ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

Date:

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ದೇಶಕ್ಕೆ ಕೊಟ್ಟ ಅತಿದೊಡ್ಡ ‘ಕೊಡುಗೆ’ ಈ ಬಾಬಾ ರಾಮ್‌ದೇವ್. ಇವರ ಯೋಗ ಮತ್ತು ಇವರ ಪತಂಜಲಿಯಿಂದ ದೇಶಕ್ಕಾದ ‘ಅನುಕೂಲ’ವನ್ನು ಜನ ಅರಿತು, ಬಾಬಾರನ್ನು ಬೆಳೆಸಿದ ಮೋದಿಯವರಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ‘ಕೊಡುಗೆ’ ನೀಡಬೇಕಾಗಿದೆ.

ಪತಂಜಲಿ ಸಂಸ್ಥೆಯ ಸುಳ್ಳು ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯ, ‘ಕೇಂದ್ರ ಸರ್ಕಾರ ಈ ಬಗ್ಗೆ ಏಕೆ ಕಣ್ಣು ಮುಚ್ಚಿ ಕೂತಿದೆ’ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲ, ಆಯುರ್ವೇದ ಮತ್ತು ವೈದ್ಯಕೀಯ ಕ್ಷೇತ್ರವನ್ನು ಪತಂಜಲಿ ಎಂಬ ಸಂಸ್ಥೆ ದಾರಿ ತಪ್ಪಿಸುತ್ತಿದೆ; ಸುಳ್ಳು ಮತ್ತು ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡುತ್ತಿದ್ದರೂ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತೀಯ ವೈದ್ಯ ಸಂಘಟನೆ(ಐಎಂಎ), ಲಸಿಕೆ ಅಭಿಯಾನ ಹಾಗೂ ಆಧುನಿಕ ವೈದ್ಯಕೀಯದ ವಿರುದ್ಧ ಪತಂಜಲಿ ಸ್ಥಾಪಕ ರಾಮ್‌ದೇವ್ ಅಪಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅರ್ಜಿ ಪರಿಶೀಲಿಸಿದ ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.

ನವೆಂಬರ್ 2023ರಲ್ಲಿ ಬಾಬಾ ರಾಮ್‌ದೇವ್, ‘ನಾನು ಸುಳ್ಳುಗಾರನಾದರೆ ನನಗೆ ಸಾವಿರ ಕೋಟಿ ದಂಡ ಹಾಕಿ ಮರಣದಂಡನೆ ವಿಧಿಸಲಿ, ಇಲ್ಲ ಸುಳ್ಳು ಹಬ್ಬಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದು ಠೇಂಕಾರದ ಮಾತುಗಳನ್ನಾಡಿದ್ದರು. ಆತನ ಠೇಂಕಾರದ ಮಾತುಗಳಿಗೆ ಪುಷ್ಟಿಕೊಡುವಂತೆ, ಕೇಂದ್ರ ಸರ್ಕಾರ, ಪೊಲೀಸ್, ಕಾನೂನು ಕೂಡ ಕ್ರಮ ಕೈಗೊಳ್ಳದೆ ಸುಮ್ಮನಾಯಿತು. ಅದರಿಂದ ಇನ್ನಷ್ಟು ಉತ್ತೇಜನಗೊಂಡ ರಾಮ್‌ದೇವ್, ಸುಪ್ರೀಂ ಕೋರ್ಟಿನ ನೋಟಿಸ್‌ಗೂ ಉತ್ತರಿಸದೇ ಉದ್ಧಟತನ ಮೆರೆದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೊನ್ನೆ ಮಂಗಳವಾರ, ಪತಂಜಲಿ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣನ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿ, ರಾಮದೇವ್ ಕಂಪನಿಗೆ ಇನ್ನುಮುಂದೆ ಜಾಹೀರಾತು ನೀಡದಂತೆ ನಿರ್ಬಂಧವನ್ನೂ ವಿಧಿಸಿದೆ. ಹಾಗೆಯೇ ಕೇಂದ್ರ ಸರ್ಕಾರವೇಕೆ ಕಣ್ಣು ಮುಚ್ಚಿ ಕೂತಿದೆ ಎಂದು ಪ್ರಶ್ನಿಸಿದೆ.

