ಅಸ್ತಿತ್ವ, ದೇಶದ ಭವಿಷ್ಯ, ಜನಸಾಮಾನ್ಯರ ಬದುಕನ್ನು, ಪ್ರಜಾತಂತ್ರದ ಉಳಿವನ್ನು ತೀರ್ಮಾನಿಸಲಿರುವ ಅತಿ ಮಹತ್ವದ ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಅತ್ಯಂತ ಪ್ರತಿಗಾಮಿ ಶಕ್ತಿಗಳು, ದುರಾಸೆಪೀಡಿತ ಕಾರ್ಪೋರೇಟ್ ಕುಳಗಳು ಸೇರಿ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ಎದ್ದೇಳು ಕರ್ನಾಟಕದ ಮಲ್ಲಿಗೆ ಸಿರಿಮನೆ ತಿಳಿಸಿದರು.
ಕಲಬುರಗಿ ಲೋಕಸಭಾ ಕ್ಷೇತ್ರ ರಾಜ್ಯ ಪ್ರವಾಸ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಎದ್ದೇಳು ಕರ್ನಾಟಕದಿಂದ ʼನಮ್ಮ ಆಂದೋಲನʼ ಎಂಬುವ ವಿಚಾರ ಕುರಿತು ನಡೆದ ಸಂವಾದ ಮತ್ತು ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ದೇಶದ ಮುಗ್ಧ ಜನರನ್ನು ದಿಕ್ಕುತಪ್ಪಿಸಿ, ಜನರನ್ನು ಒಡೆದು, ಅದರ ಲಾಭ ಪಡೆದು ಜನರ ಶ್ರಮ, ಆದಾಯ, ಬೆಳೆ, ಅಳಿದುಳಿದಿರುವ ಆಸ್ತಿಯನ್ನೂ, ಈ ದೇಶದ ಬೃಹತ್ ಸಾರ್ವಜನಿಕ ಸಂಪತ್ತನ್ನು ಸೂರೆಗೈಯ್ಯುವ ಕೆಲಸದಲ್ಲಿ ತೊಡಗಿಕೊಂಡಿವೆ. ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ರಾಜ್ಯಗಳಿಗೂ, ಜನಸಮಾನ್ಯರಿಗೂ, ತುಳಿತಕ್ಕೊಳಗಾದ ಜನರಿಗೂ ನೀಡಿರುವ ರಕ್ಷಣೆಗಳನ್ನು ಕಿತ್ತೊಗೆದು ಸರ್ವಾಧಿಕಾರವನ್ನು ಹೇರುವ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅವರ ಸಂಚು ಫಲಿಸದಂತೆ ನೋಡಿಕೊಳ್ಳುವ ಹೊಣೆ ಪ್ರತಿಯೊಬ್ಬರ ಮೇಲಿದೆ” ಎಂದು ಹೇಳಿದರು.
“ಈ ಜೀವವಿರೋಧಿ ಶಕ್ತಿಗಳ ವಿರುದ್ಧ ದೇಶವ್ಯಾಪಿಯಾಗಿ ಜನಪರ ಶಕ್ತಿಗಳು ತಮ್ಮದೇ ರೀತಿಯಲ್ಲಿ ಪ್ರತಿರೋಧ ಒಡ್ಡುತ್ತಿದ್ದಾರೆ. ರೈತರು, ಕಾರ್ಮಿಕರು, ತಳಸಮುದಾಯಗಳ ನಿರಂತರ ಹೋರಾಟಗಳು ನಡೆದಿವೆ. ಅನೇಕ ಜನಪರ ಮಾಧ್ಯಮಗಳು ಹುಟ್ಟಿ ಇವರ ಸಂಚುಗಳನ್ನು ಬಯಲುಗೊಳಿಸುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ “ಎದ್ದೇಳು ಕರ್ನಾಟಕ”ವನ್ನೂ ಒಳಗೊಂಡಂತೆ ಅನೇಕ ಜನಪರ ವೇದಿಕೆಗಳು ಕಟಿಬದ್ಧವಾದ ಹಾಗೂ ಸೃಜನಶೀಲವಾದ ರೀತಿಯಲ್ಲಿ ಅಭಿಯಾನಗಳನ್ನು ನಡೆಸಿ ಕರ್ನಾಟಕಕ್ಕೆ ಶಾಪವಾಗಿದ್ದ ಬಿಜೆಪಿಯನ್ನು ಸೋಲಿಸಿ ಹಿಂದಟ್ಟಿವೆ” ಎಂದು ಹೇಳಿದರು.
