾಷ್ಟ್ರಧ್ವಜವನ್ನು ವಿರೋಧಿಸುತ್ತ ಬಂದಿರುವ ಆರ್‌ಎಸ್‌ಎಸ್‌ನ ಕರಸೇವಕ, ಮಾಜಿ ಸಚಿವ ಸಿ.ಟಿ ರವಿ, ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ಮಾಡಿದ್ದಾರೆ. ತಮ್ಮ ಮತ್ತು ಆರ್‌ಎಸ್‌ಎಸ್‌ನ ದೇಶದ್ರೋಹಿ ಮನಸ್ಥಿತಿಯನ್ನು ಪ್ರತಿಬಿಂಬಿಸಿದ್ದಾರೆ.
ಕೆರಗೋಡು ಗ್ರಾಮ ಪಂಚಾಯತಿ ಎದುರು ಧ್ವಜಸ್ತಂಬದಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದೇವೆಂದು ಅನುಮತಿ ಪಡೆದಿದ್ದ ಹಿಂದುತ್ವವಾದಿಗಳು ಕೇಸರಿ ಧ್ವಜ ಹಾರಿಸಿದ್ದರು. ಅದನ್ನು ತೆರವುಗೊಳಿಸಿದ ಅಧಿಕಾರಿಗಳು, ರಾಷ್ಟ್ರಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಹಾರಿಸಿದ್ದರ ವಿರುದ್ಧವೇ ಕೆರಗೋಡಿನಿಂದ ಮಂಡ್ಯಕ್ಕೆ ಬಿಜೆಪಿಗರು ಪಾದಯಾತ್ರೆ ನಡೆಸಿದ್ದಾರೆ. ‘ಕಾಂಗ್ರೆಸ್ ಪಕ್ಷದವರು ಹನುಮ ಧ್ವಜವನ್ನು ಕೆಳಗಿಳಿಸಿ ತಾಲಿಬಾನ್ ಧ್ವಜವನ್ನು ಹಾರಿಸಿದ್ದಾರೆ. ನಾವು ಹನುಮ ಧ್ವಜ ಹಾಕುತ್ತೇವೆ. ತಾಲಿಬಾನ್ ಧ್ವಜ ಹಾಕುವ ದಿನಗಳು ಮುಗಿದು ಹೋಯಿತು’ ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ಹಿಂದಿಯಲ್ಲಿ ಹೇಳಿಕೆ ನೀಡಿದ್ದಾರೆ.
ಸಿಟಿ ರವಿ ಅವರು ರಾಷ್ಟ್ರಧ್ವಜವನ್ನು ಭಯೋತ್ಪಾದಕ ಸಂಘಟನೆಯೊಂದರ ಧ್ವಜಕ್ಕೆ ಹೋಲಿಸಿದ್ದಾರೆ. ಇದು ಅಕ್ಷಶಃ, ಸಿ.ಟಿ ಅವರಲ್ಲಿ ಭಯೋತ್ಪಾದಕತೆ, ದೇಶ ವಿರೋಧಿ, ಕೋಮು ದ್ವೇಷದ ನಂಜು ಎಷ್ಟರ ಮಟ್ಟಿಗಿದೆ ಎಂಬುದುನ್ನು ಸೂಚಿಸುತ್ತದೆ. ನಾವು ದೇಶಪ್ರೇಮಿಗಳು ಎನ್ನುವ ಬಿಜೆಪಿಗರು, ದೇಶಪ್ರೇಮಿಗಳಲ್ಲ, ದೇಶ ವಿರೋಧಿಗಳು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಸಿಟಿ ರವಿ ಸೇರಿದಂತೆ ಆರ್‌ಎಸ್‌ಎಸ್, ಬಿಜೆಪಿಗರಿಗೆ ಬೇಕಿರುವುದು ಭಾರತ ರಾಷ್ಟ್ರವಲ್ಲ, ಹಿಂದುತ್ವದ ವಿಷದಲ್ಲಿ ಮೀಯುವ ಕೋಮು ರಾಷ್ಟ್ರ. ಅಫ್ಘಾನ್‌ನಲ್ಲಿ ತಾಲಿಬಾನ್ ನಡೆಸುತ್ತಿರುವ ದುರಾಡಳಿತದಂತೆ, ಭಾರತದಲ್ಲಿಯೂ ಆರ್‌ಎಸ್‌ಎಸ್‌ನ ಮನುವಾದಿ ಆಡಳಿತ ತರಬೇಕೆಂಬುದನ್ನು ಸಿ.ಟಿ ರವಿ ಹೇಳಿಕೆ, ಸ್ಪಷ್ಟವಾಗಿ ಸೂಚಿಸುತ್ತಿದೆ.