ನಕಲಿ ವೇಷ, ನಕಲಿ ಯೋಗ, ನಕಲಿ ಉಪನ್ಯಾಸ, ನಕಲಿ ಉತ್ಪನ್ನಗಳ ಮೂಲಕ ಆಧುನಿಕ ಆಧ್ಯಾತ್ಮಿಕ ಬಂಡವಾಳಶಾಹಿ(spiritual capatilism)ಯಾಗಿ ಮೆರೆಯುತ್ತಿರುವ ಬಾಬಾ ರಾಮದೇವ್ ಬಗ್ಗೆ, ಆತನ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ಬಗ್ಗೆ ಪ್ರಶ್ನೆ ಮಾಡಿರುವ ಸುಪ್ರೀಂ ಕೋರ್ಟ್, ಸದ್ಯಕ್ಕೆ ದೇಶದ ಜನರ ಏಕೈಕ ಆಶಾಕಿರಣ.

ಬಿಜೆಪಿಯ ಕೈಯಲ್ಲಿ ಕೇಂದ್ರ ಸರ್ಕಾರವಿದೆ, ಫ್ಯಾಸಿಸ್ಟ್ ಸಂಘಿಗಳ ಹಿಡಿತದಲ್ಲಿ ಬಿಜೆಪಿ ಇದೆ. ಖಾವಿಧಾರಿಗಳು, ಮಠಾಧೀಶರು, ಬಾಬಾಗಳು, ಸ್ವಾಮೀಜಿಗಳ ಹಿಡಿತದಲ್ಲಿ ಸಂಘ ಪರಿವಾರವಿದೆ. ಪ್ರಧಾನಿ ಮೋದಿಯವರೇ ಮುಂದೆ ನಿಂತು ರಾಮ ಮಂದಿರ ಉದ್ಘಾಟಿಸಿದ್ದಾರೆ. ಸನಾತನದ ಸೋಗಿನಲ್ಲಿ ಒಬ್ಬರಿಗೊಬ್ಬರು ಬೆಳೆದು ಬೆಟ್ಟವಾಗಿದ್ದಾರೆ. ಆಧ್ಯಾತ್ಮಿಕತೆಯಲ್ಲಿ ಅನುಕೂಲವಿದೆ, ರಾಜಕೀಯವಾಗಿ ಲಾಭವಾಗುತ್ತಿದೆ. ದೇಶದಲ್ಲಿ ಈ ಪರಿಸ್ಥಿತಿ ಇರುವಾಗ, ಖಾವಿ ಬಟ್ಟೆ ಧರಿಸಿದವರು ಖಳರಾಗುವುದು ಸಾಧ್ಯವೇ? ಇವರದೇ ಸರ್ಕಾರ ಇವರ ಮೇಲೆ ಕ್ರಮ ಕೈಗೊಳ್ಳುತ್ತದೆಯೇ?

2023ರ ಜೂನ್‌ನಲ್ಲಿ ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಉದ್ಯಮಿ ಅದಾನಿಗೂ ಪ್ರಧಾನಿಗೂ ಏನು ಸಂಬಂಧ’ ಎಂದು ಪ್ರಶ್ನಿಸಿದ್ದರು. ಇದಾಗಿ ವರ್ಷ ಕಳೆಯುತ್ತ ಬಂದರೂ ಪ್ರಶ್ನೆಗೆ ಉತ್ತರ ಕೊಡಬೇಕಾದ ಪ್ರಧಾನಿ ಮೋದಿಯವರು ಬಾಯಿ ಬಿಟ್ಟಿಲ್ಲ. ಅದಾನಿ, ಅಂಬಾನಿ ಮತ್ತು ಬಾಬಾ ರಾಮ್‌ದೇವ್ ಥರದವರು ಬಿಜೆಪಿಗೆ ಕೋಟಿಗಟ್ಟಲೆ ದೇಣಿಗೆ ನೀಡುತ್ತಾರೆ. ಬಿಜೆಪಿ ಇವರ ವ್ಯಾಪಾರಕ್ಕೆ ಅನುಕೂಲಕರ ವಾತಾವರಣ- ತೆರಿಗೆ, ವಿದ್ಯುತ್, ನೀರು, ರಸ್ತೆ, ಭೂಮಿ, ಸಬ್ಸಿಡಿ, ಸವಲತ್ತುಗಳನ್ನು ಕಲ್ಪಿಸಿಕೊಡುತ್ತದೆ. ರಾಮ್‌ದೇವ್ ಆಯುರ್ವೇದವನ್ನು ಮುನ್ನೆಲೆಗೆ ತರುತ್ತದೆ. ಅದರ ಉತ್ಪನ್ನಗಳಿಗೆ ಸರ್ಕಾರವೇ ಮುಂದೆ ನಿಂತು ಮಾರುಕಟ್ಟೆ ಕಲ್ಪಿಸಿಕೊಡುತ್ತದೆ. ಇಂತಹವರ ಮೇಲೆ ಕ್ರಮ ಕೈಗೊಳ್ಳುವುದುಂಟೆ?

