ಈ ವರ್ಷ ರೈತರು ಬೆಳೆದ ಕಬ್ಬು ನೆಲಕಚ್ಚಿದೆ ಎಂಬುದನ್ನೇ ನೆಪವಾಗಿಟ್ಟುಕೊಂಡಿರುವ ಕೋರಮಂಡಲ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ಕಾರ್ಖಾನೆ ತೀವ್ರ ಸಂಕಷ್ಟದಲ್ಲಿ ಇದೆಯೆಂದು ಹೇಳಿಕೆ ನೀಡಿದೆ. ಆದರೆ, ತನ್ನ ಸಮೀಪದಲ್ಲೇ ಬಡ ರೈತ ಹಗಲು-ಇರಳು ಕಷ್ಟಪಟ್ಟು ಕಬ್ಬಿನ ಫಸಲು ಬೆಳೆದಿದ್ದಾರೆ. ಕಬ್ಬು ಬೆಳೆಗೆ 15 ತಿಂಗಳು ಕಳೆದರೂ ಕಟಾವು ಭಾಗ್ಯ ದೊರಕಿಲ್ಲ. ಕಾರ್ಖಾನೆ ಯಾಕೆ ರೈತರು ಬೆಳದ ಕಬ್ಬು ಖರೀದಿ ಮಾಡಿಲ್ಲವೆಂದು ಕಾರ್ಖಾನೆ ಆಡಳಿತ ಮಂಡಳಿಯನ್ನ ರೈತಪರ ಹೋರಾಟಗಾರ ಕರೋಟಿ ತಮ್ಮಯ್ಯ ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಸುದ್ದಿಗಾರರ ಎದುರು ಮಾತನಾಡಿದ ಅವರು, “ಮಾಕವಳ್ಳಿ ಗ್ರಾಮದ ಸಮೀಪವಿರುವ ಕೋರಮಂಡಲ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಜೆ. ರವಿ ರೆಡ್ಡಿ ಅವರು ಪ್ರತೀ ವರ್ಷಕ್ಕಿಂತ ಈ ವರ್ಷ ರೈತರು ಬೆಳೆದ ಕಬ್ಬಿನ ಫಸಲು ವಾಡಿಕೆಗಿಂತ ಈ ಬಾರಿ ಕಮ್ಮಿ ಹಾಗೂ ಹೆಚ್ಚು ಇಳುವರಿ ಇಲ್ಲದ ಕಾರಣ ಕಾರ್ಖಾನೆ ನಷ್ಟದಲ್ಲಿದೆ ಎನ್ನುತ್ತಿದ್ದಾರೆ. ಆದರೆ, ಅವರ ಕಾರ್ಖಾನೆ ಸಮೀಪ ಇರುವ ಮಾಕವಳ್ಳಿಯ ಬಡ ರೈತ ನಾಗೇಶ್ ಅವರ ಸರ್ವೇ ನಂ.119ರಲ್ಲಿ ಕಬ್ಬು ಬೆಳೆದಿದ್ದಾರೆ. ಬೆಳೆದ ಫಸಲುನ್ನು ಅರ್ಧ ಕಟಾವು ಮಾಡಿಕೊಂಡು ಉಳಿದ ಫಸಲನ್ನು ಕಟಾವು ಮಾಡಿಕೊಳ್ಳದೆ ಕಾರ್ಖಾನೆ ಬಿಟ್ಟಿರುವುದೇಕೆ? ಇದು ಕಾರ್ಖಾನೆಯ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಕಾರ್ಖಾನೆಯ ಧೋರಣೆಯಿಂದ ಸಂಕಷ್ಟಕ್ಕೀಡಾಗಿರುವ ರೈತರನ್ನು ಹುಡುಕುತ್ತಾ ಹೋದರೆ ನೂರಾರು ರೈತರು ಸಿಗಬಹುದು” ಎಂದು ಕಿಡಿಕಾರಿದರು.
“ನಿಮ್ಮ ಕಾರ್ಖಾನೆ ತನ್ನ ಸಾಮರ್ಥ್ಯವನ್ನು ಮೀರಿ ಫಸಲುನ್ನು ಹೇರಿದ್ದೀದೆ. ರೈತ ಬೆಳೆದ ಕಬ್ಬು ಈ ಬಾರಿ ಇಳುವರಿ ಬಂದಿಲ್ಲ ಎಂದು ಹೇಳುವವರು ನೀವು ರೈತ ಬೆಳೆದ ಕಬ್ಬನ್ನ ಸೂಕ್ತ ಸಮಯಕ್ಕೆ ಕಟಾವು ಮಾಡಿಸಿಕೊಂಡರೆ ಸೂಕ್ತ ಇಳುವರಿ ದೊರಕುತ್ತದೆ. ಅದನ್ನು ಬಿಟ್ಟು ವರ್ಷದ ಮೇಲೆ ಆರು ತಿಂಗಳು ಕಳೆದರೂ ಕಬ್ಬಿನ ಕಟಾವು ಭಾಗ್ಯ ದೊರಕುವುದಿಲ್ಲ, ಎಂದರೆ ಇಳುವರಿ ಬರುತ್ತಾ ಎಂದು ನೀವೇ ಹೇಳಬೇಕು” ಎಂದು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಟಾವು ವಿಚಾರದಲ್ಲಿ ಕಬ್ಬಿನ ಅರ್ಧ ಹಣವನ್ನ ಕಟಾವುಗೆ ನೀಡುವ ಪರಿಸ್ಥಿತಿಗೆ ತಲುಪುತ್ತದೆ. ನಿಮ್ಮ ಕಾರ್ಖಾನೆಯ ಲಾಭಕ್ಕಾಗಿ ಅಪಾಯಕಾರಿ ಎಥನಾಲ್ ಘಟಕ ಸ್ಥಾಪನೆಯ ತಯಾರಿಗಾಗಿ ಕಾರ್ಖಾನೆ ನಷ್ಟದಲ್ಲಿದೆ ಎನ್ನುವ ಹೇಳಿಕೆಯನ್ನ ನಿಲ್ಲಿಸಬೇಕು. ಮೊದಲು ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮದ ಅಭಿವೃದ್ಧಿಯ ಬಗ್ಗೆ, ತಾಲೂಕಿನ ರೈತರ ವಿಚಾರದಲ್ಲಿ ಮತ್ತು ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರಿಸುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮಾಕವಳ್ಳಿ ನಾಗೇಶ್, ಕರೋಟಿ ರವಿಕುಮಾರ್ ಇತರರು ಇದ್ದರು.