“ಕರ್ನಾಟಕದ ಈ ಯಶಸ್ಸು, ಅದರಲ್ಲೂ ನಾಗರಿಕ ಸಮಾಜದ ಪಾತ್ರ “ಎದ್ದೇಳು ಮಾದರಿ”ಯಾಗಿ ಇತರೆ ರಾಜ್ಯದ ಜನರನ್ನೂ ಹುರುದುಂಬಿಸಿದೆ. ಅಲ್ಲೂ ಇದೇ ರೀತಿಯ ವೇದಿಕೆಗಳು ರೂಪಗೊಂಡು ಕಾರ್ಯೋನ್ಮುಖವಾಗಿವೆ. ಈ ಎಲ್ಲ ಜೀವಪರ ಪ್ರಯತ್ನಗಳನ್ನು ಬೆಸೆದು ಒಂದು ಬಲವಾದ ಶಕ್ತಿಯಾಗಿಸುವ ಸಮಯ ಈಗ ಬಂದಿದೆ” ಎಂದರು.
“ಕೇಂದ್ರ ಸರ್ಕಾರ ಗಣರಾಜ್ಯದ ಪರಿಕಲ್ಪನೆಯನ್ನೇ ಮರೆತು ಸರ್ವಾಧಿಕಾರಿಯಾಗಿ ಎಲ್ಲ ರಾಜ್ಯಗಳ ಹಕ್ಕುಗಳನ್ನೂ ಕಸಿದು ಕೇಂದ್ರದ ದಬ್ಬಾಳಿಕೆಯನ್ನು ಹೇರಲು ಪ್ರಯತ್ನಿಸುತ್ತಿದೆ. ರಾಜ್ಯಗಳ ಆರ್ಥಿಕ ಸ್ವಾವಲಂಬನೆಯನ್ನು ಮುರಿಯುವ ಸಲುವಾಗಿಯೇ ಜಿಎಸ್‌ಟಿ ಎಂಬ ಕೇಂದ್ರೀಕೃತ ತೆರಿಗೆ ಪದ್ದತಿಯನ್ನು ತಂದಿದೆ. ಜಿಎಸ್‌ಟಿ ಮೂಲಕ ಒಂದೆಡೆ ಜನಸಾಮಾನ್ಯರಿಂದ ಪ್ರತಿನಿತ್ಯ ತೆರಿಗೆ ವಸೂಲಿ ಮಾಡುತ್ತಿದೆ. ಮತ್ತೊಂದೆಡೆ ಎಲ್ಲ ತೆರಿಗೆಯನ್ನು ತಾನು ಕಬಳಿಸಿ, ರಾಜ್ಯಕ್ಕೆ ಕಾಡಿಸಿ ಬೇಡಿಸಿ, ಅರೆಬರೆ ವಾಪಾಸ್ ಕೊಡುವ ತಂತ್ರ ಜಾರಿಗೆ ತಂದಿದೆ” ಎಂದು ಹೇಳಿದರು.