ಬಾಲಕೃಷ್ಣ-ಬಾಬಾ ರಾಮದೇವ್
ಬಾಲಕೃಷ್ಣ-ಬಾಬಾ ರಾಮದೇವ್

ಯಾರೀ ರಾಮ್‌ದೇವ್?

ಭಾರತೀಯ ಯೋಗ ಗುರು, ಉದ್ಯಮಿ ಮತ್ತು ಪತಂಜಲಿ ಆಯುರ್ವೇದದ ಬ್ರಾಂಡ್ ಅಂಬಾಸಿಡರ್- ಇದು ಜಗತ್ತಿನ ಜನರಿಗೆ ಗೊತ್ತಿರುವ ಇವತ್ತಿನ ಬಾಬಾ ರಾಮ್‌ದೇವ್.

ಆದರೆ, ಅಸಲಿ ರಾಮ್‌ದೇವ್ ಯಾರು? ಅವರು ಹರಿಯಾಣದ ಮಹೇಂದ್ರಗಢ್ ಜಿಲ್ಲೆಯ ಅಲಿಪುರ್ ಗ್ರಾಮದ ಬಡ ಹರ್ಯಾನ್ವಿ ಕೃಷಿಕ ಕುಟುಂಬದಲ್ಲಿ ಜನಿಸಿದ ರಾಮ್ ಕಿಶನ್ ಯಾದವ್. 6ನೇ ಕ್ಲಾಸ್‌ವರೆಗೆ ಓದಿದ ‘ವಿದ್ಯಾವಂತ’. ಜನ್ಮಜಾತ ಅಂಗವೈಕಲ್ಯದ ಕಾರಣದಿಂದ ಓದನ್ನು ಮೊಟಕುಗೊಳಿಸಿ ಯೋಗ ಕಲಿಯಲು ಗುರುಕುಲ ವಾಸಿಯಾದರು. ಸಂಸ್ಕೃತ ಭಾಷೆ ಕಲಿತರು. ಧಾರ್ಮಿಕ ಗ್ರಂಥಗಳ ಅಧ್ಯಯನ ಮಾಡಿದರು. ಬಿಡುವಿನ ವೇಳೆಯಲ್ಲಿ ಗ್ರಾಮಸ್ಥರಿಗೆ ಉಚಿತವಾಗಿ ಯೋಗ ತರಬೇತಿ ನೀಡಿದರು. ಆನಂತರ ಹರಿಯಾಣದ ಕೃಪಾಲ್ ಬಾಗ್ ಆಶ್ರಮಕ್ಕೆ ತೆರಳಿ ಸನ್ಯಾಸ ಸ್ವೀಕರಿಸಿದರು. ರಾಮದೇವ್ ಎಂದು ಹೆಸರು ಬದಲಿಸಿಕೊಂಡರು. ದಿವ್ಯ ಯೋಗ ಮಂದಿರ ಟ್ರಸ್ಟ್ ಸ್ಥಾಪಿಸಿ, ಯೋಗ ಶಿಬಿರಗಳನ್ನು ಆಯೋಜಿಸತೊಡಗಿದರು. ಬಿಡುವಾದಾಗ ಚ್ಯವನಪ್ರಾಶ ಮಾರಾಟ ಮಾಡಿದರು.