ರಾಷ್ಟ್ರಧ್ವಜವನ್ನು ತಾನಿಬಾನ್ ಧ್ವಜ ಎಂದಿರುವ ಸಿ.ಟಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಮಂಡ್ಯದ ಸಾಮಾಜಿಕ ಹೋರಾಟಗಾರ್ತಿ, ಮಹಿಳಾ ಮುನ್ನಡೆಯ ಮುಖಂಡೆ ಪೂರ್ಣಿಮಾ ಅವರು, ”ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಮಂಡ್ಯ ನೆಲವನ್ನು ಕೋಮು ದ್ವೇಷದ ತಾಣ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ನಂಜು ಹರಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ರಾಷ್ಟ್ರಧ್ವಜ, ಕನ್ನಡದ ಬಾವುಟಕ್ಕೆ ಮಹತ್ವ ಇದೆಯೇ ಹೊರತು, ರಾಜಕೀಯ ದಳ್ಳುರಿ ಹೊತ್ತಿಸುವ ಬಾವುಟಗಳಿಗೆ ಬೆಲೆಯಿಲ್ಲ. ಸಿ.ಟಿ ರವಿ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
”ರಾಷ್ಟ್ರಧ್ವಜದ ಬಗ್ಗೆ ಆರ್‌ಎಸ್‌ಎಸ್‌ಗೆ ಇರುವ ದ್ವೇಷವು ಸಿ.ಟಿ ರವಿ ಮಾತುಗಳಲ್ಲಿ ವ್ಯಕ್ತವಾಗಿದೆ. ತಿರಂಗವನ್ನು ತಾಲಿಬಾನ್ ಬಾವುಟ ಎಂದಿರುವ ಸಿ.ಟಿ ರವಿ ನಿಜಕ್ಕೂ ದೇಶದ್ರೋಹಿ. ಆತನನ್ನು ಬಂಧಿಸಬೇಕು. ರಾಜ್ಯದಿಂದ ಗಡಿಪಾರು ಮಾಡಬೇಕು. ಹರ್ ಘರ್ ತಿರಂಗಾ ಅಭಿಯಾನ ನಡೆಸಿದ್ದ ಪ್ರಧಾನಿ ಮೋದಿ ಅವರಿಗೆ ನಿಜವಾಗಿಯೂ ರಾಷ್ಟ್ರಧ್ವಜದ ಮೇಲೆ ಗೌರವವಿದ್ದರೆ, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಕರ್ನಾಟಕ ಜನಶಕ್ತಿಯ ಮುಖಂಡ ಸಿದ್ದರಾಜು ಆಗ್ರಹಿಸಿದ್ದಾರೆ.
ಸಿಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ, ”ಸಿ.ಟಿ ರವಿ ಒಬ್ಬ ಅಯೋಗ್ಯ. ಆತನನ್ನು ಬಹಿರಂಗವಾಗಿಯೇ ಅಯೋಗ್ಯ ಎನ್ನುತ್ತೇನೆ. ಆತ, ರಾಷ್ಟ್ರಧ್ವಜವನ್ನು ತಾಲಿಬಾನ್‌ಗೆ ಹೋಲಿಸಿದ್ದಾನೆ. ನಾಲಗೆಯಲ್ಲಿ ಹಿಡಿತವಿರಲಿ. ಯಾವ ವಿಚಾರಕ್ಕೆ ಅವರು ಪ್ರಚೋದನೆ ಕೊಡಲು ಮಂಡ್ಯಕ್ಕೆ ಬರುತ್ತಿದ್ದಾರೆ. ರಾಷ್ಟ್ರಕ್ಕೆ, ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡ್ತಿದ್ದಾರೆ. ಹೆತ್ತ ತಾಯಿಗೆ ಅವಮಾನ ಮಾಡ್ತಾರೆ. ನಮಗೆ ಅವರ ಬಗ್ಗೆ ಏನೂ ಭಯವಿಲ್ಲ. ಅವನೊಬ್ಬ ಗಾ…ಡು” ಎಂದಿದ್ದಾರೆ.
