ಸಂದೇಶ್‌ಖಾಲಿ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರನ್ನು ಬಂಧಿಸಲು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಸ್ವಾತಂತ್ರ್ಯವಿದ್ದು ಅವರನ್ನು ಬಂಧಿಸುವ ಕೆಲಸ ಪಶ್ಚಿಮ ಬಂಗಾಳ ಪೊಲೀಸರದ್ದು ಮಾತ್ರವೇ ಅಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.
ಪಡಿತರ ಹಗರಣದ ಆರೋಪಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವುದಲ್ಲದೆ, ಸಂದೇಶ್‌ಖಾಲಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆಯ ಪ್ರಮುಖ ಆರೋಪಿಯಾಗಿದ್ದಾರೆ.
ಟಿಎಂಸಿ ನಾಯಕನ ವಿರುದ್ಧದ ಆರೋಪಗಳ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರು ತನಿಖೆ ನಡೆಸುತ್ತಿರುವ ಬಗ್ಗೆ ತಮಗೆ ಗಂಭೀರ ಆಕ್ಷೇಪವಿದೆ ಎಂದು ಇ.ಡಿ ಮತ್ತು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ನೇತೃತ್ವದ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ, ಫೆಬ್ರವರಿ 26ರಂದು ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಕೆಲ ಸ್ಪಷ್ಟನೆ ಕೋರಿದರು.
ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಉಪ ಸಾಲಿಸಿಟರ್ ಜನರಲ್ (ಡಿಎಸ್‌ಜಿ) ಧೀರಜ್ ತ್ರಿವೇದಿ, ಸ್ಥಳೀಯ ಪೊಲೀಸರಿಗೆ ಪ್ರಕರಣದ ತನಿಖೆ ನಡೆಸಲು ಅನುಮತಿ ನೀಡಿದರೆ, ಅವರು ಸಾಕ್ಷ್ಯಗಳನ್ನು ನಾಶಪಡಿಸಬಹುದು ಎಂದರು.
ಸಿಬಿಐ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್ ವಿ ರಾಜು, ಪ್ರಕರಣದ ತನಿಖೆಯಲ್ಲಿ ರಾಜ್ಯ ಪೊಲೀಸರ ವಿರುದ್ಧ ಸಿಬಿಐಗೆ ಗಂಭೀರ ಆಕ್ಷೇಪಗಳಿವೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗೆ ʼವಿವಾದದ ಸರಕುʼ ಪೂರೈಕೆಯ ಗುತ್ತಿಗೆ ಪಡೆದಿವೆಯೇ ಕನ್ನಡದ ಮಾಧ್ಯಮಗಳು?
ಸಿಬಿಐ ರಾಜ್ಯ ಪೊಲೀಸರೊಂದಿಗೆ ಜಂಟಿ ತನಿಖೆ ಮಾಡದೆ ಸ್ವತಂತ್ರವಾಗಿ ಮುಂದುವರಿಯಲು ಬಯಸುತ್ತದೆ ಎಂದು ಎಎಸ್‌ಜಿ ನ್ಯಾಯಾಲಯಕ್ಕೆ ವಿವರಿಸಿದರು. ಆದ್ದರಿಂದ, ನಾಳೆ (ಫೆಬ್ರವರಿ 29) ಈ ಅಂಶದ ಬಗ್ಗೆ ತನ್ನ ವಾದ ಆಲಿಸುವಂತೆ ಅವರು ನ್ಯಾಯಪೀಠವನ್ನು ಒತ್ತಾಯಿಸಿದರು. ಆದರೆ, ಈ ಹಿಂದೆ ನಿಗದಿಪಡಿಸಿದಂತೆ ಮಾರ್ಚ್ 4ರಂದೇ ಪ್ರಕರಣದ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.
ಸಿಬಿಐ ಮತ್ತು ಇ.ಡಿ ಎರಡೂ ಶಹಜಹಾನ್ ಅವರನ್ನು ಬಂಧಿಸಲು ಮುಕ್ತವಾಗಿವೆ ಎಂದು ನ್ಯಾಯಪೀಠ ಈ ಹಂತದಲ್ಲಿ ಸ್ಪಷ್ಟಪಡಿಸಿತು.
50 ದಿನಗಳಿಗಿಂತ ಹೆಚ್ಚು ಕಾಲ ಶಹಜಹಾನ್ ಅವರನ್ನು ಬಂಧಿಸಲು ವಿಫಲವಾದ ರಾಜ್ಯ ಸರ್ಕಾರವನ್ನು ಪೀಠ ತರಾಟೆಗೆ ತೆಗೆದುಕೊಂಡಿತು.
ಇಷ್ಟು ದಿನಗಳಿಂದ ತಲೆಮರೆಸಿಕೊಂಡಿರುವ ವ್ಯಕ್ತಿಯನ್ನು ಬಂಧಿಸದೆ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುಂತಿಲ್ಲ ಎಂದು ಅದು ಹೇಳಿತು.
ಕಳೆದ ಅಕ್ಟೋಬರ್‌ನಲ್ಲಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಜ್ಯೋತಿಪ್ರಿಯೋ ಮಲ್ಲಿಕ್ (ಪ್ರಸ್ತುತ ರಾಜ್ಯ ಅರಣ್ಯ ಸಚಿವ) ಅವರೊಂದಿಗೆ ಶಹಜಹಾನ್ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ವರ್ಷದ ಜನವರಿ 5ರಂದು, ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಅಕುಂಜಿಪಾರಾದಲ್ಲಿರುವ ಶಹಜಹಾನ್ ಅವರ ನಿವಾಸದ ಮೇಲೆ ದಾಳಿ ನಡೆಸಲು ಆಗಮಿಸಿದ ಇ.ಡಿ ಅಧಿಕಾರಿಗಳನ್ನು ಸುಮಾರು 200 ಸ್ಥಳೀಯರು ಸುತ್ತುವರಿದು ಘೇರಾವ್ ಹಾಕಿದ ಆರೋಪ ಕೇಳಿ ಬಂದಿತ್ತು.
ನಂತರದ ಘರ್ಷಣೆಯಲ್ಲಿ ಇ.ಡಿ ಅಧಿಕಾರಿಗಳು ಗಾಯಗೊಂಡಿದ್ದರು. ಘಟನೆ ಹಿನ್ನೆಲೆಯಲ್ಲಿ ಶಹಜಹಾನ್ ಅವರನ್ನು ಬಂಧಿಸುವಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ್ ಬೋಸ್ ಸೂಚಿಸಿದ್ದರು.