ರಾಮ್ ಕಿಶನ್ ಯಾದವ್ ಅಕಾ ಬಾಬಾ ರಾಮ್‌ದೇವ್, 2002 ರಲ್ಲಿ ‘ಸಂಸ್ಕಾರ’, ‘ಆಸ್ತಾ’ ಟಿವಿಯಲ್ಲಿ ತಮ್ಮ ಹೊಟ್ಟೆಯನ್ನು ರುಬ್ಬುವ ಕಲ್ಲುಗುಂಡಿನಂತೆ ಆಡಿಸುವ ಮೂಲಕ- ಯೋಗಪಟುವಾಗಿ ದೇಶದ ಜನರಿಗೆ ಪರಿಚಯವಾದರು. 2006ರಲ್ಲಿ, ತಮ್ಮಂತೆಯೇ ‘ವಿದ್ಯಾವಂತ’ನೆನಿಸಿಕೊಂಡ, ಕೃಪಾಲ್ ಬಾಗ್ ಆಶ್ರಮದಲ್ಲಿ ಪರಿಚಯವಾದ ಬಾಲಕೃಷ್ಣ ಎಂಬ ವ್ಯಕ್ತಿಯೊಂದಿಗೆ ಸೇರಿ, ಹರಿದ್ವಾರದಲ್ಲಿ ಪತಂಜಲಿ ಆಯುರ್ವೇದ ಮತ್ತು ಪತಂಜಲಿ ಯೋಗಪೀಠವನ್ನು ಸ್ಥಾಪಿಸಿದರು.

ಒಂದು ಕಡೆ ಬಾಬಾ ರಾಮ್‌ದೇವ್‌ರ ಯೋಗ ಕಾರ್ಯಕ್ರಮಗಳು, ಮತ್ತೊಂದೆಡೆ ಪತಂಜಲಿ ಉತ್ಪನ್ನಗಳ ಜಾಹೀರಾತುಗಳು ದೇಶದ ಟಿವಿಗಳಲ್ಲಿ ಒಟ್ಟೊಟ್ಟಿಗೇ ಪ್ರಸಾರವಾಗತೊಡಗಿದವು. ಸರಿಸುಮಾರು 30 ಸೆಕೆಂಡಿಗೆ ಒಂದು ಸಲ, ಬಾಬಾ ಟಿವಿ ಪರದೆ ಮೇಲೆ ಕಾಣಿಸಿಕೊಂಡು ದಾಖಲೆ ಬರೆದರು. ಇದರಿಂದಾಗಿ, ಕೆಲವೇ ಕೆಲವು ವರ್ಷಗಳಲ್ಲಿ ಇವರ ಯೋಗ ದೇಶ ಬಿಟ್ಟು ವಿದೇಶಕ್ಕೆ ಹಾರಿತು. ಪತಂಜಲಿ ಪ್ರಾಡಕ್ಟ್‌ಗಳು ದೇಶದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡವು. ಅತಿ ಕಡಿಮೆ ಅವಧಿಯಲ್ಲಿ ಬಾಬಾ ರಾಮ್‌ದೇವ್ ದೇಶದ ಅತಿಶ್ರೀಮಂತರ ಪಟ್ಟಿಯಲ್ಲಿ ರಾರಾಜಿಸತೊಡಗಿದರು. 2013ರಲ್ಲಿ ಅವರೇ ಅವರ ಆಸ್ತಿಯ ನಿವ್ವಳ ಮೌಲ್ಯ 1,100 ಕೋಟಿ ಎಂದು ಘೋಷಿಸಿಕೊಂಡರು.