ಪವಿತ್ರವಾದ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದೆ ದೇಶದ್ರೋಹಿ ಬಿಜೆಪಿ @CTRavi_BJP ಎನ್ನುವ ಕೋಮು ಕ್ರಿಮಿ ದೇಶದ ಘನತೆಯನ್ನು ಮಣ್ಣುಪಾಲು ಮಾಡುವ ಹೇಳಿಕೆ ನೀಡಿದ್ದಾರೆ,
ತ್ರಿವರ್ಣ ಧ್ವಜ ಈಗ @BJP4Karnataka ಪ್ರಕಾರ ತಾಲಿಬಾನ್ ಧ್ವಜವಾಗಿದೆಯೇ?
ತ್ರಿವರ್ಣ ಧ್ವಜವನ್ನು ವಿರೋಧಿಸುವ RSS ನ ಸಿದ್ಧಾಂತವನ್ನು ಬಿಜೆಪಿ ಚಾಚೂ… pic.twitter.com/YIYfycgQrr
— Karnataka Congress (@INCKarnataka) January 29, 2024
ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ”ಪವಿತ್ರವಾದ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದೆ ದೇಶದ್ರೋಹಿ ಬಿಜೆಪಿ. ಸಿಟಿ ರವಿ ಎನ್ನುವ ಕೋಮು ಕ್ರಿಮಿ ದೇಶದ ಘನತೆಯನ್ನು ಮಣ್ಣುಪಾಲು ಮಾಡುವ ಹೇಳಿಕೆ ನೀಡಿದ್ದಾರೆ. ತ್ರಿವರ್ಣ ಧ್ವಜ ಈಗ ಬಿಜೆಪಿ ಪ್ರಕಾರ ತಾಲಿಬಾನ್ ಧ್ವಜವಾಗಿದೆಯೇ? ತ್ರಿವರ್ಣ ಧ್ವಜವನ್ನು ವಿರೋಧಿಸುವ ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ಬಿಜೆಪಿ ಚಾಚೂತಪ್ಪದೆ ಪಾಲಿಸುತ್ತಿದೆ. ಬಿಜೆಪಿಗೆ INDIA ಮೇಲೂ ದ್ವೇಷ. ಬಿಜೆಪಿಗೆ ಭಾರತದ ಸಂವಿಧಾನದ ಮೇಲೂ ದ್ವೇಷ. ಬಿಜೆಪಿಗೆ ಭಾರತದ ತ್ರಿವರ್ಣ ಧ್ವಜದ ಮೇಲೂ ದ್ವೇಷ. ಇಂತಹ ಬಿಜೆಪಿ ದೇಶದ್ರೋಹಿಯಲ್ಲದೆ ಇನ್ನೇನು?” ಎಂದು ಕಿಡಿಕಾರಿದೆ.
ರಾಷ್ಟ್ರಧ್ವಜದ ವಿರುದ್ಧ ನಂಜು ಕಾರುವ ಆರ್‌ಎಸ್‌ಎಸ್
ಬಿಜೆಪಿ ಮತ್ತು ಆರ್‌ಎಸ್‌ಎಸ್ ರಾಷ್ಟ್ರಧ್ವಜದ ಮಾತನಾಡುವುದು ಇದೇ ಮೊದಲಲ್ಲ. ಬಿಜೆಪಿಗರು, ಸಂಘಿಗಳು ಪದೇ ಪದೇ ಸಂವಿಧಾನ ಬಲಿಸುವ, ರಾಷ್ಟ್ರಧ್ವಜ ಬದಲಿಸುವ ಮಾತನಾಡುತ್ತಲೇ ಇದ್ದಾರೆ. ದೇಶ ಸ್ವಾತಂತ್ರ್ಯಗೊಂಡಾಗಿನಿಂದಲೂ ಆರ್‌ಎಸ್‌ಎಸ್ ರಾಷ್ಟ್ರಧ್ವಜ ವಿರುದ್ಧವಿದೆ. 52 ವರ್ಷಗಳ ಕಾಲ ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಯೇ ಇರಲಿಲ್ಲ.