“ಭ್ರಷ್ಟಾಚಾರ ಮುಕ್ತ ಭಾರತ”, “ಸಶಕ್ತ ಭಾರತ”, “ಅಚ್ಛೇ ದಿನ್”, “ಕಪ್ಪು ಹಣ ವಾಪಾಸ್”, “ಪ್ರತಿಯೊಬ್ಬರ ಖಾತೆಗೂ ನೇರ ಹಣ”, “ಪೆಟ್ರೋಲ್ ಅಗ್ಗ”, “ಉಚಿತ ಗ್ಯಾಸ್”, “ಸಬ್
ಕೆ ಸಾಥ್ ಸಬ್ ಕಾ ವಿಕಾಸ್”, “ಬೇಟಿ ಪಡಾವ್”, “ಸ್ಮಾರ್ಟ್ ಸಿಟಿಗಳು”, “ಬುಲೆಟ್ ರೈಲುಗಳು”, “ವರ್ಷಕ್ಕೆ 2 ಕೋಟಿ ಉದ್ಯೋಗಗಳು”, “ರೈತರಿಗೆ ದುಪ್ಪಟ್ಟು ಆದಾಯ”, “ಮೇಕ್ ಇನ್ ಇಂಡಿಯಾ”, “ಸೂಪರ್ ಪವರ್ ಭಾರತ” ಎಲ್ಲ ಖಾಲಿ ಪೊಟ್ಟಣಗಳು, ಬರೀ ಬೊಗಳೆಗಳನ್ನು ಬಿಟ್ಟಿದ್ದೇ ಬಿಟ್ಟಿದ್ದು” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಗ್ರಾಮ ಮಟ್ಟದಲ್ಲಿ ಉತ್ತಮ ಶಿಕ್ಷಣದ ಜತೆಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ: ರಾಜ್ಯಪಾಲರು
“ಅರಣ್ಯ ಕಾಯ್ದೆಯನ್ನು ಅರಣ್ಯವಾಸಿಗಳ ವಿರುದ್ಧವಾಗಿ ಮತ್ತು ಬಂಡವಾಳಿಗರ ಪರವಾಗಿ ಪರಿವರ್ತಿಸಿದ್ದು, ಸಮುದ್ರ ತೀರಗಳನ್ನು ಮತ್ತು ಸಮುದ್ರವನ್ನೂ ಖಾಸಗೀಯವರ ಸ್ವತ್ತಾಗಿಸಿದ್ದು, ಲಕ್ಷಾಂತರ ಎಕರೆ ಸರ್ಕಾರಿ ಭೂಮಿಯನ್ನು ಬಡವರಿಂದ ಕಿತ್ತು ಬಂಡವಾಳಿಗರಿಗೆ ಒಪ್ಪಿಸಿದೆ. ಒಟ್ಟಿನಲ್ಲಿ ಜನರ ಆದಾಯ ಕುಸಿದು, ದುಪಟ್ಟುಗೊಂಡು, ಪ್ರತಿ ಕುಟುಂಬ ಖರ್ಚುಗಳು ಸಾಲದ ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಇಂದು ಇಡೀ ದೇಶವನ್ನು ಸಾಲಗಾರರ ದೇಶವನ್ನಾಗಿ ಪರಿವರ್ತಿಸಿದ್ದು, ಇಡೀ ದೇಶದ ಸಾಲ ಕಳೆದ ಮೂರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ” ಎಂದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ವೀರಸಂಗಯ್ಯ, ಯೂಸುಫ್ ಕನ್ನಿ, ಮರೆಪ್ಪ ಹಳ್ಳಿ, ಮರೆಪ್ಪ ಚಟ್ಟೇರಕೇರಾ, ರಾಜೇಂದ್ರ ರಾಜವಾಳ, ಅಶ್ವಿನಿ ಮದನಕರ್, ನಾಗೇಶ್ ಹರಳಯ್ಯ, ವಿವಿಧ ಸಂಘಟನೆ ಮುಖಂಡರು, ಪ್ರಗತಿಪರ ಚಿಂತಕರು, ಯುವಜನರು ಸೇರಿದಂತೆ ಇತರರು ಇದ್ದರು.