ಏತನ್ಮಧ್ಯೆ, ಬಾಬಾ ರಾಮ್‌ದೇವ್‌ಗೆ ರಾಜಕಾರಣಕ್ಕೆ ಧುಮುಕಬೇಕೆಂಬ ಆಸೆ ಮೊಳೆಯಿತು. ‘ಕಿಂಗ್’ ಆಗುವುದಕ್ಕಿಂತ ‘ಕಿಂಗ್ ಮೇಕರ್’ ಆಗುವುದರಲ್ಲಿ ಹೆಚ್ಚಿನ ಲಾಭವಿದೆ ಎನಿಸಿತು. 7ನೇ ಕ್ಲಾಸ್ ಓದಿದ ಅಣ್ಣಾ ಹಜಾರೆ ಎಂಬ ಮತ್ತೊಬ್ಬ ‘ವಿದ್ಯಾವಂತ’ ಅಜ್ಜನೊಂದಿಗೆ ಕೈಜೋಡಿಸಿದರು. 2013-14ರ ಸುಮಾರಿಗೆ ದೆಹಲಿಯಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ಹಮ್ಮಿಕೊಂಡರು. ಈ ಹೋರಾಟದ ಫಲವಾಗಿ ಮಗದೊಬ್ಬ ‘ವಿದ್ಯಾವಂತ’ ಮೋದಿಯವರು ಈ ದೇಶದ ಪ್ರಧಾನಿಯಾಗುವಂತಾಯಿತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಗೆ ʼವಿವಾದದ ಸರಕುʼ ಪೂರೈಕೆಯ ಗುತ್ತಿಗೆ ಪಡೆದಿವೆಯೇ ಕನ್ನಡದ ಮಾಧ್ಯಮಗಳು?

2014ರ ನಂತರ ಬಾಬಾ ರಾಮ್‌ದೇವ್‌ರ ವ್ಯಕ್ತಿತ್ವ ಮತ್ತು ವ್ಯಾಪಾರ ಮತ್ತೊಂದು ಹಂತಕ್ಕೆ ತಲುಪಿತು. ಯೋಗ ಶಿಬಿರಗಳಿಗೆ ಪ್ರಧಾನಿ ಮೋದಿಯವರೇ ಬಂದು ಪಕ್ಕದಲ್ಲಿ ಕೂರುವಂತಾಯಿತು. ರಾಜಕಾರಣಿಯಾಗದಿದ್ದರೂ ಸರ್ಕಾರವೇ ಬಾಬಾನ ಬುಡದಲ್ಲಿ ಪವಡಿಸಿತು. ಹಣ, ಅಧಿಕಾರ, ಪ್ರಚಾರದ ಭರಾಟೆಯಲ್ಲಿ ಸನಾತನ ಧರ್ಮ ಸಾರುವ ಅಧಿಕೃತ ಸಂತನಾಗಿ ಮಾರ್ಪಾಡಾದರು. ದೇಶವೇ ತಲೆ ಮೇಲೆ ಹೊತ್ತು ಮೆರೆಯತೊಡಗಿದಾಗ ಬಾಬಾ ರಾಮ್‌ದೇವ್, ವಿವೇಕ ಮರೆತು ಮಾತನಾಡತೊಡಗಿದರು.