ಆರ್‌ಎಸ್‌ಎಸ್‌ನ ಎರಡನೇ ಸರಸಂಘಚಾಲಕ ಎಂಎಸ್ ಗೋಳ್ವಾಲ್ಕರ್ ತನ್ನ ‘ಬಂಚ್ ಅಫ್ ಥಾಟ್ಸ್’ ಪುಸ್ತಕದಲ್ಲಿ ರಾಷ್ಟ್ರಧ್ವಜವನ್ನು ಟೀಕಿಸಿದ್ದಾರೆ. ತ್ರಿವರ್ಣ ಧ್ವಜವನ್ನು ‘ಕೋಮುವಾದ’ ಎಂದಿದ್ದಾರೆ. ”ನಮ್ಮ ನಾಯಕರು ದೇಶಕ್ಕಾಗಿ ಹೊಸ ಧ್ವಜವನ್ನು ನಿರ್ಮಿಸಿದ್ದಾರೆ. ಅದು ಹೇಗೆ ಅಸ್ತಿತ್ವಕ್ಕೆ ಬಂದಿತು? ಫ್ರೆಂಚ್ ಕ್ರಾಂತಿಯ ಸಮಯದಲ್ಲಿ, ‘ಸಮಾನತೆ’, ‘ಭ್ರಾತೃತ್ವ’ ಮತ್ತು ‘ಸ್ವಾತಂತ್ರ್ಯ’ದ ತ್ರಿವಳಿ ವಿಚಾರಗಳನ್ನು ವ್ಯಕ್ತಪಡಿಸಲು ಫ್ರೆಂಚರು ತಮ್ಮ ಧ್ವಜದ ಮೇಲೆ ಮೂರು ಪಟ್ಟಿಗಳನ್ನು ಹಾಕಿದ್ದರು. ಇದೇ ರೀತಿಯ ತತ್ವಗಳಿಂದ ಪ್ರೇರಿತವಾದ ಅಮೇರಿಕನ್ ಕ್ರಾಂತಿಯೂ ಕೆಲವು ಬದಲಾವಣೆಗಳೊಂದಿಗೆ ಅದನ್ನೇ ಅನುಸರಿಸಿತು. ಅಂತೆಯೇ, ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೂ ಮೂರು ಪಟ್ಟೆಗಳು ಮೋಡಿ ಮಾಡಿವೆ. ಹಾಗಾಗಿ, ಈ ರಾಷ್ಟ್ರಧ್ವಜವನ್ನು ಕಾಂಗ್ರೆಸ್ ನಿರ್ಮಿಸಿದೆ” ಎಂದು ಬರೆದಿದ್ದರು.
“ರಾಷ್ಟ್ರಧ್ವಜದಲ್ಲಿರುವ ಮೂರು ಬಣ್ಣಗಳಲ್ಲಿ – ಕೇಸರಿ ಬಣ್ಣ ಹಿಂದೂಗಳಿಗೆ, ಮುಸಲ್ಮಾನರಿಗೆ ಹಸಿರು ಮತ್ತು ಇತರ ಎಲ್ಲ ಸಮುದಾಯಗಳಿಗೆ ಬಿಳಿ ಬಣ್ಣವಿದೆ. ಹಿಂದೂಯೇತರ ಸಮುದಾಯಗಳಲ್ಲಿ, ಮುಸ್ಲಿಮರನ್ನು ವಿಶೇಷವಾಗಿ ಗುರುತಿಸಲಾಗಿದೆ. ಏಕೆಂದರೆ, ಹೆಚ್ಚಿನ ಪ್ರಮುಖ ನಾಯಕರ ಮನಸ್ಸಿನಲ್ಲಿ ಮುಸ್ಲಿಮರು ಪ್ರಬಲರಾಗಿದ್ದಾರೆ. ಅವರನ್ನು ಹೆಸರಿಸದೆ ನಮ್ಮ ರಾಷ್ಟ್ರೀಯತೆ ಪೂರ್ಣವಾಗಬಹುದೆಂದು ಅವರು ಭಾವಿಸಲಿಲ್ಲ. ಇದು ಕೋಮುವಾದಿ ಧೋರಣೆಯನ್ನು ಹೊಂದಿದೆ” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ?: ಮಂಡ್ಯ | ಕೇಸರಿ ಧ್ವಜ ತೆರವಿಗೆ ಹಿಂದುತ್ವವಾದಿಗಳ ವಿರೋಧ; ನಿಷೇಧಾಜ್ಞೆ ಜಾರಿ
ಅಲ್ಲದೆ, 1947 ರಲ್ಲಿ ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ ಕೂಡ ತ್ರಿವರ್ಣ ಧ್ವಜದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದೆ. ”ಭಾರತದ ನಾಯಕರು ನಮ್ಮ ಕೈಗೆ ತ್ರಿವರ್ಣ ಧ್ವಜ ನೀಡಬಹುದು. ಆದರೆ, ಅದನ್ನು ಎಂದಿಗೂ ಹಿಂದೂಗಳು ಗೌರವಿಸುವುದಿಲ್ಲ ಮತ್ತು ನಮ್ಮದೆಂದು ಭಾವಿಸುವುದಿಲ್ಲ. ಮೂರು ಬಣ್ಣಗಳನ್ನು ಹೊಂದಿರುವ ಧ್ವಜವು ಖಂಡಿತವಾಗಿಯೂ ಕೆಟ್ಟ ಮಾನಸಿಕ ಪರಿಣಾಮವನ್ನು ಉಂಟುಮಾಡುತ್ತದೆ. ದೇಶಕ್ಕೆ ಹಾನಿಕಾರಕವಾಗಿದೆ” ಎಂದು ಹೇಳಿತ್ತು.
