ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಕ್ರಾಸ್ ಮುಖ್ಯರಸ್ತೆ ಕಾಮಗಾರಿ 12 ತಿಂಗಳಿಂದ ನೆನೆಗುದಿಗೆ ಬಿದ್ದಿದೆ. ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರನ ಪರವಾನಗಿ ಕಪ್ಪುಪಟ್ಟಿಗೆ ಸೇರಿಸಿ, ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ (ಎಐಎಡಬ್ಲೂಯು) ಒತ್ತಾಯಿಸಿದೆ. ಸಂಘಟನೆಯ ಮುಖಂಡರು ಕಲಬುರಗಿ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾರ್ಯದರ್ಶಿ ಕಾಶಿನಾಥ ಬಂಡಿ, “ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಮುಖ್ಯ ರಸ್ತೆ ಕಾಮಗಾರಿ ಸುಮಾರು ದಿನಗಳಿಂದ ನೆನೆಗುದಿಗೆ ಬಿದ್ದಿದೆ, 12 ತಿಂಗಳ ಹಿಂದೆ ರಸ್ತೆ ಕಾಮಗಾರಿ ಪ್ರಾರಂಭ ಮಾಡುತ್ತೇವೆಂದು ಹಿಟಾಚಿಗಳು ತಂದು ಬೇಕಾಬಿಟ್ಟಿಯಾಗಿ ತಗ್ಗು-ಗುಂಡಿಗಳನ್ನು ತೋಡಿ ಹಾಕಿ, ಪೂರ್ಣಪ್ರಮಾಣದ ಕಾಮಗಾರಿ ಮಾಡದೇ ಕಾಟಾಚಾರಕ್ಕೆ ಕೇದರಿ ಇಂದಿಗೆ ವರ್ಷ ದಾಟಿದೆ” ಎಂದರು.
ಈ ರಸ್ತೆಯ ಮೇಲೆ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತವೆ. ದಿನ ನಿತ್ಯ ಇಲ್ಲಿ ರಸ್ತೆ ಅಪಘಾತಗಳು ಸಾಮಾನ್ಯ ಎನ್ನುವಂತಾಗಿವೆ. ರಸ್ತೆ ಸಮೀಪ ವಾಸಿಸುವ ಕುಟುಂಬಗಳ ಮನೆಗಳಲ್ಲಿ ಧೂಳು ಹಾರುತ್ತಿದ್ದು, ಜನ ಅನಾರೋಗ್ಯಕ್ಕಿಡಾಗುತ್ತಿದ್ದಾರೆ. ಸುಮಾರು ಸಲ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಏನು ಪ್ರಯೋಜವಾಗಿರುವುದಿಲ್ಲ. ಸಂಬಂಧಿಸಿದ ಗುತ್ತಿಗೆದಾರ ಈ ಕಡೆ ಕಣ್ಣು ಹಾಕುತ್ತಿಲ್ಲ. ಇಂತಹ ಬೇಜಬ್ಬಾರಿ ಗುತ್ತಿಗೇದಾರನ ಪರವಾನಿಗೆ ಕಪ್ಪು-ಪಟ್ಟಿಗೆ ಹಾಕಿ ಕಾನೂನಿನ ಕ್ರಮ ಜರುಗಿಸಬೇಕು, ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುಬೇಕು ಎಂದು ಆಗ್ರಹಿಸಿದರು.
ಈ ಕೂಡಲೆ ಸಂಬಂಧಿಸಿದ ಗುತ್ತಿಗೇದಾರ ಹಾಗೂ ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳದೇ ಹೋದರೆ. ಮುಂಬರುವ ದಿನಗಳಲ್ಲಿ ಇನ್ನು ಉಗ್ರವಾಗಿ ಹೋರಾಟ ಮಾಡುವುದಾಗಿ, ಈ ರಸ್ತಾರೋಖೋ ಮೂಲಕ ಆಗ್ರಹಿಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗುರುನಂದೇಶ ಕೋಣಿನ್ ಅಧ್ಯಕ್ಷರು, ಕಾಶಿನಾಥ ಬಂಡಿ ಕಾರ್ಯದರ್ಶಿ, ಮಲ್ಲಮ್ಮ ಮಗಿ ಜಿಲ್ಲಾ ಕಾರ್ಯದರ್ಶಿ, ಸಂಗಮೇಶ ತಾಂಡೂರ, ಸಂತೋಷ ಪಾಟೀಲ್, ಅಬ್ಬಾಸಲಿ ಮಲ್ಲು ಚಿಂತಕುಂಟಾ, ಚಂದ್ರಶೆಟ್ಟಿ ಡೊಣ್ಣೂರ ಉಪಸ್ಥಿತರಿದ್ದರು.