ಆಧುನಿಕ ವೈದ್ಯ ವಿಜ್ಞಾನವನ್ನು ಮೂರ್ಖ ವಿಜ್ಞಾನವೆಂದರು. ವೈದ್ಯಕೀಯ ಸಂಶೋಧನೆಗಳು, ಹೊಸ ಆವಿಷ್ಕಾರಗಳು, ಅಧ್ಯಯನಶೀಲ ವೈದ್ಯರ ಬಗ್ಗೆ ಅಸಂಬದ್ಧವಾಗಿ ಮಾತನಾಡಿದರು. ಬಹುರಾಷ್ಟ್ರೀಯ ಬ್ರಾಂಡ್‌ಗಳನ್ನು ತಿರಸ್ಕರಿಸಲು ಕರೆ ಕೊಟ್ಟರು. ದೇಶದ ಮಹಿಳೆಯರ ಕುರಿತು ಅಸಭ್ಯವಾಗಿ ಮಾತನಾಡಿದರು. ಭಾರತ್ ಮಾತಾಕಿ ಜೈ ಎಂದ ಕೂಗದವರ ಶಿರಶ್ಚೇದ ಮಾಡಿ ಎಂದರು. ಮುಸ್ಲಿಮರ ಪ್ರಾರ್ಥನೆಯನ್ನು ಭಯೋತ್ಪಾದನೆ ಮತ್ತು ಮಹಿಳೆಯರ ಅಪಹರಣಕ್ಕೆ ಸಮೀಕರಿಸಿದರು. ಸಲಿಂಗಕಾಮವನ್ನು ಕೆಟ್ಟ ಚಟ ಎಂದು ಕರೆದು, ಅದನ್ನು ಯೋಗದಿಂದ ಗುಣಪಡಿಸಬಹುದೆಂದರು. ಇಡೀ ದೇಶವೇ ಕೊರೋನಾ ಎಂಬ ಮಾರಕ ರೋಗಕ್ಕೆ ತುತ್ತಾದಾಗ, ಉಸಿರನ್ನು ಹಿಡಿದಿಟ್ಟುಕೊಳ್ಳಿ, ಸಾಸಿವೆ ಎಣ್ಣೆಯ ಚಿಕಿತ್ಸೆ ಮಾಡಿ, ಆಮ್ಲಜನಕದ ಅಗತ್ಯವಿಲ್ಲ ಎಂದರು. ಪತಂಜಲಿಯ ಕೊರೊನಿಲ್ ಔಷಧ ಉಪಯೋಗಿಸಿ, ಕೊರೋನಾ ಓಡಿಸಿ ಎಂದು ದೇಶದ ಜನಕ್ಕೆ ಕರೆ ಕೊಟ್ಟರು. ಅದನ್ನು ಐಎಂಎ ವಿರೋಧಿಸಿದಾಗ, ಅಲೋಪತಿಯೇ ಸರಿ ಇಲ್ಲವೆಂದರು. ಐಎಂಎ ಕೇಂದ್ರ ಆರೋಗ್ಯ ಸಚಿವರಿಗೆ ದೂರು ನೀಡಿದಾಗ, ಸಮಜಾಯಿಷಿ ನೀಡಿ ಕೊರೊನಿಲ್ ಔಷಧ ವಾಪಸ್ ಪಡೆದರು. ಇದೆಲ್ಲಕ್ಕಿಂತ ಹೆಚ್ಚಾಗಿ ದೇಸಿ, ಧರ್ಮ, ಸನಾತನ, ಪುರಾತನಗಳೆಂಬ ಸಂಪರ್ಕ ಸಾಧನಗಳ ಮೂಲಕ ಪತಂಜಲಿ ಉತ್ಪನ್ನಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಆ ಉತ್ಪನ್ನಗಳ ಬಗ್ಗೆ ಸುಳ್ಳು ಜಾಹೀರಾತುಗಳನ್ನು ನೀಡಿ ಬೃಹತ್ ಮಾರಾಟ ಜಾಲ ಸೃಷ್ಟಿಸಿದರು. ಸಾವಿರಾರು ಕೋಟಿ ಸಂಪಾದಿಸಿ ದೇಶ-ವಿದೇಶಗಳಲ್ಲಿ ಆಸ್ತಿಪಾಸ್ತಿ ಸಂಪಾದಿಸಿದರು. ಆಧುನಿಕ ಆಧ್ಯಾತ್ಮಿಕ ಬಂಡವಾಳಶಾಹಿಯಾಗಿ ಹೊರಹೊಮ್ಮಿದರು.