2015ರಲ್ಲಿ ರಾಷ್ಟ್ರಧ್ವಜದ ಬಗ್ಗೆ ಮಾತನಾಡಿದ್ದ ಆರ್‌ಎಸ್‌ಎಸ್, “ಇತರ ಬಣ್ಣಗಳು ಕೋಮು ಚಿಂತನೆಯನ್ನು ಪ್ರತಿನಿಧಿಸುವುದರಿಂದ ರಾಷ್ಟ್ರಧ್ವಜದ ಮೇಲೆ ಕೇಸರಿ ಬಣ್ಣ ಮಾತ್ರ ಇರಬೇಕಿತ್ತು” ಎಂದು ಹೇಳಿತ್ತು.
ಅದೇ ಸಮಯದಲ್ಲಿ ಮಾತನಾಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ”ಬಿಆರ್ ಅಂಬೇಡ್ಕರ್ ಅವರು ಭಗವಾ ಧ್ವಜವನ್ನು ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳಬೇಕು ಮತ್ತು ಸಂಸ್ಕೃತವನ್ನು ರಾಷ್ಟ್ರ ಭಾಷೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ದುರದೃಷ್ಟವಶಾತ್, ನಾವು ಅವರ ಅಭಿಪ್ರಾಯಗಳನ್ನು ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ” ಎಂದು ಸುಳ್ಳು ಪ್ರತಿಪಾದನೆ ಮುಂದಿಟ್ಟಿದ್ದರು.
2022ರ ಮಾರ್ಚ್ 21ರಂದು ಕರ್ನಾಟಕದ ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್, ”ಭವಿಷ್ಯದಲ್ಲಿ ರಾಷ್ಟ್ರಧ್ವಜವನ್ನು ಬದಲಾಯಿಸುವ ಅವಕಾಶ ಬರಬಹುದು. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜ ಆಗುತ್ತದೆ” ಎಂದು ಹೇಳಿದ್ದರು.
ಈ ವರದಿ ಓದಿದ್ದೀರಾ?: ಬಿಹಾರ | ಬಿಜೆಪಿ ಸಖ್ಯ ತೊರೆದಿದ್ದ ನಿತೀಶ್, ಮತ್ತೆ ಎನ್‌ಡಿಎ ಸೇರ ಹೊರಟ್ಟಿದ್ದು ಯಾಕೆ?