ಬಾಬಾ ರಾಮದೇವ್-ಮೋದಿ
ಬಾಬಾ ರಾಮದೇವ್-ಮೋದಿ

ಇಂತಹ ರಾಮ್‌ದೇವ್, ತಮ್ಮ ಲಜ್ಜೆಗೇಡಿ ಪ್ರವೃತ್ತಿಯನ್ನು ಮುಂದುವರೆಸಿದಾಗ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿ ಮಾಡಿ, ನಿರ್ಬಂಧ ಹೇರಿದೆ. ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಇದು ದುರಿತ ಕಾಲದಲ್ಲಿರುವ ದೇಶದ ಜನತೆಗೆ ಬೆಳಕಿನ ಬುಡ್ಡಿಯಂತೆ ಕಂಡರೂ; ರಾಮ್‌ದೇವ್ ತರದವರನ್ನು ಪೊರೆಯಲು ಖಾವಿ ಇದೆ, ಪೋಷಿಸಲು ಸಂಘಪರಿವಾರವಿದೆ, ರಕ್ಷಿಸಲು ಆಡಳಿತಾರೂಢ ಬಿಜೆಪಿ ಸರ್ಕಾರವಿದೆ ಎಂಬುದನ್ನು ಮರೆಯದಿರೋಣ.

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ದೇಶಕ್ಕೆ ಕೊಟ್ಟ ಅತಿದೊಡ್ಡ ‘ಕೊಡುಗೆ’ ಈ ಬಾಬಾ ರಾಮ್‌ದೇವ್. ಇವರ ಯೋಗ ಮತ್ತು ಇವರ ಪತಂಜಲಿಯಿಂದ ದೇಶಕ್ಕಾದ ‘ಅನುಕೂಲ’ವನ್ನು ಜನ ಅರಿತು, ಬಾಬಾರನ್ನು ಬೆಳೆಸಿದ ಮೋದಿಯವರಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ‘ಕೊಡುಗೆ’ ನೀಡಬೇಕಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. 2010-2014 baba grond level worked through out nation for good governess, the result that credited baba after 2014,
    Congress govt sanctioned 100 cr to establish for patanjali food park, as master plan for each state to build, but it stopped only at Uthara khand state,
    At that time baba talking about only block money, Switzerland , swabiman bharat etc…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರ ಪರಿಹಾರ | ಸುಪ್ರೀಂ ಕೋರ್ಟ್ ಉಗಿದಿದ್ದನ್ನೇ ಮೋದಿ ಪ್ರಸಾದ ಎನ್ನುತ್ತಿರುವ ಬಿಜೆಪಿ!

ರಾಜ್ಯಕ್ಕೆ 3,454 ಕೋಟಿ ರುಪಾಯಿ ಬರ ಪರಿಹಾರ ಸುಪ್ರೀಮ್ ಕೋರ್ಟ್ ಕೊಟ್ಟದ್ದೇ...

ಅರವಿಂದ್ ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ಆದರೆ ದಿನಕ್ಕೆ ಎರಡು ಡೋಸ್ ಇನ್ಸುಲಿನ್ ನೀಡಲಾಗುತ್ತಿದೆ: ವೈದ್ಯರು

ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

ಮೋದಿಯ ನೆತ್ತಿಗೆ ಸುಪ್ರೀಂ ಕೋರ್ಟ್‌ ಸುತ್ತಿಗೆಯಿಂದ ಬಾರಿಸಿದ್ದಕ್ಕೆ ಸಿಕ್ತು ಪರಿಹಾರ: ದೇವನೂರು

"ಪ್ರಧಾನಿ ನರೇಂದ್ರ ಮೋದಿಯವರ ನೆತ್ತಿಗೆಗೆ ಸುಪ್ರೀಂಕೋರ್ಟ್ ಸುತ್ತಿಗೆಯಿಂದ ಬಾರಿಸಿದ್ದಕ್ಕೆ ಕೇಂದ್ರವು ಕರ್ನಾಟಕಕ್ಕೆ...

ಮುಸ್ಲಿಮರ ಮೀಸಲಾತಿ ಬಗ್ಗೆ ಸತ್ಯ ಮರೆಮಾಚಿ ಬಿಜೆಪಿಯಿಂದ ಸುಳ್ಳು ಜಾಹೀರಾತು: ಸಿಎಂ ಸಿದ್ದರಾಮಯ್ಯ

"ಹಿಂದುಳಿದ ವರ್ಗಗಳ ಮೀಸಲಾತಿ(ಒಬಿಸಿ) ಪಟ್ಟಿಗೆ ಮುಸ್ಲಿಮರ ಸೇರ್ಪಡೆಯು ಮಂಡಲ್ ವರದಿಯನ್ನು ಆಧರಿಸಿ...