ಇದೆಲ್ಲದರ ನಡುವೆ, ಆರ್‌ಎಸ್‌ಎಸ್‌ನ ಕರಸೇವಕರೇ ಆಗಿದ್ದ ಪ್ರಧಾನಿ ಮೋದಿ ಅವರು ಭಾರತದ ಅಮೃತ ಮಹೋತ್ಸವದ ಅಂಗವಾಗಿ 2022ರಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕರೆ ಕೊಟ್ಟಿದ್ದರು. ದೇಶದ ಜನರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಪ್ರೊಫೈಲ್‌ನಲ್ಲಿ ತಿರಂಗದ ಚಿತ್ರ ಹಾಕಿಕೊಳ್ಳುವಂತೆ ಕೇಳಿದ್ದರು. ಆದರೆ, ಆರ್‌ಎಸ್‌ಎಸ್‌ನ ಮುಖಂಡರು ಅದನ್ನು ಅನುಸರಿಸಲು ಹಿಂದೇಟು ಹಾಕಿದ್ದರು. ದೇಶಾದ್ಯಂತ ಪ್ರಶ್ನೆಗಳು ಭುಗಿಲೆದ್ದ ಬಳಿಕ, ಆರ್‌ಎಸ್‌ಎಸ್ ಮತ್ತು ಅದರ ಮುಖಂಡರು ತಮ್ಮ ಖಾತೆಗಳಲ್ಲಿ ರಾಷ್ಟ್ರಧ್ವಜದ ಚಿತ್ರ ಹಾಕಿಕೊಂಡಿದ್ದರು. ಇದೆಲ್ಲವೂ ಆರ್‌ಎಸ್‌ಎಸ್ ರಾಷ್ಟ್ರಧ್ವಜಕ್ಕೆ ಇಂದಿಗೂ ವಿರುದ್ಧವಾಗಿದೆ ಎಂಬುದನ್ನು ಒತ್ತಿ ಹೇಳುತ್ತದೆ.
52 ವರ್ಷ ರಾಷ್ಟ್ರಧ್ವಜ ಹಾರಿಸದ ಆರ್‌ಎಸ್‌ಎಸ್
2002ಕ್ಕೂ ಮುಂಚೆ ಸತತ 55 ವರ್ಷಗಳಲ್ಲಿ ಆರ್‌ಎಸ್‌ಎಸ್ ಎರಡು ಬಾರಿ ಮಾತ್ರ ರಾಷ್ಟ್ರಧ್ವಜ ಹಾರಿಸಿತ್ತು. ಅದೂ, 1974ರ ಆಗಸ್ಟ್ 15 ಮತ್ತು 1950 ಜನವರಿ 26ರಲ್ಲಿ ಮಾತ್ರ. 1948ರಲ್ಲಿ ಗಾಂಧಿ ಹತ್ಯೆಯಾದಾಗ ಬಂಧಿತರಾಗಿದ್ದ ಕೆಲವು ಆರ್‌ಎಸ್‌ಎಸ್‌ನ ನಾಯಕರನ್ನು 1949ರ ಜುಲೈನಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಬೇಕೆಂಬ ಷರತ್ತು ಮತ್ತು ಗೌರವಿಸುತ್ತೇವೆಂದು ಆರ್‌ಎಸ್‌ಎಸ್ ಪ್ರಮಾಣ ಮಾಡಿದ ಬಳಿಕ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ, 1950 ಜನವರಿ 26ರಲ್ಲಿ ಆರ್‌ಎಸ್‌ಎಸ್ ರಾಷ್ಟ್ರಧ್ವಜ ಹಾರಿಸಿತ್ತೆಂದು ‘ದಿ ವೈರ್’ ವರದಿ ಮಾಡಿದೆ.
ಅದಾದ ಬಳಿಕ, 52 ವರ್ಷಗಳ ಕಾಲ, 2002ರವರೆಗೆ ನಾಗಪುರದ ಆರ್‌ಎಸ್‌ಎಸ್ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. 2001ರಲ್ಲಿ ಮತ್ತೆ ಆರ್‌ಎಸ್‌ಎಸ್‌ನ ಸ್ಮೃತಿ ಭವನದಲ್ಲಿ ಆರ್‌ಎಸ್‌ಎಸ್‌ಗೆ ವಿರುದ್ಧವಾಗಿ ಮೂವರು ದೇಶಪ್ರೇಮಿ ಯುವಕರು ಬಲವಂತವಾಗಿ ರಾಷ್ಟ್ರಧ್ವಜ ಹಾರಿಸಿದ್ದರು. ಆ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. 12 ವರ್ಷಗಳ ಬಳಿಕ, 2013ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.
2002ರಲ್ಲಿ ಗಣರಾಜ್ಯೋತ್ಸವ ದಿನದಂದು ಆರ್‌ಎಸ್‌ಎಸ್ ತನ್ನದೇ ಇಚ್ಛೆಯಿಂದ ಮತ್ತೆ ರಾಷ್ಟ್ರಧ್ವಜವನ್ನು ಹಾರಿಸಿತು.